ಮೂಡಲಗಿ – ಸೈನ್ಯದಲ್ಲಿ ಕಾರ್ಯ ನಿರ್ವಹಿಸುವುದು ಪುಣ್ಯದ ಕೆಲಸ. ಸೈನ್ಯದ ತರಬೇತಿ ತುಂಬಾ ಕಠಿಣವಾಗಿರುತ್ತದೆ. ದೈಹಿಕ ಸಾಮರ್ಥ್ಯಕ್ಕಿಂತಲೂ ಮಾನಸಿಕ ಸಾಮರ್ಥ್ಯ ದೃಢವಾಗಿರುವುದು ತುಂಬಾ ಮುಖ್ಯ. ಅದಕ್ಕೆ ಈಗ ಆಯ್ಕೆಯಾಗಿರುವ ವಿದ್ಯಾರ್ಥಿಗಳು ಸಿದ್ಧರಾಗಿರಬೇಕು ಎಂದು ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ ಹೇಳಿದರು.
ಸ್ಥಳೀಯ ಕರುನಾಡು ಸೈನಿಕ ತರಬೇತಿ ಕೇಂದ್ರದಿಂದ ಗಡಿ ಭದ್ರತಾ ಪಡೆ ಹಾಗೂ ಆಸ್ಸಾಂ ರೈಫಲ್ಸ್, ಸಿಐಎಸ್ ಎಫ್ ಹಾಗೂ ಇನ್ನಿತರ ಪೊಲೀಸ್ ಹುದ್ದೆಗಳಿಗೆ ಆಯ್ಕೆಯಾಗಿದ್ದ ವಿದ್ಯಾರ್ಥಿಗಳಿಗೆ ಸತ್ಕಾರ ನೆರವೇರಿಸಿ ಅವರು ಮಾತನಾಡಿದರು.
ನಿಮಗೆ ಕೆಲಸ ಸಿಗುವ ಕಾಲಕ್ಕೆ ಯಾರಿಗೂ ಹಣ ಕೊಟ್ಟು ಮೋಸ ಹೋಗಬೇಡಿ. ನಿಮ್ಮ ಪ್ರಯತ್ನ ಪರಿಶ್ರಮ ಹಾಗೂ ತರಬೇತಿಯೇ ನಿಮಗೆ ನೌಕರಿ ತಂದುಕೊಡುತ್ತದೆ ಎಂಬ ಭರವಸೆ ನಿಮಗೆ ಇರಲಿ ಅದಕ್ಕಾಗಿ ಯಾವುದೇ ವದಂತಿಗಳಿಗೆ ಹಾಗೂ ಆಸೆ ಆಮಿಷಗಳಿಗೆ ಬಲಿಯಾಗಬೇಡಿ ಎಂದು ಕಿವಿ ಮಾತು ಹೇಳಿದರು.
ಪಿಎಸ್ಐ ಎಚ್ ವೈ ಬಾಲದಂಡಿಯವರು ಮಾತನಾಡಿ, ಈಗ ಆಯ್ಕೆಯಾಗಿರುವ ವಿದ್ಯಾರ್ಥಿಗಳೇ ಮುಂದಿನ ಅಭ್ಯರ್ಥಿಗಳಿಗೆ ಮಾದರಿಯಾಗಬೇಕು. ಎಲ್ಲರೂ ನೌಕರಿಯನ್ನೇ ನೆಚ್ಚಿಕೊಳ್ಳದೆ ಎಲ್ಲಾ ಕ್ಷೇತ್ರದಲ್ಲಿ ಯೂ ಕೆಲಸ ಮಾಡಬೇಕೆಂಬ ಉತ್ಸಾಹ ಹೊಂದಿರಬೇಕು ಎಂದರು.
ತರಬೇತಿ ಕೇಂದ್ರದ ಮುಖ್ಯ ಸಂಚಾಲಕ ಶಂಕರ ತುಕ್ಕನ್ನವರ ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿ ೨೩೬ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಿಂದ ದೇಶ ಸೇವೆಗೆ ಹೋಗಿದ್ದಾರೆ. ಇತ್ತೀಚೆಗೆ ಮಹಿಳೆಯರೂ ಸೈನ್ಯಕ್ಕೆ ಸೇರುತ್ತಿದ್ದಾರೆ ಆ ಮೂಲಕ ಅವರು ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ಶ್ರೀಮತಿ ಸವಿತಾ ತುಕ್ಕನ್ನವರ ವಹಿಸಿದ್ದರು. ಸಿ ಬಿ ಪೂಜೇರಿ ಕಾರ್ಯಕ್ರಮ ನಿರೂಪಿಸಿದರು. ಕುಂಬಾರ ಅವರು ವಂದಿಸಿದರು