spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ನಾಗಲಾಂಬಿಕೆ (ಅಕ್ಕನಾಗಮ್ಮ)

ಶಿವಶರಣೆಯರ ಸಮೂಹದಲ್ಲಿ ಅಕ್ಕಮಹಾದೇವಿ, ನೀಲಲೋಚನೆ ಮತ್ತು ನಾಗಲಾಂಬಿಕೆಯರದು ಎದ್ದು ಕಾಣುವ ಹೆಸರು. ಬಸವಣ್ಣನವರ ಜೀವನದ ಉತ್ತರಾರ್ಧವನ್ನು ನೀಲಲೋಚನೆ ರೂಪಿಸಿದರೆ, ಪೂರ್ವಾರ್ಧ ಜೀವನವನ್ನು ರೂಪಿಸಿದವಳು ಅವನ ಸೋದರಿಯಾದ ನಾಗಲಾಂಬಿಕೆ. ಸಾಮಾನ್ಯವಾಗಿ ವೀರಶೈವ ಪುರಾಣಗಳು ಇವಳನ್ನು ಪ್ರಸ್ತಾಪ ಮಾಡುತ್ತ ಬಂದಿವೆ. ನಾಗಲಾಂಬಿಕೆಯ ಇನ್ನೊಂದು ಪ್ರಚಲಿತ ಹೆಸರು ನಾಗಮ್ಮ ಅಥವಾ ಅಕ್ಕನಾಗಮ್ಮ ಚನ್ನಬಸವಣ್ಣನ ತಾಯಿಯಾದ ಇವಳನ್ನು ಬಸವಣ್ಣನ ಅಕ್ಕನೆಂದು ಈವರೆಗೆ ವಿದ್ವಾಂಸರು ಭಾವಿಸುತ್ತ ಬಂದಿದ್ದಾರೆ. ಆದರೆ ಇವಳನ್ನು ಪ್ರಸ್ತಾಪಿಸುವ ಪ್ರಥಮ ಕೃತಿಯಾದ ಭೀಮ ಕವಿಯ ಬಸವಪುರಾಣದಲ್ಲಿ ಇವಳು ಬಸವಣ್ಣನ ತಂಗಿಯೆಂದು ಸ್ಪಷ್ಟವಾಗಿಯೇ ತಿಳಿಸಲಾಗಿದೆ. ಬಸವಣ್ಣನವರು ಬಾಗೇವಾಡಿಯಿಂದ ಕೂಡಲಸಂಗಮಕ್ಕೆ ಹೊರಟ ಸಂದರ್ಭವನ್ನು ಚಿತ್ರಿಸುತ್ತಾ

“ತನ್ನನುಜೆ ನಾಗಲದೇವಿಯು ನಿಜಸತಿಯು ಗಂಗಾದೇವಿಯುಂ ಸಹಿತ” ಸಂಗಮಕ್ಕೆ ತೆರಳಿದನೆಂದು ಹೇಳಲಾಗಿದೆ. ಇದರಿಂದ ನಾಗಲಾಂಬಿಕೆ ಬಸವಣ್ಣನ ಅಕ್ಕನಲ್ಲ, ತಂಗಿಯೆಂದು ಸ್ಪಷ್ಟವಾಗುತ್ತದೆ. ಈ ತರುವಾಯ ಬಂದ ಇನ್ನೊಂದು ಮುಖ್ಯ ಕೃತಿಯಾದ ಪ್ರಸಾದಿ ಮಹಾದೇವಯ್ಯನ ಶೂನ್ಯಸಂಪಾದನೆಯು
” ತನ್ನಿಂ ಕಿರಿಯಳಾದ ನಾಗಲಾಂಬಿಕೆ”ಯೊಂದಿಗೆ ಬಸವಣ್ಣನವರು ಕೂಡಲಸಂಗಮಕ್ಕೆ ಹೋದರೆಂದು ಹೇಳುತ್ತ ಭೀಮಕವಿಯ ಅಭಿಪ್ರಾಯವನ್ನೇ ಅನುಮೋದಿಸುತ್ತದೆ. ಆದರೆ ಆ ಬಳಿಕ ಬಂದ ಲಕ್ಕಣ್ಣ ದಂಡೇಶ, ಸಿಂಗಿರಾಜ ಮೊದಲಾದ ಕವಿಗಳು ಅವಳ ಹೆಸರಿಗೆ ಗೌರವಸೂಚಿ ವಿಶೇಷಣವಾಗಿರುವ ‘ಅಕ್ಕ’ ಎಂಬುದನ್ನು ವಾಚ್ಯಾರ್ಥದಲ್ಲಿಯೇ ಸ್ವೀಕರಿಸಿ ಅವಳನ್ನು ಬಸವಣ್ಣನ ಅಕ್ಕ ಎಂದೇ ಚಿತ್ರಿಸಿದರು. ಇದೆಲ್ಲವನ್ನು ನೋಡಿದರೆ ನಾಗಲಾಂಬಿಕೆ ಬಸವಣ್ಣನ ಅಕ್ಕನಲ್ಲ, ತಂಗಿಯೆಂದು ಸ್ಪಷ್ಟವಾಗುತ್ತದೆ.

