ರಂ.ಶ್ರೀ. ಮುಗಳಿ ಎಂದು ಹೆಸರಾದ ರಂಗನಾಥ ಶ್ರೀನಿವಾಸ ಮುಗಳಿಯವರು ಕನ್ನಡ ಸಾಹಿತ್ಯ ಲೋಕದ ಪ್ರಮುಖ ವಿದ್ವಾಂಸರ ಸಾಲಿಗೆ ಸೇರಿದವರು. ಸರಳ ಸಜ್ಜನಿಕೆ ಸಾಕಾರಮೂರ್ತಿ ಸಂಶೊಧಕ ಕವಿ ನಾಟಕಕಾರ ಕಥೆಗಾರ.
ತಮ್ಮ ಪ್ರಾರಂಭದ ಹೆಸರಾದ ರಂಗನಿಗೆ ರಸಿಕತೆಯ ಲೇಪವನ್ನು ಹಚ್ಚಿ ರಸಿಕ ರಂಗ ಎಂಬ ಹೆಸರನ್ನು ತಮ್ಮಲ್ಲಿನ ಬರವಣಿಗೆಗಾರನ ಹೆಸರನ್ನಾಗಿ ಮಾಡಿಕೊಂಡರು.
ಜೀವನ
ರಂ.ಶ್ರೀ. ಮುಗಳಿಯವರು 1906 ರ ಜುಲೈ 15 ರಂದು ರೋಣ ತಾಲೂಕಿನ ಹೊಳೆ ಆಲೂರಿನಲ್ಲಿ ಜನಿಸಿದರು. ಮುಗಳಿಯವರ ತಂದೆ ಅಂದಿನ ಪ್ರಸಿದ್ಧ ವಕೀಲರಾಗಿದ್ದರು. ಜೊತೆಗೆ ಅಂದಿನ ಮರಾಠಿ ವಾತಾವರಣದಲ್ಲಿ ಕನ್ನಡದ ನಾಟಕಗಳನ್ನು ಆಡಿಸುವುದರಲ್ಲಿ ಅವರಿಗೆ ಎಲ್ಲಿಲ್ಲದ ಪ್ರೀತಿ. ತಂದೆಯಲ್ಲಿದ್ದ ಸಾಹಿತ್ಯದ ಆಸಕ್ತಿಗಳು ಮಗನಲ್ಲಿ ವಿಸ್ತೃತವಾಗಿ ಬೆಳೆದವು.
ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸದಾ ಔನ್ನತ್ಯದ ಸಾಧನೆಗಳನ್ನು ತೋರಿದ ಮುಗಳಿಯವರು 1933 ರಲ್ಲಿ ಸಾಂಗಲಿಯ ವಿಲಿಂಗ್ಡನ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕೆಲಸಕ್ಕೆ ಸೇರಿಕೊಂಡು 1961 ರಲ್ಲಿ ಅದೇ ಕಾಲೇಜಿನ ಪ್ರಾಂಶುಪಾಲರಾಗಿ 1966 ರಲ್ಲಿ ನಿವೃತ್ತರಾದರು. 1967 ರಿಂದ 1970 ರವರೆಗೆ ಅವರು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿದ್ದರು. ಅವರಿಗೆ ಬೇಂದ್ರೆಯವರ ಮೋಡಿ ಅಪಾರವಾಗಿದ್ದು ಬೇಂದ್ರೆಯವರ ಆಪ್ತ ಬಳಗದಲ್ಲಿ ಸದಾ ವಿಜ್ರಂಭಿಸುತ್ತಿದ್ದರು.
ಸಾಹಿತ್ಯ ಕೃಷಿ
ಶಿಕ್ಷಕರಾಗಿ ವೃತ್ತಿಜೀವನವನ್ನು ಆರಂಭಿಸಿದ ಮುಗಳಿಯವರು ಗೆಳೆಯರ ಗುಂಪಿನ ಸಹಚರ್ಯದಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿ ಅನೇಕ ಅಮೂಲ್ಯ ಗ್ರಂಥಗಳ ಬೆಳೆಯನ್ನು ತೆಗೆದಿದ್ದಾರೆ. ಇವರ ‘ಕನ್ನಡ ಸಾಹಿತ್ಯ ಚರಿತ್ರೆ’ ಎಂಬ ಗ್ರಂಥ ಕನ್ನಡ ಸಾಹಿತ್ಯ ಚರಿತ್ರೆಗಳಲ್ಲಿ ಒಂದು ಮಹತ್ವದ ಕೃತಿ. ಈ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಪ್ರಾಚೀನ ಕಾಲದಿಂದ ಮುದ್ದಣನವರೆಗಿನ ಸಾಹಿತ್ಯ ವಿಚಾರ ಚರ್ಚಿತವಾಗಿದೆ.
