ಬೀದರ – ಜಗತ್ತನ್ನೇ ತಲ್ಲಣಗೊಳಿಸಿದ್ದ ಮಹಾಮಾರಿ ಕೊರೊನಾ ವೈರಸ್ ಅನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತದಲ್ಲಿ ಎರಡನೇ ಹಂತದ ಕೊರೊನಾ ವ್ಯಾಕ್ಸಿನ್ ಪ್ರಕ್ರಿಯೆ ಆರಂಭವಾಗಿದ್ದು, ಯಾವುದೇ ಭಯ, ಆತಂಕವಿಲ್ಲದೇ ಲಸಿಕೆ ಪಡೆದುಕೊಳ್ಳುವಂತೆ ಬೀದರ್ ಜಿಲ್ಲೆಯ ಜನತೆಗೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ಅವರು ಅವರು ಮನವಿ ಮಾಡಿದ್ದಾರೆ.
ಬೀದರ್ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ (ನೂರು ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆ ಬೀದರ್) ಕೊರೊನಾ ವ್ಯಾಕ್ಸಿನ್ ಪಡೆದಕೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ಮಹಾಮಾರಿಯಿಂದ ವಿಶ್ವದ ಜನ ತತ್ತರಿಸಿದ್ದಾರೆ. ಅನೇಕರು ಕೊರೊನಾ ವೈರಸ್ ತಗುಲಿದ ಬಳಿಕ ಗುಣಮುಖರಾಗಿದ್ದಾರೆ. ಅನೇಕರು ಸಾವನ್ನಪ್ಪಿದ್ದಾರೆ. ಈ ಸಂದರ್ಭದಲ್ಲಿ ಆಶಾದಾಯಕವೆಂಬಂತೆ ಕೊರೊನಾ ಲಸಿಕೆ ಬಂದಿದ್ದು, ಬೀದರ್ ಜಿಲ್ಲೆಯ ಜನತೆ ಲಸಿಕೆ ಪಡೆದುಕೊಳ್ಳುವ ಮೂಲಕ ಕೊರೊನಾದಿಂದ ದೂರವಿರಬೇಕಾಗಿದೆ.
ಈ ಹಿಂದೆ ನನಗೂ ಕೊರೊನಾ ವೈರಸ್ ತಗುಲಿತ್ತು, ವೈದ್ಯರು ನೀಡಿದ ಚಿಕಿತ್ಸೆ, ಭವಾನಿ ಮಾತೆಯ ಕೃಪೆ, ಎಲ್ಲರ ಹಾರೈಕೆ ಆಶೀರ್ವಾದದಿಂದ ನಾನು ಗುಣಮುಖನಾಗಿದ್ದೇನೆ. ಈಗ ನಾನು ಕೂಡ ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ಪಡೆದುಕೊಂಡಿದ್ದೇನೆ. ಲಸಿಕೆ ಪಡೆದ ಬಳಿಕ ನನ್ನಲ್ಲಿ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿಲ್ಲ. ತಾವೆಲ್ಲರೂ ಭಯಪಡದೆ ಧಾರಾಳವಾಗಿ ಲಸಿಕೆ ಪಡೆದುಕೊಳ್ಳಿ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿ.ಜಿ ರೆಡ್ಡಿ, ಡಿಸ್ಟ್ರಿಕ್ಟ್ ಸರ್ಜನ್ ರತಿಕಾಂತ್ ಸ್ವಾಮಿ, ಡಾ. ಸೋಹಿಲ್, ಡಾ. ನಾಗರಾಜ್, ಡಾ. ಸರೋಜಾ ಪಾಟೀಲ್, ಡಾ. ಸುಹೀನ್ ಪಾಟೀಲ, ಡಾ. ಪಾಜಿಲ್, ರೀನಾ ಶರ್ಮಾ ಸೇರಿದಂತೆ ಅನೇಕರಿದ್ದರು.
ವರದಿ: ನಂದಕುಮಾರ ಕರಂಜೆ
Times of ಕರ್ನಾಟಕ, ಬೀದರ