spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ರೇವಣಸಿದ್ದಯ್ಯನವರ ಪುಣ್ಯಸ್ತ್ರೀ ರೇಕಮ್ಮ

ಹನ್ನೆರಡನೇ ಶತಮಾನ ಎಂಬುದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ಬಹುಮುಖ್ಯ ಕಾಲಘಟ್ಟ. ಶರಣರು ರಚಿಸಿದ ವಚನಗಳನ್ನು ಕನ್ನಡ ಸಾಹಿತ್ಯದ ಉಪನಿಷತ್ತುಗಳು ಎಂದು ಕರೆಯುವರು.

774 ಅಮರ ಗಣಗಳು ಮಹಾಚೇತನರಾಗಿ ಮಿಂಚಿದ ಕಾಲವದು. ಬಸವಣ್ಣನವರ ಕಾರಣದಿಂದಾಗಿಯೇ ಅಂದಿನ ಕಾಲದಲ್ಲಿ ಸಾಮಾಜಿಕವಾಗಿ ಸಾಹಿತಿಕವಾಗಿ ಸಾಂಸ್ಕೃತಿಕವಾಗಿ ಅನೇಕ ಸ್ಥಿತ್ಯಂತರಗಳು ನಡೆದವು. ಹೆಣ್ಣಿನ ಕಂಗಳಲ್ಲಿ ನಗೆಯ ಹೂಗಳನ್ನು ಅರಳಿಸಿ ಅವಳ ಬಾಳನ್ನು ಹೊನ್ನಾಗಿಸಿದವರು. ಸ್ತ್ರೀಗೆ ಸ್ವಾತಂತ್ರ್ಯ, ಗೌರವ, ಅಧ್ಯಾತ್ಮ ಸಾಧನೆಯ ಪ್ರತೀಕವಾಗಿ ಒಂದೇ ತಾಣದಲ್ಲಿ, ಒಂದೇ ಕಾಲದಲ್ಲಿ ಅಸಂಖ್ಯಾತ ಸ್ತ್ರೀ ರತ್ನಗಳು ಬೆಳಗಲು ಅವಕಾಶವನ್ನು ನೀಡಿದವರು ಬಸವಣ್ಣವರು.

- Advertisement -

ಸ್ತ್ರೀಯು ಸಬಲೀಕರಣಗೊಂಡು ವೇದಾಧ್ಯಯನವನ್ನು ಮಾಡುತ್ತಾ ಸ್ವತಹ ಅನುಭವಿಯಾಗಿ ವಚನಗಳನ್ನು ರಚಿಸಿದಳು. ಹನ್ನೆರಡನೇ ಶತಮಾನದಲ್ಲಿ ಅಕ್ಕಮಹಾದೇವಿ, ಸತ್ಯಕ್ಕ, ಗೊಗ್ಗವ್ವೆ, ಲಕ್ಕಮ್ಮ, ಲಿಂಗಮ್ಮ, ಅಕ್ಕಮ್ಮ, ಮಹಾದೇವಿ, ರಾಯಮ್ಮ, ಕಾಳವ್ವೆ ,ನೀಲಾಂಬಿಕೆ, ಗಂಗಾಂಬಿಕೆ, ಕೇತಲಾದೇವಿ, ದುಗ್ಗಳೆ, ಮುಕ್ತಾಯಕ್ಕ, ರೇಕಮ್ಮ ಹೀಗೆ ಮೂವತ್ಮೂರಕ್ಕೂ ಹೆಚ್ಚಿನ ಸ್ತ್ರೀಯರು ವಚನಗಳ ರಚನೆಯ ಮೂಲಕ ಸ್ವಾರ್ಥ ಸಾಮಾಜಿಕ ರಾಜಕಾರಣದ ಆಚೆಗೂ ಗಮನಿಸುವ ಹೊಸ ಶಕ್ತಿಗಳಾಗಿ ಕಾಣುತ್ತಾರೆ.
ತಮ್ಮ ತಮ್ಮ ಪತಿಯರ ಕಾಯಕ ಮತ್ತು ದಾಸೋಹಗಳಲ್ಲಿ ನೆರವಾಗುವ ಪತ್ನಿಯರನ್ನು ಶರಣರು ಪುಣ್ಯ ಸ್ತ್ರೀಯರು ಎಂದು ಕರೆದರು.

