spot_img
spot_img

ಇಂದು ಕನ್ನಡದ ನವ್ಯ ಕವಿಗಳಲ್ಲೊಬ್ಬರಾದ ಶ್ರೀ ಬಿ.ಸಿ.ರಾಮಚಂದ್ರ ಶರ್ಮ ಅವರು ಜನಿಸಿದ ದಿನ

Must Read

spot_img
- Advertisement -

ಬಿ.ಸಿ. ರಾಮಚಂದ್ರ ಶರ್ಮ (ನವೆಂಬರ್ ೨೮, ೧೯೨೫ – ಏಪ್ರಿಲ್ ೧೮. [[೨೦೦೫}} ಆಧುನಿಕ ಕನ್ನಡ ಕಾವ್ಯಚರಿತ್ರೆಯಲ್ಲಿ ಪ್ರಮುಖ ಹೆಸರಾದವರು ಗೋಪಾಲಕೃಷ್ಣ ಅಡಿಗರು ಹೊಸ ಬಗೆಯಲ್ಲಿ ಬರೆಯಲು ಆರಂಭಿಸಿದ ಸರಿಸುಮಾರಿನಲ್ಲೇ ಅವರ ಸಮಕಾಲೀನರಾಗಿ ಬರೆಯಲು ತೊಡಗಿದ ಶರ್ಮರು ಅಡಿಗರಿಗಿಂತ ಭಿನ್ನವಾಗಿ ನವ್ಯಕಾವ್ಯ ಮಾರ್ಗವನ್ನು ರೂಪಿಸಲು ಪ್ರಯತ್ನಿಸಿದ ಕವಿ.

ಸುಮಾರು ಆರು ದಶಕಗಳ ಕಾಲ ಕಾವ್ಯ ರಚನೆಯಲ್ಲಿ ತಮ್ಮನ್ನು ಇಡಿಯಾಗಿ ತೊಡಗಿಸಿಕೊಂಡ ಶರ್ಮರದು ಕಾವ್ಯದ ಬಗೆಗೆ ಶಬರಿಶ್ರದ್ಧೆಯ ಅತೀವ ನಿಷ್ಠೆ; ಅನೇಕ ಆಕರ್ಷಣೆ, ಆಮಿಷಗಳ ನಡುವೆಯೂ ಅವರು ಕಾವ್ಯದ ಶುದ್ಧರೂಪಕ್ಕೆ ಒಲಿದಂಥವರು.

ಬಿ. ಸಿ. ರಾಮಚಂದ್ರ ಶರ್ಮ

ಜನನ

ನವೆಂಬರ್ ೨೮, ೧೯೨೫
ಮಂಡ್ಯಜಿಲ್ಲೆಯ ನಾಗಮಂಗಲದ ಬಳಿಯ ಬೋಗಾದಿ

ವೃತ್ತಿ

- Advertisement -

ಪ್ರಾಧ್ಯಾಪಕರು, ಸಾಹಿತಿಗಳು

ಮುಖಾಮುಖಿ ಕೂತರೂ ನೇರ ಹಾಯದ ದೃಷ್ಟಿಗಳ ಪದಕದ ತಳಕ್ಕೆ ನಾಚಿ ಕಪ್ಪು ಪುಕ್ಕಲೆದೆ ಹೊರಕ್ಕೆಳೆದು ತರುವಾತರ, ನಿಲ್ಲದೇ ನಡೆದ ಯುದ್ಧ ರಾಜಿಗೆ ನಿಲ್ಲದೇ ನಡೆದ ಮಾತುಕತೆ, ಪ್ರತಿರಾತ್ರಿ ಕನಸಿಗೆ ಬಂದು ಚಂದದಾಸೆ, ಮೋಹಿನಿಯಾಗಿ, ಗೆಲ್ಲದೇ ಹೋದ ಕೇಸಾಗಿ, ಮಾತಿಗೆಟುಕದೆ ನಿಂತೊಂದು ಕಲ್ಪನೆಯಾಗಿ, ಕಾಡುವಾಗಲೂ ಅನುಮಾನ; ಸಮರಸದ ಸ್ಥಿತಿ ಮರಣ; ಸಮರಸವೇ ಜೀವನ.