‘ರನ್ನನ ಕೃತಿರತ್ನ’, ‘ತವನಿಧಿ’, ‘ಸಾಹಿತ್ಯವಿಮರ್ಶೆಯ ಮಾರ್ಗದರ್ಶಕ ಸೂತ್ರಗಳು’, ‘ಕನ್ನಡ ಸಾಹಿತ್ಯದಲ್ಲಿ ಸರಸ್ವತಿಯ ದರ್ಶನ’ ಮುಂತಾದ ವಿದ್ವತ್ ಪೂರ್ಣ ವಿಮರ್ಶಾ ಕೃತಿಗಳೊಂದಿಗೆ ಮುಗಳಿಯವರು ಕಾವ್ಯ, ಸಣ್ಣಕಥೆ, ಕಾದಂಬರಿ, ನಾಟಕ, ಕ್ಷೇತ್ರಗಳಲ್ಲೂ ದುಡಿದಿದ್ದಾರೆ.
‘ಬಾಸಿಂಗ’, ‘ಅಪಾರಕರುಣೆ’, ‘ಓಂ ಅಶಾಂತಿ’, ‘ಮಂದಾರಹೂ’ ರಸಿಕ ರಂಗರ ಹೆಸರಾಂತ ಕವನ ಸಂಗ್ರಹಗಳು. ‘ಬಾಸಿಗ’ದಲ್ಲಿ ಅನೇಕ ಕವಿತೆಗಳು ಕನ್ನಡದ ನವೋದಯವನ್ನು ಕುರಿತು ಬರೆದವುಗಳಾಗಿವೆ. ನಿಸರ್ಗ ಕವಿತೆಗಳನ್ನು ಬಿಟ್ಟರೆ ಉಳಿದ ಕವಿತೆಗಳಲ್ಲಿ ಸೌಂದರ್ಯಪ್ರೀತಿ, ಆದರ್ಶಹಂಬಲ, ಗೆಳೆತನ, ಪ್ರಣಯ, ದೇವರ ಕರುಣೆ, ಇಂಥ ಭಾವಗೋಚರವಾದ ವಸ್ತುಗಳೇ ದೊರೆಯುತ್ತವೆ. ಓಂ ಅಶಾಂತಿ, ಅಪಾರಕರುಣೆ ಈ ಸಂಗ್ರಹಗಳಲ್ಲಿ ಜೀವನದ ಬಿರುಸಾದ ಸತ್ಯವನ್ನು ಕವಿ ಎದುರಿಸಿದ್ದರೂ ಮನೋಧರ್ಮದ ಕೋಮಲತೆ ಕಡಿಮೆಯಾಗಿಲ್ಲದಿರುವುದನ್ನು ಕಾಣುತ್ತೇವೆ.
ಮುಗಳಿಯವರ ಕಥಾಸಂಕಲನ ‘ಕನಸಿನ ಕೆಳದಿ’ ತಡವಾಗಿ ಪ್ರಕಟವಾದರೂ ಅವರು ಇದೇ ತಲೆಮಾರಿನ ಕತೆಗಾರರಾಗಿದ್ದಾರೆ. ಸುಸಂಬದ್ಧವಾದ ಕಥಾರಚನೆ, ಗುರಿತಪ್ಪದ ಪರಿಣಾಮ, ಇವು ಎಂದಿಗೂ ಅವರ ಕತೆಗಳ ವೈಶಿಷ್ಟ್ಯಗಳಾಗಿವೆ. ಕಾಲಕ್ರಮದಲ್ಲಿ ಮೊದಲು ಬಂದ ‘ವಿತಂತು ವೇಶ್ಯೆ’ ಎಂಬ ಕಥೆಯಲ್ಲಿಯೇ ಈ ಎಲ್ಲ ಗುಣಗಳು ಸೂಚಿತವಾಗಿವೆ. ಈ ಕತೆ ದುರ್ದೈವಿಯಾದ ಹೆಣ್ಣುಮಗಳೊಬ್ಬಳ ಅತ್ಮ ವೃತ್ತಾಂತದಂತೆ ಬರೆಯಲ್ಪಟ್ಟಿದೆ. ‘ನೀರಿನ ನಾಗಪ್ಪ’, ಹಾಗೂ ‘ಕೂಟಪ್ರಶ್ನೆಗಳು’ ಕೂಡ ಇದೇ ಮಾದರಿಯ ಶ್ರೇಷ್ಠ ಕತೆಗಳಾಗಿವೆ.