- Advertisement -

ನಾಗಲಾಂಬಿಕೆಯ ಬಾಗೇವಾಡಿ ಜೀವನವಾಗಲಿ, ಕೂಡಲಸಂಗಮದ ಜೀವನವಾಗಲಿ ನಮಗೆ ಯಾವ ಕಾವ್ಯದಲ್ಲಿಯೂ ಸ್ಪಷ್ಟವಾಗಿ ಸಿಕ್ಕುವದಿಲ್ಲ. ಅವಳ ಜೀವನದ ಮಹತ್ವದ ಚಟುವಟಿಕೆಗಳು ಕಲ್ಯಾಣದಲ್ಲಿ ಮಾತ್ರ ಕಂಡುಬರುತ್ತವೆ.

ಸಣ್ಣ ಪುಟ್ಟ ಶರಣರನ್ನು ಕುರಿತು ರಗಳೆಗಳನ್ನು ಬರೆದಿರುವ, ಬರೆಯದಿದ್ದ ಪಕ್ಷದಲ್ಲಿ ಸಾಂದರ್ಭಿಕವಾಗಿ ಅವರನ್ನು ಸೂಚಿಸಿರುವ ಹರಿಹರ ಎಲ್ಲಿಯೂ ನಾಗಲಾಂಬಿಕೆಯನ್ನು ಅವಳ ಮಗನಾದ ಚನ್ನಬಸವಣ್ಣನನ್ನು ಸೂಚಿಸದಿರುವುದು ಆಶ್ಚರ್ಯದ ಸಂಗತಿಯಾಗಿದೆ. ಮುಂದೆ ಬಂದ ಭೀಮಕವಿ ಮೊದಲಾದವರು ಇವರಿಬ್ಬರನ್ನು ಸೂಚಿಸುವುದು ತೀರ ಪ್ರಾಸಂಗಿಕವಾಗಿ, ಸಾಮಾನ್ಯ ಶರಣರನ್ನು ಕುರಿತು ಸ್ವತಂತ್ರ ಕೃತಿಗಳನ್ನು ಬರೆದಿರುವ ಯಾವ ಕವಿಯೂ ಇವರಿಬ್ಬರನ್ನು ವಸ್ತುವಾಗಿಟ್ಟುಕೊಂಡು ಪ್ರಾರಂಭದಲ್ಲಿ ಕೃತಿರಚನೆ ಮಾಡಲಿಲ್ಲ. ಈ ದಿಕ್ಕಿನಲ್ಲಿ ಪ್ರಥಮ ಪ್ರಯತ್ನವೆಂದರೆ ಹದಿನಾರನೆಯ ಶತಮಾನದ ವಿರೂಪಾಕ್ಷ ಪಂಡಿತನ ಚೆನ್ನಬಸವಪುರಾಣವಾಗಿದೆ. ಮೇಲೆ ಹೇಳಿದ ಕೃತಿಗಳು ಚೆನ್ನಬಸವಣ್ಣನವರು ಅಕ್ಕನಾಗಮ್ಮನ ಮಗನಾಗಿ ಕಕ್ಕಯ್ಯನ ಪ್ರಸಾದದಿಂದ, ಬಸವಣ್ಣನ ಪ್ರಸಾದದಿಂದ, ಶಿವನ ಪ್ರಸಾದದಿಂದ ಹುಟ್ಟಿದನೆಂದು ಹೇಳುತ್ತ ಬಂದ ಸಂದರ್ಭದಲ್ಲಿ ಸುಮಾರು ಹದಿನಾರನೆಯ ಶತಮಾನದ ಸಿಂಗಿರಾಜ ಮಾತ್ರ ಅಕ್ಕನಾಗಮ್ಮನ ಪತಿ ಶಿವದೇವನೆಂದು ಹೇಳಿ ಈ ಸಮಸ್ಯೆಗೆ ಪರಿಹಾರವನ್ನು ಸೂಚಿಸುತ್ತಾನೆ. ಬಹುಶಃ ಇವನನ್ನೇ ಆಧರಿಸಿ ದೇವರದಾಸಿಮಾರ್ಯ ಶಿವಶರಣೆಯರ ವಚನಸಂಪುಟ ಪುರಾಣವೂ ಶಿವದೇವನ ಪ್ರಸ್ತಾಪ ಮಾಡುತ್ತದೆ. ಈತನು ‘ಸಂಸಾರ ಭ್ರಾಂತಿಯಳಿಯದ ವ್ಯಕ್ತಿಯಾಗಿದ್ದ ನೆಂದು ಸಿಂಗಿರಾಜಪುರಾಣ ಇವನ ಮನೋಧರ್ಮವನ್ನು ತಿಳಿಸಿದೆ.

