spot_img
spot_img

ಕೊಟ್ಟಿಗೆಹಾರದ ಸುತ್ತಮುತ್ತ

Must Read

spot_img
- Advertisement -

ಪ್ರವಾಸ ಮನಸ್ಸಿಗೆ ಮುದ ನೀಡುತ್ತದೆ.ಪ್ರವಾಸಿಗ ಯಾವತ್ತೂ ಉಲ್ಲಸಿತವಾಗಿರುತ್ತಾನೆ. ಶಿವರಾಮ ಕಾರಂತರ “ದೇಶ ಸುತ್ತು ಕೋಶ ಓದು” ಎಂಬ ಮಾತನ್ನು ಸದಾ ನೆನಪಿಟ್ಟುಕೊಂಡು ನಾಡಿನ ಹತ್ತಾರು ಸ್ಥಳಗಳನ್ನು ಸುತ್ತುವ ಜೊತೆಗೆ ಆ ಸ್ಥಳಗಳ ಪರಿಚಯವನ್ನು ದಾಖಲಿಸುತ್ತ ಹೋದಂತೆ ಅದೇ ಪ್ರವಾಸ ಕೃತಿಯಾಗುತ್ತದೆ. ನನ್ನ ಪಯಣದ ನೆನಪುಗಳನ್ನು ಆಗಾಗ ಮೆಲಕು ಹಾಕುವ ಮೂಲಕ ಆ ಸ್ಥಳಗಳ ಚರಿತ್ರೆಯನ್ನು ಕಣ್ಮುಂದೆ ತಂದುಕೊಳ್ಳುವೆ. ಅಂಥವುಗಳಲ್ಲಿ ಕೊಟ್ಟಿಗೆಹಾರ ಒಂದು.

ಮೇ 29.2019ರ ರಾತ್ರಿ ಧರ್ಮಸ್ಥಳಕ್ಕೆ ಹೊರಡುವ ವ್ಹಿ.ಆರ್.ಎಲ್. ಸುವಿಹಾರಿ ಬಸ್ ಮೂಲಕ ಕೊಟ್ಟಿಗೆಹಾರದತ್ತ ಪ್ರಯಾಣಕ್ಕೆಂದು ಮುಂಚಿತವಾಗಿ ಟಿಕೇಟ್ ಕಾಯ್ದಿರಿಸಿದ್ದೆ.ಧರ್ಮಸ್ಥಳಕ್ಕಿಂತ ಮೊದಲಿಗೆ ಇಳಿದು ಅಲ್ಲಿಂದ ಚಾರ್ಮಾಡಿ ಘಾಟ್ ಮೂಲಕ ಕೊಟ್ಟಿಗೆಹಾರಕ್ಕೆ ಹೋಗುವುದು ಎಂದುಕೊಂಡು ಎಲ್ಲ ಸಿದ್ದತೆಗಳನ್ನು ಮಾಡಿಕೊಂಡೇ ಬಸ್‍ಲ್ಲಿ ಕುಳಿತಿದ್ದೆ.ಮೊದಲೇ ಸುವಿಹಾರಿ ಬಸ್ ರಾತ್ರಿ 10 ಕ್ಕೆ ಧಾರವಾಡದಿಂದ ಹೊರಟಿತು.ನಿದ್ರಾದೇವಿ ಆವರಿಸಿದ್ದೇ ಗೊತ್ತಾಗಿರಲಿಲ್ಲ.ಧರ್ಮಸ್ಥಳಕ್ಕಿಂತ ಮೊದಲೇ ಇಳಿಯುವುದು ಎಂದು ಚಾಲಕನಿಗೆ ತಿಳಿಸಿದ್ದೆ.ಅದೇ ರೀತಿ ಬೆಳಗಿನ ಜಾವ 6 ಗಂಟೆಗೆ ಅವರು ಹೇಳಿದ ಸ್ಥಳದಲ್ಲಿ ನನಗೆ ಇಳಿಸಿ ಬಸ್ ಧರ್ಮಸ್ಥಳದತ್ತ ಚಲಿಸಿತ್ತು. ಅಲ್ಲಿ ಕೊಟ್ಟಿಗೆಹಾರಕ್ಕೆ ಹೋಗುವ ಬಸ್ ಎಷ್ಟು ಹೊತ್ತಿಗೆ ಬರುತ್ತದೆ ಎಂದು ಕೇಳಿದಾಗ ಚಾರ್ಮಾಡಿ ಘಾಟ್ ಮೂಲಕ ಬೆಂಗಳೂರಿನತ್ತ ಚಲಿಸುವ ಎಲ್ಲ ಬಸ್ ಕೊಟ್ಟಿಗೆಹಾರದ ಮೂಲಕ ಹೋಗುತ್ತವೆ ಎಂದು ತಿಳಿಸಿದರು. ಅಷ್ಟರಲ್ಲಿ ಬಸ್ ಬಂದೇ ಬಿಟ್ಟಿತು.