ಈ ‘ಸಮರ’, ‘ಈ ಮುಖಾಮುಖಿ’ – ಶರ್ಮರ ಕಾವ್ಯಶಕ್ತಿ.

ಜೀವನ

- Advertisement -

ಬಿ.ಸಿ.ರಾಮಚಂದ್ರ ಶರ್ಮ – ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ. ಇವರು ೧೯೨೫ ನವಂಬರ೨೮ರಂದು ಜನಿಸಿದರು. ಅವರ ಹುಟ್ಟೂರು ಮಂಡ್ಯಜಿಲ್ಲೆ ನಾಗಮಂಗಲದ ಬಳಿಯ ಬೋಗಾದಿ. ತಂದೆ ಬೋಗಾದಿ ಚಂದ್ರಶೇಖರಶರ್ಮ.

ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ಶರ್ಮ ಕಡುಬಡತನದಲ್ಲಿ ಬಾಲ್ಯ ಕಳೆದರು. ಬಡತನ ತಾಳಲಾರದೆ ಒಮ್ಮೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ತೀವ್ರವಾಗಿ ಯೋಚಿಸಿದ್ದನ್ನು ಶರ್ಮ ನಂತರದ ದಿನಗಳಲ್ಲಿ ಒಮ್ಮೆ ಹೇಳಿಕೊಂಡಿದ್ದರು. ಆದರೆ ಶರ್ಮರದು ಹೋರಾಟದ ಮನಸ್ಸು; ಯಾವುದನ್ನೂ ಸುಲಭವಾಗಿ ಸ್ವೀಕರಿಸದ, ತಾನು ನಂಬಿದ್ದನ್ನು ಸಾಧಿಸಿ ತೋರಿಸುವ ಛಲದ ಹಾದಿ ಅವರದು.

ಚಿಕ್ಕಂದಿನಲ್ಲಿ ರಾಮಚಂದ್ರಶರ್ಮರಿಗೆ ಆಸರೆಯಾಗಿ ನಿಂತವರಲ್ಲಿ ಎಂ.ವಿ ಸೇತುರಾಮಯ್ಯನವರು ಒಬ್ಬರು. ಎಂ.ವಿ.ಸೇ ಅವರ ಒಡನಾಟದಿಂದಾಗಿ ಶರ್ಮರಿಗೆ ತಾರುಣ್ಯದಲ್ಲೇ ಕನ್ನಡದ ಪ್ರತಿಭಾವಂತ ಮನಸ್ಸುಗಳ ಸಹವಾಸ ಸಿಕ್ಕಿತು. ಬಿ.ಎಂ.ಶ್ರೀ ಆ ಕಾಲಕ್ಕೆ ಮಾಡುತ್ತಿದ್ದ ಪರಿಣಾಮಕಾರೀ ಭಾಷಣ, ಪರಿಷತ್ತಿನಲ್ಲಿ ನಿಘಂಟು ಕಛೇರಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾಗ ಒದಗಿ ಬಂದ ವಿ.ಸೀ, ಎಂ.ಆರ್.ಶ್ರೀ, ಕ.ವೆಂ. ರಾಘವಾಚಾರ್, ಎಲ್. ಗುಂಡಪ್ಪ ಮೊದಲಾದವರ ಸಂಪರ್ಕ ಶರ್ಮರಲ್ಲಿ ಸಾಹಿತ್ಯ ಪ್ರೀತಿ ಮೂಡಲು ಪ್ರೇರಣೆ ಒದಗಿಸಿದಂಥ ಸಂಗತಿಗಳು.

ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಸ್ಸಿ, ಬಿ.ಎಡ್ ಪದವಿಗಳನ್ನು ಪಡೆದ ಶರ್ಮರು ಕೆಲಕಾಲ ಬೆಂಗಳೂರಿನ ಹೈಸ್ಕೂಲೊಂದರಲ್ಲಿ ಅಧ್ಯಾಪಕರಾಗಿದ್ದರು. ನಂತರ ಶರ್ಮರ ವಿದೇಶ ಯಾತ್ರೆ ಆರಂಭವಾಯಿತು. ಕೆಲಕಾಲ ಇಥಿಯೋಪಿಯಾದಲ್ಲಿ ಅಧ್ಯಾಪಕ ವೃತ್ತಿಯಲ್ಲಿದ್ದು ನಂತರ ಇಂಗ್ಲೆಂಡಿಗೆ ಬಂದರು. ಅಲ್ಲಿ ಅಧ್ಯಾಪಕ ವೃತ್ತಿಯಲ್ಲಿದ್ದುಕೊಂಡೇ ಮನಃಶಾಸ್ತ್ರ ಅಧ್ಯಯನ ಮಾಡಿದರು. ವಲಸೆ ಹೋದ ಭಾರತದ ಮಕ್ಕಳ ಬುದ್ಧಿಶಕ್ತಿಯ ಬಗ್ಗೆ ಅಧ್ಯಯನ ನಡೆಸಿ ಬರೆದ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದರು.

ಅಧ್ಯಾಪಕರಾಗಿದ್ದ ಶರ್ಮ ಮುಂದೆ ಮನಃಶಾಸ್ತ್ರದ ಸಲಹೆಗಾರರಾಗಿ ನೇಮಕರಾದರು. ಇಂಗ್ಲೆಂಡ್, ಜಾಂಬಿಯಾ ಹಾಗೂ ಯುನೆಸ್ಕೋ ಪರವಾಗಿ ಮಲಾವಿಗಳಲ್ಲಿ ಮನಃಶಾಸ್ತ್ರಜ್ಞರಾಗಿ ಕೆಲಸಮಾಡಿ ೧೯೮೨ರಲ್ಲಿ ತಾಯ್ನಾಡಿಗೆ ಹಿಂದಿರುಗಿದರು.

ಸಾಹಿತ್ಯಲೋಕದಲ್ಲಿ

ಶರ್ಮರು ತಮ್ಮ ಮೊದಲ ಕವನ ಸಂಕಲನ ‘ಹೃದಯಗೀತೆ’ ಪ್ರಕಟಿಸಿದ್ದು ೧೯೫೨ರಲ್ಲಿ, ಅವರ ಇಪ್ಪತ್ತೇಳನೇ ವಯಸ್ಸಿನಲ್ಲಿ.

ಶರ್ಮರು ತಾವು ಮೊದಲು ಕವಿತೆ ಬರೆದ ಸನ್ನಿವೇಶವನ್ನು ಹೀಗೆ ನೆನಪಿಸಿಕೊಳ್ಳುತ್ತಿದ್ದರು: ೧೯೪೬ರ ವೇಳೆಗೆ ಬೇಂದ್ರೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಬಂದಿದ್ದ ಸಂದರ್ಭ. ಉಪನ್ಯಾಸದ ನಡುವೆ ಅವರು ಅಲ್ಲಿದ್ದ ತರುಣರಿಗೆ ಆಶುಕವಿತೆಯೊಂದನ್ನು ಬರೆಯಲು ಸೂಚಿಸಿ ‘ಹೂವಿನ ಬಗ್ಗೆ ಬರೆಯಿರಿ’ ಎಂದರು. ಸಭಿಕರಲ್ಲಿ ಶರ್ಮರೂ ಒಬ್ಬರು. ಕೆ. ನರಸಿಂಹಮೂರ್ತಿಯವರೂ ಜತೆಗಿದ್ದರಂತೆ. ಶರ್ಮ ‘ರೋಜ-ಸರೋಜ’ ಎಂಬ ಕವಿತೆ ಬರೆದರು. ಆ ಕವಿತೆಗೆ ಬಹುಮಾನ ಸಿಕ್ಕಿತು. ‘ಬೇಂದ್ರೆಯವರ ಬಳಿ ಪುಟ್ಟ ಹೊಸ ಡೈರಿಯಿತ್ತು. ಅದನ್ನವರು ಈ ತರುಣ ಕವಿಗೆ ಕೊಡುಗೆಯಾಗಿ ನೀಡುತ್ತಾ ‘ಭವಿಷ್ಯದ ಕವಿಗೆ ಆಶೀರ್ವಾದ ಪೂರಕ’ ಎಂದು ಬರೆದು ಕೊಟ್ಟಿದ್ದರಂತೆ. ಅಂದು ಶರ್ಮರಿಗೆ ತಾನು ‘ಕವಿ’ ಅನ್ನಿಸಿತಂತೆ.

