ಕೃತಿ ಪರಿಚಯ: ಹಾಲಭಾವಿ ವೀರಭದ್ರಪ್ಪನವರು

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

ಹಾಲಭಾವಿ ವೀರಭದ್ರಪ್ಪನವರು

ಸಮಾಜದಲ್ಲಿ ಘಟಿಸಿದ ಸತ್ಕಾರ್ಯಗಳ ದಾಖಲೆ, ಸಮಾಜವನ್ನುದ್ದರಿಸಿದ ಪುಣ್ಯ ಪುರುಷರ ಚರಿತ್ರೆಗಳು ಮುಂದಿನ ಪೀಳಿಗೆಗೆ ದಾರಿದೀಪವೂ ಹೌದು. ತೋರು ಬೆರಳೂ ಹೌದು. ಕಾರಣ ಇತ್ತೀಚಿನ ದಿನಗಳಲ್ಲಿ ಸಮಾಜವನ್ನು ಕಟ್ಟಿ ಬೆಳೆಸಿದ. ಸಮಾಜಕ್ಕಾಗಿ ದುಡಿದ ವೀರಶೈವ ಪುಣ್ಯಪುರುಷ ಸಾಹಿತ್ಯ ರತ್ನಮಾಲೆಯಲ್ಲಿ ಮೂಡಿಬಂದ ಕೃತಿ ಹಾಲಭಾವಿ ವೀರಭದ್ರಪ್ಪನವರು.

ಇದನ್ನು ಸುಂದರವಾಗಿ ರಚಿಸಿದವರು ಹಿರಿಯ ಸಾಹಿತಿಗಳಾದ ಡಾ. ವೀರಣ್ಣ ರಾಜೂರ ಅವರು. ಇದು 1982ರಲ್ಲಿ ವೀರಶೈವ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ ಗದಗದಿಂದ ಬೆಳಕು ಕಂಡಿದೆ. 132 ಪುಟದ ಹರವು ಪಡೆದಿದೆ.

ಗೋಟೆ ಎಂಬುದು ವಿಜಾಪುರ ಜಿಲ್ಲೆಗೆ ಸೇರಿದ ಒಂದು ಚಿಕ್ಕಗ್ರಾಮ. ಅಲ್ಲಿ ಹೇರಲಗಿ ಮನೆತನ ತುಂಬ ಪ್ರಸಿದ್ಧವಾದುದು. ಆ ಮನೆತನದ ಪೂರ್ವಜರು ವಿದ್ವಾಂಸರು; ಸಾಹಿತ್ಯ, ಧರ್ಮ, ಸಂಸ್ಕøತಿಗಳಲ್ಲಿ ವಿಶೇಷ ಆಸಕ್ತಿ ಅಭಿಮಾನವುಳ್ಳವರು. ಈ ವಂಶದಲ್ಲಿ ಕರಿಬಸಪ್ಪ ಮತ್ತು ನಿಜಗುಣೆಪ್ಪ ಎಂಬ ಅಣ್ಣ ತಮ್ಮಂದಿರು ಜನಿಸಿದರು.

- Advertisement -

ಕರಿಬಸಪ್ಪನಿಗೆ ಬನಹಟ್ಟಿಯ ಆಮಟೆ ಮನೆತನದ ಹೆಣ್ಣು ಮಗಳನ್ನು ನಿಜಗುಣೆಪ್ಪನಿಗೆ ರಬಕವಿಯ ಖಾವೋಜಿ ಮನೆತನದ ಹೆಣ್ಣು ಮಗಳನ್ನು ತಂದುಕೊಂಡರು. ನಿಜಗುಣೆಪ್ಪ ಹೆಸರಿಗೆ ತಕ್ಕ ಗುಣವಂತ. ಆತನ ಸತಿ ಶಿವಗಂಗವ್ವ:ಆಕೆಯೂ ಗಂಗೆಯಂತೆ ನಿರ್ಮಲ ಚಾರಿತ್ರ್ಯವುಳ್ಳವಳು. ಈ ಸದ್ಗುಣಶೀಲ ಸಂಪನ್ನ ವೀರಶೈವ (ಬಣಕಾರ) ದಂಪತಿಗಳ ಪುಣ್ಯಗರ್ಭದಲ್ಲಿ ವೀರಭದ್ರಪ್ಪನವರು 1877ರಲ್ಲಿ ಜನಿಸಿದರು ಎಂದು ಅವರ ಮನೆತನದ ಇತಿಹಾಸ ಅವರ ಜನನದ ಬಗ್ಗೆ ಸುಂದರವಾಗಿ ನಿರೂಪಿಸಿದ್ದಾರೆ.

ನಿಜಗುಣೆಪ್ಪ ತೀರಿದ ಮೇಲೆ ತಾಯಿ ಮಗ ತನ್ನ ಗಂಡನ ದುಡಿತದಲ್ಲಿಯೇ ಹೊಟ್ಟೆ ಹೊರೆಯ ತೊಡಗಿದುದನ್ನು ಕಂಡು ಕರಿಬಸಪ್ಪನ ಹೆಂಡತಿ ಸಹಿಸದಾದಳು. ತನ್ನ ಮಕ್ಕಳಿಗೆ ಹೆಚ್ಚಿನ ಒಲವು ತೋರುತ್ತ ವೀರಭದ್ರಪ್ಪನಿಗೆ ಹೊಟ್ಟೆತುಂಬ ಅನ್ನ ಹಾಕುವದನ್ನು ನಿರಾಕರಿಸಿದಳು. ಎಲ್ಲ ಕೆಲಸಗಳಲ್ಲಿಯೂ ಅಸಹಕಾರ ತೋರ ತೊಡಗಿದಳು. ಮನೆಯಲ್ಲಿ ನಿತ್ಯ ಕದನ ಪ್ರಾರಂಭವಾಯಿತು.

ಅವಳ ಕಟಕಿ, ನಿಂದೆಗಳನ್ನು ತಾಳಲಾರದೆ ಶಿವಗಂಗವ್ವ ತನ್ನ ಮಗನನ್ನು ಕಟ್ಟಿಕೊಂಡು ಬೇರೆಯಾಗಿ ಇರತೊಡಗಿದಳು. ತಾಯಿ ಎರಡನೆಯವರ ಹೊಲದಲ್ಲಿ ಕಸ ತೆಗೆಯಲು ಹೋದರೆ. ಬಾಲಕ ವೀರಭದ್ರಪ್ಪ ಆಟವಾಡಿಕೊಂಡು ಮಧ್ಯಾಹ್ನದ ಊಟಕ್ಕೆಂದು ಪಡಸಾಲೆಯ ಗೂಡಿನಲ್ಲಿ ತಾಯಿ ಇಟ್ಟುಹೋದ ರೊಟ್ಟಿಯನ್ನು ತಿಂದು ಸಂಜೆಯವರೆಗೆ ಕಾಲಕಳೆಯುತ್ತಿದ್ದ.