- Advertisement -

ಕೊಟ್ಟಿಗೆಹಾರ ಮೂಡಿಗೆರೆ ತಾಲೂಕಿನ ಎತ್ತರದ ಪರ್ವತಶ್ರೇಣಿಯಲ್ಗಿರುವ ಸ್ಥಳ. ಕಳಸದಿಂದ ಹಿಂದಕ್ಕೆ ಹೋದರೆ ಶೃಂಗೇರಿ. ಮುಂದಕ್ಕೆ ಹೋದರೆ ಕೊಟ್ಟಿಗೆಹಾರ. ಉಜಿರೆಯಿಂದ ಚಾರ್ಮಾಡಿ ಮೂಲಕ ಬರಬಹುದು. ಮೂಡಿಗೆರೆ ಮೂಲಕವೂ ಇಲ್ಲಿಗೆ ಬರಬಹುದು.ಇದು ಕಳಸದಿಂದ 40 ಕಿ.ಮೀ.ಹೊರನಾಡಿನಿಂದ 48 ಕಿ.ಮೀ, ಕುದುರೆಮುಖದಿಂದ 61 ಕಿ.ಮೀ, ಕಾರ್ಕಳದಿಂದ 93 ಕಿ.ಮೀ, ಬಾಳೆಹೊನ್ನೂರಿನಿಂದ 36 ಕಿ.ಮೀ, ಕೊಪ್ಪದಿಂದ 62 ಕಿ.ಮೀ, ಶಿವಮೊಗ್ಗದಿಂದ 123 ಕಿ.ಮೀ, ಧರ್ಮಸ್ಥಳದಿಂದ 48 ಕಿ.ಮೀ, ಉಜಿರೆಯಿಂದ 40 ಕಿ.ಮೀ ಅಂತರವಿದೆ.

 

- Advertisement -

ಯಾವುದೇ ಮಾರ್ಗದಿಂದ ಬಂದರೂ ಸಾಕಷ್ಟು ವಾಹನ ಸೌಕರ್ಯವಿದೆ. ಚಾರಣ ಪ್ರಿಯರಿಗಂತೂ ಇದು ಹೇಳಿ ಮಾಡಿಸಿದ ತಾಣ. ಇಲ್ಲಿ ಬಸ್ ಇಳಿದು ನನಗೆ ನಿಗದಿಪಡಿಸಿದ್ದ ಮಲಯ ಮಾರುತ ಎಂಬ ಅರಣ್ಯ ಇಲಾಖೆಯ ಗೆಸ್ಟ ಹೌಸ್‍ನತ್ತ ರಿಕ್ಷಾ ಮೂಲಕ ಪಯಣಿಸಿದೆ. ಅಲ್ಲಿ ವಿಶ್ರಾಂತಿ ಪಡೆದು ಕೊಟ್ಟಿಗೆಹಾರ ನೋಡಲು ನನ್ನ ಕ್ಯಾಮರಾದೊಂದಿಗೆ ಅಣಿಯಾದೆ.ಬಸ್‍ನಲ್ಲಿ ಬರುವಾಗ ದಾರಿಯುದ್ದಕ್ಕೂ ಅಲ್ಲಲ್ಲಿ ಕಂಡು ಬರುವ ರಮಣೀಯ ಜಲಧಾರೆಗಳು ಹಾವಿನಂತೆ ಅಂಕುಡೊಂಕಾಗಿರುವ ತಿರುವುಗಳು ಬೆಟ್ಟವನ್ನು ಏರುತ್ತ ಬರುವ ಬಸ್ ನಲ್ಲಿ ಕಂಡುಬರುವ ಪರ್ವತಶ್ರೇಣಿ.

ಅದಕ್ಕೆ ಮುತ್ತಿಕ್ಕುತ್ತಿರುವ ಮಂಜು ಇವನ್ನೆಲ್ಲ ನೋಡಲು ಎರಡು ಕಣ್ಣು ಸಾಲದು ಎಂದು ಉದ್ಗರಿಸುತ್ತ ಬಂದಿದ್ದ ನನಗೆ ಮಲಯ ಮಾರುತ ಗೆಸ್ಟ ಹೌಸ್ ನ ಅಟ್ಟದ ಮೇಲೆ ಹತ್ತಿ ಸುತ್ತಲೂ ಕಣ್ಣು ಹಾಯಿಸಿದಾಗ ಅಬ್ಬಾ, ಎಷ್ಟೊಂದು ರಮ್ಯ ಇಲ್ಲಿನ ಪ್ರಕೃತಿ ! ಎಂದೆನಿಸಿತು. ಹಚ್ಚ ಹಸಿರಿನ ಕಾನನ. ಮುಗಿಲು ಮುಟ್ಟುವಂತೆ ಆಕಾಶದೆಡೆಗೆ ಗರಗಸದಂತೆ ನಿಂತಿರುವ ಬೃಹತ್ ಪರ್ವತ ಸಾಲುಗಳು. ಪದಗಳಲ್ಲಿ ಬಣ್ಣಿಸಲಾಗದ ಸೊಗಸು. ಈ ಸೌಂದರ್ಯಕ್ಕೆ ಎಂತಹವರೂ ಹುಚ್ಚರಾಗುತ್ತಾರೆ. ಅಂತಹ ಪ್ರಕೃತಿಯದು. ಅಲ್ಲಿನ ಅರಣ್ಯ ಇಲಾಖೆಯ ಸಿಬ್ಬಂದಿ ಅವರ ಹೆಸರು ಕೇಳಬೇಕಿತ್ತು ಎಂದು ಲೇಖನ ಬರೆಯುವ ಸಂದರ್ಭ ಅನಿಸುತ್ತಿದೆ.ಏನೇ ಇರಲಿ ಅವರು ಲೆಮನ್ ಟೀ ತಂದು ಕೊಟ್ಟರು.