ಮುಗಳಿಯವರ ಕಾದಂಬರಿಗಳು
ಆದರ್ಶವಾದಿತ್ವದ ಗುಣದೋಷಗಳನ್ನೆಲ್ಲಾ ಪ್ರತಿಬಿಂಬಿಸುವಂಥವಾಗಿವೆ. ‘ಬಾಳುರಿ’, ‘ಕಾರಣ ಪುರುಷ’ ಹಾಗೂ ‘ಅನ್ಯ’ ಈ ಮೂರು ಕಾದಂಬರಿಗಳಿಗೂ ಆದರ್ಶವಾದವೇ ಪ್ರೇರಕ ಶಕ್ತಿಯಾಗಿದೆ. ‘ಬಾಳುರಿ’ಯ ಜಗಣ್ಣ ಆದರ್ಶ ವಾದಿತ್ವದ ಭರವಸೆ ಇರುವುದರಿಂದ ವಿಕೃತ ಜೀವಿಯಾಗುವುದಿಲ್ಲ. ಆದರೆ ವಾಮಣ್ಣ ಕೊನೆಯವರೆಗೂ ಮೂರ್ತಿ ಪೂಜಕನಾಗಿ ಉಳಿಯುವುದು ಆದರ್ಶವಾದದ ಬಲಹೀನತೆಯನ್ನು ಎತ್ತಿತೋರುತ್ತದೆ. ‘ಅನ್ಯ’ದ ಅಮೃತ ಆದರ್ಶವನ್ನು ಪ್ರತ್ಯಕ್ಷವಾಗಿ ಕಾರ್ಯ ರಂಗಕ್ಕಿಳಿಸುತ್ತಾನೆ. ಬರಗಾಲದಿಂದ ಪೀಡಿತರಾದವರಿಗೆ ಸಹಾಯ ಮಾಡುತ್ತಾನೆ.
ಮುಗಳಿಯವರ ‘ಎತ್ತಿದ ಕೈ’ ಏಕಾಂಕ ಸಂಕಲನ. ‘ನಾಮಧಾರಿ’, ‘ಮನೋರಾಜ್ಯ’, ‘ಧನಂಜಯ’, ಇವರ ನಾಟಕಗಳು. ‘ಮಾತೆಂಬುದು ಜ್ಯೋತಿರ್ಲಿಂಗ’, ‘ಕನ್ನಡದ ಕರೆ’ ಪ್ರಬಂಧ ಸಂಗ್ರಹಗಳು.
ಪ್ರಶಸ್ತಿ ಗೌರವಗಳು
ರಂ. ಶ್ರೀ. ಮುಗಳಿ ಅವರ ಸೇವೆಗಾಗಿ ಅನೇಕ ಗೌರವಗಳು ಲಭಿಸಿವೆ. 1941 ರಲ್ಲಿ ಹೈದರಾಬಾದಿನಲ್ಲಿ ನಡೆದ 37ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾಟಕ ಗೋಷ್ಠಿಯ ಅಧ್ಯಕ್ಷರಾಗಿದ್ದರು. ಇವರ ಕನ್ನಡ ಸಾಹಿತ್ಯ ಚರಿತ್ರೆಗೆ 1956 ರಲ್ಲಿ ಪುಣೆ ವಿಶ್ವವಿದ್ಯಾನಿಲಯದ ಡಿ.ಲಿಟ್. ಪದವಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದವು. ಅವರು 1963 ರಲ್ಲಿ ತುಮಕೂರು ಜಿಲ್ಲೆಯ ಸಿದ್ಧಗಂಗಾದಲ್ಲಿ ಜರುಗಿದ 44ಯ ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷರಾಗಿದ್ದರು. 1964 ರಲ್ಲಿ ಇಂಕ್ಲಾ ಸಂಸ್ಥೆಯ ಪರವಾಗಿ ಫ್ರಿಬುವಿನಲ್ಲಿ ನಡೆದ ಜಾಗತಿಕ ಸಾಹಿತ್ಯಸಮ್ಮೇಳನದಲ್ಲಿ ಕನ್ನಡದ ಪ್ರತಿನಿಧಿಯಾಗಿದ್ದರು. ಪಿಇಎನ್ ಹಾಗು ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದರು.ಗೌರವ ಗ್ರಂಥ ರಸಿಕರಂಗ
ಹೀಗೆ ಕನ್ನಡಕ್ಕೆ ಅಪಾರ ಸೇವೆ ಸಲ್ಲಿಸಿ ಸರ್ವಮಾನ್ಯರಾದ ರಂ. ಶ್ರೀ. ಮುಗಳಿಯವರು 1992 ಫೆಬ್ರುವರಿ 20 ರಂದು ಬೆಂಗಳೂರಿನಲ್ಲಿ ನಿಧನರಾದರು. ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳಿಂದ ಚಿರಸ್ಮರಣೀಯರಾಗಿದ್ದಾರೆ.
ಅವರ ಕನ್ನಡ ಸಾಹಿತ್ಯ ಚರಿತ್ರೆ
ಕನ್ನಡ ಭಾಷೆ ಸಾಹಿತ್ಯದ ಅಧ್ಯಯನದ ಮೈಲಿಗಲ್ಲು .
ಡಾ. ಶಶಿಕಾಂತ ಪಟ್ಟಣ ರಾಮದುರ್ಗ