ಅವರ ಈ ಇರವೂ ಕರಿಬಸಪ್ಪನ ಹೆಂಡತಿಗೆ ಸರಿಬರಲಿಲ್ಲ; ಯಾವುದಾದರೊಂದು ನೆಪಹಿಡಿದುಕೊಂಡು ಕೂಗಾಟ-ರೇಗಾಟ ಹೆಚ್ಚು ಮಾಡಿದಳು. ಅವಳ ಈ ನಡತೆಯನ್ನು ಕಂಡು ಶಿವಗಂಗವ್ವನಿಗೆ ಅಲ್ಲಿ ಇರುವುದೇ ಸರಿಯಲ್ಲವೆನಿಸಿತು. ಒಂದು ದಿನ ಯೋಚಿಸಿದಳು.

ವಿಚಾರದ ಕಿರಣವೊಂದು ಮನದಲ್ಲಿ ಮೂಡಿತು. ತಕ್ಷಣ ಮಗನನ್ನು ಎತ್ತಿಕೊಂಡು ಗಂಡನ ಆಸ್ತಿ-ಪಾಸ್ತಿ ಯಾವುದರ ಬಗೆಗೂ ವಿಚಾರಿಸದೆ ನೇರವಾಗಿ ಬೆಳಗಾವಿ ಜಿಲ್ಲೆಯ ಗೋಕಾವಿಗೆ ಬಂದಳು ಎಂದು ವೀರಭದ್ರಪ್ಪನವರ ಬಾಲ್ಯದ ಸಂಕಷ್ಟದ ಬದುಕನ್ನು ಡಾ.ರಾಜೂರ ಅವರು ಕರುಳು ಕರಗುವಂತೆ ಚಿತ್ರಿಸಿದ್ದಾರೆ.

ಗೋಕಾವಿ, ಶಿವಗಂಗವ್ವನ ಅಕ್ಕ ಗೌರವ್ವನ ಊರು, ಆಕೆಯ ಗಂಡ ಬಸಪ್ಪ ಹಾಲಭಾವಿ. ಅವನ ಮೊದಲನೆಯ ಹೆಂಡತಿ ಸಿದ್ದಪ್ಪನೆಂಬ ಮಗನನ್ನು ಹೆತ್ತು ತೀರಿಕೊಂಡಿದ್ದಳು. ಆ ಮೇಲೆ ಬಸಪ್ಪ ಈ ಗೌರವ್ವನನ್ನು ಮದುವೆಯಾಗಿದ್ದ ಆಕೆಗೆ ಬಹಳ ದಿವಸ ಮಕ್ಕಳಾಗಿರಲಿಲ್ಲ. ಗಂಡ-ಹೆಂಡತಿ ಮತ್ತು ಒಬ್ಬ ಮಲಮಗ ಇಷ್ಟು ಜನರು ಇರುತ್ತಿದ್ದ ಆ ಮನೆಯಲ್ಲಿ ಶಿವಗಂಗವ್ವ ತನ್ನ ಮಗನನ್ನು ಕರೆದುಕೊಂಡು ಬಂದು ಆಶ್ರಯ ಪಡೆದಳು.

ಗೌರವ್ವ ತಂಗಿಯ ಸ್ಥಿತಿ-ಗತಿ ಕಂಡು ಮರುಗಿ ತನ್ನ ಮನೆಯಲ್ಲಿ ಅವಳಿಗೆ ಇದ್ದುದರಲ್ಲಿಯೇ ಸಕಲ ಸೌಕರ್ಯಗಳನ್ನೂ ಒದಗಿಸಿದಳು. ಅವಳ ಮಗನನ್ನು ಹೊಟ್ಟೆಯ ಮಗನಂತೆ ಪ್ರೀತಿಯಿಂದ ಕಂಡಳು. ಬಸಪ್ಪನಿಗೂ ಅವಳ ಬಗ್ಗೆ ಕನಿಕರ. ಮಗುವಿನ ಬಗ್ಗೆ ಮಮತೆ ಮೂಡಿತು. ತನ್ನ ಮಗನ ಜೊತೆಗೆ ವೀರಭದ್ರಪನ್ನೂ ಅಭೇದ ರೀತಿಯಲ್ಲಿ ನೋಡಿಕೊಂಡು ನಡೆದ. ಹೀಗೆ ಕೆಲವು ದಿವಸ ಕಳೆಯಲು ಬಸಪ್ಪ ಈ ತಾಯಿ-ಮಕ್ಕಳಿಗೆ ಶಾಶ್ವತ ಆಶ್ರಯ ಒದಗಿಸಬೇಕೆಂದು ಬಯಸಿ ಮಕ್ಕಳಾಗದ ತನ್ನ ಹೆಂಡತಿಯ ಒಪ್ಪಿಗೆ ಪಡೆದು, ಅವಳ ಒಡಹುಟ್ಟಿದ ತಂಗಿಯೂ ಆದ ಶಿವಗಂಗವ್ವನನ್ನು ಉಡುಕಿ ಮದುವೆ ಮಾಡಿಕೊಂಡನು. ಶಿವಗಂಗವ್ವ ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಳು. ತನ್ನ ಮಗನ ಸರ್ವಭಾರವೂ ನಿಮ್ಮದು ಎಂದು ಬಸಪ್ಪನಿಗೆ ಒಪ್ಪಿಸಿದಳು ಎಂದು ಡಾ. ರಾಜೂರ ಅವರು ಹಾಲಭಾವಿ ಅವರ ಬಾಲ್ಯದ ಬದುಕು ಕಥೆಯಂತೆ ಚಿತ್ರಿಸಿದ್ದಾರೆ.

ಬಸಪ್ಪ ಮಲಮಗನಾದ ವೀರಭದ್ರಪ್ಪನನ್ನು ಹೊಟ್ಟೆಯ ಮಗನಿಗಿಂತಲೂ ಹೆಚ್ಚಾಗಿ ಕಂಡು ವಾತ್ಸಲ್ಯದ ಅಮೃತ ಉಣಿಸಿ ಬೆಳೆಸಿದ, ಹೆತ್ತ ತಂದೆಯಿಂದ ಪಡೆಯಲಾರದ ಪ್ರೀತಿ-ವಿಶ್ವಾಸಗಳನ್ನು ವೀರಭದ್ರಪ್ಪ, ಬಸಪ್ಪನಿಂದ ಪಡೆದು, ಆತನನ್ನೇ ತನ್ನ ನಿಜವಾದ ತಂದೆಯೆಂದು ಭಾವಿಸಿ, ವಿನಯ-ವಿಧೇಯತೆಗಳನ್ನು ತೋರುತ್ತ ಸಾಗಿದ.

