ಅಕ್ಕ
ಅಕ್ಕನೆಂದರೆ ಸಾಕು ನೆನಪಾಗುವದು
ಉಡುತಡಿಯ ಕಿಚ್ಚು
ರೂಪದಲಿ ಹೆಣ್ನಾದರೂ
ಪುರುಷ ನಾಚುವ ಕಿಚ್ಚು
ರಾಜ ಕೌಶಿಕನ ಧಿಕ್ಕರಿಸಿ
ಒಳಗೆ ಹೊರಗೆ ಬೆತ್ತಲಾದಳು
ನಡೆದಳು ಕಲ್ಯಾಣದೆಡೆಗೆ
ಬರದ ಬಿಸಿಲಿನ ನಾಡು
ಹುಲಿ ಚಿರತೆ ದಟ್ಟ ಕಾಡು
ಹಕ್ಕಿ ಕಲರವದ ಬೀಡು
ಹೊರಟಳು ಒಬ್ಬಳೇ ಹುಡುಕುತ್ತಾ
ಚೆನ್ನಮಲ್ಲಿಕಾರ್ಜುನನ ಗೂಡು
ಮಳೆ ಮೋಡ ಬಿಸಿಲು ಗಾಳಿ
ಹಸಿವಿಗೆ ಭಿಕ್ಷಾನ್ನ ಕುಡಿಯಲು ಕೆರೆ
ಮಲಗಲು ಹಾಳು ದೇಗುಲಗಳು
ಕಷ್ಟ ಕಾರ್ಪಣ್ಯ ಚಂಡ ಮಾರುತ ನೋವು
ಕಲ್ಯಾಣಕೆ ಆರು ಹೋಗಬಾರದು
ಕಾಯಕ ದಾಸೋಹವ ಬಿಟ್ಟು
ಕೇಳಲು ಇರಲಿಲ್ಲ ಕಾನನದ ಅಳಲು
ಗೆದ್ದಳು ಕಿನ್ನುರಿಯ ಅಪ್ಪನವರ ಸವಾಲು
ಮುಂದೆ ಇದೆ ನೋಡಾ ಅನುಭವದ ಮಳಲು
ಅಕ್ಕ ಅಲ್ಲಮರ ವಾಗ್ವಾದಕೆ ಕಲ್ಯಾಣವೇ ನಡುಗಿತು
ಎದೆಗುಂದದೆ ಚರ್ಚಿಸಿದಳು ಅಧ್ಯಾತ್ಮದ ಒಲವು
ಶರಣರ ಕಂಕಣವ ಕೈಗಳಿಗೆ ಕಟ್ಟಿ
ಅಡಿಗಡಿಗೆ ವೈದಿಕರ ಶೋಷಣೆಯ ಮೆಟ್ಟಿ
ಬಿತ್ತಿದಳು ಕಾಯಕ ದಾಸೋಹದ ನೀತಿ
ಬೆಳಗುತಿದೆ ಬೆಳಗಲಿ ಉಡುತಡಿಯ ಜ್ಯೋತಿ
ಉರಿಯುಂಡ ಕರ್ಪುರಕೆ,ಇದ್ದಿಲು ಉಂಟೆ?
ಶಿಶು ಕಂಡ ಕನಸಿಗೆ ಬಯಕೆ ಉಂಟೆ ?
ಕಲ್ಯಾಣದ ಮಗಳಾಗಿ ಲಿಂಗವೇ ತಾನಾಗಿ
ಚೆನ್ನಮಲ್ಲಿಕಾರ್ಜುಣನ ಹಂಗು ತೊರೆದು
ಅಕ್ಕಅರಿವು ಆಚಾರಕ್ಕೆ ಮುಹೂರ್ತವಾದಳು
ಕದಳಿಯ ಕತ್ತಲೆಯಲ್ಲಿ ಬೆಳಕಾದಳು
ಅಕ್ಕ- ಬಸವನ ಮಹಾಮನೆಗೆ ವಿಳಾಸವಾದಳು
——————————————
ಡಾ. ಶಶಿಕಾಂತ ಪಟ್ಟಣ -ಪೂನಾ