ನಾಗಲಾಂಬಿಕೆ ತನ್ನ ಪೂರ್ವಾರ್ಧ ಜೀವನದಲ್ಲಿ ಬಸವಣ್ಣನನ್ನು ರೂಪಿಸಿದರೆ, ಉತ್ತರಾರ್ಧದಲ್ಲಿ ಮಗನಾದ ಚನ್ನಬಸವಣ್ಣನನ್ನು ರೂಪಿಸಿದ್ದಾಳೆ. ಅನನ್ಯ ಪಾತ್ರವಹಿಸಿದ ಈಕೆ ಕಲ್ಯಾಣಕ್ರಾಂತಿಯ ಸಂದರ್ಭದಲ್ಲಿ ಶರಣಒಳಗದ ನೇತೃತ್ವ ವಹಿಸಿ ದಕ್ಷಿಣಕ್ಕೆ ಬಂದು ಉಳವಿಯ ಪರಿಸರದಲ್ಲಿ ಐಕ್ಕಳಾದಳೆಂದು ತಿಳಿದುಬರುತ್ತದೆ. ಅನುಭವಮಂಟಪದಲ್ಲಿ

- Advertisement -

ಅಕ್ಕನಾಗಮ್ಮ ‘ಬಸವಣ್ಣಪ್ರಿಯ ಚೆನ್ನಸಂಗಯ್ಯ’ ಎಂಬ ಅಂಕಿತದಲ್ಲಿ ವಚನಗಳನ್ನು ಒರೆದಿದ್ದು, ಈಗ ೧೪ ಲಭ್ಯವಾಗಿವೆ. ಇವುಗಳಲ್ಲಿ ಬಸವಣ್ಣನವರ ಸ್ತುತಿಪರವಾದುವೆ ಅಧಿಕ ಆಗಾಗ ಮಡಿವಳಮಾಚಯ್ಯ, ರೇವಣಸಿದ್ದಯ್ಯ, ಸಿದ್ದರಾಮಯ್ಯ, ಅಕ್ಕಮಹಾದೇವಿ, ಗುರುಭಕ್ತಯ್ಯ, ಪ್ರಭುದೇವ, ಮರುಳಶಂಕರದೇವ, ಅನಿಮಿಷದೇವ, ಅಜಗಣ್ಣ, ಘಟ್ಟವಾಳಯ್ಯ, ಮಗ ಚೆನ್ನಬಸವಣ್ಣ ಇವರ ಪ್ರಸ್ತಾಪ ಮಾಡಿದ್ದಾಳೆ. *ಬಸವಣ್ಣನಿಂದ ತನ್ನ ಭವ ನಾಶವಾಯಿತೆಂದು* ಹೇಳಿಕೊಳ್ಳುವ ಇವಳ ವಚನಗಳಲ್ಲಿ ಬಹುಶಃ ಅವನ ನಿಧನದ ನಂತರ ನೊಂದು ನುಡಿದವು ಅಧಿಕವಾದಂತಿವೆ. *”ನಿಜದ ನಿರ್ವಯಲ ಬಾಗಿಲ ನಿಜವ ತೋರಿದಾತ ಬಸವಣ್ಣ”* ಎಂದು ಹೆಮ್ಮೆಯಿಂದ ಹೇಳಿಕೊಂಡ ಇವಳು,
“ಭಕ್ತಿಯ ತವನಿಧಿಯೆ, ಮುಕ್ತಿಯ ಮೂರುತಿಯೆ ಲಿಂಗಜಂಗಮದ ಚೈತನ್ಯವೆ ನಿಮ್ಮನಗಲಿ ಎಂತು ಸೈರಿಸುವ”* ಎಂದು ವ್ಯಥೆಪಟ್ಟುದನ್ನು ಗಮನಿಸಬೇಕು. ನಾಗಲಾಂಬಿಕೆಯ ಜೀವನದಲ್ಲಿ ಬಂದ ಎಡರುಗಳು ಅನೇಕ ಎಂಬುದನ್ನು ಈಕೆಯ ಕೆಳಗಿನ ವಚನ ಧ್ವನಿಸುತ್ತದೆ :