ಅನುಭವ ಮಂಟಪದಲ್ಲಿ ಹದಿನಾಲ್ಕು ಪುಣ್ಯಸ್ತ್ರಿಯರನ್ನು ಕಾಣಬಹುದು ಅದರಲ್ಲಿ ರೇವಣಸಿದ್ದಯ್ಯಗಳ ಪುಣ್ಯಸ್ತ್ರೀ ಉಗ್ರ ಭಕ್ತಿಯ ರೇಕಮ್ಮ ಎಂಬುವರು ಒಬ್ಬರು. ಇವರ ಕಾಲವನ್ನು ಸುಮಾರು ಕ್ರಿಸ್ತಶಕ 1160 ಎಂದು ಗುರುತಿಸಲಾಗಿದ್ದು ರೇಕಮ್ಮನವರು “ಶ್ರೀ ಗುರು ಸಿದ್ದೇಶ್ವರ” ಎಂಬ ಅಂಕಿತದೊಂದಿಗೆ ಕೇವಲ ಒಂದು ವಚನವನ್ನು ರಚಿಸಿದ್ದಾರೆ. ಶಿವಭಕ್ತಿ ಸಂಪನ್ನರಾದ ರೇಕಮ್ಮ ಪ್ರತಿನಿತ್ಯವೂ ಲಿಂಗಕ್ಕೆ ಅಷ್ಟ ವಿಧ ಪೂಜೆಯ ಮಾಡುತ್ತಿದ್ದಳು ಆ ಸಂದರ್ಭದಲ್ಲಿ ಆಕೆ ಹಲವು ಬಗೆಯ ಪುಷ್ಪಗಳನ್ನು ತಂದು ಇಪ್ಪತ್ತೆಂಟು ಬಗೆಯಪತ್ರಗಳನ್ನು ಮೂಡಿವಾಳ ಒಂಬತ್ತು ಬಗೆಯ ಪರಿಮಳ ಬೇರುಗಳನ್ನು ತಂದು ಲಿಂಗ ಪೂಜೆಗೆ ದಂಡೆ ಕುಚ್ಚು ಮಾಲೆಗಳನ್ನು ಕಟ್ಟಿ ಸಮರ್ಪಿಸುತ್ತಿದ್ದರು. ಅವಳು ಕಟ್ಟುವ ದಂಡೆಯ ಮಧ್ಯದಲ್ಲಿ ಕೆಂಪಿನ ಸೇವಂತಿಕೆಯನ್ನು ಸಂಪಿಗೆಯನ್ನು ಸೇರಿಸಿ ಸುಂದರಗೊಳಿಸಿ ಭಕ್ತಿಯಿಂದ ಅರ್ಪಿಸುತ್ತಿದ್ದಳು. ಒಂದು ದಿನ ಕೆಂಪಿನ ಹೂಗಳು ದೊರೆಯದೆ ಇದ್ದಾಗ ತನ್ನ ದೇಹದ ಮಾಂಸವ ತೆಗೆದು ಸೇವಂತಿಗೆಯಂತೆ ಇಡೀ ದಂಡೆಯ ಹಾರದಲ್ಲಿ ಸೇರಿಸಿ ಕಟ್ಟಿ ಲಿಂಗ ಪೂಜೆ ಮಾಡಿದಳು ಎಂಬುದನ್ನು ನಾವು ಇತಿಹಾಸದಿಂದ ತಿಳಿಯುತ್ತೇವೆ. ಹೀಗೆ ಶಿವನನ್ನು ತನ್ನ ಉಗ್ರ ಭಕ್ತಿಯ ಮೂಲಕ ಒಲಿಸಿಕೊಂಡ ಶರಣೆ ರೇಕಮ್ಮ ತನ್ನ ಅನುಭವದ ಮೂಲಕ ಒಂದೇ ಒಂದು ವಚನವನ್ನು ಈ ರೀತಿಯಾಗಿ ರಚಿಸಿದ್ದಾರೆ.

ವಚನ ವಿಶ್ಲೇಷಣೆ

- Advertisement -

ಲಿಂಗ ಬಾಹ್ಯನ, ಆಚಾರ ಭ್ರಷ್ಟನ, ವೃತ ತಪ್ಪುಕನ,
ಗುರುಲಿಂಗ ಜಂಗಮ ಕೊಂದವನ,
ಪಾದಕ ಪ್ರಸಾದ ದೂಷಕನ,
ವಿಭೂತಿ ರುದ್ರಾಕ್ಷಿ ನಿಂದಕನ ಕಂಡಡೆ
ಶಕ್ತಿಯುಳ್ಳಡೆ ಸಂಹಾರವ ಮಾಡುವುದು,
ಶಕ್ತಿ ಇಲ್ಲದಿದ್ದರೆ ಕಣ್ಣು ಕರ್ಣವ ಮುಚ್ಚಿಕೊಂಡು
ಶಿವ ಮಂತ್ರವ ಜಪಿಸುವುದು
ಅಷ್ಟು ಆಗದಿದ್ದರೆ ಆ ಸ್ಥಳವ ಬಿಡುವುದು
ಅದಲ್ಲದಿದ್ದರೆ ಕುಂಭ ಪಾತಕ ನರಕದಲ್ಲೆದ್ದುವ ಶ್ರೀ ಗುರು ಸಿದ್ದೇಶ್ವರರು…

