spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ಅಕ್ಕಮಹಾದೇವಿ

ಅಕ್ಕಮಹಾದೇವಿ ಹನ್ನೆರಡನೆಯ ಶತಮಾನದ ಪ್ರಸಿದ್ಧ ವಚನಕಾರ್ತಿ. ಈಕೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಉಡುತಡಿಯವಳು. ಬಾಲ್ಯದಿಂದಲೇ ಶಿವನಲ್ಲಿ ಅಪಾರವಾದ ಭಕ್ತಿಯಿದ್ದ ಈಕೆಗೆ ಕೌಶಿಕನೆಂಬ ರಾಜನೊಡನೆ ಬಲವಂತದ ವಿವಾಹವಾಗುತ್ತದೆ. ಶಿವಭಕ್ತಿಗೆ ಅಡ್ಡಿಪಡಿಸಿದ ಅವನನ್ನು ತೊರೆದು ಕಲ್ಯಾಣಕ್ಕೆ ಸಾಗುತ್ತಾಳೆ. ಶರಣರೊಂದಿಗೆ ಆಧ್ಯಾತ್ಮಿಕ ಚರ್ಚೆಯಲ್ಲಿ ಪಾಲ್ಗೊಂಡು ನಂತರ ಶ್ರೀಶೈಲದ ಕದಳಿವನದಲ್ಲಿ ಐಕ್ಯಳಾದಳೆಂದು ಐತಿಹ್ಯ.

ಅಕ್ಕಮಹಾದೇವಿ ಎಲ್ಲರಂತೆ ಜನಿಸಿದರೂ ಎಲ್ಲರಂತೆ ಬೆಳೆಯಲಿಲ್ಲ , ಎಲ್ಲರಂತೆ ಬಾಳಲಿಲ್ಲ. ಅಸಾಮಾನ್ಯಳಂತೆ ಬೆಳೆದು ಪರಿಪೂರ್ಣಳಂತೆ ಬದುಕಿದಳು. ಆಕೆ ಒಟ್ಟು ಜೀವಿಸಿದುದು ಕೇವಲ ಇಪ್ಪತ್ತು ವರ್ಷ ಮಾತ್ರವಾದರೂ 2000 ವರ್ಷಗಳಲ್ಲಿ ಸಾಧಿಸಲಾರದುದನ್ನು ಸಾಧಿಸಿ ಅದೇನು ಹೆಣ್ಣೋ ಜಗದ ಕಣ್ಣೋ ಎಂಬಂತೆ ಮಿಂಚಿ -ಕೋರೈಸಿ ಕಣ್ಮರೆಯಾದಳು.

- Advertisement -

ವಚನ ವಿಶ್ಲೇಷಣೆ

ತನು ಕರಗದವರಲ್ಲಿ ಪೂಜೆಯನೊಲ್ಲೆಯಯ್ಯಾ ನೀನು
ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು
ಧನ ಕರಗದವರಲ್ಲಿ ಅಕ್ಷತೆಯನೊಲ್ಲೆಯಯ್ಯಾ ನೀನು ಹದುಳಿಗರಲ್ಲದವರಲ್ಲಿ ಗಂಧವನೊಲ್ಲೆಯಯ್ಯಾ ನೀನು
ಅರಿವು ಕಣ್ದೆರೆಯದವರಲ್ಲಿ ಆರತಿಯನೊಲ್ಲೆ ಯಯ್ಯಾ ನೀನು
ಭಾವ ಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯಾ ನೀನು
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆ ಯಯ್ಯಾ ನೀನು
ತ್ರಿಕರಣ ಶುದ್ಧವಿಲ್ಲದವರಲ್ಲಿ ತಾoಬೂಲವನೊಲ್ಲೆ ಯಯ್ಯಾ ನೀನು ಎನ್ನಲ್ಲಿ ಏನುoಟೆoದು ಎನ್ನ ಕರಸ್ಥಲವನಿಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನ !

