ಹನಿ ಹನಿ ಇಬ್ಬನಿ
ಸಂಸಾರ
ಸೂತ್ರಕ್ಕೆ ತಕ್ಕಂತೆ ಇದ್ದರೆ
ಎಲ್ಲಾ ಸಸಾರ
ಬಿಡಬೇಕು ಒಮ್ಮೊಮ್ಮೆ
ಇಬ್ಬರೂ ಹಟ
ಇಲ್ಲವಾದರೆ ಬಾಳು
ಸೂತ್ರ ಹರಿದ ಗಾಳಿಪಟ!!
ಸುಮಂಗಲೆ
ಮಂಗಳನ ಅಂಗಳವ
ತಲುಪಿದರೆ ಏನು?
ಮಂಗಳಸೂತ್ರದ ಬೆಲೆಯ
ಅರಿತಿಹಳು ಹೆಣ್ಣು
ಏಳು ಬೀಳುಗಳಲಿ
ಗಂಡನಿಗೆ ಸಮನಾಗಿ
ಮುದ್ದಾದ ಮಕ್ಕಳಿಗೆ
ಮೊದಲನೇ ಗುರುವಾಗಿ
ಸತಿಯಾಗಿ ಮತಿಯಾಗಿ
ಬಾಳಿದರೆ ಸಾಕಲ್ಲವೇ?
ನಮಗೇಕೆ ಬೇರೆ ಗೊಡವೆ?
ಸ(ವಿ)ರಸ
ಊಟದೊಳಗಿರಬೇಕು
ಉಪ್ಪಿನಕಾಯಿಯಂತೆ
ಉಪ್ಪಿನಕಾಯಿ ಊಟವಾದರೆ
ಪಿತ್ತ ಕೆರಳುವುದಂತೆ
ಎಲ್ಲಕ್ಕೂ ಮಿತಿಯುಂಟು
ಮೀರಿದರೆ ಕಗ್ಗಂಟು
ಸಮರಸದ ನಂಟು
ಸ್ವರ್ಗಕ್ಕದು ಮೆಟ್ಟಿಲು….
ಎಂಟೇ…. ಎಂಟು…!!
ಸತಿ ಪತಿ
ಸಂಸಾರದ ಪಥದಲ್ಲಿ
ಸತಿ ಸರಸತಿ ಆದರೆ
ಪತಿ ಪರಬ್ರಹ್ಮ
ಇಬ್ಬರಿಗೂ ಇರುವುದು
ಅವರವರದೆ ಧರ್ಮ
ನಡು ನಡುವೆ ಬರದಂತೆ
ತಡೆದರಾಯ್ತು ಆ…
ಹಮ್ಮು….ಬಿಮ್ಮ…!!
ಒಲವು ಗೆಲುವು
ಇಬ್ಬರೂ ಗೆಲುವಿನ ಹಿಂದೆ ಬಿದ್ದು
ಪ್ರೀತಿಯನ್ನು ಸೋಲಿಸುವದಕ್ಕಿಂತ
ಇಬ್ಬರೂ ಸೋತರೆ….
ಪ್ರೀತಿಯ ಗೆಲುವು
ಅದೇ ಒಲವಿನ ನಿಜವಾದ ಗೆಲುವು.
ಕಮಲಾಕ್ಷಿ.ಸು.ಕೌಜಲಗಿ
(ಸೂರ್ಯ ಕಮಲ)
ಭಾವ
ನೀಲ ಮುಗಿಲ ತುಂಬ
ಮೂಡಿ ಬಂದಿದೆ ಕಾರ್ಮೋಡ
ಚಂದ್ರ ಸರಿಸಿ ನೀಡಿದ
ಹಾಲು ಬೆಳದಿಂಗಳ॥
ತಣ್ಣನೆ ಸುಳಿಗಾಳಿ
ತಂಪು ತಂದಿರಲು
ನೀಳ ಕೇಶರಾಶಿ ಹರಡಿ
ಗಾಳಿ ಹಿಂದೆ ಓಡಿರಲು॥
ಹಕ್ಕಿಗಳ ಹಿಂಡು
ಗೂಡರಸಿ ಹೊರಟಿರಲು
ಮಲ್ಲಿಗೆಯ ಮೊಗ್ಗದು
ಬಿರಿಯಲು ಕಾದಿರಲು
ಇನನ ಬೆಳಕು ಇನ್ನಷ್ಟು
ಹಾಲ್ ನೊರೆಯಂತೆ ಚೆಲ್ಲಿರಲು
ಮೋಡಗಳ ಸಾಲು
ಹೊಸ ಚಿತ್ತಾರವಾಗಿರಲು॥
ಇನಿಯ ನಿನ್ನ ನೆನಪು
ಇನನ ಬೆಳಕಂತೆ ಮೂಡಿ
ನನ್ನ ಮನದಿ ನಿನ್ನ
ಭಾವತರಂಗ ಹೊಮ್ಮಿರಲು॥
ನಿಸರ್ಗಕ್ಕೂ ನನ್ನ ಭಾವಕ್ಕೂ
ಪೈಪೋಟಿ ಕಾಣಾ
ತಾ ನಾ ಹೆಚ್ಚೆನಲು
ಕಾರಣ ನನ್ನ ಭಾವನೆಯೊಲು
ಆಳ ವಿಸ್ತಾರ ಕಾಣುತ್ತಿಲ್ಲ
ನಿತ್ಯ ನಿರಂತರ ಹುಡುಕಾಟದಲ್ಲಿ
ಅರಿಯದ ಕೊನೆಮುಟ್ಟದ ಪಯಣ
ನೀಲಿಯಾಗಸದ ವಿಸ್ತಾರದಲಿ
ಲಲಿತಾ ಕ್ಯಾಸನ್ನವರ.