ಶರ್ಮರು ಪ್ರೀತಿಸಿ ಮದುವೆಯಾದ ಅವರ ಪತ್ನಿ ಪದ್ಮ ಅವರು ಸಹಾ ಲೇಖಕಿಯಾಗಿದ್ದರು. ಶರ್ಮರಿಗೆ ಉತ್ತಮ ಸಂಗಾತಿ. ಪದ್ಮ-ಶರ್ಮ ಜತೆಗೂಡಿ ಪೆಂಗ್ವಿನ್ ಪ್ರಕಾಶನಕ್ಕಾಗಿ ಮಾಸ್ತಿಯವರ ‘ಚಿಕ್ಕವೀರರಾಜೇಂದ್ರ’ ಕಾದಂಬರಿಯನ್ನು, ಯಶವಂತ ಚಿತ್ತಾಲರ ಕತೆಗಳನ್ನು ಮತ್ತು ಕುವೆಂಪು ಅವರ ‘ಕಾನೂರು ಹೆಗ್ಗಡತಿ’ ಕೃತಿಗಳನ್ನು ಇಂಗ್ಲೀಷಿಗೆ ಭಾಷಾಂತರಿಸಿದರು. ಈ ಮೂಲಕ ಕನ್ನಡದ ಮಹತ್ವದ ಲೇಖಕರನ್ನು ಹೊರಜಗತ್ತಿಗೆ ಪರಿಚಯ ಮಾಡಿಕೊಟ್ಟರು.

ರಾಮಚಂದ್ರಶರ್ಮ ಅವರ ಪ್ರಮುಖ ಕವನ ಸಂಕಲನಗಳೆಂದರೆ – ‘ಹೃದಯಗೀತ’, ‘ಏಳುಸುತ್ತಿನ ಕೋಟೆ’, ‘ಬುವಿ ನೀಡಿದ ಸ್ಫೂರ್ತಿ’, ‘ಹೇಸರಗತ್ತೆ’, ‘ಬ್ರಾಹ್ಮಣ ಹುಡುಗ’, ‘ಮಾತು-ಮಾಟ’, ‘ದೆಹಲಿಗೆ ಬಂದ ಹೊಸ ವರ್ಷ’, ‘ಸಪ್ತಪದಿ’. ಇಂಗ್ಲೀಷಿನಲ್ಲಿ ‘Gestures’ ಎಂಬ ಕವನ ಸಂಕಲನ ಪ್ರಕಟವಾಗಿದೆ. ಕನ್ನಡ ಕಾವ್ಯಕ್ಷೇತ್ರಕ್ಕೆ ಶರ್ಮರ ಮತ್ತೊಂದು ಮಹತ್ವದ ಕೊಡುಗೆಯೆಂದರೆ ‘ಈ ಶತಮಾನದ ನೂರು ಇಂಗ್ಲಿಷ್ ಕವನಗಳು’ (೧೯೮೨). ಮೂವತ್ತೊಂಬತ್ತು ಕವಿಗಳ ನೂರು ಕವನಗಳನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಅನುಸೃಷ್ಟಿ ಮಾಡಿಕೊಡುವುದರ ಮೂಲಕ ಶರ್ಮರು ಕನ್ನಡ ಮನಸ್ಸಿಗೆ ಹೊಸ ಸಂವೇದನೆಯ ಪರಿಚಯ ಮಾಡಿಕೊಟ್ಟಿದ್ದಾರೆ.

