spot_img
spot_img

ಇಂದು ವಿಶ್ವ ಅಮ್ಮಂದಿರ ದಿನ: ಅಮ್ಮನ ಬಾಳಲಿ ನಗು ತುಂಬಿರಲಿ

Must Read

“ಇಡೀ ವಿಶ್ವಕ್ಕೆ ನೀವು ಒಬ್ಬ ವ್ಯಕ್ತಿ ಮಾತ್ರ. ಆದರೆ ಒಬ್ಬರು ವ್ಯಕ್ತಿಗೆ ಮಾತ್ರ ನೀವೇ ಇಡೀ ವಿಶ್ವ… ಅದೇ ತಾಯಿ ಇದೊಂದು ಉಕ್ತಿ ಸಾಕು ಅಮ್ಮನ ಮಹತ್ವವನ್ನು ಅರಿಯಲು.

ಮಗು ಹುಟ್ಟುವ ಸಂದರ್ಭ ಅಮೃತಘಳಿಗೆ ಎಂದು ಹೇಳುತ್ತಾರೆ. ತಾಯಿಗೆ ಅದು ಅವಿಸ್ಮರಣೀಯ ಕ್ಷಣ. ಜನ್ಮ ನೀಡಿ ಮರುಜನ್ಮ ಪಡೆಯುವ ನಿಸ್ವಾರ್ಥ ಹೃದಯಕ್ಕೆ ಅಮ್ಮಂದಿರ ದಿನದ ಶುಭಾಶಯಗಳು. ನಮ್ಮನ್ನೆಲ್ಲ ಕಣ್ಣ ರೆಪ್ಪೆಯಂತೆ ಸಲಹಿ, ಹೃದಯದಲ್ಲಿ ಬೆಚ್ಚಗೆ ಕಾಪಿಟ್ಟು ತಮ್ಮ ಉಸಿರು ಇರುವವರೆಗೂ ಕಾಳಜಿ ಮಾಡುವ ಬರೀ ನಿಷ್ಕಲ್ಮಶ ಪ್ರೀತಿಯನ್ನೇ ಧಾರೆಯೆರೆಯುವ ಕರುಣಾಮೂರ್ತಿ ಅಮ್ಮ. ಮಾತೃಹೃದಯವೇ ಅಂಥದ್ದು. ಎಲ್ಲ ಕಡೆಯೂ ಇರಲಾಗದ ದೇವರು, ಅಮ್ಮನೆಂಬ ಜೀವವನ್ನು ಸೃಷ್ಟಿಸಿದನಂತೆ. ಎಲ್ಲರ ಜೀವದ ತುಂಬಾ ಅಮ್ಮನೇ ಆವರಿಸಿಕೊಂಡಿದ್ದಾಳೆ, ಸೂರ್ಯೋದಯದ ಸಮಯದಲ್ಲಿ ಆಗಸದ ತುಂಬಾ ಹಬ್ಬಿಕೊಳ್ಳುವ ಹೊಂಬಣ್ಣದಂತೆ. ಹೌದು, ಅಮ್ಮ ಎನ್ನೋ ಎರಡಕ್ಷರದಲ್ಲಿ ಸಹನೆ, ಪ್ರೀತಿ, ಕರುಣೆ, ವಾತ್ಸಲ್ಯ, ತಾಳ್ಮೆ, ತ್ಯಾಗದ ಪ್ರತಿರೂಪ ಅಡಗಿದೆ. ನವಮಾಸದಲ್ಲಿ ಅದೆಷ್ಟೋ ನೋವು ಅನುಭವಿಸಿ ನಮ್ಮನ್ನು ಈ ಜಗತ್ತಿಗೆ ಪರಿಚಯಿಸಿದ ತಾಯಿಯ ಋಣ ತೀರಿಸಲಾಗದು. ಅದಕ್ಕಾಗಿ ವಿಶೇಷ ದಿನದ ಅಗತ್ಯವೂ ಇಲ್ಲ. ಹಾಗಿದ್ದರೂ ಆಕೆಯನ್ನು ಗೌರವಿಸಲು ಪ್ರತೀ ವರ್ಷ ಮೇ 2ನೇ ರವಿವಾರ ವಿಶ್ವ ತಾಯಂದಿರ ದಿನ ಆಚರಿಸಲಾಗುತ್ತದೆ.