ಅದರ ರುಚಿ ವಾವ್ಹ್. ಹೇಗೆ ಮಾಡಿರುವಿರಿ ಎಂದಾಗ ಚಹಾ ಪುಡಿಯನ್ನು ನೀರಲ್ಲಿ ಕುದಿಸಿ ಸಕ್ಕರೆ ಹಾಕಿ ಕಪ್ ಗೆ ಹಾಕುವ ಮುಂಚೆ ಲಿಂಬೆ ಹಣ್ಣಿನ ರಸವನ್ನು ಅದಕ್ಕೆ ಹಿಂಡಿದೆ ಎಂದಾಗ ಆರೋಗ್ಯಕ್ಕೆ ಒಳ್ಳೆಯದಾದ ಆ ಟೀ ಇನ್ನೊಂದು ಕಪ್ ಬೇಡುವಂತಾಗಿತ್ತು.ಅವನು ಕೂಡ ಬೇಸರಿಸದೇ ಖುಷಿಯಿಂದ ತಂದುಕೊಟ್ಟ.

 

ಅವನು ಅವನ ಪತ್ನಿ ಅಲ್ಲಿರುವುದು.ಅವರೊಟ್ಟಿಗೆ ಸಾಕಿದ ನಾಯಿಗಳ ಹಿಂಡು. ಪ್ರತಿಯೊಬ್ಬ ಪ್ರಕೃತಿ ಪ್ರೇಮಿಯೂ ಚಾರಣಿಗನ ಕನಸಿನಂತೆ ಕೊಟ್ಟಿಗೆಹಾರದ ಪ್ರಕೃತಿಯನ್ನು ಸವಿಯಲು ಮಲಯ ಮಾರುತ ಗೆಸ್ಟ ಹೌಸ್ ಹೇಳಿ ಮಾಡಿಸಿದ ಸ್ಥಳ. ಕೊಟ್ಟಿಗೆಹಾರದಿಂದ ಕನಿಷ್ಟ ನಾಲ್ಕು ಕಿ.ಮೀ ಅಂತರದಲ್ಲಿ ಅರಣ್ಯ ಇಲಾಖೆ ಇದನ್ನು ನಿರ್ಮಿಸಿದೆ.ಕೊಠಡಿಗಳಲ್ಲಿ ಎಲ್ಲ ವ್ಯವಸ್ಥೆಯಿದೆ.

ಹಸಿರು ಹೊನ್ನು ಕಾಲು ಮುರಿದುಕೊಂಡು ಬಿದ್ದಿರುವ ಈ ಸ್ಥಳ ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕು. ದಟ್ಟವಾದ ಮಂಜಿನ ಹನಿ ಬೆಳಗನ್ನು ಸ್ವಾಗತಿಸಿತು.ಕ್ಯಾಮರಾ ಕಣ್ಣು ತೆರೆದು ಅದನ್ನು ಸೆರೆಹಿಡಯತೊಡಗಿದೆ. ಒಂದು ಪೋಟೋ ತಗೆಯುವಷ್ಟರಲ್ಲಿ ಕ್ಯಾಮರಾ ತುಂಬ ಮಂಜುಗಟ್ಟುತ್ತಿತ್ತು ಅದನ್ನು ಒರೆಸಿ ಮತ್ತೆ ಪೋಟೋ ತಗೆಯುವಷ್ಟರಲ್ಲಿ ಮತ್ತೆ ಮಂಜು. ನೀವೇ ಊಹಿಸಿ ಅಲ್ಲಿ ಮಂಜು ಎಷ್ಟು ಬೀಳುತ್ತಿರಬಹುದೆಂದು. ಹಾಗೆಯೇ ಕೆಳಗಿಳಿದು ಬಂದರೆ ತಿರುವಿನಲ್ಲಿ ಒಂದು ಸಣ್ಣ ಜಲಪಾತ.ಜುಳು ಜುಳು ಹರಿಯುವ ನೀರು. ಅಬ್ಬಾ ಈ ನೀರಲ್ಲಿ ಮೈಕೊಡವಿ ಮಲಗಲೇ ಎಂದುಕೊಂಡರೆ ಜಿಗಣೆಗಳ ಕಾಟ. ಇಲ್ಲಿ ಜಿಗಣೆಗಳು ಹೆಚ್ಚು. ಅವು ಒಮ್ಮೆ ರಕ್ತ ಹೀರತೊಡಗಿದರೆ ಮುಗಿಯಿತು. ನಿಸರ್ಗ ನೋಡುತ್ತ ಜಿಗಣೆಗಳತ್ತ ಎಚ್ಚರಿಕೆ ವಹಿಸುತ್ತ ಕಾಡಿನಲ್ಲಿ ಸಂಚರಿಸತೊಡಗಿದರೆ. ಒಮ್ಮೊಮ್ಮೆ ಕಾಡು ಪ್ರಾಣಿ ಯಾವುದಾದರೂ ಬಂದರೆ ಎಂಬ ಭಯವೂ ಕಾಡಿತು.ಏನೇ ಇರಲಿ ಇದನ್ನು ಒಂದೇ ದಿನಕ್ಕೆ ನೋಡದೇ ಇರುವ ಮೂರು ದಿನಗಳಲ್ಲಿ ಸುತ್ತಮುತ್ತಲಿನ ಪ್ರದೇಶಗಳನ್ನು ನೋಡಿದರಾಯಿತು.ಎಂದು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ಹೊರಟೆ.