ಕನ್ನಡ ಕಥಾ ಸಾಹಿತ್ಯದಲ್ಲಿ ನವ್ಯಸಂವೇದನೆ ತಂದ ಮೊದಲಿಗರಲ್ಲಿ ಶರ್ಮರು ಒಬ್ಬರು. ಶರ್ಮರು ‘ಮಂದಾರ ಕುಸುಮ’, ‘ಏಳನೆಯ ಜೀವ’, ‘ಬೆಳಗಾಯಿತು’ ಮತ್ತು ‘ಕತೆಗಾರನ ಕತೆ’ ಎಂಬ ನಾಲ್ಕು ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ಶರ್ಮ ಅವರು ನಾಟಕಗಳನ್ನೂ ಬರೆದಿದ್ದಾರೆ. ಅವರ ‘ಸೆರಗಿನ ಕೆಂಡ’ ರೇಡಿಯೋ ನಾಟಕ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಿತು. ‘ನೆರಳು’ ಕೃತಿಗೆ ರಾಜ್ಯ ಸರ್ಕಾರದ ಪ್ರಶಸ್ತಿ ಪ್ರಾಪ್ತವಾಯಿತು. ಈ ಎರಡು ನಾಟಕಗಳಲ್ಲದೆ ‘ಬಾಳಸಂಜೆ’, ‘ನೀಲಿಕಾಗದ’ ಹಾಗೂ ‘ವೈತರಣಿ’ ಎಂಬ ನಾಟಕಗಳನ್ನು ಶರ್ಮ ಬರೆದಿದ್ದಾರೆ.

‘ಮಕ್ಕಳ ಬುದ್ಧಿಶಕ್ತಿ ಮತ್ತು ಪರಿಸರ’, ‘ಕಾರಂಜಿ’, ‘ಪ್ರತಿಭಾ ಸಂದರ್ಶನ’ ಅವರ ಇನ್ನಿತರ ಪ್ರಕಟಿತ ಕೃತಿಗಳು. ‘ಪೆಂಗ್ವಿನ್’ ಪ್ರಕಾಶನಕ್ಕಾಗಿ ‘From Cauvery to Godavari’ ಎಂಬ ಆಧುನಿಕ ಸಣ್ಣಕತೆಗಳ ಸಂಕಲನವನ್ನೂ, ದೆಹಲಿಯ ‘ಕಥಾ’ ಸಂಸ್ಥೆಗಾಗಿ ‘ಮಾಸ್ತಿ’ ಕೃತಿಯನ್ನೂ ಶರ್ಮ ಸಂಪಾದಿಸಿಕೊಟ್ಟಿದ್ದಾರೆ. ‘BMS: The Man and Works’ ಅವರ ಮತ್ತೊಂದು ಸಂಪಾದಿತ ಕೃತಿ.

ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಅನೇಕ ವಿಚಾರ ಸಂಕೀರ್ಣಗಳಲ್ಲಿ ಭಾಗವಹಿಸಿರುವ ಶರ್ಮರು ಅತ್ಯುತ್ತಮ ವಾಗ್ಮಿಗಳಾಗಿದ್ದರು. ಅವರು ಕವಿತೆ ಓದುತಿದ್ದುದನ್ನು ಕೇಳುವುದೇ ಒಂದು ಅನುಭವ ಎಂಬತ್ತಿರುತ್ತಿತ್ತು. ಲವಲವಿಕೆಯಿಂದ ಸಾಹಿತ್ಯಚರ್ಚೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಶರ್ಮರು ಸಾಹಿತ್ಯ ಪರಿಸರ ಜಡವಾಗದಂತೆ, ಜೀವಂತವಾಗಿ ಚಲನಶೀಲವಾಗಿರಬೇಕೆಂಬ ತೀವ್ರ ಕಾಳಜಿಯುಳ್ಳವರಾಗಿದ್ದರು. ಗಾಢ ಕಾವ್ಯಶ್ರದ್ಧೆ ಹೊಂದಿದ್ದ ಶರ್ಮರು ಅನ್ಯದೇಶೀಯ ಅನುಭವಗಳನ್ನು ಕನ್ನಡದಲ್ಲಿ ಸಫಲ ಕಲೆಯಾಗಿಸಲು ಪ್ರಯತ್ನಿಸಿದ ವಿಶಿಷ್ಟ ಕವಿ.

