ಜೀವನದಲ್ಲಿ ಗೆಳೆತನಕ್ಕೆ ಮಹತ್ತರವಾದ ಸ್ಥಾನವಿದೆ. ಮಾನವ ಎಂದಿಗೂ ಸಂಘಜೀವಿ. ಉತ್ತಮ ಗೆಳೆಯ/ಗೆಳತಿಯರ ಗುಂಪು ಉತ್ತಮ ಸಾಧನೆ ಮತ್ತು ಭವಿಷ್ಯವನ್ನು ಸೃಷ್ಟಿಸಿರುವ ಅನೇಕ ಉದಾಹರಣೆಗಳಿವೆ. ಗೆಳೆತನವೂ ಗಂಡು ಹೆಣ್ಣು ಎಂಬ ಬೇಧವಿಲ್ಲದೆ ಉಂಟಾಗುವ ರಕ್ತ ಸಂಬಂಧವನ್ನು ಮೀರಿದ ಒಂದು ಬಂಧನವಾಗಿದೆ. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಗೆಳೆತನದ ಬಗ್ಗೆ ಸಿಹಿ ಮತ್ತು ಕಹಿ ಅನುಭವಗಳಿರುತ್ತವೆ.
ಅಂದು ನಮ್ಮೂರಿನ ಜಾತ್ರೆ, ಅಮ್ಮನ ಹಣದ ಡಬ್ಬಿಯಿಂದ ಹಣ ತಂದು ಒಂದೇ ಬಣ್ಣದ ಅಂಗಿ ಧರಿಸಿ,ಒಂದೇ ಬೀಡಿಯನ್ನು ಎಲ್ಲರೂ ಕೂಡಿ ಕದ್ದು ಸೇದುತ್ತಿರಲು ಅಪ್ಪನಿಂದ ಒದೆ ತಿಂದ ಘಳಿಗೆ ಮರೆಯಲು ಸಾಧ್ಯವೆ?
ಬಣ್ಣದ ಚಸ್ಮಾ, ಜೀನ್ಸ್ ಪ್ಯಾಂಟ್, ಟಿ -ಶರ್ಟ್ ಗೆಳೆಯನಿಗೆ ತೊಡಿಸಿ ಸಂಭ್ರಮದಿ ಹುಟ್ಟುಹಬ್ಬ ಮಾಡಿ ಹರ್ಷಿಸುವವನು ನಿಜವಾದ ಗೆಳೆಯ.
ಮುನಿಸಿಕೊಂಡಾಗ ದೂರ ತಳ್ಳಿ ಹೋಗುವ, ವಿರೋಧಿ ತಂಡದ ಹುಡುಗರು ನನ್ನ ಹೊಡೆಯಲು ಬಂದಾಗ, ಕೋಪ ಮುನಿಸು ಮರೆತು ನನ್ನ ಪರವಾಗಿ ಅವರೊಂದಿಗೆ ಜಗಳವಾಡುವವ, ಕಾಲು ಜಾರಿ ಕೆಳಗೆ ಬಿದ್ದಾಗ ನನ್ನನ್ನು ನೋಡಿ ಗೇಲಿ ಮಾಡುತ ನಕ್ಕು ನಿಧಾನಕ್ಕೆ ಮೇಲೆತ್ತಿ ಧೈರ್ಯ ತುಂಬುವವ, ಒಂದೇ ಬೈಕ್ ಮೇಲೆ 5 ಗೆಳೆಯರು ಸವಾರಿ ಮಾಡಿ ಕಾಡಿನ ನಡುವೆ ಪೆಟ್ರೋಲ್ ಮುಗಿದಾಗ ದೆವ್ವಗಳ ಭಯದಿಂದ ಗಡಿಬಿಡಿಯಲ್ಲಿ ಎಲ್ಲರೂ ಗಾಡಿ ಬಿಟ್ಟು ಓಡುವ,
35 ಕಿಲೋ ತೂಕ ಇರುವ ಇವನು ಗೆಳೆಯನ ಅಪ್ಪನಿಗೆ ಅಪಘಾತವಾದಾಗ ರಕ್ತದಾನ ಮಾಡುವ ಸಾಹಸ ಮಾಡುವವನು.
