ಓ ಮಾನವ ಇತಿಹಾಸ ಕಲಿಸಲಿಲ್ಲವೇ ಪಾಠವ ??
ಸೀತೆಯ ಅಪಹರಿಸಿ,
ವಿಭೀಷಣನ ಕಿವಿಮಾತ ಕೇಳದೆ
ಲಂಕಾಧಿಪತಿ ರಾವಣ ಕೆಟ್ಟ ;
ತುಂಬಿದ ರಾಜಸಭೆಯಲಿ
ದ್ರೌಪದಿಯ ವಸ್ತ್ರ ಸೆಳೆದು
ಕುರು ವಂಶದ ವಿನಾಶಕೆ ಕಾರಣನಾದ,
ಶೌರ್ಯ-ಪರಾಕ್ರಮಕೆ ಹೆಸರಾದ ದುರ್ಯೋಧನ ;
ಓ ಗಂಡುಗಲಿಯೇ..
ಈ ಕ್ರೂರ ಇತಿಹಾಸ ನೋಡಿಯೂ
ನೀನೇಕೆ ಕಲಿಯಲಿಲ್ಲ ಬುದ್ದಿ !!!
ಆಸ್ತಿ, ಅಂತಸ್ತು ,ಹಣಗಳ ಮದದಲಿ ಮೆರೆವ
ನಿನಗಿಲ್ಲವೇ ತಾಯಿ,ಪತ್ನಿ,ಸಹೋದರಿ ;
ಮರೆತು ಬಿಟ್ಟು ಎಲ್ಲ ಸಂಸ್ಕಾರ,
ನೀ ತೋರುವೆ ಏಕೆ ಅಬಲೆಯರ ಮೇಲೆ ಅಟ್ಟಹಾಸ..
ನಿನ್ನನೇ ನಂಬಿದ ಮುಗ್ಧ ಪತ್ನಿ,
ನಿನ್ನನೇ ‘ಆದರ್ಶ’ವೆಂದು ನಂಬಿದ ಮುಗ್ಧಮಕ್ಕಳು,
ಸಮಾಜ ನೀಡುವ ಗೌರವ, ನಿನ್ನ ಮೇಲಿಟ್ಟ ನಂಬಿಕೆ,
ಎಲ್ಲವ ಮರೆತು ನೀನೇಕೆ ಸೃಷ್ಟಿಸುವೆ ರವರವ ನರಕ !!!
ಓ ಮನುಜಾ ಇದು ಮೂರು ದಿನದ ಬಾಳು ;
ಯಾರ ಕಣ್ಣಲೂ ಬರಿಸದಿರು ಕಣ್ಣೀರು ,
ಎಲ್ಲರೊಡನೆ ಸಹೋದರ ಬಾಂಧವ್ಯದಿ ಬಾಳು,
ಇಲ್ಲದಿರೆ ಮುಗ್ಧರ ಗೋಳು; ನಿನ್ನ ಬದುಕನು ಮಾಡಲಿದೆ ಹೋಳು..ಹೋಳು..
ಡಾ.ಭೇರ್ಯ ರಾಮಕುಮಾರ್,
ಸಾಹಿತಿಗಳು, ಪತ್ರಕರ್ತರು
ಮೈಸೂರು