ಹಿನ್ನೆಲೆ ಏನು?

1908ರಲ್ಲಿ ಅಮೆರಿಕದಲ್ಲಿ ಶಾಂತಿ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅನಾ ಜಾರ್ವಿಸ್‌ ತಾಯಂದಿರ ದಿನವನ್ನು ಮೊದಲ ಬಾರಿಗೆ ಆಚರಿಸಲು ಮುನ್ನುಡಿ ಬರೆದಳು. 1905ರಲ್ಲಿ ತಾಯಿ ದುರದೃಷ್ಟವಶಾತ್‌ ಸಾವನ್ನಪ್ಪಿದಾಗ ತನ್ನ ಜೀವವೇ ಆಗಿದ್ದ ತಾಯಿಯನ್ನು ಕಳೆದುಕೊಂಡಿದ್ದಳು. 1908ರಲ್ಲಿ ವರ್ಜೀನಿಯಾದ ಗ್ರಾಫ್ಟನ್‌ನಲ್ಲಿರುವ ಸೈಂಟ್‌ ಆ್ಯಂಡ್ರ್ಯೂಸ್‌ ಮೆಥೋಡಿಸ್ಟ್‌ ಚರ್ಚ್‌ನಲ್ಲಿ ತಾಯಿಗಾಗಿ ಪ್ರಾರ್ಥನಾ ಸಭೆಯೊಂದನ್ನು ಆಯೋಜಿಸಿದ ಅನಾ ತಾಯಿಯ ಬಗ್ಗೆ ಮನದಾಳದ ಮಾತನ್ನು ಬಿಚ್ಚಿಡುತ್ತಾಳೆ. ಅದರೊಂದಿಗೆ ಅಮ್ಮನಿಗಾಗಿ ಒಂದು ದಿನವನ್ನು ಮೀಸಲಿಡುವ ಮಹದಾಸೆಯನ್ನು ವ್ಯಕ್ತಪಡಿಸಿ ಸರಕಾರಕ್ಕೆ ಮನವಿ ಮಾಡಿಕೊಂಡಳು. ಅಮೆರಿಕದಲ್ಲಿ 1914ರಲ್ಲಿ ತಾಯಂದಿರ ದಿನದ ಸಂಬಂಧ ಅಧಿಕೃತ ಘೋಷಣೆ ಹೊರಬಿತ್ತು. ಅಂದಿನಿಂದ ಜಗತ್ತಿನೆಲ್ಲೆಡೆ ತಾಯಂದಿರ ದಿನವನ್ನು ಆಚರಿಸಲಾಗುತ್ತಿದೆ.

ರವಿವಾರವೇ ಯಾಕೆ ಆಚರಣೆ?

ವಿಶ್ವದ ದೊಡ್ಡಣ್ಣ ಅಮೆರಿಕದ ರಾಷ್ಟ್ರಾಧ್ಯಕ್ಷರಾಗಿದ್ದ ವುಡ್ರೋ ವಿಲ್ಸನ್‌ 1914ರ ಮೇ 9ರಂದು ಶನಿವಾರದ ದಿನ ಪ್ರಥಮ ಜಾಗತಿಕ ಯುದ್ಧದ ಕಾಲಘಟ್ಟದಲ್ಲಿ ವಿಶ್ವದಲ್ಲಿ ಮತ್ತೆ ಶಾಂತಿ ನೆಲೆಸಲೆಂದು ಈ ದಿನವನ್ನು ಶಾಂತಿರೂಪಿಯಾದ ತಾಯಿಗೆ ಮೀಸಲಾಗಿರಿಸಲು ನಿರ್ಧರಿಸಿದ್ದು, ಈ ಕುರಿತು ಆದೇಶವನ್ನು ಸಹ ಹೊರಡಿಸಿದರು. ಅದರ ಮರುದಿನ ಅಂದರೆ ಮೇ ತಿಂಗಳ ಎರಡನೇ ರವಿವಾರವನ್ನು ತಾಯಂದಿರ ದಿನವನ್ನಾಗಿ ಆಚರಿಸಲಾಗುತ್ತಿದೆ.