ಗೆಳೆಯನ ಸಹೋದರಿಯ ಮದುವೆಯಲ್ಲಿ ಹಗಲು ರಾತ್ರಿ ಕೆಲಸ ಮಾಡಿ ಸಂಭ್ರಮಿಸುವವ, ಗೆಳೆಯನ ಮದುವೆಯ ದಿನ ಬಿಕ್ಕಿ ಬಿಕ್ಕಿ ಅಳುವವ(ಆತ್ಮೀಯ ಗೆಳೆಯ ಹೆಂಡತಿ ಪಾಲಾದ ಎನ್ನುವ ಭಯ ), ದುಃಖದಲ್ಲಿ ದುಃಖಿಸಿ, ಖುಷಿಯಲ್ಲಿ ಖುಷಿ ಖುಷಿಯಾಗಿರುವವ, ಇದ್ದಾಗ ಕೈ ಹಿಡಿದು, ಏನು ಇಲ್ಲದಿದ್ದಾಗ ಮೇಲಕ್ಕೆತ್ತುವವ ನಿಜವಾದ ಗೆಳೆಯ.
ಇಲ್ಲಿ ಯಾವುದೆ ರಕ್ತಸಂಬಂಧ ಇಲ್ಲ, ಭೇದ ಭಾವ, ಜಾತಿ ಮತ, ಆಸ್ತಿ ಅಂತಸ್ತು ಯಾವುದು ಇಲ್ಲ, ಎಲ್ಲದಕ್ಕೂ ಮುಕ್ತ ಅವಕಾಶ, ಹೃದಯಗಳ ನಡುವೆ ಬೆಸೆದಿರುವ ಪವಿತ್ರ ಬಂಧನವೆ ನಿಜವಾದ ಗೆಳೆತನ.
ಕೃಷ್ಣ ಸುಧಾಮರು ಈಗಲೂ ಇದ್ದಾರೆ. ನೀನು ಕೃಷ್ಣ ಆದರೆ ಸುಧಾಮನಿಗೆ ಸಹಕರಿಸು, ನೀನು ಸುಧಾಮನಾದರೆ ಕೃಷ್ಣನನ್ನು ಗೌರವಿಸು.ಡಾ. ಪುನೀತರಾಜಕುಮಾರ್ ಕಟ್ಟಾ ಅಭಿಮಾನಿಯಾದ ನನ್ನಗೆ ನನ್ನ ಗೆಳೆಯರು ಪುನೀತ್ ಮೂರ್ತಿ ಟ್ರೋಫಿ ಕೊಟ್ಟದಾಗ ಒಂದು ಕ್ಷಣ ಪುನೀತ ರಾಜಕುಮಾರ್ ನೋಡಿದ ಅನುಭವ ಮರೆಯಲು ಸಾಧ್ಯವೆ.ನನ್ನ ಸಾಧನೆಯ ಹಿಂದೆ ನನಗೆ ಧೈರ್ಯ ಕೊಟ್ಟು ಪ್ರೋತ್ಸಾಹಿಸಿದ ಗ್ರೂಪ್ ಗೆ ಮರೆಯಲು ಸಾಧ್ಯವೆ. ಆತ್ಮೀಯತೆ ಆತ್ಮ ಶುದ್ಧ ಇದ್ದವನಿಗೆ ಒಲಿಯುತ್ತದೆ. ಬುದ್ಧಿವಂತರು, ಆತ್ಮೀಯರು,ನಿಜವಾದ ಗೆಳೆಯರು ಸಿಗುವುದಕ್ಕೂ ಯೋಗ ಬೇಕು. ಆತ್ಮೀಯ ಗೆಳೆಯರನ್ನು ಯಾವತ್ತೂ ಕಳೆದುಕೊಳ್ಳಬೇಡಿ, ಈ ಗೆಳೆತನ ಉಸಿರಿರುವವರೆಗೂ ಉಳಿಸಿಕೊಂಡುಬಿಡಿ.