ಜನೇವರಿ 5 2018 ರಂದು ಲೋಕಾರ್ಪಣೆಗೊಂಡ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ತೇಜಸ್ವಿಯವರ ನೆನಪಿನ ಅನಾವರಣವನ್ನು ಹೊತ್ತು ನಿಂತಿದೆ. ಒಂದೆಡೆ ಕಾರ್ಯಾಲಯ ಮತ್ತೊಂದೆಡೆ ಸಭಾಂಗಣ.

ವಿದ್ಯಾರ್ಥಿಗಳಿಗೆ ಗ್ರಂಥಾಲಯ.ಪ್ರಕೃತಿ ವೀಕ್ಷಿಸಲು ಗಾಜಿನ ಪರದೆಯಂತೆ ಕಂಗೊಳಿಸುವ ಕೊಠಡಿ ಒಂದೇ ಎರಡೇ ಇದು ನಿಜಕ್ಕೂ ಪ್ರಕೃತಿಯಲ್ಲಿ ನೆಲೆನಿಂತ ಕಟ್ಟಡ. ಅಧ್ಯಯನಶೀಲ ವಿದ್ಯಾರ್ಥಿಗಳು ಮತ್ತು ಆಸಕ್ತರಿಗೆ ಜ್ಞಾನಾರ್ಜನೆಗೆ ಅನುವು ಮಾಡಿಕೊಡಬೇಕೆಂಬ ಉದ್ದೇಶದಿಂದ ಇದನ್ನು ನಿರ್ಮಿಸಲಾಗಿದೆ. ಈಗಾಗಲೇ ಇಲ್ಲಿ ಚಾರಣ ಶಿಬಿರ ಗಾಂಧಿ ವಿಚಾರಧಾರೆ ಕಮ್ಮಟದಂತಹ ಚಟುವಟಿಕೆಗಳು ನಡೆದಿದ್ದು. ಇಲ್ಲಿ ತೇಜಸ್ವಿಯವರು ತೆಗೆದ ಛಾಯಾಚಿತ್ರಗಳನ್ನು ಗೋಡೆಗೆ ಹಾಕಲಾಗಿದ್ದು ಅವರ ಪಕ್ಷಿಗಳ ಪ್ರೇಮವನ್ನು ಇಲ್ಲಿ ಕಾಣಬಹುದು.

ಇನ್ನು ಇದನ್ನು ನೋಡಿ ಬಸ್ ನಿಲ್ದಾಣದೆಡೆಗೆ ಆಗಮಿಸಿದರೆ ಕೊಟ್ಟಿಗೆಹಾರದಿಂದಲೇ ಪ್ರಸಿದ್ದ “ನೀರ್ ದೋಸೆ”ಯ ಸವಿರುಚಿ ಸವಿಯಬಹುದು.ಮಳೆಗಾಲ ಚಳಿಗಾಲ ಪ್ರವಾಸಕ್ಕೆ ಪ್ರಸಿದ್ದವಾದ ಕೊಟ್ಟಿಗೆಹಾರದಲ್ಲಿ ಪಾನ ಪ್ರಿಯರಿಗೆ ಸ್ವಾದಭರಿತ ಕಾಫಿ ಹಾಗೂ ಟೀ ಎಳನೀರು, ನೀರುದೋಸೆ, ಮೆಣಸಿನಕಾಯಿ ಭಜ್ಜಿ, ಮತ್ತಿತರ ಖಾದ್ಯಗಳು ಇಲ್ಲಿನ ಆಕರ್ಷಣೆಯಾಗಿದ್ದು.ಮಲೆನಾಡಿನ ವಿವಿಧ ಬೆಳೆಗಳಾದ ಕಾಳು ಮೆಣಸು, ಜೇನುತುಪ್ಪ.ಕಾಫಿ ಪುಡಿ, ಏಲಕ್ಕಿ, ಕೆಳಗೂರು ಟೀ, ಮುಂತಾದ ಪದಾರ್ಥಗಳು ಕೊಟ್ಟಿಗೆಹಾರದ ಅಂಗಡಿಗಳಲ್ಲಿ ಸಿಗುತ್ತವೆ.

