….ಇತಿಹಾಸ…..
ಸ್ಥಳ ಇತಿಹಾಸ ಬರೆಯಲು
ಆ ಹಳ್ಳಿಗೆ ಬಂದ ಯುವಕ
ಸುಂದರ ಯುವತಿಯೊಡನೆ ಪರಾರಿಯಾಗಿ,
ಜನರ ನಾಲಿಗೆ ಮೇಲೆ
ಇತಿಹಾಸ ಬರೆದೇ ಬಿಟ್ಟ !!!!
….ವೈಚಿತ್ರ್ಯ…..
ಆಕೆ ಬೊಜ್ಜು ಕರಗಿಸಲು ಚಪಾತಿ ತಿಂದಳು ,
ಈತ ಹೊಟ್ಟೆ ಬೆಳೆಸಲು ಪಕ್ವಾನ್ನ ತಿಂದ
ಗಾಳಿ ತುಂಬಿದ ಬಲೂನಾಗಿ ಅವಳಿನ್ನೂ ಹಿಗ್ಗಿ ದಳು,
ಅಜೀರ್ಣವಾಗಿ ಇವನು ಸಿಳ್ಳೆಕ್ಯಾತನಾದ !!!!
……….ಜ್ವರ..ಜ್ವರ……
ಯಾವ ಕ್ಯಾಪ್ಸೂಲ್ ಗೂ ವಾಸಿಯಾಗದ
ಅವಳ ಪ್ರೇಮಜ್ವರ
ಬಾಯ್ ಫ್ರೆಂಡ್ ನ ಕಣ್ಣೋಟಕ್ಕೆ ಬಿಟ್ಟು,
ಆತ ಕೈಕೊಟ್ಟಾಗ ಪ್ಲೇಗಾಗಿ ಮತ್ತೆ ಕಾಡಿತ್ತು..!!?
…..ಕ್ಲೀನ್ ಬೋಲ್ಡ್ !!……
ಕ್ರಿಕೆಟ್ ಮೈದಾನದಲ್ಲಿ ಶತಕ
ಬಾರಿಸಿದ ನಮ್ಮ ಸಿದ್ದ
ಹೆಂಡತಿ ಎಸೆದ ಪಾತ್ರೆಗಳಿಗೆ
ಕ್ಲೀನ್ ಬೋಲ್ಡ್ ಆಗಿ ಬೋರಲಾಗಿ ಬಿದ್ದ !!!
……..ಬೇಕಾಗಿದ್ದಾರೆ……..
ಬೇಕಾಗಿದ್ದಾರೆ,ಸ್ವಾಮಿ ಬೇಕಾಗಿದ್ದಾರೆ…
ಸಭೆ ,ಸಮಾರಂಭಗಳಲ್ಲಿ
ಪ್ರೇಕ್ಷಕರಾಗಿ ಕುಳಿತುಕೊಳ್ಳುವವರು ಬೇಕಾಗಿದ್ದಾರೆ,
ನಾವೇನೆ ಕಿರುಚಿದರೂ
ಕಣ್ಮುಚ್ಚಿ ತಲೆದೂಗುವವರು,
ಚಪ್ಪಾಳೆ ತಟ್ಟುವವರು ಬೇಕಾಗಿದ್ದಾರೆ…
ಜಾತಿ,ವರ್ಗ,ವರ್ಣ,ಬೇಧ ಇಲ್ಲದ ಆಯ್ಕೆಯಿದು,
ಬರುತ್ತೀರಾ ಸ್ವಾಮಿ
ಲಾರಿ,ಬಸ್ ಉಚಿತ
ಕೈಗೆ ಗುಲಾಬಿ ನೋಟು,
ಬಾಯಾರಿಕೆ ನೀಗಿಸಲು ನಿಮಗೆ ಬೇಕಾದ್ದು ಖಚಿತ…
ಬೇಕಾಗಿದ್ದಾರೆ..ಸ್ವಾಮಿ ಬೇಕಾಗಿದ್ದಾರೆ…
…….ಕುಣಿತ……..
ಕರಡಿ ಕುಣಿಸುವವರು
ಹಣ ಮಾಡುತ್ತಾರೆ
ಹಣ ಮಾಡಲೋಸುಗವೇ
ಕೆಲವರು ಕರಡಿಯಂತೆ ಕುಣಿಯುತ್ತಾರೆ….
…..ನಂತರ….