ವೀರಭದ್ರಪ್ಪ 6 ವರ್ಷದವನಾಗುತ್ತಲೆ ಬಸಪ್ಪ, ಅವನನ್ನು ಅದೇ ಊರ ಶಾಲೆಗೆ ಸೇರಿಸಿದ. ಹೆಸರು ಹಚ್ಚುವಾಗ ವೀರಭದ್ರಪ್ಪನ ತಂದೆಯ ಹೆಸರು ಬರೆಯುವ ಸ್ಥಾನದಲ್ಲಿ ತನ್ನ ಹೆಸರನ್ನು ಹಾಕಿದ. ಅಲ್ಲಿಯವರೆಗೆ ಹೇರಲಗಿ ನಿಜಗುಣೆಪ್ಪನ ಮಗನಾಗಿದ್ದ ವೀರಭದ್ರಪ್ಪ ಈಗ ಹಾಲಭಾವಿ ಬಸಪ್ಪನ ಮಗನಾಗಿ ಪರಿವರ್ತನೆ ಹೊಂದಿದ. ಹೇರಲಗಿ ಮನೆತನದ ಕೀರ್ತಿ ಜ್ಯೋತಿ, ಹಾಲಭಾವಿ ಮನೆತನದ ಕೀರ್ತಿಯನ್ನು ಬೆಳಗಲು ಅಣಿಯಾಯಿತು.

ಬೆಳದಿಂಗಳ ಬೆಳ್ಳಿಯ ಗೆರೆಯಂತೆ ಎಂದು ಹಾಲಭಾವಿಯವರ ಬಾಲ್ಯದ ಬದುಕಿನ ಎಳೆಗಳನ್ನು ರೇಶ್ಮೆ ಎಳೆಗಳಂತೆ ವೈಚಾರಿಕ ನೆಲೆಯಲ್ಲಿ ನೈಜವಾಗಿ ಹೇಳಿರುವದು ಅರ್ಥಪೂರ್ಣವೆನಿಸಿದೆ.

ಬಾಲಕ ವೀರಭದ್ರಪ್ಪ ತುಂಬ ಜಾಣ. ಶಾಲೆಯಲ್ಲಿ ಗುರುಗಳು ಹೇಳಿದುದನ್ನೆಲ್ಲ ಒಂದೂ ಬಿಡದೆ ಬಾಯಿಪಾಠಮಾಡಿ ಒಪ್ಪಿಸುತ್ತಿದ್ದ. ಹೀಗಾಗಿ ಗುರುಗಳಿಗೆ ಅವನೆಂದರೆ ಅಚ್ಚು ಮೆಚ್ಚು, ಅವನ ನಿಶ್ಚಿತಮತಿಗೆ ಎಲ್ಲ ಗುರುಗಳೂ ಮಾರು ಹೋಗಿದ್ದರು. ಆಗ ಎಲ್ಲ ಶಿಕ್ಷಕರೂ ಬ್ಯಾಹ್ಮಣರೇ ಆಗಿದ್ದರೂ ಈ ಜಾಣ ವಿದ್ಯಾರ್ಥಿಯ ಪ್ರತಿಭೆಗೆ ತಕ್ಕ ಪ್ರೋತ್ಸಾಹ, ಸ್ವಂತ ಪರಿಶ್ರಮ ಹಾಗೂ ಮಿಂಚಿನ ಪ್ರತಿಭೆಯಿಂದಾಗಿ ಪ್ರತಿವರ್ಷ ಪ್ರಥಮ ದರ್ಜೆ ವೀರಭದ್ರಪ್ಪನ ಪಾಲಿಗೆ ಮಿಸಲಾಯಿತು. ಮಗನ ಈ ಜಾಣ್ಮೆ, ಏಳ್ಗೆ ತಂದೆ-ತಾಯಿಗಳಲ್ಲಿ ಎಲ್ಲಿಲ್ಲದ ಆನಂದ ಅಭಿಮಾನಗಳನ್ನು ಹೆಚ್ಚಿಸಿದವು.

ಊರ ಜನರ ಹೊಗಳಿಕೆ, ಹರಕೆಗಳ ಹೂಮಾಲೆ ವೀರಭದ್ರಪ್ಪನ ಕೊರಳನ್ನು ಅಲಂಕರಿಸಿದವು. ಹೀಗೆ ಎಲ್ಲರಿಗೂ ಬೆಲ್ಲದಚ್ಚಾಗಿ 1891ರಲ್ಲಿ ಗೋಕಾವಿ ಹೈಸ್ಕೂಲಿನಿಂದ ಹೊರಬಿದ್ದ ಮೊದಲ ಗುಂಪಿನಲ್ಲಿ ಮೊದಲಿಗನಾಗಿ ಪಾಸಾದ ವೀರಭದ್ರಪ್ಪ ಕಲಿತ ಸಂಸ್ಥೆ ಕಲಿಸಿದ ಗುರುಗಳು, ಹೆತ್ತ ತಾಯ್ತಂದೆಗಳ ಕೀರ್ತಿಯನ್ನು ಇನ್ನಷ್ಟು ಉಜ್ವಲವಾಗಿ ಬೆಳಗಲು ಮುಂದಿನ ಓದಿಗಾಗಿ ಬೆಳಗಾವಿಗೆ ಪ್ರಯಾಣ ಬೆಳೆಸಿದನೆಂದು ಆತನ ಬಾಲ್ಯ ಮತ್ತು ಪ್ರೌಢ ಶಿಕ್ಷಣದ ಕಲಿಕೆಯ ಸಂದರ್ಭದ ದಿನಗಳ ನೆನಪನ್ನು ಸುಂದರವಾಗಿ ನಿವೇದಿಸಿದ್ದಾರೆ.

ವೀರಭದ್ರಪ್ಪ ತಂದೆ-ತಾಯಿ-ಗುರುಗಳ ಹರಕೆ ಹೊತ್ತು ಬಂದು ಪುಣೆಯ ಡೆಕ್ಕನ್ ಕಾಲೇಜ ಸೇರಿದ. ಒಳ್ಳೆಯ ಉತ್ಸಾಹದಿಂದ ಅಭ್ಯಾಸ ಮುಂದುವರಿಸಿದ. ಇಂಟರ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಗಳಿಸಿದ. ಅದಕ್ಕಾಗಿ ಸರಕಾರದಿಂದ ವಿದ್ಯಾರ್ಥಿವೇತನ ದೊರೆಯ ತೊಡಗಿತು. ಈಗ ಆತನ ಜ್ಞಾನದಾಹ ಇಮ್ಮಡಿಸಿತು. ಕೈಯಲ್ಲಿ ದುಡ್ಡು ಹೆಚ್ಚಾಗಿ ಬರತೊಡಗಿದ್ದರೂ ದುಂದು ವೆಚ್ಚಕ್ಕೆ ಅವಕಾಶ ಕೊಡದೇ ಮನೆಯ ಸ್ಥಿತಿಗತಿಗಳತ್ತ ಗಮನವಿರಿಸಿ.