ಇನ್ನು ನೀರ್ ದೋಸೆಯನ್ನು ಹಂಚಿಗೆ ಹಾಕುವುದನ್ನೇ ನೋಡುತ್ತ ನಿಂತ ನನಗೆ ಅವರು ಅದನ್ನು ಮಾಡುವ ಪರಿ ಹಿಡಿಸಿತು. ಸೌಟಿನಲ್ಲಿ ಸ್ವಲ್ಪ ನೀರು ದೋಸೆಯ ಹಿಟ್ಟನ್ನು ಎಣ್ಣೆ ಸವರಿಗೆ ಹಂಚಿಗೆ ಒಮ್ಮಲೇ ಸುರಿಯುವರು. ಅದು ಇಡೀ ಹಂಚನ್ನು ಆವರಿಸುವ ಪರಿ ಸೋಜಿಗವಾಗಿರುತ್ತದೆ. ಇನ್ನು ನೀರ್ ದೋಸೆಯನ್ನು ಸಸ್ಯಾಹಾರಿಗಳು ಕಾಯಿ ಚಟ್ನಿ ಜೊತೆಗೆ ತಿಂದರೆ ಮಾಂಸಾಹಾರಿಗಳು ಕೋಳಿ ಮಟನ್ ಮೀನುಸಾರಿನೊಂದಿಗೆ ತಮ್ಮ ತಮ್ಮ ಇಷ್ಟದಂತೆ ಸವಿಯುವರು. ಈ ನೀರ್ ದೋಸೆ ಸಿನಿಮಾ ಆಗಿಯೂ ಕೂಡ ಪ್ರಸಿದ್ದವಾಗಿದೆ.

ಇಲ್ಲಿಂದ ಹತ್ತಿರದಲ್ಲಿ ಮೂಡಿಗೆರೆ ತಾಲೂಕಿನ ದೇವರಮನೆ ಎಂಬ ಸ್ಥಳವಿದೆ.ಬಣಕಲ್ ಮೂಲಕ ಇಲ್ಲಿಗೆ ಹೋಗಬೇಕು. 1400 ವರ್ಷಗಳ ಹಳೆಯದಾದ ದೇವರಮನೆ. ಬಣಕಲ್ ಮೂಲಕ ಹಾಯ್ದು ಕಾಫಿ ಮನೆಯ ಹತ್ತಿರದಿಂದ ಮೂಡಿಗೆರೆಗೆ ಹೋಗಬೇಕು. ಮೂಡಿಗೆರೆಯಲ್ಲಿರುವುದು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಮನೆ “ನಿರುತ್ತರ”.ಹೆಸರಿಗೆ ತಕ್ಕಂತೆ ಈಗ ನಮಗೆ ತೇಜಸ್ವಿಯಿಲ್ಲದ ನಿರುತ್ತರದಲ್ಲಿ ಅವರ ಪತ್ನಿ ರಾಜೇಶ್ವರಿಯವರು ಪೂರ್ಣಚಂದ್ರ ತೇಜಸ್ವಿಯವರ ನೆನಪನ್ನು ಹೊತ್ತು ತರುವರು.ಪೂರ್ಣನಿಲ್ಲದ ಅವರ ಮನೆಯ ಸುತ್ತಲೆಲ್ಲ ಓಡಾಡಿದೆ.

ಆ ಕೆರೆ, ಕೆರೆಯಲ್ಲಿ ಓಡಾಡುವ ಹಂಸಗಳು. ಅವರ ಕತೆಗಳಲ್ಲಿ ಅನಾವರಣಗೊಂಡ ಕಾಡು,ಅವರು ಕುಳಿತುಕೊಳ್ಳುತ್ತಿದ್ದ ಕುರ್ಚಿ, ಓಡಾಡುತ್ತಿದ್ದ ಸ್ಕೂಟರ್,ತೇಜಸ್ವಿ ಬದುಕಿದ್ದ ಸಂದರ್ಭ ಒಂದು ಸಲ ಅವರನ್ನು ಭೇಟಿ ಮಾಡಿದ್ದೆ.ಮಾತನಾಡಿದ್ದೆ.ಅವರ ನಿಷ್ಠುರ ಮಾತು ಗಟ್ಟಿತನ ಸದಾ ಈ ಹಸುರಿನಲ್ಲಿ ಜೀವನ ಕಳೆದ ಅವರ ಕರ್ವಾಲೋ ಕಾದಂಬರಿ,ಜುಗಾರಿಕ್ರಾಸ್ ಎಲ್ಲವೂ ನೆನಪಾಗಿದ್ದು.

ರಾಜೇಶ್ವರಿ ಕೂಡ ಅವರ ನೆನಪನ್ನು ಮರುಕಳಿಸಿದರು. ಅವರ ಬಗ್ಗೆ ನಾನು ಕೇಳಿದ ಸಂಗತಿ ಅವರು ಪ್ರೀತಿಸಿದ ಗೆಳತಿ ರಾಜೇಶ್ವರಿ. ಅವರ ಮೈಸೂರು ವಿಶ್ವವಿದ್ಯಾಲಯದಲ್ಲಿ ಓದಿದ್ದ ನೆನಪುಗಳ ಕುರಿತು ರಾಜೇಶ್ವರಿಯವರ ಒಡನಾಟದ ಸಂಗತಿಗಳು ಇಲ್ಲಿ ನೆನಪಾದವು. ಒಂದು ಸಲ ಪತ್ನಿ ರಾಜೇಶ್ವರಿಯವರ ತವರು ಮನೆ ಬೂತನಕಾಡಿಗೆ ಬಂದಿದ್ದರಂತೆ, ಅಲ್ಲಿನ ಸೌಂದರ್ಯ ಸೊಬಗು ಕಂಡು ಇನ್ಮುಂದೆ ನಾನು ಕಾಡಿನಲ್ಲೇ ಬದುಕುತ್ತೇನೆ ಎಂದು ನಿರ್ಧರಿಸಿದರಂತೆ, ಅವರ ತಂದೆಯ ಕುಪ್ಪಳ್ಳಿ ಕೂಡ ಮಲೆನಾಡಿನಲ್ಲಿ ಇರುವ ಕಾರಣ ಆ ಪರಿಸರ ಅವರಲ್ಲಿ ಗಾಢವಾಗಿ ಪ್ರಭಾವ ಬೀರಿತ್ತು.ಹೀಗಾಗಿ ಅವರು ನಿರುತ್ತರಕ್ಕೆ ಬರುವಂತಾಯಿತು.