ಮಾಂತ್ರಿಕ ಶಕ್ತಿ:

ಆಕೆ ನಮ್ಮೆಲ್ಲರ ಪಾಲಿಗೆ ಮಾಂತ್ರಿಕ ಶಕ್ತಿಯಿದ್ದಂತೆ. ಮಗುವಿಗೆ ಸಣ್ಣ ಜ್ವರ ಬಂದರೂ ಅಮ್ಮನ ಜೀವ ಚಡಪಡಿಸುತ್ತದೆ. ಮಗುವಿನ ಹಣೆ ಬೆಚ್ಚಗಾದರೆ ಅಮ್ಮನ ಎದೆಗೆ ಬೆಂಕಿ ತಾಗುತ್ತದೆ. ಜಗತ್ತಿನ ಎಲ್ಲ ತಾಯಂದಿರೂ ಹಾಗೆಯೇ. ಆರೋಗ್ಯ ಹದಗೆಟ್ಟರೆ ವೈದ್ಯೆಯಾಗುತ್ತಾಳೆ, ಮಕ್ಕಳು ತಪ್ಪು ಮಾಡಿದ್ದು ತಿಳಿದಿದ್ದರೂ ತಪ್ಪಿಲ್ಲವೆಂದು ವಾದಿಸುವ ವಕೀಲೆಯಾಗುತ್ತಾಳೆ, ಮಕ್ಕಳ ಬೇಸರ, ಖುಷಿ, ನೋವು ಎಲ್ಲವನ್ನು ಹಂಚಿಕೊಳ್ಳುವ ಗೆಳತಿಯಾಗುತ್ತಾಳೆ, ತನ್ನ ಮಕ್ಕಳ ಬಗ್ಗೆ ಕೊಂಕು ಮಾತನಾಡುವವರ ವಿರುದ್ಧ ಗಟ್ಟಿ ಧ್ವನಿ ಎತ್ತಿ ನಿಂತು ನಮ್ಮೆಲ್ಲರ ಹೊಣೆ ಹೊರುವ ರಕ್ಷಕಿಯೂ ಆಕೆಯಾಗುತ್ತಾಳೆ. ಇಷ್ಟೆಲ್ಲವನ್ನೂ ಆಕೆ ಮಕ್ಕಳ ಏಳಿಗೆ, ಸುಖಕ್ಕಾಗಿಯೇ ಮಾಡಿದ್ದು. “ಎಲ್ಲ ಸುಖವನ್ನು ಮಕ್ಕಳಿಗೆ ನೀಡು, ಕಷ್ಟವೆಲ್ಲ ತನಗೆ ನೀಡು’ ಎಂದು ಪ್ರತೀ ಕ್ಷಣ ಬೇಡುವ, ನಮಗಾಗಿಯೇ ತನ್ನ ಬದುಕಿನ ಖುಷಿಯನ್ನು ತ್ಯಾಗ ಮಾಡಿ, ಮಕ್ಕಳ ಸಂತೋಷದಲ್ಲಿಯೇ ತಾನು ನಗುವ ಜೀವಕ್ಕೆ ವರ್ಷದಲ್ಲಿ ಒಂದು ದಿನ ಮೀಸಲಿಟ್ಟರೆ ಸಾಕೇ?

