ಒಂದು ಬೇಜವಾಬ್ದಾರಿ ಹೇಳಿಕೆಯೊಂದರಲ್ಲಿ ಬ್ರೆಝಿಲ್ ಅಧ್ಯಕ್ಷ ಜಾಯರ್ ಬೊಲ್ಸೋನಾರೋ ಅವರು, ಫೈಝರ್ ಬಯೋ ಕಂಪನಿಯ ಕೊರೋನಾ ಲಸಿಕೆಯಿಂದ ಜನರು ಮೊಸಳೆಯಾಗಬಹುದು, ಹೆಂಗಸರಿಗೆ ಗಡ್ಡ ಬರಬಹುದು ಎಂದು ಹೇಳಿದ್ದಾಗಿ ಎಎಫ್ ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಲಸಿಕೆಯ ದುಷ್ಪರಿಣಾಮಗಳ ಬಗ್ಗೆ ತಾನು ಹೊಣೆಗಾರನಲ್ಲ ಎಂದು ಫೈಜರ್ ಕಂಪನಿಯು ಹೇಳಿದ ಬೆನ್ನಲ್ಲೇ ಅಧ್ಯಕ್ಷ ಬೊಲ್ಸೋನಾರೋ ಪ್ರತಿಕ್ರಿಯಿಸಿ, ” ನೀವು ಮೊಸಳೆಯ ರೂಪ ಪಡೆದರೆ ಅದು ನಿಮ್ಮ ಸಮಸ್ಯೆ ” ಎಂದಿದ್ದಾರೆ.
“ನೀವು ಅತಿಮಾನವನಾದರೆ, ಹೆಂಗಸರಿಗೆ ಗಡ್ಡ ಬಂದರೆ ಅಥವಾ ಗಂಡು ಹೆಂಗಸರ ದನಿಯಲ್ಲಿ ಮಾತನಾಡತೊಡಗಿದರೆ ಅವರೇನು ಮಾಡಲಾರರು” ಎಂದು ಅದ್ಯಕ್ಷರು ವ್ಯಂಗ್ಯ ಮಾಡಿದ್ದಾರೆ.
ಲಸಿಕೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬೊಲ್ಸೊನಾರೋ, ಲಸಿಕೆ ಉಚಿತವಿದೆ ಆದರೆ ಕಡ್ಡಾಯವಲ್ಲ ಎಂದರು. ಆದರೆ ಆ ದೇಶದ ಸುಪ್ರೀಮ್ ಕೋರ್ಟು ಲಸಿಕೆ ಕಡ್ಡಾಯವಾಗಿದೆ ಆದರೆ ಅದನ್ನು ಹಾಕಿಸಿಕೊಳ್ಳಲು ಯಾವುದೇ ಒತ್ತಡ ಹೇರಲಾಗದು ಎಂದಿದೆ.
ತಾನು ಮಾತ್ರ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿದಿರುವ ಅಧ್ಯಕ್ಷ ಬೊಲ್ಸೋನಾರೋ, ಇದನ್ನು ನಾನು ಮೂರ್ಖರಿಗೆ, ಹೆಡ್ಡರಿಗೆ ಹೇಳಿದ್ದೇನೆ ಎಂದುಕೊಳ್ಳಬಹುದು. ನಾನು ಈಗಾಗಲೇ ಕೊರೋನಾ ಪಾಸಿಟಿವ್ ಆಗಿದ್ದೆ ಈಗ ನಿರೋಧಕ ಶಕ್ತಿ ಬೆಳೆಸಿಕೊಂಡಿದ್ದೇನೆ . ನಾನೇಕೆ ಲಸಿಕೆ ಹಾಕಿಕೊಳ್ಳಬೇಕು ? ಎಂದು ಪ್ರಶ್ನಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎಫ್ ಪಿ ವರದಿ ಮಾಡಿದೆ.