“ಮನದೊಡೆಯ ಮಹಾದೇವ ಮನವ ನೋಡಿಹೆನೆಂದು
ಮನುಜರ ಕೈಯಿಂದ ಒಂದೊಂದ ನುಡಿಸುವನು,
ಇದಕ್ಕೆ ಕಳವಳಿಸದಿರು ಮನವೆ, ಕಾತರಿಸದಿರು ಮನವೆ,
ನಿಜವ ಮರೆದಿರು ಕಂಡಾ, ನಿಶ್ಚಿಂತನಾಗಿರು ಮನವೆ,
ಬಸವಣ್ಣಪ್ರಿಯ ಚೆನ್ನಸಂಗಯ್ಯನು ಬೆಟ್ಟದನಿತಪರಾಧವನು
ಒಂದು ಬೊಟ್ಟಿನಲ್ಲಿ ತೊಡೆವನು”

ವಚನ ನಿರ್ವಚನ

ಸಾಮಾನ್ಯವಾಗಿ ಶಿವಶರಣೆಯರ ವಚನಗಳು ಆಚಾರದ ಮಹತ್ವವನ್ನು ಪ್ರಕಟಿಸುತ್ತಿದ್ದು, “ಆಚಾರವೆಂಬುದು ಅಗೋಚರ ನೋಡಯ್ಯ ಆರಿಗೂ ಸಾಧ್ಯವಿಲ್ಲ”ಎಂಬ ವಚನವೂ ಈ ನಿಲವನ್ನು ಪ್ರತಿನಿಧಿಸುತ್ತದೆ.

‘ಆತ್ಮವೇ ಪರಮಾತ್ಮ’ ಎಂದು ನಂಬಿದವರು ಶರಣರು. ಇಂತಹ ಪರಮಾತ್ಮನು ಮನಸ್ಸಿನ ಒಡೆಯನಾಗಿದ್ದಾನೆ. ಆ ಒಡೆಯನೆಂಬ ಮಹಾದೇವನು ಮನಸ್ಸನ್ನು ಪರೀಕ್ಷಿಸಲೆಂದು ನಮ್ಮ ಸುತ್ತಮುತ್ತಲು ಇರುವ ಜನರಿಂದ ನಮ್ಮ ಬಗ್ಗೆ ಒಳಿತು ಮತ್ತು ಕೆಡಕು ಎರಡನ್ನು ಕುರಿತಾಗಿ ಮಾತನಾಡಿಸುತ್ತಾನೆ. ಇಂತಹ ಎಲ್ಲಾ ನುಡಿಗಳನ್ನು ಕೇಳಿಯೂ ಕೂಡ ಓ ಮನವೇ ನೀನು ಕಳವಳಿಸದಿರು, ಕಾತರಿಸದಿರು ಎಂದು ಶರಣೆ ಹೇಳುತ್ತಾರೆ. ತಾತ್ಪರ್ಯ ಜನರು ನಮ್ಮ ಬಗ್ಗೆ ಒಳ್ಳೆಯದನ್ನು ಮಾತನಾಡಿದಾಗ ನಾವು ಹಿಗ್ಗದೆ ಹಾಗೂ ಕೆಟ್ಟದ್ದನ್ನು ಮಾತನಾಡಿದಾಗ ಕುಗ್ಗದೆ, ಇದಾವುದಕ್ಕೂ ತಲೆಕೆಡಿಸಿಕೊಳ್ಳದೆ ನಾವು ನಮ್ಮತನವನ್ನು ಬಿಟ್ಟು ಕೊಡದೆ ಒಳಿತಿನ ಹಾದಿಯಲ್ಲಿಯೇ ಅಂದರೆ ಸತ್ಯದ ದಾರಿಯಲ್ಲಿಯೇ ನಡೆಯಬೇಕು. ಜೊತೆಗೆ ಆ ಸತ್ಯದ ನಿಲುವನ್ನು ತಿಳಿದು ಅದು ಏನೆಂಬುದರ ಅರಿವು ನಿನಗೆ ಇರಬೇಕು. ನೀನೆಂದು (ಮನಸ್ಸೆಂಬುದು) ನಿಜವನ್ನ ಮರೆಯಬಾರದು, ಎನ್ನುವುದು ಅಕ್ಕನಾಗಮ್ಮರ ವಿಚಾರವಾಗಿದೆ.