ಹಿಡಿತದಿಂದ ಜೀವನ ಸಾಗಿಸಿದ. ಮನಸ್ಸನ್ನು ಅನ್ಯವಿಚಾರದತ್ತ ಹರಿಬಿಡದೆ ಯಾವಾಗಲೂ ಅಭ್ಯಾಸದಲ್ಲಿ ಕೇಂದ್ರೀಕರಿಸಿದ. ಅದರ ಫಲವಾಗಿ 1898ರಲ್ಲಿ ಬಿ.ಎ.ಪದವಿಯನ್ನು ಉಚ್ಚವರ್ಗದಲ್ಲಿ ಸಂಪಾದಿಸಿದ. ವೀರಭದ್ರಪ್ಪ ಬಿ.ಎ.ಮುಗಿಸಿ ಗೋಕಾವಿಗೆ ಬರುವಷ್ಟರಲ್ಲಿ ಆ ಊರು ಪ್ಲೇಗ ಬೇನೆಗೆ ತುತ್ತಾಗಿತ್ತು. ಜನರೆಲ್ಲ ಊರು ಬಿಟ್ಟು ದೂರದಲ್ಲಿ ವಾಸಿಸುತ್ತಿದ್ದರು. ಇದೇ ಹೊತ್ತಿಗೆ ವೀರಭದ್ರಪ್ಪನಿಗೆ ಹೆಣ್ಣು ಮಗುವೊಂದು ಜನಿಸಿ ಮೂರು ತಿಂಗಳಾಗಿತ್ತು. ಆತ ಊರು ಸೇರಿ ನಾಲ್ಕಾರು ದಿನ ಕಳೆಯುತ್ತಲೆ ಹೆಂಡತಿಗೆ ಬೇನೆ ಅಂಟಿಕೊಂಡಿತು.

ಯೋಗ್ಯ ವೈದ್ಯಕೀಯ ಚಿಕಿತ್ಸೆ ಇಲ್ಲದೆ ಆ ಕಾಲದಲ್ಲಿ ಆತನಿಗೆ ಆಕೆಯನ್ನು ಉಳಿಸಿಕೊಳ್ಳುವದು ಆಗಲಿಲ್ಲ; ಮೂರು ತಿಂಗಳ ಕೂಸನು ಬಿಟ್ಟು ವಿಧಿವಶಳಾದಳು. ವೀರಭದ್ರಪ್ಪ ಅತೀವ ದುಃಖಕ್ಕೊಳಗಾದ; ಆದರೂ ಹುಟ್ಟಿನಿಂದಲೇ ಕಷ್ಟಗಳನ್ನು ಉಣ್ಣುತ್ತ ಉಡುತ್ತ ಗಟ್ಟಿಗೊಳ್ಳುತ್ತ ಬಂದ ಆತ ಈ ನೋವನ್ನೂ ನುಂಗಿಕೊಂಡು, ಮಾನಸಿಕ ನೆಮ್ಮದಿಗಾಗಿ ಕೆಲವು ದಿವಸ ತಾಯಿಯ ತವರೂರಾದ ರಬಕವಿಗೆ ಹೋದನು ಎಂದು ಅವನು ಬಿ.ಎ. ಪದವಿ ಪಾಸು ಮಾಡಿರುವದನ್ನು ಆತನ ಸಂಸಾರದಲ್ಲಿ ಬಿರುಗಾಳಿ ಬೀಸಿ ತಲ್ಲಣಗೊಳಿಸಿದ ಸ್ಥಿತಿಯನ್ನು ಮನಕರಗುವಂತೆ ತಿಳಿಸಿದ್ದಾರೆ.

ವೀರಪ್ಪನವರು ವಿದ್ಯಾವಂತರು; ಉದಾರಿಗಳು, ಪುಣೆಯ ಡೆಕ್ಕನ ಕಾಲೇಜಿನಲ್ಲಿ ಎರಡು ವರ್ಷ ಅಭ್ಯಾಸ ಮಾಡಿ ಮುಲಕೀಖಾತೆಯಲ್ಲಿ ಬಿಟ್ನೀಸ್ ಎಂದು ಕೆಲಸ ಮಾಡುತ್ತಿದ್ದು. ಇವರಿಗೆ ಮೂರುಜನ ಹೆಣ್ಣುಮಕ್ಕಳು. ಅವರು ತುಸು ಮಟ್ಟಿಗೆ ಶಾಲೆಗೆ ಹೋಗಿ ಕನ್ನಡ ಅಭ್ಯಾಸವನ್ನು ಮಾಡಿದ್ದರು.

ಅವರಲ್ಲಿ ಇಬ್ಬರ ಮದುವೆ ಆಗಿತ್ತು. ಉಳಿದ ಎರಡನೆಯವಳನ್ನು ವೀರಭದ್ರಪ್ಪನಿಗೆ ಕೊಡಿಸಲು ಗುರುಬಸಪ್ಪನವರು ವಿಚಾರಿಸಿದರು. ಪ್ರತಿಭಾವಂತ ಅಳಿಯ ಸಿಕ್ಕಾಗ ನಿರಾಕರಿಸಬಹುದೆ? ವೀರಪ್ಪನವರು ಒಪ್ಪಿದರು. ಗುರುಬಸಪ್ಪನವರ ಮಾತಿಗೆ ವೀರಭದ್ರಪ್ಪನೂ ಎರಡು ನುಡಿಯಲಿಲ್ಲ. ಚೆನ್ನಬಸವ್ವ ಎಂಬ ಕನ್ಯೆಯೊಂದಿಗೆ ನಿಶ್ಚಿತಾರ್ಥ ನೆರವೇರಿತು ಎಂದು ಎರಡನೆಯ ಮದುವೆಯ ವಿಚಾರವನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾನೆ.

ವೀರಭದ್ರಪ್ಪ ಮುಂಬಯಿ ಕಾಲೇಜಿನಲ್ಲಿ ನ್ಯಾಯಶಾಸ್ತ್ರದ ಅಭ್ಯಾಸವನ್ನು ಒಳ್ಳೆಯ ಹುರುಪಿನಿಂದ ಪ್ರಾರಂಭಿಸಿದರು. ಧಾರವಾಡದ ಸಿದ್ಧರಾಮಪ್ಪ ಪಾವಟೆ ಅವರು ಆತನಿಗಿಂತ ಒಂದು ವರ್ಷ ಮುಂದೆ ಇದ್ದರು. ವೀರಪ್ಪ ಬಿಳಿ ಅಂಗಡಿಯು ವೀರಭದ್ರಪ್ಪನವರ ಜೊತೆಗೆ ಓದುತ್ತಿದ್ದನು. ಉತ್ತರ ಕರ್ನಾಟಕದ ಈ ಮೂರು ಜನ ವಿದ್ಯಾರ್ಥಿಗಳು ನಾ ಮುಂದು ತಾ ಮುಂದು ಎಂದು ಸ್ಪರ್ಧೆಗಿಳಿದು, ಅಭ್ಯಾಸದಲ್ಲಿ ತೊಡಗಿದ್ದರು. ಅಧ್ಯಾಪಕರುಗಳ ಪ್ರೀತಿ-ವಿಶ್ವಾಸಗಳನ್ನು ಗಳಿಸುತ್ತ ನಡೆದಿದ್ದರು ಎಂದು ಕಾನೂನು ಪದವಿ ಕಲಿಯುವಾಗಿನ ಸಂದರ್ಭವನ್ನು ಅಂದದಿಂದ ಹೇಳಿದ್ದಾರೆ.