ಸ್ನೇಹ ಅಥವಾ ಫ್ರೆಂಡ್ ಶಿಪ್ ಇಂದು ನಿನ್ನೆಯದಲ್ಲ. ಪುರಾಣ, ಇತಿಹಾಸ ಕಾಲದಿಂದಲೂ ಸ್ನೇಹಕ್ಕೆ ತನ್ನದೇ ಆದ ಸ್ಥಾನಮಾನ, ಗೌರವ, ಆದರ, ಆತಿಥ್ಯವಿದೆ. ಪುರಾಣವನ್ನು ಒಮ್ಮೆ ತಿರುವಿದಾಗ ಎರಡು ಬಿಡಿಸಲಾಗದ ಸ್ನೇಹವನ್ನು ಕಾಣಬಹುದು.ಮಹಾಭಾರತದಲ್ಲಿ ಕಂಡುಬರುವ ದುರ್ಯೋಧನ ಮತ್ತು ಕರ್ಣ ಇವರಿಬ್ಬರ ಸ್ನೇಹ. ಇವರಿಬ್ಬರದು ಅಪ್ರತಿಮ ಗೆಳೆತನ. ಇವರ ಸ್ನೇಹದ ಮುಂದೆ ಇಂದಿನ ಯಾವುದೇ ಗೆಳೆತನ ನಿಲ್ಲಲಾರದು
ಒಮ್ಮೆ ಕರ್ಣ ದುರ್ಯೋಧನನ ಪತ್ನಿ ಭಾನುಮತಿ ಜೊತೆ ಪಗಡೆಯಾಡುವ ಸಂಧರ್ಭದಲ್ಲಿ ಆಕೆಯನ್ನು ಹಿಡಿಯಲು ಹೋಗುತ್ತಾನೆ. ಆಕಸ್ಮಿಕವಾಗಿ ಆಕೆಯ ಮುತ್ತಿನ ಸರ ಕಿತ್ತು ಮಣಿಗಳೆಲ್ಲಾ ಚೆಲ್ಲಾಪಿಲ್ಲಿಯಾಗುತ್ತವೆ. ಆ ವೇಳೆ ಅಲ್ಲಿಗೆ ದುರ್ಯೋಧನ ಬರುತ್ತಾನೆ. ಬಂದವನು ಒಂದು ಸ್ವಲ್ಪವೂ ಅನುಮಾನಿಸದೆ ನಾನು ಮಣಿಗಳನ್ನು ಆಯ್ದು ಕೊಡಲೇ ಎಂದು ಪ್ರಶ್ನಿಸುತ್ತಾನೆ. ಆಗ ಕರ್ಣ, ಧುರ್ಯೋಧನನಿಗೆ ರಾಜ ನನ್ನನ್ನು ಕ್ಷಮಿಸು ಎಂದು ಕೇಳುತ್ತಾನೆ, ಕರ್ಣ ನನಗೆ ನಿನ್ನಲ್ಲಿ ನಂಬಿಕೆಯಿದೆ ಎಂದು ದುರ್ಯೋಧನನೇ ಸಮಾಧಾನಿಸುತ್ತಾನೆ. ಅಷ್ಟರಮಟ್ಟಿಗೆ ದುರ್ಯೋಧನನಿಗೆ ತನ್ನ ಗೆಳೆಯನ್ನಲ್ಲಿ ನಂಬಿಕೆ ವಿಶ್ವಾಸವಿರುತ್ತದೆ.
ಒಟ್ಟಿನಲ್ಲಿ ಹೇಳುವುದಾದರೆ, ಈ ಸ್ನೇಹ ಮತ್ತು ಸ್ನೇಹಿತರು ಇರುವಾಗ ನಮಗೆ ಎಂದಿಗೂ ಒಂಟಿತನದ ಭಾವನೆ ಕಾಡುವುದಿಲ್ಲ. ಅದರಲ್ಲೂ ನಮ್ಮ ಬಾಲ್ಯದ ಮತ್ತು ಚಿಕ್ಕವರಾಗಿದ್ದಾಗ ನಮ್ಮ ಜೊತೆ ಆಟ ಆಡಿದ ಸ್ನೇಹಿತರು ನಮ್ಮ ಜೊತೆಯಲ್ಲಿ ಅನೇಕ ಸುಮಧುರವಾದ ನೆನಪುಗಳನ್ನು ಹಂಚಿಕೊಂಡಿರುತ್ತಾರೆ.A Happy Friendship Day my dear FRIENDS.
ನಂದಿನಿ ಸನಬಾಳ್, ಶಿಕ್ಷಕಿ
ಕಲಬುರಗಿ