ಬೀದರ – ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬ್ಲಾಕ್ ಮನಿ ಮಾಡಿತ್ತು ಈಗ ಅಧಿಕಾರ ಹೋದಾಗ ಬ್ಲಾಕ್ ಮೇಲ್ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲು ಗುಡುಗಿದ್ದಾರೆ.
ಬ್ಲಾಕ್ ಮೇಲ್ ರಾಜಕಾರಣದ ಒಂದು ಸೂತ್ರವೇ ಈ ಸಿಡಿ ಪ್ರಕರಣ. ಈಗ ಸತ್ಯಾಂಶ ಗೊತ್ತಾದ ಕೂಡಲೇ ಸಚಿವರ ವಿರುದ್ಧದ ಕೇಸು ವಾಪಸ್ ಪಡೆದಿದ್ದಾರೆ ಎಂದು ಕಟೀಲು ಪರೋಕ್ಷವಾಗಿ ದೂರುದಾರ ದಿನೇಶ ಕಲ್ಲಹಳ್ಳಿಯನ್ನು ಪ್ರಸ್ತಾಪಿಸಿದರು.
ಬಸವಕಲ್ಯಾಣದ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.
ಸಿಡಿ ಪ್ರಕರಣ ನ್ಯಾಯಾಲಯದಲ್ಲಿ ಇದೆ ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದ ಅವರು, ಇಂದು ಹಲವರು ಜೆಡಿಎಸ್ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಅದರಿಂದ ಅವರಿಗೆ ಸಹಿಸಲಾಗುತ್ತಿಲ್ಲ. ಬ್ಲಾಕ್ ಮೇಲ್ ರಾಜಕಾರಣ ಮಾಡುತ್ತಿದ್ದಾರೆ. ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ಮಾಡುವ ಮೂಲಕ ಉಪಚುನಾವಣೆಯ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದು ನಳಿನ್ ಕಟೀಲು ಹೇಳಿದರು.
ಸಮಾವೇಶದಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ವಿ.ಸೋಮಣ್ಣ ಪ್ರಭು ಚವ್ಹಾಣ್ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಭಾಗವಹಿಸಿದ್ದರು.