ನಿಸ್ವಾರ್ಥ ಸೇವೆ:

ಭೂಮಿ ಮೇಲೆ ತಂದೆ-ತಾಯಿ ಇಲ್ಲದವರು ಅನಾಥರಲ್ಲ, ಬದಲಾಗಿ ಅವರ ಮೌಲ್ಯ ಅರಿಯದವರೇ ನಿಜವಾದ ಅನಾಥರು. ಆಕೆ ಮಾಡುವುದೆಲ್ಲವೂ ಮಕ್ಕಳಿಗಾಗಿಯೇ. ಮಕ್ಕಳ ಭವಿಷ್ಯ ರೂಪಿಸುವ ಶಿಲ್ಪಿ ತಾಯಿ. ಆ ತಾಯಿಯ ಕನಸಿಗೆ, ಹೋರಾಟಕ್ಕೆ ಹೆಗಲು ಕೊಟ್ಟು, ಬೆಂಗಾವಲಾಗಿರುವುದು ತಂದೆ. ಹೊತ್ತು ಮೂಡುವ ಮುನ್ನವೇ ರಸ್ತೆ ಕಸ ಗುಡಿಸಿ ಸ್ವಚ್ಚ ಮಾಡುವ ಪೌರ ಕಾರ್ಮಿಕ ಮಹಿಳೆಯರು, ಹಗಲಿರುಳು ರೋಗಿಯ ಸೇವೆ ಮಾಡುವ ನರ್ಸ್‌, ವೈದ್ಯೆ, ದಾದಿಯರು ಹಾಗೂ ಸಮಾಜದ ಸ್ವಾಸ್ಥ್ಯಕ್ಕಾಗಿ ದುಡಿಯುವ ಪೊಲೀಸ್‌ ಮಹಿಳಾ ಸಿಬಂದಿ ಎಲ್ಲರೂ ತಾಯಂದಿರ ಪಟ್ಟಿಗೆ ಸೇರುತ್ತಾರೆ. ಇವರೆಲ್ಲರೊಂದಿಗೆ ಸಂಸಾರದ ಹೊಣೆ ನಿಭಾಯಿಸಲೆಂದು ಪುರುಷ ಸ್ಥಾನ ತುಂಬಬಲ್ಲ ಪ್ರತೀ ಮಹಿಳೆಯ ನಿಸ್ವಾರ್ಥ ಸೇವೆ ಗುರುತಿಸಿ ಕೃತಜ್ಞತೆ ಸಲ್ಲಿಸಬೇಕಿದೆ.

ಪ್ರೀತಿ ಹಂಚುವ ದಿನವಾಗಲಿ:

