ಅಣಕವಾಡು-೧
ಹುಬ್ಬಳ್ಳಿ ಮಾವ ಏನು ಕೊಡನು
ಏನು ಕೊಡ ಏನು ಕೊಡನು
ಹುಬ್ಬಳ್ಳಿ ಮಾವ ಏನು ತಾನೊಂದು ಕೊಡನು
ದುಡಿದಿಲ್ಲ ಗಳಿಸಿಲ್ಲ ಗಳಗಳ ಅಳುತಾನ
ಅಂಪ್ಪಂದೆಲ್ಲ ಅಮ್ಮಂದೆಲ್ಲ ದಳದಳ ಇಳಿಸ್ತಾನ
ಆರುಮಂದಿ ಅಣ್ಣತಮ್ಮರ್ಗೆ ಮೂರುಕಾಸನು ಕೊಡ
ಮೂರು ಮಂದಿ ಅಕ್ಕತಂಗೆರ್ಗೆ ಸೀರಿಕುಪ್ಪಸ ಕೊಡ
ಕೋರ್ಟುಕಚೇರಿಗೆ ಹೋಗಿ ನ್ಯಾಯ ಹೂಡುವೆವೆಂದು
ಅಣ್ಣತಮ್ಮಂದಿರು ಬಂದು ಹೇಳಿಹೋದರು ಕೊಡ
ಮೂರು ಮಂದಿ ಅಕ್ಕತಂಗೇರು ಅತ್ತಿ ಮನಿಗೆ ಹೋಗಿ
ಬಡತನದ ಬೆಂಕ್ಯಾಗ ನೊಂದು ಬೆಂದರು ಕೊಡ
ಬುದ್ಧಿವಂತರು ಬಂದು ಹೇಳಿಹೋದರು ಕೊಡ
ಬುದ್ಧಿಗೇಡಿ ಮಾವ ಇವ ಏನೊಂದು ಕೊಡ
(ಶಿಶುನಾಳ ಶರೀಫ್ ಸಾಬರ ಹಾಡು
“ಏನು ಕೊಡ ಏನು ಕೊಡವಾ
ಹುಬ್ಬಳ್ಳಿ ಮಾಟ ಏನು ಚೆಂದುಳ್ಳ ಕೊಡವ ” ಧಾಟಿಯಲ್ಲಿ)
ಅಣಕವಾಡು – ೨
ಎಂಥ ಚಂದದ ಪೋರಿ
ಎಂಥ ಚಂದದ ಪೋರಿ
ಮೆಚ್ಚಿದ ಮ್ಯಾಲ ಬರ್ತಾಳ ದಿನಕೊಂದು ಸಾರಿ
ಸತ್ಯ ನಾ ಹೇಳತೀನಿ ಸುಳ್ಳಲ್ಲ ಈ ಮಾತು
ಯಾವ ಗುಟ್ಟಿಲ್ಲವಿದು ರಟ್ಟಾಗಿ ಹೋಯಿತು
ಹಚ್ಚನ್ನ ಫಲಹಾರ ತಿನ್ನಿಸಬೇಕೋ
ಬೆಚ್ಚನ್ನ ಕಾಫಿ ಕುಡಿಸಲಿಬೇಕೋ
ಕೈಯ್ಯಾಗ ಕೈ ಹಿಡಿದು ತಿರುಗಲಿಬೇಕೋ
ಆಕಿ ಮೆಚ್ಚುವಂತೆ ನಾ ಮಾತಾಡಬೇಕೋ
ತಪ್ಪುವುದಿಲ್ಲಪ್ಪ ದಿನನಿತ್ಯ ಚಾಕರಿ
ತಿಂದಮ್ಯಾಲ ಹೋಗುತಾಳ ಮನಿಗಿ ಚೋಕರಿ
ಇವಳಿಗಾಗಿಯೆ ನಾ ಮಾಡುವೆ ನೌಕರಿ
ನಾನಿದನ ಯಾರಿಗೆ ಹೇಳಬೇಕರಿ
ಮಾವನ ಮನಿಯಾಗ ಪಾಡಾಗಿಯಿತ್ತ
ನನ್ನ ಕೊರಳಿಗೆ ಗಂಟುಬಿದ್ದಿತ್ತ
ಕೈಹಿಡಿದು ನನ್ನ ಮನಿಗೆ ಬಂದಿತ್ತ
ನನ ಕೈಗೆ ತಿರುಪತಿ ಚಂಬ ಕೊಟ್ಟಿತ್ತ
(ಶಿಶುನಾಳ ಶರೀಫಸಾಬರ ತತ್ವಪದ
“ಎಂಥ ಮೋಜಿನ ಕುದುರಿ
ಹತ್ತಿದ ಮ್ಯಾಲ ತಿರುಗುವುದು ಹನ್ನೆರಡು ಫೇರಿ” ಧಾಟಿಯಲ್ಲಿ)
ಎನ್.ಶರಣಪ್ಪ ಮೆಟ್ರಿ