ಲಿಂಗಾಯತ ಹಿರಿಯರ ಜೊತೆಗೆ ಸಂಬಂಧ ಸಂಪರ್ಕವಿಟ್ಟುಕೊಂಡು ಅಭ್ಯಾಸದ ಜೊತೆಗೆ ಧರ್ಮ, ಸಮಾಜದ ಕೆಲಸಗಳನ್ನು ಮಾಡುತ್ತ ವೀರಭದ್ರಪ್ಪ 1901ರಲ್ಲಿ ಎಲ್.ಎಲ್.ಬಿ. ಪದವಿಯನ್ನು ಪಡೆದುಕೊಂಡರು; ಈ ಪದವಿ ಪಡೆದ ಉತ್ತರ ಕರ್ನಾಟಕದ ಲಿಂಗಾಯತರಲ್ಲಿಯೇ ಎರಡನೆಯವನಾಗಿ ಕೀರ್ತಿಗಳಿಸಿದರು.

ಈ ಸಂದರ್ಭದಲ್ಲಿ ಮುಂಬಯಿಯ ಲಿಂಗಾಯತ ಫಂಡ ಸಂಸ್ಥೆ ವಾರದ ಮಲ್ಲಪ್ಪನವರ ಅಧ್ಯಕ್ಷತೆಯಲ್ಲಿ ದಿನಾಂಕ 20-2-1902ರಂದು ವೀರಭದ್ರಪ್ಪನ ಜೊತೆಗೆ ಬಿಳಿ ಅಂಗಡಿ ಮತ್ತು ಹಳಕಟ್ಟಿ ಅವರನ್ನೂ ಬರಮಾಡಿಕೊಂಡು ಆತ್ಮೀಯ ಸತ್ಕಾರ ನೀಡಿ ಗೌರವ ಸಂಕೇತವಾದ ಮಾನಪತ್ರವನ್ನು ಅರ್ಪಿಸಿತು ಎಂದು ಅವರ ಕಾನೂನು ಪದವಿ ತೇರ್ಗಡೆ ಹೊಂದಿದ ಸಂದರ್ಭದಲ್ಲಿನ ಸನ್ಮಾನ ಕಾರ್ಯದ ಬಗ್ಗೆ ತಿಳಿಸಿರುವರು.

ವೀರಭದ್ರಪ್ಪನವರು ಎಲ್.ಎಲ್.ಬಿ. ಪದವಿ ಪಡೆದು ಬಂದ ಮೇಲೆ ಧಾರವಾಡದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು. ಅದರಲ್ಲಿ ಅವರಿಗೆ ವಿಶೇಷ ಆಸಕ್ತಿ ಇರಲಿಲ್ಲವಾದುದರಿಂದ ಅಷ್ಟೊಂದು ಪ್ರಸಿದ್ದಿಗೆ ಬರಲಿಲ್ಲ; ಹೆಸರು ಗಳಿಸಲಿಲ್ಲ. ಅವರ ಒಲವು ಕನ್ನಡ ಸಾಹಿತ್ಯದ ಕಡೆಗೆ ಹೆಚ್ಚಾಗಿತ್ತು. ಮೊದಲಿನಿಂದಲೂ ಕನ್ನಡ ವಿಷಯ ತೆಗೆದುಕೊಂಡು ಉಚ್ಚವ್ಯಾಸಂಗ ಮಾಡಬೇಕೆಂಬ ಬಯಕೆ ಅವರಲ್ಲಿತ್ತು.

ಆದರೆ ಅದು ಸಾಧ್ಯವಾಗದೆ ಹೋಗಿತ್ತು. ಈಗ ಸ್ವತಂತ್ರ ವೃತ್ತಿಯನ್ನು ಪ್ರಾರಂಭಿಸಿದ ಮೇಲೆ ಕನ್ನಡ ಸಾಹಿತ್ಯದ ಅಭ್ಯಾಸವನ್ನು ಪ್ರವೃತ್ತಿಯಾಗಿಸಿಕೊಂಡು ಅದರ ಬಗೆಗಿದ್ದ ತಮ್ಮ ಹಸಿವನ್ನು ಹಿಂಗಿಸಿಕೊಳ್ಳಲು ಪ್ರಯತ್ನ ನಡೆಸಿದರು ಎಂದಿರುವರು.

1890ರಲ್ಲಿ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆಗೊಂಡು ಕನ್ನಡ ಸಾಹಿತ್ಯ, ಭಾಷೆ, ಸಂಸ್ಕೃತಿಗಳು ಬೆಳವಣಿಗೆಗಳು ಕಾರ್ಯಪ್ರವೃತ್ತವಾಗಿತ್ತು. ತನ್ನ ಚಟುವಟಿಕೆಗಳ ಪ್ರಸಾರ ಹಾಗೂ ಕನ್ನಡ ಸಾಹಿತ್ಯ ಪ್ರಕಟನೆಗಾಗಿ ವಾಗ್ಭೂಷಣ ಎಂಬ ಮಾಸಪತ್ರಿಕೆಯನ್ನು ಅದು ಹೊರಡಿಸುತ್ತಿತ್ತು. ಅದರ ಮುಖಾಂತರ ಈಗಾಗಲೇ ಅನೇಕ ಕವಿಗಳು, ಸಾಹಿತಿಗಳು ಸಾರಸ್ವತ ಪ್ರಪಂಚಕ್ಕೆ ಪರಿಚಿತರಾಗಿದ್ದರು.

ಕನ್ನಡದ ಬಗೆಗೆ ಕಳಕಳಿ, ಅತ್ಯಾದರ, ಅತಿಪ್ರೀತಿಯುಳ್ಳ ವೀರಭದ್ರಪ್ಪನವರ ಗಮನ ಅದರತ್ತ ಸಹಜವಾಗಿಯೇ ಹರಿಯಿತು. 1908ರಲ್ಲಿ ಅದರ ಅಜೀವ ಸದಸ್ಯರಾಗಿ ಸೇರಿಕೊಂಡು ಸಾಹಿತಿಗಳ ಸಂಗದಲ್ಲಿಯೇ ಹೆಚ್ಚಿನ ವೇಳೆಯನ್ನು ವ್ಯಯಿಸತೊಡಗಿದರು. ಹಣಕಾಸು ಕುರಿತ ಕೆಲವು ಲೇಖನಗಳನ್ನೂ ಬರೆದು ವಾಗ್ಭೂಷಣದಲ್ಲಿ ಪ್ರಕಟಿಸಿದರು.

ಅವರ ಕನ್ನಡ ಬರವಣಿಗೆಯ ಸೊಗಸನ್ನೂ, ಇಂಗ್ಲೀಷ ಭಾಷೆಯ ಮೇಲೆ ಅವರಿಗಿದ್ದ ಪ್ರಭುತ್ವವನ್ನೂ, ಗುರುತಿಸಿದ ಸಂಘದ ಹಿರಿಯರು ಮೆ.ಸಿವಿಲ್ ಎಂಬವರು ಇಂಗ್ಲೀಷಿನಲ್ಲಿ ಬರೆದ ಪ್ರಸಿದ್ಧ ಕೃತಿ A Forgotten Empire ಎಂಬುದನ್ನು ಕನ್ನಡದಲ್ಲಿ ಅನುವಾದಿಸಲು ವೀರಭದ್ರಪ್ಪನವರಿಗೆ ಪ್ರಚೋದನೆ ಕೊಟ್ಟರು.