ಅಮ್ಮ ಟೈ ಎಲ್ಲಿ? ಅಮ್ಮ ಪರ್ಸ್‌ ಎಲ್ಲಿ? ಮೊಬೈಲ್‌ ಎಲ್ಲಿದೆ ಅಮ್ಮ? ಹೀಗೆ ಪ್ರತಿಯೊಂದಕ್ಕೂ ಅಮ್ಮ ನನ್ನು ಕರೆದಷ್ಟು ಬಾರಿಯೂ ಅಷ್ಟೇ ಸಹನೆಯಿಂದಲೇ ಆಕೆ ಪ್ರತಿಕ್ರಿಯಿಸುತ್ತಾಳೆ. ಆದರೆ ಈಗ ಕೆಲವೆಡೆಗಳಲ್ಲಿ ಅದೇ ಮಕ್ಕಳನ್ನು ತಾಯಿ ಕರೆದರೆ, ಆಕೆಗೆ ವಯಸ್ಸಾಗಿದೆ ಎಂಬರ್ಥದಲ್ಲಿ ವ್ಯಂಗ್ಯವಾಡುವ ಮಕ್ಕಳೂ ಇದ್ದಾರೆ. ಇಲ್ಲಿ ನೆನಪಿರಬೇಕಾದ್ದು ಒಂದೇ, ಆಕೆ ಇಲ್ಲದಿದ್ದರೆ ನಮ್ಮ ಅಸ್ತಿತ್ವವೇ ಇಲ್ಲವೆಂಬುದು. ನಮ್ಮ ತೊದಲು ನುಡಿ, ತಪ್ಪು ಹೆಜ್ಜೆ ಸರಿಪಡಿಸಿ ಜೀವನ ರೂಪಿಸುವ ಮಾರ್ಗದರ್ಶಕಿಯಾದ ಆಕೆ ಮಕ್ಕಳಿಂದ ಏನನ್ನೂ ಬಯಸಲಾರಳು. ತಾಯಿ ಬಗ್ಗೆ ನಮಗಿರುವ ಪ್ರೀತಿಯನ್ನು ವ್ಯಕ್ತಪಡಿಸಲು ಈ ದಿನ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ, ಡಿಪಿ, ಸ್ಟೇಟಸ್‌ಗೆ ಸೀಮಿತಗೊಳಿಸುವ ಸಣ್ಣ ಮನಸ್ಸು ನಮ್ಮದಾಗದಿರಲಿ. ಆಕೆಯೊಂದಿಗೆ ಬದುಕಿನುದ್ದಕ್ಕೂ ಖುಷಿ- ಖುಷಿ ಯಾಗಿರುತ್ತೇವೆ ಎನ್ನುವ ಸಂಕಲ್ಪ ಮಾಡುವ ದಿನ ಇದಾಗಿರಲಿ. ಬಹುತೇಕರು ಅಮ್ಮನಿಗೆ ಉಡುಗೊರೆ ನೀಡುತ್ತಾರೆ. ಆದರೆ ತಾವೇ ಅಮ್ಮನಿಗೆ ಬೆಲೆ ಕಟ್ಟಲಾಗದ ಉಡುಗೊರೆ ಎಂಬುದನ್ನು ಮರೆತು ಬಿಡುತ್ತಾರೆ.

ಸಿಕ್ಕ ಒಂದಿಷ್ಟು ಸಮಯವನ್ನು ಮೀಸಲಿಟ್ಟರೇ ಅದಕ್ಕಿಂತ ಖುಷಿ ಅಮ್ಮನಿಗೆ ಮಗದೊಂದಿಲ್ಲ. ಭೂಮಿ ಮೇಲಿನ ನಿಷ್ಕಲ್ಮಶ ಪ್ರೀತಿ ಹಂಚುವ ಸಹೃದಯಕ್ಕೆ ಜತೆಗಾರರಾಗೋಣ. ಅವರ ಸುಖ- ದುಃಖ ಆಲಿಸುವ ಮಗುವಿನ ಹೃದಯ ನಮ್ಮದಾಗಲಿ. ಆ ಮೂಲಕ ಅಮ್ಮನ ಬಾಳಲಿ ಅನುದಿನವೂ ಖುಷಿ ತುಂಬಿರಲಿ.


ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ

- Advertisement -
- Advertisement -

Latest News

ಶಿಕ್ಷಕರ ಸೇವಾ ಪುಸ್ತಕ ಸರಿಪಡಿಸಲು “ಗುರುಸ್ಪಂದನ” ಕಾರ್ಯಕ್ರಮ ಆಯೋಜಿಸಿ; ಭೂಸನೂರ

ಸಿಂದಗಿ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಪುಸ್ತಕಗಳು  ಅಪೂರ್ಣವಾಗಿರುವ ಸೇವಾ ವಿವರ ಹಾಗೂ ಮಾಹಿತಿಯನ್ನು ಪೂರ್ಣಗೊಳಿಸಲು "ಗುರುಸ್ಪಂದನ" ಕಾರ್ಯಕ್ರಮವನ್ನು  ಆಯೋಜಿಸುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ...
- Advertisement -

More Articles Like This

- Advertisement -
close
error: Content is protected !!