ಶರಣರು ಪಾಲಿಸಿಕೊಂಡು ಬಂದ ಭಕ್ತಿಯ ಕುರುಹುಗಳಾದ ಆಚಾರ, ನೇಮ, ವೃತ, ಪ್ರಸಾದ, ಪಾದೋದಕ, ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ ಇವುಗಳ ಕುರಿತಾಗಿ ಯಾವುದಾದರೂ ದೂಷಣೆ ಮಾಡಿದರೆ ಅದನ್ನು ಸಹಿಸದೇ ಸಿಡಿದೆದ್ದು ಸಂಹಾರ ಮಾಡಬೇಕು ಒಂದು ವೇಳೆ ಹಾಗೆ ಸಂಹಾರ ಮಾಡುವ ಶಕ್ತಿ ಇಲ್ಲದಿದ್ದರೆ ದುರ್ಬಲನಾಗಿದ್ದರೆ ಕಣ್ಣು ಕಿವಿ ಮುಚ್ಚಿಕೊಂಡು ತಲೆ ಕಚ್ಚಿತ್ತದಿಂದ ಶಿವನಾಮ ಮಂತ್ರ ಜಪಿಸುವುದು ಉಚಿತ ಹೀಗೆ ಮೇಲೆ ಹೇಳಿದ್ದರಲ್ಲಿ ಯಾವುದನ್ನು ಮಾಡದಿದ್ದರೆ ಅಂತಹ ವ್ಯಕ್ತಿ ಪಾತಕನಾಗಿ ನರಕಕ್ಕೆ ಸೇರುವುದು ಖಚಿತ ಎಂದು ಕಟು ಸತ್ಯವನ್ನು ಈ ವಚನವು ಸಾರುತ್ತದೆ ಹಿಂದಿನ ಕಾಲಕ್ಕೂ ಬಹಳ ಸೂಕ್ಷ್ಮವಾಗಿ ಅನ್ವಯಿಸುತ್ತದೆ ಒಂದು ಉತ್ತಮ ಕೆಲಸ ಕಾರ್ಯಕ್ಕೆ ಕೈ ಹಾಕಿದಾಗ ಅದರ ವಿರುದ್ಧವಾಗಿ ನುಡಿಯುವ ಕುಹಕಿಗಳು ಇದ್ದೇ ಇರುತ್ತಾರೆ ಅಂತವರನ್ನು ಹತ್ತಿಕ್ಕಬೇಕು ಇಲ್ಲದಿದ್ದರೆ ದುಷ್ಟರಿಂದ ದೂರವಿರಬೇಕೆಂದು ಅಲ್ಲಿಂದ ದೂರಕ್ಕೆ ಹೋಗಬೇಕು ಬಂಡಾಯದ ಪ್ರತಿಭಟನೆಯು ಈ ವಚನದಲ್ಲಿ ಅಂತಿಮವಾಗಿ ಸಾತ್ವಿಕತೆ ಅಡಗಿದ್ದು ಗೋಚರವಾಗುತ್ತದೆ. ಶರಣೆ ರೇಕಮ್ಮಳು ಈ ವಚನದ ಮೂಲಕ ಮೂರು ಸಲಹೆಗಳನ್ನು ನೀಡುತ್ತಾಳೆ. ಅನ್ಯಾಯವನ್ನು ಮಾಡುವುದಕ್ಕಿಂತ ಅನ್ಯಾಯವನ್ನು ಸಹಿಸುವುದೇ ದೊಡ್ಡ ಅಪರಾಧ ಎಂಬ ಹಿನ್ನೆಲೆಯಲ್ಲಿ ಈ ವಚನವನ್ನು ಅರ್ಥೈಸಿಕೊಳ್ಳಬಹುದು.