ಕೃತಿಗಳು


ಕವನ ಸಂಕಲನಗಳು

 • ಏಳು ಸುತ್ತಿನ ಕೋಟೆ
 • ಹೇಸರಗತ್ತೆ
 • ಬ್ರಾಹ್ಮಣ ಹುಡುಗ
 • ಸಪ್ತಪದಿ
 • ಹೃದಯಗೀತ
 • ಮಾತು ಮಾಟ

ನಾಟಕಗಳು

 • ಬಾಳಸಂಜೆ ಮತ್ತು ನೀಲಿ ಕಾಗದ
 • ನೆರಳು
 • ವೈತರಣಿ
 • ಸೆರಗಿನ ಕೆಂಡ (ರೇಡಿಯೊ ನಾಟಕ)

ಕಥಾ ಸಂಕಲನ

 • ಮಂದಾರ ಕುಸುಮ
 • ಏಳನೆಯ ಜೀವ
 • ಕತೆಗಾರನ ಕತೆ

ಅನುವಾದ

 • ಈ ಶತಮಾನದ ನೂರು ಇಂಗ್ಲಿಷ್ ಕವನಗಳು

ಮನಃಶಾಸ್ತ್ರ

 • ಮಕ್ಕಳ ಬುದ್ಧಿಶಕ್ತಿ ಮತ್ತು ಪರಿಸರ

ಇತರ

 • ಪ್ರತಿಭಾ ಸಂದರ್ಶನ

ಪ್ರಶಸ್ತಿ, ಪುರಸ್ಕಾರಗಳು

 • ಇವರ “ಸಪ್ತಪದಿ” ಎಂಬ ಕೃತಿಗೆ ೧೯೯೮ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
 • “ನೆರಳು” ನಾಟಕಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭಿಸಿದೆ.
 • “ಸೆರಗಿನ ಕೆಂಡ” ರೇಡಿಯೊ ನಾಟಕಕ್ಕೆ ಅಖಿಲ ಭಾರತ ಬಹುಮಾನ ಬಂದಿದೆ.
 • ಇದಲ್ಲದೆ ಹಿಂದುಸ್ತಾನ್ ಟೈಮ್ಸ್ ಪ್ರಶಸ್ತಿ ಹಾಗು ಪ್ರಜಾವಾಣಿ ಪ್ರಶಸ್ತಿ, ಅನುವಾದಕ್ಕೆ ‘ಕಥಾಪ್ರಶಸ್ತಿ’, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಗೋರೂರು ಪ್ರತಿಷ್ಠಾನ ಪ್ರಶಸ್ತಿ, ಕೈಲಾಸಂ ಪ್ರಶಸ್ತಿ ಹೀಗೆ ಹಲವು ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.

ವಿದಾಯ

ಶರ್ಮರು ೧೮ ಏಪ್ರಿಲ್ ೨೦೦೫ರಂದು ಈ ಲೋಕವನ್ನಗಲಿದರು. ಶರ್ಮ ಕಾವ್ಯ, ಕತೆ, ನಾಟಕ, ಚಿಂತನೆ – ಹೀಗೆ ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಲ್ಲಿ ಕೆಲಸ ಮಾಡಿದ್ದರೂ ಅವರ ಕಾವ್ಯಶ್ರದ್ಧೆ ಅನನ್ಯ. ಕನ್ನಡ ಭಾಷೆಗೆ ಜೀರ್ಣಾಗ್ನಿ ಶಕ್ತಿಯನ್ನು ತಂದುಕೊಟ್ಟ ವಿಶಿಷ್ಟ ಪ್ರತಿಭೆಗಳಲ್ಲಿ ಒಬ್ಬರು.

ಮಾಹಿತಿ ಕೃಪೆ: ವಿಕಿಪೀಡಿಯ


ಸಂಗ್ರಹ: ಶ್ರೀ ಇಂಗಳಗಿ ದಾವಲಮಲೀಕ

 

- Advertisement -
- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group