ನಿನ್ನನ್ನೀಗಲೇ ಮದುವೆ ಆಗಲು ಸಿದ್ದ,
ಎಂದ ನಮ್ಮೂರ ಸಿದ್ದ,
‘ನಾನೂ ಸಿದ್ದ’ ಆದರೆ
ನನ್ನ ಮಗನ ಮದುವೆ ಮುಗಿಯಲಿ !!
ಎಂದುಲಿದಳು ಮಾಜಿ ಪ್ರಿಯತಮೆ….
…...ಅವಳು…..
ಸುತ್ತಲೂ ಸುತ್ತುತ್ತ ”ಲೈನ್ ‘ ಹೊಡೆದರೂ
ತಲೆಬಾಗದ ,ಕಿರುನಗೆ ಸೂಸದ ಆಕೆ
ಆತನಿಗೆ ಎಟುಕಲಾರದ ಹುಳಿದ್ರಾಕ್ಷಿ ಹಣ್ಣು…
……ವಾಸ್ತವ…..
ಆಕೆ ಅವನನ್ನು
ಮರುಳು ಮಾಡಿ
ಮದುವೆ ಮಾಡಿಕೊಂಡಳು,
ಆತ ಆಕೆಯ ಮದುವೆಯಾಗಿ
ಉರುಳು ಹಾಕಿಕೊಂಡ…
……ಪ್ರೇಮ…ಪ್ರೇಮ…
ಪ್ರೇಮ..ಪ್ರೇಮ.
ಪ್ರೇಮ
ಕಾಮವಿಲ್ಲದ ಪ್ರೇಮ,
ಜಾತಿಯಿಲ್ಲದ ಪ್ರೇಮ,
ರೋಷ-ದ್ವೇಷವಿಲ್ಲದ ಪ್ರೇಮ
ಅದುವೇ ‘ಪ್ರೇಮಶ್ರೀ ‘
ಅದುವೇ ಪ್ರೇಮದ ಓಂಕಾರ,
ಅದುವೇ ಪ್ರೇಮದ ಶ್ರೀಕಾರ…
ಉದಿಸು ಬಾ..
ಉದಿಸು ಬಾ, ಭಾಸ್ಕರ ಉದಿಸು ಬಾ
ಮುಗಿಲ ಮರೆಯಿಂದ,ಗಿರಿಯ ಒಡಲಿಂದ
ಬೆಳಗಿ ಬಾ, ನೀ ಇಳೆಗೆ ಬಾ
ತಮದ ಬಸಿರಿಂದ ಕ್ಷಿತಿಜದೊಡಲಿಂದ
ಮೂಡಿ ಬಾ,ನೀ ಹುಟ್ಟಿ ಬಾ..
ಸಸ್ಯದೊಡಲಿನ ಹಸಿರೆ ಬಾ
ಜೀವಕೋಟಿಗಳ ಉಸಿರೆ ಬಾ
ರಶ್ಮಿ ತೆರೆಯ ಸರಿಸಿ ಬಾ
ವಿಶ್ವಶಾಂತಿಯನು ನೀಡು ಬಾ..
ಮನುಜರ ಕಾಡುತಿರುವ ವೈರಸ್ ರೋಗ ಕಳೆಯ ಬಾ,
ಮುಸುಕಿರುವ ಕಾರಿರುಳ ಬಿಡಿಸು ಬಾ
ಬಾ ಬಾರೊ ಭಾಸ್ಕರ ಬೇಗ ಬಾ
ಜನಜೀವನಕೆ ಕಾಡಿರುವ ಕತ್ತಲು ಕಳೆಯ ಬಾ
ಮೂಡಣದ ಮುತ್ತೇ ಜಗಜಗಿಸಿ ಬಾ….
ಜಲದೊಳಗಿನ ಕಮಲವ ಅರಳಿಸಲು ಬಾ,
ಜೀವರಾಶಿಗೆ ಸಂತಸದ ಅಲೆಯ ನೀಡು ಬಾ
ಬಾ ರವಿತೇಜ ನೀ ಜಿಗಿದು ಬಾ
ಭೂಕಳೆಯ ಪರಿಹರಿಸೆ ಅನುದಿನವೂ ಬಾ…
ಜಗವ ಉಳಿಸಲು ,ಕಷ್ಟ ಕರಗಿಸಲು ಬೇಗ ಬಾ…
ಡಾ.ಭೇರ್ಯ ರಾಮಕುಮಾರ್*l
ಸಾಹಿತಿಗಳು, ಪತ್ರಕರ್ತರು
ಮೊ:94496 80583
63631 72368