ಅರಿವಿಗಿಂತಲೂ ಆಚಾರ ಮುಖ್ಯ. ಅರ್ಚನೆಗಿಂತಲೂ ಭಾವನೆ ಮುಖ್ಯ ಎಂಬ ವಿಷಯವನ್ನು ವೈರಾಗ್ಯ ಮೂರ್ತಿ ಮಹಾದೇವಿಯಕ್ಕನವರು ಪ್ರಸ್ತುತ ವಚನದಿಂದ ಪ್ರತಿಬಿಂಬಿಸುತ್ತಿದ್ದಾರೆ. ಶಿವಶರಣರು ತರ್ಕ ಶಾಸ್ತ್ರಗಳಿಗಿಂತಲೂ ಚೊಕ್ಕ ಅನುಭವಕ್ಕೆ ಮಹತ್ವ ಕೊಟ್ಟರು. ವೇದ ಪಾಠಗಳಿಗಿಂತಲೂ ಜೀವನ ಪಾಠಗಳಿಗೆ ಪ್ರಾಶಸ್ತ್ಯ ಕೊಟ್ಟರು. ದೇವರುಗಳಿಗಿಂತ ಅಧಿಕ ಜೀವಗಳನ್ನು ಪ್ರೀತಿಸಿದರು. ಅದಕ್ಕಾಗಿ ಅವರು ಪೂಜೆ ತಪ್ಪಿದರೂ ಅಡ್ಡಿಯಿಲ್ಲ, ಪರೋಪಕಾರ ತಪ್ಪಬಾರದೆoಬ ನಿಯಮ ಮಾಡಿಕೊಂಡಿದ್ದರು.

- Advertisement -

ಲಿಂಗ ಪೂಜೆ ಮಾಡುವುದಕ್ಕಿಂತ ಯಾರ ಹಂಗಿಗೂ ಒಳಗಾಗದ ಸ್ವತಂತ್ರ ಕಾಯಕ ತತ್ಪರತೆ ಮುಖ್ಯವಾದುದೆಂದು ಭಾವಿಸಿದ್ದರು. ಒಬ್ಬರ ಮನವ ನೋಯಿಸಿ ಮತ್ತೊಬ್ಬರ ಮನೆಯ ಘಾತಿಸಿ ಕೈಕೊಳ್ಳುವ ಆರಾಧನೆ, ಆರಾಧನೆಯಲ್ಲ ವ್ರತ ಪಾಲನೆ. ಸುಗಂಧ ಪ್ರಸಾಧನಗಳಿಂದ ತಾವು ಮಾಡುವ ಮಜ್ಜನಕ್ಕಿಂತ ಸತ್ಯ ಶುದ್ಧ ಕಾಯಕದಲ್ಲಿ ಬೆವರು ಸುರಿಸುವುದು ಶ್ರೇಷ್ಠವಾದುದು. ತನು ಕರಗಿದವರ ಪೂಜೆಯನ್ನು ಪರಮಾತ್ಮ ಖುಷಿಯಿಂದ ಸ್ವೀಕರಿಸುತ್ತಾನೆ.

ಅದರಂತೆ ಅರ್ಚಿಸುವವರಿಗೆ ಕರಗುವ ಮನ ಇರಬೇಕು. ದೀನ ದುಃಖಿತರನ್ನು ನೋಡಿ ಮನ ಕರಗದವರು ಹಸಿವು ನೀರಡಿಸಿದವರ ಬಗ್ಗೆ ಮನ ಕರಗದವರು ಪತ್ರಿ ಏರಿಸಿದರೇನು? ಪುಷ್ಪ ಏರಿಸಿದರೇನು? ದಾನಧರ್ಮಗಳಿಗೆ ಮನ ಅರಳದವರು ಅರಳಿದ ಪುಷ್ಪ ಏರಿಸಿದರೂ ಒಂದೆಯೇ, ಏರಿಸದಿದ್ದರೂ ಒಂದೆಯೇ.

ಜನ ಕಲ್ಯಾಣದ ಕಾರ್ಯಗಳಲ್ಲಿ , ಗಣ ಸಂತೃಪ್ತಿಯ ಕೆಲಸಗಳಲ್ಲಿ ಭಕ್ತರಾದವರ ಧನವೂ ಕರಗಬೇಕು. ಇಂಥ ಕೆಲಸಗಳಿಂದ ಮತ್ತಷ್ಟು ತಮ್ಮ ಧನವೃದ್ಧಿ ಮಾಡಿಕೊಳ್ಳುವವರೇ ನಮಗೆ ಕಾಣಸಿಗುತ್ತಾರೆ. ಗಂಟುಗಳ್ಳರು ನೆಂಟರನೊಲ್ಲರು, ಜಿಪುಣ ಶಿಖಾಮಣಿಗಳು ಪುಣ್ಯಕಾರ್ಯ ಒಲ್ಲರು ಎಂಬoತೆ ಕೇವಲ ನುಡಿ ಸೇವೆ ಸಲ್ಲಿಸುವವರಿಂದ ದೇವರಿಗೆ ಆಗಬೇಕಾದುದೇನಿದೆ? ಸ್ವಂತ ಧನ ವ್ಯಯಿಸದವರು ಅಕ್ಷತೆಗಳನೊಗೆದರೆ ದೇವರಿಗೆ ಗೊಳಕಲ್ಲು ಸುರಿದಂತೆ ನೋವಾಗುತ್ತದೆಯಂತೆ.