ಕನ್ನಡ ಇಂಗ್ಲೀಷ ಎರಡು ಭಾಷೆಗಳ ಜಾಯಮಾನವನ್ನು ಚೆನ್ನಾಗಿ ಅರಿತುಕೊಂಡ ಅವರು ಕೆಲವೇ ದಿನಗಳಲ್ಲಿ ಮೂಲದ ಸೊಗಸು, ಸೌಂದರ್ಯಗಳಿಗೆ ಇನ್ನಷ್ಟು ಕಳೆಬರುವ ರೀತಿಯಲ್ಲಿ ವಿಜಯನಗರ ಸಾಮ್ರಾಜ್ಯ ಎಂಬ ಹೆಸರಿನಿಂದ ಅನುವಾದಿಸಿ ಕೊಟ್ಟರು. 1908ರ ವಾಗ್ಭೂಷಣ ಪತ್ರಿಕೆಗಳಲ್ಲಿ ಅದು ಸಂಪೂರ್ಣವಾಗಿ ಪ್ರಕಟವಾಯಿತು;

ವಿದ್ವಾಂಸರ ಪ್ರಶಂಸೆಗೂ ಪಾತ್ರವಾಯಿತು. ಅಲ್ಲದೆ ಅದೇ ವರ್ಷ ಇತಿಹಾಸ ಕೃತಿಗಳಲ್ಲಿ ಉತ್ತಮವಾದುದುದೆಂದು ಸಂಘದ ಪುರಸ್ಕಾರವನ್ನು ದೊರಕಿಸಿಕೊಂಡಿತು. ಆ ಮೇಲೆ ಅದನ್ನು ವಿಜಯನಗರ ಸಂಘದವರು ಪುಸ್ತಕ ರೂಪದಲ್ಲಿ ಹೊರತಂದರು ಎಂದು ಅವರ ಕನ್ನಡ ಆಸಕ್ತಿಯನ್ನು ಇಲ್ಲಿ ಚಂದದಿಂದ ನಿರೂಪಿಸಿದ್ದಾರೆ.

ಕನ್ನಡದಲ್ಲಿ ತಾವು ಅನುವಾದಿಸಿದ ಮೊದಲ ಕೃತಿಗೆ ವಿಶೇಷ ಮನ್ನಣೆ ದೊರೆತದು ವೀರಭದ್ರಪ್ಪನವರಲ್ಲಿ ತಮ್ಮ ಬರವಣಿಗೆಯ ಬಗ್ಗೆ ವಿಶ್ವಾಸ ಗಟ್ಟಿಗೊಳ್ಳಲು ಕಾರಣವಾಯಿತು. ಅವರು ಸ್ವಪ್ರಯತ್ನದಿಂದ ಮನೆಯಲ್ಲಿ ಕನ್ನಡದ ಉತ್ತಮ ಕೃತಿಗಳನ್ನು ಅಭ್ಯಸಿಸ ತೊಡಗಿದರು. ತಮಗೆ ದೊರೆತ ತಾಳೆಗರಿ, ಕಾಗದ ಪ್ರತಿಗಳಲ್ಲಿರುವ ಗ್ರಂಥಗಳನ್ನು ಸಂಗ್ರಹಿಸಿ, ಓದಿ, ಪರಿಷ್ಕರಿಸಿ ಬರೆಯುವ ಕಾರ್ಯದಲ್ಲಿಯೂ ತೊಡಗಿದರು.

ಹಾಗೆ ಅವರು ಪರಿಷ್ಕರಿಸಿ ಬರೆದ ಮೊದಲ ಕೃತಿಗಳೆಂದರೆ ಮಹಾದೇವಿಯಕ್ಕನ ಪುರಾಣ ಮತ್ತು ರಾಘವಾಂಕ ಕಾವ್ಯ. ತಾವು ವಕೀಲರೆಂಬುದನ್ನು ಮರೆತು ಕನ್ನಡ ಸಾಹಿತ್ಯದ ಅಧ್ಯಯನದಲ್ಲಿ ತೊಡಗಿದ್ದ ವೀರಭದ್ರಪ್ಪನವರಿಗೆ ವಿದ್ಯೆಗೆ ತಕ್ಕ ಹುದ್ದೆ ತಾನಾಗಿಯೇ ಹುಡುಕಿಕೊಂಡು ಬಂದಿತು. 1907ರಲ್ಲಿ ಅವರು ಧಾರವಾಡದ ಜಜ್ಜಕೋರ್ಟಿನಲ್ಲಿ ಕೆಲಸಕ್ಕೆ ಸೇರಿದರು.

ಅವರ ಕರ್ತವ್ಯ ನಿಷ್ಠೆಯನ್ನು ಗುರುತಿಸಿದ ಮೇಲಾಧಿಕಾರಿಗಳು ಅದೇ ವರ್ಷ ಡಿಸೆಂಬರ ತಿಂಗಳಲ್ಲಿ ಅವರನ್ನು ಸಬ್‍ಜಜ್ಜ ಕೆಲಸಕ್ಕೆ ನಿಯಮಿಸಿದರು. ಅದಕ್ಕೆ ಆಗಿನ ನ್ಯಾಯವಾದಿಗಳಾಗಿದ್ದ ಮೆ.ಎಂಥೊವೆನ್ ಮತ್ತು ಧಾರವಾಡ ಜಿಲ್ಲೆಯ ಕಲೆಕ್ಟರ್ ಮೋಹರ್ಸನ್ ಅವರ ಸಹಾಯ ಕಾರಣವಾಯಿತು.

ವೀರಭದ್ರಪ್ನವರ ಎರಡನೆಯ ಹೆಂಡತಿಗೆ ರಾಣೆಬೆನ್ನೂರಿನ ವಯೋವೃದ್ದ ಸಂಬಂಧಿಯೊಬ್ಬ ಆಕೆಯ ಮದುವೆಗಿಂತ ಪೂರ್ವದಲ್ಲಿ ನಿನಗೆ ಮುನ್ಸೂಫ್ ಗಂಡ ಸಿಕ್ಕುತ್ತಾನೆ ಎಂದು ಹೇಳಿದ್ದನಂತೆ; ಆತನ ಭವಿಷ್ಯವಾಣಿ ಈಗ ಸತ್ಯವಾಗಿತ್ತು. ವೀರಭದ್ರಪ್ಪನವರು 1907 ರಿಂದ 1935ರ ವರೆಗೆ ಅಖಂಡ 25 ವರ್ಷ ನ್ಯಾಯಖಾತೆಯಲ್ಲಿ ಸೇವೆ ಸಲ್ಲಿಸಿದರು. ಹುದ್ದೆಯಿಂದ ಹುದ್ದೆಗೆ ಏರುತ್ತ ನಡೆದು. ಕೊನೆಗೆ ಒಂದನೆಯ ವರ್ಗದ ನ್ಯಾಯಾಧೀಶರಾಗಿ ನಿವೃತ್ತಿ ಹೊಂದಿದರು ಎಂದು ಅವರ ವೃತ್ತಿ ಬದುಕಿನ ಚಿತ್ತಾರಗಳನ್ನು ಚಂದದಿಂದ ಬಿಡಿಸಿದ್ದಾರೆ ಡಾ. ರಾಜೂರ ಅವರು.