ಈ ರೀತಿಯಾಗಿ ನೀನು ಗುರುಲಿಂಗ ಜಂಗಮವನ್ನ ಅರಿತು ಸತ್ಯ ಪಥದಲ್ಲಿ ನಡೆದಿದ್ದೇ ಆದರೆ ಅಂಥವರನ್ನ ತನ್ನ ಆರಾಧ್ಯವಾದ ದೈವವಾದ ಬಸವಣ್ಣ ಪ್ರಿಯ ಚನ್ನಸಂಗಯ್ಯನು ಬೆಟ್ಟದಂತೆ ಬಂದ ಅಪರಾಧವನ್ನು ಕ್ಷಣಾರ್ಧದಲ್ಲಿ, ಒಂದೇ ಬೆರಳಿನಲ್ಲಿ ತೊಡೆದು ಹಾಕುತ್ತಾನೆ. ಕಷ್ಟದಿಂದ ಪಾರು ಮಾಡುತ್ತಾನೆ. ಎನ್ನುವುದು ನಾಗಲಾಂಬಿಕೆ ವಿಚಾರ.

ಹೀಗೆ ನಾಗಲಾಂಬಿಕೆ ಪ್ರಸಿದ್ಧ ಶರಣೆ, ಸುಪ್ರಸಿದ್ಧ ಶರಣರ ನಿರ್ಮಾತೃವಾಗಿ, ವಚನ ಸಾಹಿತ್ಯದ ಸೃಷ್ಟಿಕರ್ತಳಾಗಿ ಶೋಭಿಸುತ್ತಾಳೆ. ಸಮಕಾಲೀನ ಶರಣರಾದ ಕೋಲಶಾಂತಯ್ಯ, ಮರುಳ ಶಂಕರದೇವ, ಆಯ್ದಕ್ಕಿ ಲಕ್ಕಮ್ಮ, ನೀಲಮ್ಮ ಮೊದಲಾದವರು ಈಕೆಯ ಅಕ್ಕರತೆಯನ್ನು ಕೊಂಡಾಡಿದ್ದಾರೆ.

ಜಯಶ್ರೀ ಎಸ್ ಆಲೂರ.
ಶಿಕ್ಷಕಿಯರು, ಬಾದಾಮಿ.

- Advertisement -
- Advertisement -

Latest News

ಕವನ : ಹೀಗೇ ಒಮ್ಮೆ

ಹೀಗೇ ಒಮ್ಮೆ ____________ ಹೀಗೇ ಒಮ್ಮೆ ನಾನು ನೀನು ಅದೇ ಮರದ ನೆರಳಲಿ ಕುಳಿತು ಮಾತಾಡಬೇಕಿದೆ ನೆನಪಿಸಿಕೊಳ್ಳಬೇಕಿದೆ ಮತ್ತೆ ಹಳೆಯ ಕ್ಷಣಗಳ ಹಂಚಿಕೊಂಡ ಕಥೆ ಕವನ ಮಾತು ಚರ್ಚೆ ಸಂವಾದ ನಗೆ ಪ್ರೀತಿಯ ಸವಿಯ ಸವಿಯಬೇಕಿದೆ. ಆಗ ನಮ್ಮಿಬ್ಬರ ಮಧ್ಯೆ ಮೆರೆದ ಆದರ್ಶಗಳ ಮೆಲುಕು ಹಾಕಬೇಕಿದೆ ಅಂದು ಮಳೆಯಲ್ಲಿ ತಪ್ಪನೆ...
- Advertisement -

More Articles Like This

- Advertisement -
close
error: Content is protected !!
Join WhatsApp Group