ನೀನ್ಯಾರು….?
ನಿನ್ನ ಮಾತಿನ ಶೈಲಿಯ ಮೋಡಿ,
ನೀ ಬಳಸುವ ಪದಪುಂಜವ ಕೇಳಿದರೆ ,
ಅನಿಸುತ್ತದೆ, ನಿಘಂಟಿನ ಪದಗಳು ನಿನಗೆ ಬಲುಸುಲಭವೇನೋ….?
ಹಾಗಾದರೆ ನೀನ್ಯಾರು………|೧|
ಮೂಕ ಪ್ರಾಣಿ-ಪಕ್ಷಿಯೆಡೆಗೆ ನೀ
ತೋರುವ ನಿಶ್ ಕಲ್ಮಶ ವಾತ್ಸಲ್ಯತೆಗೆ,
ಲಾಲನೆ-ಪಾಲನೆ ಮಾಡುವ ರೀತಿ ನೋಡಿ,
ಬೆಣ್ಣೆಯಂತೆ ಕರಗದೆ ಇರುವವರಾರು,
ಹಾಗಾದರೆ ನೀನ್ಯಾರು…..?|೨|
ಹಿರಿಯರಿಗೆ ನೀ ತೋರುವ ಗೌರವ-ಆದರಗಳ ನೋಡಿದರೆ ,
ಕಿರಿಯರಿಗೆ ತೋರುವ ನಿರ್ಮಲ ಪ್ರೀತಿ-ಕಾಳಜಿ ,ಮನದಲ್ಲಿ
ನಿನ್ನ ಗೌರವಿಸದೆ ಇರುವವರಾರು…
ಹಾಗಾದರೆ ನೀನ್ಯಾರು….?|೩|
ದೀನ-ದಲಿತರ ಬದುಕಿನ ಬವಣೆಗಳ
ನೋಡಿಮಿಡಿಯುವ ನಿನ್ನ ಹೃದಯ,
ಅವರ ಉನ್ನತಿಯ ಜೀವನಕ್ಕೆ ಕೈಲಾದ ಸಹಾಯ ಮಾಡುವ ಮನಸ್ಸು
ನಿನ್ನ ಸಮಾಜಮುಖಿ ಕೆಲಸಗಳ ನೋಡಿ ಕಲಿಯುವುದು ಬೇಕಾದಷ್ಟಿದೆ….
ಹಾಗಾದರೆ ನೀನ್ಯಾರು….?|೪|
ನಿನ್ನ ಜೀವನ ಉತ್ಸಾಹದ ಮುಂದೆ ,
ನೀ ಜೀವನವ ನೋಡುವ ಪರಿಯ ಮುಂದೆ,
ಒಂದರಹಿಂದೆ ಮತ್ತೊಂದು ಬೆಂಬಿಡದೆ ಮೇಲೇಳುವ,
ಸಮುದ್ರದ ಅಲೆಗಳ ಪ್ರಯತ್ನ ವೂ ಚಿಕ್ಕದೆನಿಸಿದೆ
ಹಾಗಾದರೆ ನೀನ್ಯಾರು…..|೫|
ನಿನ್ನ ಉನ್ನತ ಮೌಲ್ಯಯುತವಾದ ಜೀವನ,
ಒಳ್ಳೆಯ ಗುಣ,ಒಳ್ಳೆಯ ಮನಸ್ಸು,
ಒಳ್ಳೆಯ ಕಾರ್ಯಗಳ ನೋಡಿದರೆ ,
ಅನಿಸದೆ ಇರದು ನೀ ಮಾನವೀಯತೆಯ ಆರಾಧಿಸುವ
ಒಬ್ಬ ವಿರಾಳತಿವಿರಳ ಮನಸಿರುವ ಒಳ್ಳೆಯ ಮನುಜನೆಂದು….|೬|
-ಸಾಹಿತ್ಯ ಬಿ.ಆರ್.
ಕೆ.ಆರ್ ನಗರ,ಮೈಸೂರು ಜಿಲ್ಲೆ