ವೀರಭದ್ರಪ್ಪನವರು ಎಲ್ಲೇ ಹೊಗಲಿ. ಅಲ್ಲಿ ತಮ್ಮ ಸತ್ಯಶುದ್ದ ನಡೆ-ನುಡಿ ಸಚ್ಚಾರಿತ್ರ್ಯ, ನ್ಯಾಯನಿಷ್ಠರತೆಗಳಿಂದ ಆ ಪ್ರದೇಶದ ಜನರ ಪ್ರೀತಿ-ವಿಶ್ವಾಸಗಳನ್ನು ಬಹುಬೇಗ ಸಂಪಾದಿಸಿ ಬಿಡುತ್ತಿದ್ದರು. ಬಂದ ವ್ಯಾಜ್ಯಗಳನ್ನು ಸುಮ್ಮನೆ ಮುಂದೂಡುತ್ತ ಸಾಗದೆ ಬೇಗ ಬೇಗ ಬಗೆಹರಿಸುತ್ತಿದ್ದರು.

ನ್ಯಾಯ ಪೀಠದಲ್ಲಿ ಕುಳಿತಾಗ ಇವನು ನಮ್ಮವ ಇವನಿಗೆ ಗೆಲುವು ತಂದುಕೊಡಬೇಕು; ಅವ ಅನ್ಯರವ ಅವನಿಗೆ ಸೋಲು ಒದಗಿಸಬೇಕು. ಇವ ವೈರಿ ಇವನಿಗೆ ಕೇಡು ಬಗೆಯಬೇಕು; ಅವಸ್ನೇಹಿತ ಅವನಿಗೆ ಒಳಿತು ಮಾಡಬೇಕು ಎಂಬ ಭೇದಭಾವ ಎಳ್ಳಷ್ಟೂ ಮನದಲ್ಲಿ ಸುಳಿಯುತ್ತಿರಲಿಲ್ಲ. ನ್ಯಾಯಾಧಿ ದೇವತೆಯ ಸಮ್ಮುಖದಲ್ಲಿ ಯಾವಾಗಲೂ ಸತ್ಯನಿರ್ಣಯವನ್ನೇ ನೀಡುತ್ತಿದ್ದರು.

ಹೀಗಾಗಿ ಅವರು ಕೆಲಸಮಾಡಿದ ಸ್ಥಳಗಳಲ್ಲೆಲ್ಲ ಇಂಥ ಜಜ್ಜರ್ನ ನಾವು ಹಿಂದೂ ನೋಡಿಲ್ಲ, ಮುಂದೂ ನೋಡುದಿಲ್ಲ ಎಂದು ಜನತೆ ಉದ್ಗಾರ ತೆಗೆಯುತ್ತಿದ್ದರಂತೆ. ಅವರು ನೀಡಿದ ನಿರ್ಣಯಗಳಿಂದ ಕೆಲವು ಸಲ ಅವರ ಆತ್ಮೀಯರು ಮತ್ತು ಸಂಬಂಧಿಕರಿಗೇ ಸೋಲು ಆದದ್ದುಂಟು ಎಂದು ಅಂಥ ಕೆಲವು ಘಟನೆಗಳನ್ನು ಉದಾಹರಿಸಿ ಅವರ ನ್ಯಾಯ ನಿಷ್ಠುರ ವ್ಯಕ್ತಿತ್ವವನ್ನು ನೈಜವಾಗಿ ಕಟ್ಟಿಕೊಟ್ಟಿರುವದು ಅರ್ಥಪೂರ್ಣವೆನಿಸಿದೆ.

ವೀರಭದ್ರಪ್ಪನವರದು ಹಿರಿಯ ಸಂಸಾರ. ಮೊದಲ ಹೆಂಡತಿ ಗಂಗಾ ಒಂದು ಹೆಣ್ಣು ಮಗುವನ್ನು ಹೆತ್ತು 1898ರಲ್ಲಿ ಪ್ಲೇಗ್ ಬೇನೆಗೆ ತುತ್ತಾಗಲು, ಮುಂದೆ ಕೆಲವೇ ದಿನಗಳಲ್ಲಿ ಮಗುವೂ ಮೃತ್ಯುವಿಗಿಡಾಯಿತು. ಆಗಿನ್ನೂ ಬಿ.ಎ.ಪಧವೀದರರೂ 21 ವರ್ಷದ ತರುಣರು ಆಗಿದ್ದ ವೀರಭದ್ರಪ್ಪನವರು 1900ರಲ್ಲಿ ಚೆನ್ನಬಸವ್ವನನ್ನು ಎರಡನೆಯ ಮದುವೆ ಮಾಡಿಕೊಂಡರು.

1901 ರಿಂದ 1924. ಈ ಅವಧಿಯಲ್ಲಿ ಅವರಿಗೆ 12 ಜನ ಮಕ್ಕಳಾದವು: ಸಿದ್ದಪ್ಪ (1901), ದಾನಪ್ಪ (1907), ಗಂಗಾಧರ (1909), ಮಧುಕೇಶ್ವರ (1912), ಶಿವಗಂಗಮ್ಮ (1914), ಸೋಮಶೇಖರ (1916), ನಿಜಗುಣಿ (1918), ನಿಜಗುಣಿ (1921) ಮತ್ತು ಶಾರದಾ (1924). ಇವರಲ್ಲಿ ಸಿದ್ದಪ್ಪ, ದಾನಪ್ಪ, ಗಂಗಾಧರ, ಸೋಮಶೇಖರ ಮತ್ತು ಶಾರದಾ ಐದು ಜನ ಮಾತ್ರ ಉಳಿದು ಇತರರು ಅಲ್ಪಾಯುಷಿಗಳಾಗಿ ಅಕಾಲ ಮೃತ್ಯುವಿಗೆ ಬಲಿಯಾದರು.

ಅದರಿಂದಾದ ದುಃಖವನ್ನು ವೀರಭದ್ರಪ್ಪನವರು ಶಾಂತಚಿತ್ತದಿಂದ ಸಹಿಸುತ್ತ ಉಳಿದ ಮಕ್ಕಳನ್ನು ಶಿಸ್ತಿನಿಂದ ಬೆಳೆಸಿದರು. ಉತ್ತಮ ಶಿಕ್ಷಣಕೊಡಿಸಿ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಗಳಾಗಿ ಬಾಳುವಂತೆ ಮಾಡಿದರು ಎಂದು ಅವರ ಸಂಸಾರ ಸಾರವನ್ನು ಅಂದದಿಂದ ನಿರೂಪಿಸಿರುವರು.

ಹಾಲಭಾವಿ ಅವರು 82 ವರ್ಷ ತುಂಬು ಜೀವನ ನಡೆಸಿದರು. ಅವರ ಬದುಕಿನ ಬಾಲ್ಯ ಮತ್ತು ತಾರುಣ್ಯದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿದರೂ, ದೈಹಿಕ ಅನಾರೋಗ್ಯದಿಂದ ಬಳಲಿದರೂ ವೃದ್ದಾಪ್ಯದಲ್ಲಿ ಯಾವುದೇ ತೊಂದರೆಗೆ ಈಡಾಗಲಿಲ್ಲ.