ಅದೇ ರೀತಿ ದೇವರಿಗೆ ಗಂಧ ಹಚ್ಚುವವರು ಮೊದಲು ತಾವು ತಣ್ಣಗೆ ಇದ್ದು ತಂಪು ಮನಸ್ಸಿನವರಾಗಿರಬೇಕು ಹೊಟ್ಟೆಯಲ್ಲಿ ಆರ್ಭಟ, ನಾಲಿಗೆ ಮೇಲೆ ಮಂತ್ರ ಪಟಪಟ ಆದರೆ ಏನು ಸಾರ್ಥಕ್ಯ ಮನವಿಚ್ಚoದವಾಗದವರು ದೇವರಿಗೆ ಗಂಧ ಹೂಸಿದರೆ ಅಪ್ಯಾಯಮಾನವಾಗುತ್ತದೆ. ಕೋಪಿಷ್ಟ ಗಂಧ ಹಚ್ಚಿದರೆ ಅದು ಮಸೆದಾಯುಧದ ಗಾಯ ಮಾಡಿದಂತೆ ಎಂದು ಬಸವಣ್ಣನವರು ಹೇಳಿದ್ದಾರೆ.

ಅದೇ ರೀತಿ ಅರಿವು ಕಣ್ದೆರೆದವರು ಮಾತ್ರ ಆರತಿಯನ್ನೆತ್ತಬೇಕು. ಅರಿವು ಪಡೆದವರು ಎಂದರೆ ವಿದ್ಯಾವಂತರೂ ಅಲ್ಲ , ಬುದ್ಧಿವಂತರೂ ಅಲ್ಲ. ಮಾನವೀಯ ಕರ್ತವ್ಯ ಅರಿತವರು. ಪಾಪ ಪುಣ್ಯದ ಭೇದ ಅರಿತವರು, ತ್ಯಾಗ ಸಮರ್ಪಣೆಯ ಶೀಲ ಅರಿತವರು ಎಂಬರ್ಥ. ತಮ್ಮ ತಲೆಯ ತುಂಬ ಮಾಯಾoಧಕಾರ ತುಂಬಿಕೊಂಡವರು ದೇವರಿಗೆಂತು ಬೆಳಗಿಯಾರು, ದೇವರು ಎಂಥ ಪ್ರಕಾಶ ಸ್ವೀಕರಿಸಿಯಾನು ?

ಮನಸ್ಸನ್ನು ಕಲ್ಮಶ ಮಾಡಿಕೊಂಡವರು, ಸ್ವಾರ್ಥ ಸುಖಲೋಲುಪ್ತತೆಯ ದುರ್ಗಂಧ ತುಂಬಿಕೊಂಡವರು ಧೂಪ ಹಾಕಿದರೆ ಎಂತು ತಾನೇ ಅದು ದೇವರಿಗೆ ಮುಟ್ಟೀತು. ಅವರ ಅಂತರಂಗದನಾತವೇ ಪರಮಾತ್ಮನಿಗೆ ತಟ್ಟುತ್ತಿರುವಾಗ ಹೊರಗಿನ ಧೂಪದಿಂದ ಏನು ಉಪಯೋಗ ಆದೀತು ?

ನಮ್ಮೆಲ್ಲರಿಗೂ ಭೂಮಿ-ಸೀಮೆ, ಎತ್ತು-ಬಿತ್ತು, ಮಳೆ -ಗಾಳಿ, ದವಸ-ಧಾನ್ಯ ಇತ್ತು ಸಲಹುವ ಪರಮಾತ್ಮನಿಗೆ ನಮ್ಮ ನೈವೇದ್ಯದಿಂದ ಏನಾಗ ಬೇಕಾಗಿದೆ? ನಾವು ಹಪಹಪಿತನ ತೋರದೆ ಸಂತೃಪ್ತರಾಗಿದ್ದರೆ ಅದೇ ಪರಮಾತ್ಮನಿಗೆ ನೈವೇದ್ಯ. “ತಲ್ಲಣಿಸದಿರು ಕಂಡ್ಯ ತಾಳು ಮನವೆ, ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ”. ಎಂದು ಕನಕ
ದಾಸರು ಹಾಡಿದಂತೆ ಅವರವರ ಭಾವನೆ ಅವರವರ ಗೆಯ್ಮೆಗೆ ತಕ್ಕಂತೆ ನೀಡಲು ಪರಮಾತ್ಮ ಇದ್ದೇ ಇದ್ದಾನೆ. ಆತನು ಕೊಟ್ಟುದುದರಲ್ಲಿ ಸಮಾಧಾನಗೊಳ್ಳದೆ ನನ್ನದೂ ನನಗೆ ಇರಲಿ, ಅನ್ಯರದೂ ನನಗೆ ಇರಲಿ ಎಂದು ದುರಾಸೆ ಪಡಬಾರದು.