ಅಲ್ಲಿ ತಮಗೆ ಅನುಕೂಲವಾಗುವಂತಹ ವಾತಾವರಣ ಸೃಷ್ಟಿಸಿಕೊಂಡರು. ಸ್ವತಃ ಕೃಷಿಕರಾಗಿ ಕಾಲಕಳೆಯುತ್ತ,ಬರವಣಿಗೆಯಲ್ಲಿ ತೊಡಗಿದರು ತೇಜಸ್ವಿ.ಕಂಪ್ಯೂಟರ್ ತಂತ್ರಾಂಶದಲ್ಲಿ ಅವರ ಪ್ರಯೋಗಶೀಲತೆ ನನ್ನನ್ನು ಕಾಡಿತು. ಅದರಲ್ಲೂ ಅವರ ಪೋಟೋಗ್ರಫಿ ಅವರ ಪೋಟೋಗಳನ್ನು ನೋಡಿದಾಗಲಂತೂ ಅಚ್ಚರಿಯಾಗದಿರದು.ಇವುಗಳನ್ನೆಲ್ಲ ಹೊತ್ತು ತೇಜಸ್ವಿಯವರ ಪತ್ನಿ ರಾಜೇಶ್ವರಿ ನೀಡಿದ ಅಲ್ಲಿನ ಹಣ್ಣಿನ ವಿಶಿಷ್ಟ ಜ್ಯೂಸ್ ಮತ್ತು ಹಣ್ಣುಗಳನ್ನು ಸೇವಿಸಿ ಹೊರಬರುವಾಗ “ನಿರುತ್ತರ” ಕಣ್ಮುಂದೆ ಕಟ್ಟಿತು.ಕಾಡುಗಳು ತೆರೆದಿಟ್ಟ ಟ್ರೆಜರಿ,ಪ್ರಕೃತಿಯನ್ನು ಉಳಿಸಿ ಎನ್ನುವ ಅವರ ಕಾಳಜಿ ನೋಡುತ್ತ ಮರಳಿದೆ.

ಚಾರ್ಮಾಡಿ ಘಾಟ್ ನೋಡಲೇಬೇಕು.ಅದೊಂದು ರುದ್ರರಮಣೀಯ ಸ್ಥಳ.ಪಶ್ಚಿಮಘಟ್ಟ ಸುಂದರ ತಾಣ ಬೆಳ್ತಂಗಡಿಯಿಂದ ಕೊಟ್ಟಿಗೆಹಾರದವರೆಗೂ 23.5.ಕಿ.ಮೀ ಪಯಣದ ಆ ಹಾದಿ ಹೆಬ್ಬಾವಿನಂತಹ ತಿರುವುಗಳನ್ನು ಒಳಗೊಂಡಿದೆ.ಭಯಾನಕ ಎನಿಸುವಷ್ಟು ತಿರುವುಗಳಲ್ಲಿ ಸಂಚರಿಸುವ ವಾಹನಗಳು ಎಲ್ಲಿ ಅಪಘಾತವನ್ನು ಸೃಷ್ಟಿಸುತ್ತವೆಯೋ ಎಂಬ ಭಯದಿಂದಲೇ ಕುಳಿತು ಇಡೀ ಪ್ರಕೃತಿಯನ್ನು ನೋಡುತ್ತ ಸಾಗಿದೆ.ದಾರಿಯಲ್ಲಿ ಸಿಗುವ ಅಣ್ಣಪ್ಪ ಸ್ವಾಮಿ ದೇವಾಲಯದ ಬಳಿ ಸ್ವಲ್ಪ ಸಮಯ ಬಸ್ ನಿಲ್ಲಿಸಿ ದೇವರ ದರ್ಶನ ತೆಗೆದುಕೊಂಡೇ ಇಲ್ಲಿ ಸಾಗುವವರು ಸಾಗುವುದು ರೂಢಿ.ವಾಹನ ಸವಾರರು ಘಾಟಿಯ ಸಂಚಾರದಲ್ಲಿ ಯಾವ ಅವಗಡಗಳು ಬಾರದಿರಲಿ ಎಂದು ಭಕ್ತಿಯಿಂದ ನಮಸ್ಕರಿಸುವುದು ವಾಡಿಕೆ.ಸುಮಾರು ನಲವತ್ತೈದು ನಿಮಿಷಗಳ ಈ ಪ್ರಯಾಣ ಅಲ್ಲಿ ಹರಿಯೋ ಜಲಧಾರೆಗಳು ಅಲ್ಲಿ ಸೆಲ್ಪಿ ತಗೆದುಕೊಳ್ಳುವವರು. ರಸ್ತೆಯ ಒಂದು ಬದಿಗೆ ತಮ್ಮ ವಾಹನಗಳನ್ನು ನಿಲ್ಲಿಸಿ ಜಲಪಾತಗಳ ಸೊಬಗನ್ನು ಸವಿಯುತ್ತಿರುವುದನ್ನು ಕಂಡಾಗ ಆ ನೀರಿಗೆ ಮೈಯೊಡ್ಡಬಾರದೇ ಎನಿಸದಿರದು.