ಕಾವ್ಯಾಧ್ಯಯನ, ಕಾವ್ಯ ಪ್ರಕಟನೆÀ, ಹಸ್ತಪ್ರತಿ ಪರಿಷ್ಕರಣ, ಸಜ್ಜನರ ಅನುಭವಗೋಷ್ಠಿಯಲ್ಲಿ ನಿತ್ಯ ಶಿವಾನಂದವನ್ನು ಕಂಡರು. ಕೊನೆಯ ಉಸಿರುವವರೆಗೂ ಅವರು ಹೆಂಡರು ಮಕ್ಕಳಿಗಾಗಿ ಚಿಂತಿಸಲಿಲ್ಲ. ಧನಕನಕಗಳ ಬಗೆಗೆ ವಿಚಾರಿಸಲಿಲ್ಲ; ಅಂತಿಮ ಗಳಿಗೆಯಲ್ಲಿಯೂ ಅವರ ಬಾಯಿಂದ ಆ ಪುಸ್ತಕ ಮುದ್ರಣ ಎಲ್ಲಿಗೆ ಬಂತು? ಈ ಹಸ್ತ ಪ್ರತಿಯನ್ನು ಬೇಗ ಮುದ್ರಣಕ್ಕೆ ಕೊಡಿ ಎಂಬ ನುಡಿಮುತ್ತುಗಳೇ ಉದರಿದವು.

ಹೀಗೆ ಅವಿಶ್ರಾಂತವಾಗಿ ನಿಸ್ವಾರ್ಥ ಸೇವೆಯಲ್ಲಿ ತೊಡಗಿದ ಶರಣ ಹಾಲಭಾವಿಯವರನ್ನು ಧಾರವಾಡದ ಉಳವಿ ಚೆನ್ನಬಸವೇಶ್ವರ ದೇವಾಲಯದ ಪರಿಸರದಲ್ಲಿರುವ ತಮ್ಮ ಮನೆಯಲ್ಲಿ 17-01-1959ರಂದು ಅಲಿಕಲ್ಲ ಪುತ್ಥಳಿ ಅಪ್ಪುವಿನೊಡ ಗೂಡಿದಂತೆ ಬಯಲು ಬಯಲ ಬೆರಸಿದಂತೆ ಜ್ಯೋತಿ ಜ್ಯೋತಿಯೊಳು ಕೂಡಿದಂತೆ ಉರಿಕರ್ಪುರವ ನುಂಗಿದಂತೆ ಲಿಂಗದಲ್ಲಿ ಲೀನವಾದರು. ಇಂದು ಅವರ ಭೌತಿಕ ಶರೀರ ಧಾರವಾಡದ ಕಲ್ಯಾಣ ನಗರದ ಅವರ ಹೊಲದಲ್ಲಿ ಭಾವಿಯ ಬಳಿಯಿರುವ ಗದ್ಗುಗೆಯಲ್ಲಿ ಚಿರನಿದ್ರೆಗೈಯ್ಯುತ್ತಿದ್ದರೆ.

ಅವರ ಆತ್ಮಚೇತನ ತಾನು ಕಟ್ಟಿ ಬೆಳಸಿದ. ಕಾರ್ಯ ಮಾಡಿದ ಸಂಘ-ಸಂಸ್ಥೆಗಳ ಪ್ರಗತಿಯನ್ನು ಕಂಡು ಆನಂದಿಸುತ್ತ, ಅವನತಿಯನ್ನು ಕಂಡು ವ್ಯಥೆಪಡುತ್ತ ಸುಳಿದಾಡುತ್ತಿದೆ. ಇಂಥ ಜ್ಯೋತಿ ಸ್ವರೂಪರು ಬಿಟ್ಟುಹೋದ ಬೆಳಕನ್ನುಂಡು ನಾವು ಮತ್ತು ನಮ್ಮ ಸಮಾಜ ಬೆಳೆಯಬೇಕಾಗಿದೆ, ಬೆಳಗಬೇಕಾಗಿದೆ ಎಂದು ಅವರ ಅಂತ್ಯಕಾಲದ ಅಂದವನ್ನು ಚಂದದಿಂದ ಹೇಳಿದ್ದಾರೆ.

ಡಾ. ವೀರಣ್ಣ ರಾಜೂರ ಅವರು ಈ ಕೃತಿಯ ಕೊನೆಯಲ್ಲಿ ಹಾಲಭಾವಿ ಮನೆತನದ ವಂಶವೃಕ್ಷ, ಹಾಲಭಾವಿ ವೀರಭದ್ರಪ್ಪನವರ ಜೀವನದ ಕೆಲವು ಮಹತ್ವದ ಘಟನೆಗಳು, ಹಾಲಭಾವಿ ಅವರ ಕೃತಿಗಳು ಮತ್ತು ಲೇಖನಗಳು, ಲಿಂಗಾಯತ (ವೀರಶೈವ) ಮಠಗಳ ಕಾಯಿದೆ ಮಸೂದೆ, ಹಾಲಭಾವಿ ವೀರಭದ್ರಪ್ಪನವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಅರ್ಪಿಸಿದ ಸನ್ಮಾನಪತ್ರ ನೀಡಿರುವದು ಉಪಯುಕ್ತವೆನಿಸಿದೆ.

ವ್ಯಕ್ತಿ ಚಿತ್ರಣಕ್ಕೆ ಬೇಕಾದ ಎಲ್ಲ ಆಯಾಮಗಳು ಈ ಕೃತಿಯಲ್ಲಿ ಕಾಣಸಿಗುತ್ತವೆ. ಕೃತಿ ಚಿಕ್ಕದಾದರೂ ಕೂಡ ವಿಮರ್ಶೆ ಸಂಶೋಧನೆ, ಸುಂದರವಾದ ವಸ್ತುನಿಷ್ಠ ನಿರೂಪನೆಯಿಂದ ಯಶಸ್ವಿ ವ್ಯಕ್ತಿ ಬರಹಗಳ ಮೊದಲ ಸಾಲಿನಲ್ಲಿ ನಿಲ್ಲುವ ಕೃತಿ ಇದಾಗಿದೆ.

ಈ ಕೃತಿ ಮರುಮುದ್ರಣ ಮಾಡಿದರೆ ಇಂದಿನ ಯುವ ಬರಹಗಾರರಿಗೆ ಆಕರ ಗ್ರಂಥವಾಗಿ, ಮಾರ್ಗದರ್ಶಕ, ಮಾದರಿ ಕೃತಿ ಇದಾಗಿದೆ ಎಂದು ಹೇಳಬಹುದು. ಲೇಖಕರ ಶ್ರಮ, ಶ್ರದ್ಧೆ ಇಲ್ಲಿ ಎದ್ದುಕಂಡಿವೆ.


ಡಾ.ವ್ಹಿ.ಬಿ.ಸಣ್ಣಸಕ್ಕರಗೌಡರ
ಉಪನ್ಯಾಸಕರು, ಬಾದಾಮಿ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!