ಜಾತಿ ಬೇಕೇ ? ಮತ ಏಕೆ ?
ಜಾತಿ ಏಕೆ ? ಮತ ಏಕೆ ?
ಧರ್ಮ ಏಕೆ? ಹಿಂಸೆ ಏಕೆ ?
ಕಾಯುವ ದೇವ ಎಲ್ಲರಿಗೊಬ್ಬನಿರಲು,
‘ಮನುಜ ಒಂದೇ ಕುಲಂ ‘
ಧ್ವನಿ ಎಲ್ಲೆಲ್ಲೂ ಮೊಳಗಿರಲು
ಸ್ವಾರ್ಥದ ಮರಳ ಮಹಲನು
ವೈರಸ್ ಗಳೆಂಬ ದುರದೃಷ್ಟದ
ಅಲೆಗಳು,
ನಿರ್ಧಯವಾಗಿ ಕೊಚ್ಚಿಹಾಕುತಿರಲು,
ಮತ್ತೇಕೆ ನಿನಗೆ ,ಅನುದಿನ-ಅನುಕ್ಷಣ
ಜಾತಿ,ಮತ,ಧರ್ಮಗಳ ಹುಲಿವೇಷ !!!
ಕುಡಿವ ನೀರೊಂದೇ,ಹರಿವ ರಕ್ತವೊಂದೇ
ಉಸಿರಾಡುವ ಗಾಳಿಯೊಂದೇ ಇರಲು
ನೋವಾದಾಗ,ನಲಿವಾದಾಗ ಕಣ್ಣಲಿ ಚಿಮ್ಮುವ ಕಂಬನಿಗೆ
ಜಾತಿ,ಮತ,ಧರ್ಮ ಗಳ ಹಂಗಿಲ್ಲದಿರಲು
ಹುಲುಮಾನವ ನೀನೇಕೆ ವಿಷವೃತ್ತ ಸೃಷ್ಟಿಸುವೆ ???
ರಾಮಾಯಣ ರಚಿಸಿದ ವಾಲ್ಮೀಕಿ,
ಅಪ್ರತಿಮ ಭಕ್ತಿಗೆ ಹೆಸರಾದ ಕನಕ,
ಸ್ವಾಮಿ ಭಕ್ತಿ ಗೆ ಹೆಸರಾದ ಹನುಮಂತ,
ರಾಮನಿಗಾಗಿ ಕಲ್ಲಾಗಿ ಕಾದ ಶಬರಿಗೆ
ಯಾವ ಜಾತಿ ? ಯಾವ ಮತ ? ಯಾವ ಧರ್ಮ?
ಸೂರ್ಯ ಪ್ರಜ್ವಲಿಸುವ ಬೆಳಕಿಗಾವ ಜಾತಿ,
ಕೋಗಿಲೆಯ ಕುಹು-ಕುಹು ಸ್ವರಕೆ ಯಾವ ಮತ ?
ಜಿಂಕೆಯ ಸುಮನೋಹರ ನೃತ್ಯ ಕೆ ಯಾವ ಧರ್ಮ ?
ಅಳಿಲು,ಮೊಲ,ಸುಂದರ ಪಕ್ಷಿಗಳಿಗಿಲ್ಲದ ಜಾತಿ ನಿನಗೇಕೆ ? ಮನುಜಾ…
ನಿನ್ನ ಸ್ವಾರ್ಥಕೆ ಜಾತಿ-ಧರ್ಮ ಗಳ ಸೃಷ್ಟಿಸಿದೆ,
ಖಾದಿ-ಕಾವಿಗಳ ತೊಟ್ಟು ಕಂದಕಗಳ ನಿರ್ಮಿಸಿದೆ,
ಜಾತಿಗೊಂದು ಮಠಗಳ, ಗಲ್ಲಿಗೊಂದು
ದೇಗುಲಗಳ,ಮಸೀದಿಗಳ,ಚರ್ಚ್ ಗಳ ನಿರ್ಮಿಸಿದೆ…
ಮತ-ಧರ್ಮಗಳ ಭ್ರಾಂತಿ ಸೃಷ್ಟಿ ಸಿ,
ವಿಶ್ವಮಾನವ ಧರ್ಮಕೆ ತಿಲಾಂಜಲಿಯಿಟ್ಟೆ….
ನೀ ಎಲ್ಲೇ ಜನಿಸಿರು,ನೀ ಏನೇ ಮಾಡುತಿರು,
ಈ ಭೂತಾಯಿಯ ಪುತ್ರ ನೀನು,
ಎಲ್ಲರಿಗೂ ಸೋದರ-ಸೋದರಿ ನೀನು,
ಈ ಜಗದ ಭವಿಷ್ಯ ನೀನು,
ಜಾತಿ,ಧರ್ಮಗಳ ಕಂದಕ ದಾಟಿ
ಜಗದ ಬೆಳಕಾಗು ನೀ….
ಡಾ.ಭೇರ್ಯ ರಾಮಕುಮಾರ್
ಸಾಹಿತಿಗಳು, ಪತ್ರಕರ್ತರು
ಮೊ:94496 80583,
63631 72368