ಆದರೆ ಜಿಗಣೆಗಳ ಎಚ್ಚರಿಕೆಯು ಅಲ್ಲುಂಟು.ಜಿಗಣೆಗಳು ಶರೀರಕ್ಕೆ ಅಂಟಿಕೊಳ್ಳದಂತೆ ಎಚ್ಚರಿಕೆ ವಹಿಸಿ ಈ ಸ್ಥಳವನ್ನು ನೋಡಬೇಕು ಅಲ್ಲಿನ ಸೌಂದರ್ಯವನ್ನು ಅನುಭವಿಸಬೇಕು. ಹಾದಿಯುದ್ದಕ್ಕೂ ದಟ್ಟ ಮಂಜು. ನಿಸರ್ಗಮಾತೆಯ ನೈಜ ಸೊಬಗು ಅನಾವರಣಗೊಂಡ ಈ ತಾಣ ಎಷ್ಟು ನೋಡಿದರೂ ಸಾಕೆನಿಸದು. ಈ ಮಳೆಗಾಲದಲ್ಲಂತೂ ವರ್ಣೀಸಲು ಪದಗಳು ಸಾಲದು. ಎಲ್ಲೆಂದರಲ್ಲಿ ಬೆಟ್ಟಗಳಲ್ಲಿ ಸಾಲು ಸಾಲು ಜಲಧಾರೆಗಳು. ಅದೊಂದು ರೀತಿಯ ಹಬ್ಬ ಕವಿದ ವಾತಾವರಣ. ಕೊಟ್ಟಿಗೆಹಾರದಿಂದ ಚಾರ್ಮಾಡಿಗೆ ಹೋಗುವ ರಸ್ತೆಯಲ್ಲಿ ಮಲಯಮಾರುತ ಅತಿಥಿಗೃಹದ ನಂತರ ಆಲೇಖಾನ್ ಎಸ್ಟೇಟ್ ಬಳಿ ಎಡಗಡೆ ಇರುವ ಒಂದು ಬಸ್ ತಂಗುದಾಣದ ಹಿಂಬಾಗದಲ್ಲಿ ಜಲಪಾತವಿದೆ. ಇದನ್ನು ಆಲೇಖಾನ್ ಜಲಪಾತ ಎಂದೇ ಕರೆಯುವರು. ಸುಮಾರು 50 ಅಡಿಗಳಷ್ಟು ಎತ್ತರವಿರುವ ಈ ಜಲಧಾರೆಯ ಸೊಬಗು ಮನಮೋಹಕ. ಇವುಗಳನ್ನೆಲ್ಲ ನೋಡಿ ಮೂಡಿಗೆರೆ ತಾಲೂಕಿನ ದೇವರಮನೆ ಎಂಬ ಸ್ಥಳಕ್ಕೆ ಭೇಟಿ ನೀಡಿ.

ಇದು ಮೂಡಿಗೆರೆಯಿಂದ 20 ಕಿ.ಮೀ ಅಂತರವಿದೆ.ಬಣಕಲ್ ಹೋಬಳಿಯಲ್ಲಿದೆ.ಪುರಾತನ ಕಾಲದಲ್ಲಿ ದೇವರುಗಳು ಈ ಸ್ಥಳಕ್ಕೆ ಬಂದು ವಿಶ್ರಾಂತಿ ಪಡೆಯುತ್ತಿದ್ದರಂತೆ,ಕೈಲಾಸದಲ್ಲಿ ಶಿವ ಬಸವನನ್ನು ಕರೆದು “ಭೂಲೋಕಕ್ಕೆ ಹೋಗಿ ಜನರು ಸುಖವಾಗಿದ್ದಾರೆಯೇ ನೋಡಿಕೊಂಡು ಬಾ” ಎಂದು ಕಳಿಸಿದನಂತೆ. ಆಗ ಈ ಪ್ರದೇಶದಲ್ಲಿ ಬರಗಾಲ ತಾಂಡವವಾಡುತ್ತಿತ್ತು.ಜನ ತಾವೇ ಉಳುಮೆ ಮಾಡುತ್ತಿದ್ದರಂತೆ.

ಆದರೆ ಬಸವ ಇದನ್ನು ಮರೆಮಾಚಿ ಜನರು ಸುಖವಾಗಿದ್ದಾರೆ ಎಂದು ಹೇಳಿತಂತೆ. ಮುಂದೆ ನಿಜವನ್ನರಿತ ಶಿವನು ಬಸವನಿಗೆ ಇನ್ನು ನೀನು ಆ ಸ್ಥಳಕ್ಕೆ ಹೋಗಿ ಜನರಿಗೆ ಉಳುಮೆಯಲ್ಲಿ ಸಹಾಯ ಮಾಡು ಎಂದು ಆಜ್ಞಾಪಿಸಿದನಂತೆ.ಅದನ್ನು ಕಾಣಲು ಶಿವ ಬೈರವನ ರೂಪದಲ್ಲಿ ಭೂಮಿಗೆ ಬಂದನು.ದೇವರೇ ಭೂಮಿಗೆ ಬಂದಿದ್ದರಿಂದ ದೇವರಮನೆಯಾಯಿತು.

