ಮೈಸೂರು ಮೇಯರ್ ಚುನಾವಣೆಯ ಹೈಡ್ರಾಮಾ ಕುರಿತಂತೆ ಶಾಸಕ ತನ್ವೀರ್ ಸೇಠ್ ವಿರುದ್ಧ ಕ್ರಮ ಜರುಗಿಸಲೇಬೇಕು ಎಂದು ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಹಠ ಹಿಡಿದಿದ್ದಾರೆ ಎನ್ನಲಾಗಿದೆ.
ಮೈಸೂರಿನಲ್ಲಿ ನಡೆದಿರುವ ಪಾಲಿಕೆ ಚುನಾವಣೆಯಲ್ಲಿ ತಮ್ಮನ್ನು ಪರಿಗಣನೆಗೆ ತೆಗೆದುಕೊಳ್ಳದೆ ಅನಿರೀಕ್ಷಿತವಾಗಿ ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಂಡ ತಮ್ಮದೆ ಪಕ್ಷದ ವಿರುದ್ಧ ಸಿದ್ಧರಾಮಯ್ಯ ಸಿಡಿದೆದ್ದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಶಾಸಕ ತನ್ವೀರ್ ಸೇಠ್ ವಿರುದ್ದ ಹೈಕಮಾಂಡ್ ಗೆ ದೂರು ಒಯ್ದಿರುವ ಸಿದ್ಧರಾಮಯ್ಯ ತನಗೆ ಅವಮಾನ ಮಾಡಿರುವ ತನ್ವೀರ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಮೈಸೂರು ನನ್ನದೇ ಕ್ಷೇತ್ರ, ಇಲ್ಲಿ ನನ್ನ ಮಾತು ನಡೆಯಬೇಕು ಎಂದು ಪಕ್ಷದ ವಕ್ತಾರ ಮಧು ಗೌಡ ಯಸ್ಕಿ ಯವರಿಗೆ ದೂರು ನೀಡಿದ್ದಾರೆ.
ಇತ್ತೀಚೆಗೆ ನಡೆದ ಮೈಸೂರು ಪಾಲಿಕೆ ಚುನಾವಣೆಯಲ್ಲಿ ಯಾವ ಪಕ್ಷದ ಜೊತೆಯೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಹೇಳುತ್ತಿದ್ದ ಪಕ್ಷದ ನಾಯಕರು ಹಠಾತ್ತಾಗಿ ಸಿದ್ಧರಾಮಯ್ಯ ಅವರಿಗೆ ತಿಳಿಸದೆ ಜೆಡಿಎಸ್ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡು ಜೆಡಿಎಸ್ ಅಭ್ಯರ್ಥಿಗೆ ಮೇಯರ್ ಸ್ಥಾನ ಬಿಟ್ಟುಕೊಟ್ಟಿದ್ದು ಸಿದ್ಧರಾಮಯ್ಯ ಅವರನ್ನು ಕೆರಳಿಸಿದ್ದು, ಇದಕ್ಕೆಲ್ಲ ಕಾರಣರಾದ ತನ್ವೀರ್ ಸೇಠ್ ವಿರುದ್ದ ಕ್ರಮ ಕೈಗೊಳ್ಳಲೇಬೇಕು ಎಂದು ಹಠ ಹಿಡಿದು ಕುಳಿತಿದ್ದಾರೆ.
ಸಿದ್ಧರಾಮಯ್ಯನವರ ಮನ ಒಲಿಸುವ ಕಾರ್ಯ ಪ್ರಗತಿಯಲ್ಲಿದೆ.