ಶರಣ ರೇಕಮ್ಮಳ ಧೈರ್ಯ  ಕಿಚ್ಚು ನೈತಿಕ ನಿಷ್ಠೆ ಈ ಒಂದು ವಚನದಲ್ಲಿ ವ್ಯಕ್ತವಾಗುತ್ತದೆ. ಕೆಟ್ಟ ಸಮಾಜದಲ್ಲಿ ಉತ್ತಮ ಕೆಲಸಕ್ಕಾಗಿ ಪ್ರತಿರೋಧವನ್ನು ಕೈಗೊಳ್ಳಬೇಕಾದದ್ದು ಅನಿವಾರ್ಯ ಪಂಚಾಚಾರಗಳಲ್ಲಿ ಗಣಾಚಾರಕ್ಕೆ ಇನ್ನೊಂದು ವಿಶಾಲವಾದ ಅರ್ಥ ಉಂಟು ಇದು ಸಮಾಜಕ್ಕೆ ಮನುಕುಲಕ್ಕೆ ತನ್ನ ರಾಷ್ಟ್ರಕ್ಕೆ ಏನಾದರೂ ಆಪತ್ತುಗಳು ಬಂದೊದಗಿದ ಸಂದರ್ಭದಲ್ಲಿ ಮನುಷ್ಯನಾದವನು ತನ್ನ ಪ್ರಾಣವನ್ನಾದರೂ ಬಲಿಕೊಟ್ಟು ರಕ್ಷಿಸಬೇಕೆಂಬುದನ್ನು ಹೇಳಿಕೊಡುತ್ತದೆ ಅಂತೇ ತಮ್ಮ ಶಿವ ತತ್ವದ ಸತ್ಯದ್ರೋಹಿಗಳನ್ನು ಧ್ವಂಸ ಮಾಡಬೇಕೆಂದು ರೇಕಮ್ಮ ಹೇಳುತ್ತಾಳೆ.

ಗುರುಲಿಂಗ ಜಂಗಮ ಮತ್ತು ಶಿವಭಕ್ತ ನ ಪ್ರಾಣಕ್ಕೆ ಅಪಾಯ ಬಂದಾಗ ಒಪ್ಪುದಾದ ಪ್ರತೀಕಾರವನ್ನು ಕೈಗೊಳ್ಳಬೇಕು ಇದು ಒಂದರ್ಥದಲ್ಲಿ ಸ್ವದೇಶವನ್ನು ಕಾಯುವಂತಹ ವೀರ ಸೈನಿಕನ ದೇಶ ಪ್ರೇಮ ರಾಷ್ಟ್ರಭಕ್ತಿಗೂ ಕೂಡ ಅಳವಡಿಸಿಕೊಳ್ಳಬಹುದು.

ಹೀಗೆ ಹನ್ನೆರಡನೇ ಶತಮಾನದ ಶಿವಶರಣೆಯರು ತಮ್ಮ ಧ್ವನಿ ಎತ್ತುವ ಮೂಲಕ ಅನೇಕ ತೊಂದರೆಗಳನ್ನು ಮೆಟ್ಟಿನಿಂತು ಅಂದಿನ ಸಮಾಜದಲ್ಲಿ ಅಸಮಾನತೆಗಳನ್ನು ಹೋಗಲಾಡಿಸಲು ಸಾಂಕೇತಿಕವಾಗಿ ಲಿಖಿತ ಹೋರಾಟಗಳನ್ನು ನಡೆಸಿ ತಮ್ಮ ಅಸ್ತಿತ್ವವನ್ನು ಕಾಯ್ದುಕೊಂಡು ಇಂದಿಗೂ ಮಿನುಗುವ ತಾರೆಗಳಂತೆ ಕಂಗೊಳಿಸುತ್ತಿದ್ದಾರೆ.
ಶರಣು ಶರಣಾರ್ಥಿಗಳು.

ದಾಕ್ಷಾಯಣಿ ಮಂಡಿ
ಮಹಾಲಿಂಗಪುರ

- Advertisement -
- Advertisement -

Latest News

ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಎನ್.ಎಸ್.ಎಸ್. ಶಿಬಿರ ಸಹಕಾರಿ: ಡಾ. ಸಂಜೀವ ತಳವಾರ

ಮೂಡಲಗಿ: ವಿದ್ಯಾರ್ಥಿಗಳು ಸೇವಾ ಮನೋಭಾವ ರೂಢಿಸಿಕೊಳ್ಳಲು ಮತ್ತು ತಮ್ಮ ಬದುಕನ್ನು ಸಾರ್ಥಕ ಪಡಿಸಿಕೊಳ್ಳಲು ಎನ್‌.ಎಸ್‌.ಎಸ್‌ ವಾರ್ಷಿಕ ವಿಶೇಷ ಶಿಬಿರಗಳು ಉತ್ತಮ ಅವಕಾಶ ಒದಗಿಸಿಕೊಡುತ್ತವೆ ಎಂದು ರಾಣಿ...
- Advertisement -

More Articles Like This

- Advertisement -
close
error: Content is protected !!
Join WhatsApp Group