ದೊಡ್ಡದಾದ ವಿಶಾಲ ಪ್ರಾಂಗಣ ಹೊಂದಿದ ದೇವಾಲಯ ಅಲ್ಲೊಂದು ಕೆರೆ, ದೇವಾಲಯದ ವಾಸ್ತುಶಿಲ್ಪ ಕೂಡ ಅದ್ಬುತ. ವೆಂಕಣ್ಣನೆಂಬ ಶಿಲ್ಪಿ ನಿರ್ಮಿಸಿದ್ದನೆಂದು ಪ್ರತೀತಿ ಇದೆ. ಕಾಲಬೈರವೇಶ್ವರ ದೇವಾಲಯ. ಅಲ್ಲಿಂದ ಒಂದು ಕಿ.ಮೀ ಅಂತರದಲ್ಲಿ ಬಟ್ಲುಬಾವಿ ಎಂಬ ಬಾವಿಯಿದೆ. ಅದು ಎಂದಿಗೂ ಬತ್ತದ ಬಾವಿ ಎಂದೂ ಹೇಳುವರು.ವನಸ್ಪತಿಗಳ ಔಷಧಿಯಂತ ಗುಣವನ್ನು ಈ ನೀರು ಹೊಂದಿದೆಯಂತೆ.

ಈ ಬಟ್ಟಲು ಬಾವಿಯ ಬಗ್ಗೆ ದೃಷ್ಟಾಂತವೊಂದಿದೆ. ಭುವಿಗೆ ಬಂದ ಬೈರವೇಶ್ವರನು ಇಲ್ಲಿ ನೆಲೆಸಿದನು.ಆಗ ಜನ ವಕ್ಕಲಿಗರು ಬೈರವನ ಪೂಜೆಗೆ ತೊಡಗುವರು. ಯಾವುದೋ ಒಂದು ಸಂದರ್ಭ ವಕ್ಕಲಿಗರ ಮನೆತನವೆಲ್ಲ ನಶಿಸಿ ಹೋಗಿ ಆ ಮೆನತನದಲ್ಲಿ ಒಬ್ಬ ತಾಯಿ 12 ವರುಷದ ಬಾಲಕ ಮಾತ್ರ ಉಳಿಯುತ್ತಾರೆ. ಮುಂದೆ ಈ ಬಾಲಕ ತಪಸ್ಸಿಗಿಳಿಯುತ್ತಾನೆ. ಹಾಗೂ ಜಲದೇವತೆ ಆತನಿಗೆ ಪ್ರತ್ಯಕ್ಷಳಾಗಿ ಕೈಗೊಂದು ತೆಂಗಿನ ಬಟ್ಟಲವನ್ನಿಟ್ಟು “ಇದರಿಂದ ಈ ಬಾವಿಯಲ್ಲಿ ನೀರು ತಗೆದುಕೊಂಡು ಹೋಗಿ ಶಿವನಿಗೆ ಪೂಜಿಸು”ಎಂದು ಹೇಳುತ್ತಾಳೆ.ಮುಂದೆ ಇದೇ ಬಟ್ಟಲುಬಾವಿ ಎಂದು ಹೆಸರು ಪಡೆಯಿತಂತೆ. ಹೀಗೆ ಪ್ರಮುಖ ತಾಣಗಳನ್ನು ಚಾರ್ಮಾಡಿ ಘಾಟ್ ಕೊಟ್ಟಿಗೆಹಾರ ಮೂಡಿಗೆರೆ ಒಳಗೊಂಡಿದ್ದು. ಇಲ್ಲಿ ವಸತಿಗಾಗಿ ಹೊಟೇಲ್ ಸೌಲಭ್ಯ ರೆಸಾರ್ಟ ಸೌಲಭ್ಯಗಳಿವೆ. ಕೊಟ್ಟಿಗೆಹಾರ ಮತ್ತು ಮೂಡಿಗೆರೆ ಎರಡೂ ಸ್ಥಳಗಳಲ್ಲಿ ಸಾಕಷ್ಟು ವಾಹನ ಸೌಲಭ್ಯ ವಸತಿ ಸೌಲಭ್ಯವುಂಟು. ಹತ್ತಿರದಲ್ಲಿ ಧರ್ಮಸ್ಥಳ ಇರುವುದರಿಂದ ಅಲ್ಲಯಂತೂ ವಸತಿಗೆ ಕೊರತೆಯಿಲ್ಲ. ಈ ಮಾರ್ಗ ಪ್ರವಾಸಕ್ಕೆ ಹೇಳಿ ಮಾಡಿಸಿದ ಸ್ಥಳ. ಯಾವುದೇ ಸಮಯದಲ್ಲಿ ಬಂದರೂ ನಿಸರ್ಗ ಕಣ್ತುಂಬಿಕೊಳ್ಳಲು ಯಾವ ಕೊರತೆಯೂ ಕಾಣಿಸದು.


ವೈ.ಬಿ.ಕಡಕೋಳ
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ-591117
ತಾಲೂಕಃಸವದತ್ತಿ ಜಿಲ್ಲೆಃಬೆಳಗಾವಿ
8971117442 9449518400

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group