ಹಾಯ್ಕುಗಳು
“ಜವಾಬ್ದಾರಿ”
ಜವಾಬ್ದಾರಿಯ
ಎದೆಯಾಳದ ವ್ಯಥೆ
ಸಾಯಿಸುತಿದೆ
“ಕನಿಕರ”
ಕನಿಕರದ
ಒಳಗಣ್ಣನು ನೀನು
ತೆರೆದು ನೋಡು
ವಿದ್ಯಾ ರೆಡ್ಡಿ
ಗೋಕಾಕ.
ಪ್ರೀತಿ ಹೇಗೆ ಬರಬೇಕು ?
ಗಡಿಯಲ್ಲಿ ಸದ್ದಿಲ್ಲದೆ
ಮದ್ದುಗುಂಡುಗಳ
ಆರ್ಭಟವ ನಡೆಸಿ
ನಮ್ಮ ಸೈನಿಕರನ್ನು
ಸಾಯಿಸಲು ಮುಂದಾಗುವ
ಪರಕೀಯ ನಾಯಿಗಳ ಮೇಲೆ
ಪ್ರೀತಿ ಹೇಗೆ ಬರಬೇಕು ?
ಕಾಲ್ ಕೆದರಿ ಕದನಕ್ಕೆ
ಮುನ್ನುಗ್ಗುವ ಕ್ರೂರ
ಸ್ವಭಾವದ ನರಿ ಬುದ್ಧಿಯ
ಹೀನ ಹಂದಿಗಳ ಮೇಲೆ
ಪ್ರೀತಿ ಹೇಗೆ ಬರಬೇಕು ?
ಪ್ರೀತಿಯಿಂದ ಹೇಳಿದ್ದು ಕೇಳದೆ
ನಮ್ಮ ಮೌನಭಾವ ಅರಿಯದೆ
ಸದಾ ಗುಂಡಿನ ದನಿಯ ಕೇಳಿ
ಸಂಭ್ರಮಿಸುವ ಸೈತಾನಗಳ ಮೇಲೆ
ಪ್ರೀತಿ ಹೇಗೆ ಬರಬೇಕು ?
ನಮ್ಮ ಪಾಡಿಗೆ ನಾವು ಇರಲು
ನಮ್ಮನ್ನ ಮೇಲಿಂದ ಮೇಲೆ ಕೆದಕಿ ಯುದ್ಧದ ಭೀತಿ ಮೂಡಿಸಿ
ರಣರಂಗದಿಂದ ಹೆದರಿ ಓಡಿ ಹೋಗುವ ರಣಹೇಡಿಗಳ ಮೇಲೆ
ಪ್ರೀತಿ ಹೇಗೆ ಬರಬೇಕು ?
ಶೂರರು ಅಲ್ಲದೆ ಧೀರರು ಅಲ್ಲದೆ
ಬೆನ್ನ ಹಿಂದೆ ನಿಂತು ಚೂರಿ ಹಾಕುವ ನಮ್ಮ ಸೈನಿಕರ ಕೈಯಲ್ಲಿ ಸಿಕ್ಕು ನುಚ್ಚು ನೂರಾಗಿ
ಸೋಲಿನ ಪಾಠ ಕಲಿತರು ಬುದ್ಧಿ ಕಲಿಯದ ಬದ್ಮಾಸ ಮನಸ್ಸುಗಳ ಮೇಲೆ
ಪ್ರೀತಿ ಹೇಗೆ ಬರಬೇಕು ?
ಪದೇ ಪದೇ ಕೋಪಕ್ಕೆ ಗುರಿಯಾಗಿ ಶಾಪಕ್ಕೆ ಗುರಿಯಾಗಿ
ಸದಾ ನಮ್ಮೆಲ್ಲರನ್ನು ಸರ್ವನಾಶ ಮಾಡಲು ಸಂಚು ಹಾಕಿ ಕುಳಿತುಕೊಂಡ ಪಕ್ಕದ ರಾಷ್ಟ್ರಗಳ ಮೇಲೆ
ಪ್ರೀತಿ ಹೇಗೆ ಬರಬೇಕು ?
ಡೊಂಕು ಬಾಲದ ನಾಯಿಗಳಂತೆ
ಎಂದೂ ಬದಲಾಗುವುದಿಲ್ಲ
ಬದಲಾಗುವವರೆಗೂ ಅವುಗಳ ಮೇಲೆ ನಮಗೆ ಪ್ರೀತಿ ಬರುವುದಿಲ್ಲ
ವಿಶ್ವಾಸ ದ್ರೋಹಿಗಳಿಗೆ ಎದುರೇಟು ಒಂದೇ ಅಸ್ತ್ರ
ಡಾ. ಎಫ್. ಡಿ. ಗಡ್ಡಿಗೌಡರ
ಕನ್ನಡ ವಿಭಾಗ
ಸ್ನಾತಕೋತ್ತರ ಅಧ್ಯಯನ ಕೇಂದ್ರ, ಬೈಲಹೊಂಗಲ