ಮೂಡಲಗಿ– ಹೆಣ್ಣು ಚಿಕ್ಕವಳಿದ್ದಾಗ ತಂದೆಯ ಅಧಿಕಾರದಲ್ಲಿ ವಯಸ್ಸಿನಲ್ಲಿ ಗಂಡನ ಆಸರೆಯಲ್ಲಿ ಹಾಗು ವಯಸ್ಸಾದಾಗ ಮಗನ ಆಸರೆಯಲ್ಲಿ ಬದುಕುವ ಮಹಿಳೆ, ಹೊರಗೆ ಬಂದು ಸ್ವಾವಲಂಬಿಯಾಗಬೇಕು ಮತ್ತು ಸರಕಾರದಿಂದ ಬರುವ ತರಬೇತಿಗಳನ್ನು ಪಡೆಯಬೇಕು ಎಂದು ಬೆಳಗಾವಿಯ ಜ್ಞಾನ ಜ್ಯೋತಿ ಗ್ರಾಮೀಣ ಅಭಿವೃದ್ದಿ ಸಂಸ್ಥೆ, ಕಾರ್ಯದರ್ಶಿ ವಿಜಯಾ ನೇಸರಗಿ ಹೇಳಿದರು
ಸಮೀಪದ ತುಕ್ಕಾನಟ್ಟಿಯ ಐ.ಸಿ.ಎ.ಆರ್. ಬರ್ಡ್ಸ್ ಕೃಷಿ ವಿಜ್ಞಾನ ಕೇಂದ್ರ, ಬೆಳಗಾವಿ-1 ಹಾಗೂ ಜ್ಞಾನ ಜ್ಯೋತಿ ಗ್ರಾಮೀಣ ಅಭಿವೃದ್ದಿ ಸಂಸ್ಥೆ, ಬೆಳಗಾವಿ ಇವರ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಐ.ಸಿ.ಎ.ಆರ್. ಬರ್ಡ್ಸ್ ಕೃಷಿ ವಿಜ್ಞಾನ ಕೇಂದ್ರದ ಚೇರಮನ್ ಆರ್ ಎಮ್ ಪಾಟೀಲ್ ಅದ್ಯಕ್ಷತೆ ವಹಿಸಿ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರದ ಬೇರೆ ಬೇರೆ ತಂತ್ರಜ್ಞಾನಗಳ ಸದುಪಯೋಗ ಮಾಡಿಕೊಳ್ಳಬೇಕೆಂದು ಮಹಿಳೆಯರಲ್ಲಿ ಕೇಳಿಕೊಂಡರು. 1967 ರಿಂದ ಯುವಕ ಸಂಘ ಹಾಗು ಹಾಲಿನ ಡೇರಿ ಕಟ್ಟಿದ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ ಮಹಿಳೆಯರು ಸರಕಾರದ ಹಾಗು ಕೃಷಿ ವಿಜ್ಞಾನ ಕೇಂದ್ರದ ಸಹಾಯ ಪಡೆದು ಸ್ವಾವಲಂಬಿಯಾಗಬೇಕು ಎಂದರು.
ಅತಿಥಿಗಳಾದ ಬೆಳಗಾವಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಜಿಲ್ಲಾ ಸಮಿತಿ ಸದಸ್ಯೆ ವಿಜಯಾ ಹಿರೇಮಠ ಮಾತನಾಡಿ, ಮಹಿಳೆಯರಿಗೆ ಏನಾದರೂ ದೌರ್ಜನ್ಯವಾದಲ್ಲಿ ತಮ್ಮ ಕೇಂದ್ರಕ್ಕೆ ಬಂದು ಸಹಾಯ ಹಾಗೂ ಮಾರ್ಗದರ್ಶನ ಪಡೆದುಕೊಳ್ಳಲು ತಿಳಿಸಿದರು.
ಗ್ರಾಮೀಣಾಭಿವೃದ್ದಿ ಸಂಸ್ಥೆಯ ಅಧ್ಯಕ್ಷ ರಾಜೇಂದ್ರ ನೇಸರಗಿ, ನೆಹರು ಯುವ ಕೇಂದ್ರದ ಕಾರ್ಯಕ್ರಮ ಸಹಾಯಕರು, ಆರ್. ಆರ್. ಮುತಾಲಿಕ್ ದೇಸಾಯಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಧನಂಜಯ ಚೌಗಲಾ ಮಾತನಾಡಿದರು, ನಸಲಾಪುರ ಗ್ರಾಮದ ಪದ್ಮಾವತಿ ಗೃಹ ಉದ್ಯೋಗದ ಮಹಿಳೆಯರಾದ ಸುಚಿತಾ ಪಾಟೀಲ, ಶಿಲ್ಪಾ ಪಾಟೀಲ್,ಅರುಣಾ ಪಾಟೀಲ್, ಸವಿತಾ ಪಾಟೀಲ್, ಸಪ್ತಸಾಗರ ಗ್ರಾಮದ ಮಹಿಳಾ ಉದ್ಯಮಿ,ಶ್ರೀದೇವಿ ತೇಲಿ ಸ್ವಯಂ ಉದ್ಯೋಗದಲ್ಲಿ ಸಾಧನೆ ಮಾಡಿದ್ದಕಾಗಿ ಇವರನ್ನು ಕೃಷಿ ವಿಜ್ಞಾನ ಕೇಂದ್ರದಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎನ್. ಆರ್. ಸಾಲಿಮಠರವರು ಸ್ವಾಗತಿಸಿದರು, ಪಿ. ಎಮ್.ಪಾಟೀಲ್ ವಂದಿಸಿದರು ಹಾಗೂ ರೇಖಾ ಕಾರಭಾರಿ ನಿರೂಪಿಸಿದರು.