*ಬಹುಮುಖ ವ್ಯಕ್ತಿತ್ವದ ಸ್ವಾಭಿಮಾನಿ*
ಸರಳ ವ್ಯಕ್ತಿತ್ವದ,ಸೇವಾ ತತ್ಪರ
ವ್ಯಕ್ತಿತ್ವದ ಮೇರು ಪುರುಷ ನಮ್ಮಪ್ಪ,
ಜಗತ್ತಿನಾದ್ಯಂತ ಪ್ಲೇಗ್ ರೋಗದ ರುದ್ರನರ್ತನ,
ಊರು ತೊರೆದು ತೋಟ ಸೇರಿದ ಕುಟುಂಬ,
ಸುಂದರ ಹಸಿರು ಪರಿಸರದಲ್ಲಿ
ಅಪ್ಪನ ಜನನ….
ಗದ್ದೆ ,ತೋಟ ಕಂಡರೆ ವಿಪರೀತ ಪ್ರೀತಿ,
ವೃತ್ತಿಯಲಿ ಶಿಕ್ಷಕ,ಪ್ರವೃತಿಯಲಿ ಕೃಷಿಕ,
ಹಸು ಕಟ್ಟಿ,ಸೆಗಣಿ ಬಾಚಿ,ತೋಟ ಬಳಸಿ,
ಸೈಕಲ್ಲೇರಿ ಶಾಲೆಗೆ ಹೊರಡುತ್ತಿದ್ದ ಸಮಯಪಾಲಕ,ಅಪರೂಪದ ಶಿಕ್ಷಕ ನಮ್ಮಪ್ಪ…
ಹುಟ್ಟಿದೂರಿಗೆ ಪಾಠ ಹೇಳುವ ಐನೋರಾಗಿ,
ಕರ್ತವ್ಯ ನಿರ್ವಹಿಸಿದ ಊರವರಿಗೆ
ತಿಳಿಹೇಳುವ ಮಾರ್ಗದರ್ಶಕರಾಗಿ,
ವ್ಯಾಜ್ಯಗಳ ಪರಿಹರಿಸುವ ನ್ಯಾಯಸ್ಥರಾಗಿ,
ಜಮೀನು ಅಳೆಯುವ ಮೋಜಿಣಿದಾರರಾಗಿ,
ಬೆಳೆಯುತ್ತಿದ್ದ ಪುಟ್ಟಮನಗಳಿಗೆ
ಆದರ್ಶ ಪುರುಷರಾದಿರಿ
…
ಮನೆ ತುಂಬಾ ನೆರೆಹೊರೆಯ ಪುಟ್ಟಮಕ್ಕಳು,
ನಿಮ್ಮಿಂದ ಮಗ್ಗಿ,ಕಾಗುಣಿತದ ಜೊತೆಗೆ ಜೀವನದ ಪಾಠ ಕಲಿತರು,
ಜೀವನದಲಿ ಬಹುಮೇಲೇರಿ ಸಾಧಕರಾದರು,
ಜಾತಿ-ಮತ ಲೆಕ್ಕಿಸದೇ, ಹಣದಾಸೆ ಪಡದೇ,
ಮನೆಯನ್ನೇ ಭೋಧನೆಯ
ಮಂತ್ರಾಲಯ ಮಾಡಿಬಿಟ್ಟಿರಿ ನೀವು…
ಅವಕಾಶಗಳಿಲ್ಲದ ಆ ದಿನಗಳಲ್ಲಿ,
ಸಂಸೃತ,ಉರ್ದು,ಇಂಗ್ಲೀಷ್ ಕಲಿತು,
ಉರ್ದುವಿನಲ್ಲಿ ಸುಲಲಿತ ಮಾತುಗಾರಿಕೆಯ ‘ಸರ್ವ ಭಾಷಾ ಜ್ಞಾನಿ;
ಗಣಿತದ ಕ್ಲಿಷ್ಟ ಸಮಸ್ಯೆಗಳ
ಸರಳವಾಗಿ ಬಗೆಹರಿಸುವ ಅಪರೂಪದ ಗಣಿತಜ್ಞ ನಮ್ಮಪ್ಪ
ಎಲ್ಲರಿಗೂ ಮಾದರಿ….
ನಿಮ್ಮ ತಂದೆಯ ಸರಳ ಬದುಕು,
ಸಚ್ಚಾರಿತ್ರ,ನ್ಯಾಯಪರತೆ,ಮಾನವಪ್ರೇಮ
ನಿಮಗೆ ಆದರ್ಶ;ನಿಮ್ಮ ಸಾಧನೆಯೇ
ನಮಗೆ ಬದುಕಿನ ಆದರ್ಶ..
ನಿಮ್ಮ ಸ್ವಾಭಿಮಾನವೇ ನಮಗೆ ಬಾಳ ದಾರಿದೀಪ…..
ನಲಿವಲ್ಲೂ ಹಿಗ್ಗದ,ನೋವಲ್ಲೂ ಜಗ್ಗದ,
ಯಾರನ್ನೂ ಟೀಕಿಸದ,ಯಾವುದನ್ನೂ ನೋಯಿಸದ
ನೀವು ಊರಮಕ್ಕಳಿಗೆ ಬದುಕುವ ವಿದ್ಯೆ ಕಲಿಸಿದಿರಿ,
ಜನಮನ ಗೆದ್ದ ಆದರ್ಶ ಶಿಕ್ಷಕರಾದಿರಿ….
ಮಕ್ಕಳಿಗೆ ವಿದ್ಯೆ,ಸರಳ ಬದುಕಿನ ನೀತಿ
ಕಲಿಸಿಕೊಟ್ಟಿರಿ ನೀವು…
ಒಲವಿನ ಸೋದರಿ,ಸೋದರನ ಹಠಾತ್ಮರಣ,
ರೆಕ್ಕೆ ಬಿಚ್ಚಿ ಹಾರಾಡಬೇಕಾಗಿದ್ದ ಮೊಮ್ಮಗನ ಸಾವು,
ಬಾಳಕಣ್ಣಾಗಿದ್ದ ಪ್ರೀತಿಯ ಮಗಳ ಅಗಲಿಕೆ…
ದೇವ ಕೊಟ್ಟ ನೋವು-ನಲಿವೆಲ್ಲವ
ಸಮಾನ ಚಿತ್ತದಲಿ ಸ್ವೀಕರಿಸಿದಿರಿ….
ನಿಮ್ಮ ಆದರ್ಶ ವ್ಯಕ್ತಿತ್ವ,ಜಾತ್ಯಾತೀತ ಚಿಂತನೆ,
ಸರಳ ಜೀವನ,ಬದುಕು ಎದುರಿಸುವ ಪರಿ..
ಇಂದಿನ ಯುವಜನಾಂಗಕ್ಕೆ ಆದರ್ಶ,
ನಮಗೆ ದಾರಿದೀಪವಾಗಿ ನೂರ್ಕಾಲ ಬಾಳಿ,
ಇದುವೇ ನಮ್ಮ ಹಾರೈಕೆ
ಡಾ.ಭೇರ್ಯ ರಾಮಕುಮಾರ್,
ಸಾಹಿತಿಗಳು, ಪತ್ರಕರ್ತರು