- Advertisement -
ಬಿಟ್ಟು ಬಿಡಿ ಬಸವನನ್ನು
ಬಿಟ್ಟು ಬಿಡಿ ಬಸವನನ್ನು .
ಕಟ್ಟಿ ಹಾಕಬೇಡಿರಿ.
ಜಾತಿ ಮತ ಕಡಿವಾಣವು
ಗಟ್ಟಿಗೊಂಡಿವೆ ಸಂಕೋಲೆಗಳು
ಬಂಧಿಯಾದ ಧೀರ ಶರಣ
ಮಠ ಆಶ್ರಮ ಮಂಟಪದಿ
ಒಲ್ಲೆನೆಂದ ವಸ್ತ್ರ ಒಡವೆ
ಏಕೆ ಇವರಿಗೆ ಕಿರೀಟವು ?
ಗುಡಿ ಗುಂಡಾರ ಧಿಕ್ಕರಿಸಿದ
ಅವನಿಗೇಕೆ ಮೂರ್ತಿಯು ?
ಭಿಕ್ಷೆ ಎತ್ತುವರು ಧೂಪ ದೀಪದಿ
ಬಸವನೆಸರಲಿ ಉದ್ಯಮ
ಮೌಲ್ಯ ಮೆಟ್ಟಿ ಮೌಢ್ಯ ಬೆಳೆಸಿ
ತತ್ವ ಗೋರಿ ಕಟ್ಟುತಿಹರು.
ಕೊನೆಗೊಳ್ಳಲಿ ಸುಲಿಗೆ ಶೋಷಣೆ
ವೇಷಧಾರಿಯ ಉದರ ಪೋಷಣೆ
ಬಸವ ಸೇನೆ ಎದ್ದು ನಿಂತಿದೆ
ಕ್ರಾಂತಿ ಕಹಳೆ ಮೊಳಗಿದೆ.
ಸತ್ಯ ಸಮತೆ ಶಾಂತ ಮೂರ್ತಿ
ವಿಶ್ವಕೆಲ್ಲ ಬಸವ ಕೀರ್ತಿ
ಬಿಟ್ಟು ಬಿಡಿ ಬಸವನನ್ನು
ಕಟ್ಟಿ ಹಾಕಬೇಡಿರಿ.
ಬಸವ ಮುಕ್ತನಾಗಲಿ
ಲಿಂಗ ತತ್ವ ಮೆರೆಯಲಿ
—————————–
ಡಾ.ಶಶಿಕಾಂತ.ಪಟ್ಟಣ-ಪೂನಾ