ತ್ರಿಕರಣ ಶುದ್ಧಿಯಿಲ್ಲದವರ ತಾoಬೂಲವನ್ನೂ ಸಹ ಮುಟ್ಟಲು ದೇವರು ತಯಾರಿರುವುದಿಲ್ಲವೆಂದ ಬಳಿಕ ಪಾಪಿಗಳಾದವರು, ಕೋಪಿಗಳಾದವರು, ದುಷ್ಟರು, ದಗಾಖೋರರು ದೇವರ ಹೆಸರಿಗೆ ಹೋಗದೆ ಇರುವುದೇ ವಾಸಿ, ಪಾಪಿ ಮಜ್ಜನಕ್ಕೆರೆದರೆ ಅದು ರಕ್ತದ ಧಾರೆ ಎಂದು ಬಸವಣ್ಣನವರು ಅಭಿಪ್ರಾಯ ಪಟ್ಟಿದ್ದಾರೆ. ಇಂಥವರು ಪೂಜೆ ಮಾಡಿ ದೇವರ ಅಸಮಾಧಾನವನ್ನು ಗಳಿಸುವುದಕ್ಕಿಂತ ಎಂದಿನಂತೆ ದೂರ ಉಳಿಯುವುದೇ ಕ್ಷೇಮವಲ್ಲವೆ? ಅಚ್ಚ ಆಸ್ತಿಕನಾದರೂ ಆಗಬೇಕು, ನಿಶ್ಚಯದ ನಾಸ್ತಿಕನಾದರೂ ಆಗಬೇಕು. ಅದಕ್ಕಾಗಿ ಬಾಹ್ಯ ಶುದ್ಧಿಗಿಂತ ಅಂತರoಗ ಶುದ್ಧಿ ಮುಖ್ಯವಾದುದು. ಇವೆಲ್ಲ ಸದ್ಗುಣಗಳು ಮಹಾದೇವಿಯಕ್ಕನವರಲ್ಲಿ ಇದ್ದವೆಂದೇ ಚೆನ್ನಮಲ್ಲಿಕಾರ್ಜುನನು ಚುಳುಕಾಗಿ ಅವರ ಕರಸ್ಥಲಕ್ಕೆ ಬಂದಿದ್ದಾನೆ. ಆ ಗುಣಗಳೆಲ್ಲ ತನ್ನಲ್ಲಿ ಇವೆಯೇ ಎಂಬುದು ಸದ್ಗುಣಿಯಾದ ಮಹಾದೇವಿಯಕ್ಕನ ಪ್ರಶ್ನೆ.

ಸುಧಾ ಪಾಟೀಲ
ಬೆಳಗಾವಿ

- Advertisement -
- Advertisement -

Latest News

ವೇದವ್ಯಾಸರ ಸ್ಮರಣಾರ್ಥ ಗುರು ಪೂರ್ಣಿಮಾ

ಗುರುಪೂರ್ಣಿಮಾ ವಿಶೇಷ ಅರಿವಿಗೆ ಅನಂತ ಶಯನನಾಗಿ ಜ್ಞಾನ ಜ್ಯೋತಿ ಬೆಳಗುತ್ತಿರುವ ಗುರಿತೋರುವ ನೇತಾರ ಬದುಕು ಭವಿಷ್ಯದ ಹಾದಿಯ ದಿಟ್ಟ ಹೆಜ್ಜೆಯಿಡಲು ಗುರಿ ತೋರುವ ದೈವದ ಗುರಿಕಾರ ಜ್ಞಾನದ ತೃಷೆಯನ್ನು ತಣಿಸಿದ ಬದುಕನ್ನು ಹದಗೊಳಿಸುವ ಗುರುಬಲದ ಶಿಲ್ಪಿಗಾರ ಸಕಲ ಜ್ಞಾನವಾಹಿನಿ ಜಾಗೃತಿ ಜಗಕೆ...
- Advertisement -

More Articles Like This

- Advertisement -
close
error: Content is protected !!
Join WhatsApp Group