spot_img
spot_img

ದೇಶ ಹಾಗೂ ಸಮಾಜಕ್ಕೆ ಧರ್ಮ, ಸಂಸ್ಕೃತಿ ಧಾರೆಯೆರೆದವರೇ ಬೇಡ ಜಂಗಮರು- ಬಿ ಡಿ ಹಿರೇಮಠ

Must Read

ಬೀದರ – ಈ ದೇಶಕ್ಕೆ, ಎಲ್ಲ ಸಮಾಜಗಳಿಗೆ ಧರ್ಮ ಸಂಸ್ಕೃತಿ ಯನ್ನು ಧಾರೆಯೆರೆದ ಧಣಿ ನಿಜವಾದ ಬೇಡ ಜಂಗಮನು ಎಂದು ಅಖಿಲ ಕರ್ನಾಟಕ ಜಂಗಮ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ ಡಿ ಹಿರೇಮಠ ಹೇಳಿದರು.

ಅವರು ಬೀದರ ಜಿಲ್ಲೆಯ ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದ ಥೇರ್ ಮೈದಾನದಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಜಂಗಮ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಸ್ವತಂತ್ರ ಪೂರ್ವದಲ್ಲಿ ೩೪ ಜಾತಿಗಳ ಯಾದಿ ಇತ್ತು. ಅದರಲ್ಲಿ ಬೇಡ ಜಂಗಮರಿಗೆ ಪರಿಶಿಷ್ಟರ ಸ್ಥಾನ ನೀಡಲಾಗಿತ್ತು. ರಾಜ ಮಹಾರಾಜರ ಕಾಲದಲ್ಲೂ ಜಂಗಮರಿಗೆ ಮಹತ್ವದ ಸ್ಥಾನ ನೀಡಿದರು. ಆದರೆ, ಇಂದು ನಮ್ಮ ಸ್ಥಿತಿ ಚಿಂತಾಜನಕವಾಗಿದೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರ್ಥಿಕ ಸಬಲತೆ, ಧಾರ್ಮಿಕ ಸ್ವಾತಂತ್ರ್ಯ, ರಾಜಕೀಯ ಪ್ರಾಶಸ್ತ್ಯ ಎಲ್ಲವನ್ನು ಇತರೆ ಸಮಾಜಗಳು ನಮ್ಮಿಂದ ಕಬಳಿಸಿವೆ. ಸ್ವತಂತ್ರ ಪೂರ್ವದ ಇತಿಹಾಸ ದಾಖಲೆಗಳಲ್ಲಿ, ಸೂರ್ಯನಾಥ ಕಾಮತ್ ಅವರ ವರದಿಯಲ್ಲಿ, ಡಿಪ್ರೆಶನ್ ಕಾಯಿದೆ, ೧೯೩೫ರ ಕಾಯಿದೆಗಳಲ್ಲಿ ಅಯ್ಯಾಚಾರ ಪಡೆದವರು, ಕಂತಿ ಭಿಕ್ಷೆ, ರಾಶಿ ಬೇಡುವವನು, ನಿತ್ಯ ಕಂತಿ ಭಿಕ್ಷೆ ಬೇಡುವವನು ಸಹ ನಿಜವಾದ ಬೇಡ ಜಂಗಮ ಎಂಬುದರ ಬಗ್ಗೆ ಸಾಕಷ್ಟು ಪುರಾವೆಗಳು ನಮ್ಮಲ್ಲಿದ್ದರೂ ಸಹ ರಾಜಕೀಯ ಧುರೀಣರು ನಮ್ಮನ್ನು ದಮನ ಮಾಡಲಿಕ್ಕೆ ಹೊರಟಿದ್ದಾರೆ ಎಂದು ಕಿಡಿ ಕಾರಿದರು.

ನಮ್ಮ ಮೇಲೆ ಕಾನೂನು ಮಾಡುವವರು ನಮ್ಮ ಹಕ್ಕನ್ನು ದಮನ ಮಾಡಲು ಹುನ್ನಾರ ನಡೆಸುತ್ತಿದ್ದಾರೆ. ಆದ್ದರಿಂದ ನಾವು ಸುಮ್ಮನ್ನೇ ಕೂಡದೇ ಒಂದು ಕಡೆ ಕಾನೂನು ಮೂಲಕ ಹೋರಾಟ ನಡೆಸಿದರೆ, ಮತ್ತೊಂದೆಡೆ ಸಂಘಟಿತರಾಗಿ ಬೀದಿಗಿಳಿಯುವ ತಾಕತ್ತು ಬೆಳೆಸಿಕೊಳ್ಳಬೇಕಿದೆ. ಈ ದೇಶ ಕುರುಬರಿಗೂ ಸಹ ಅನ್ಯಾಯ ಮಾಡಲು ಹೊರಟಿದೆ. ಈ ದೇಶಕ್ಕೆ ನಿಜವಾದ ಸಂಸ್ಕಾರ ನೀಡುವ ಹಾಗೂ ಭ್ರಷ್ಟಾಚಾರ, ಅತ್ಯಾಚಾರ ರಹಿತ ಸಮಾಜ ನಿರ್ಮಿಸಲು ಹೊರಟ ಜಂಗಮ ಸಮಾಜವನ್ನು ಇಲ್ಲಿಯ ರಾಜಕಾರಣಿಗಳು ಗುರುತಿಸಿ ನಮಗೆ ಬೇಡ ಜಂಗಮರೆಂದು ಪರಿಗಣಿಸಿ ಈ ಹಿಂದೆ ಇದ್ದ ನಮ್ಮ ಹಕ್ಕನ್ನು ಇಂದು ಸಹ ಮನ್ನಿಸಬೇಕೆಂದು ಹಿರೇಮಠ ಕರೆ ನೀಡಿದರು.

ಈ ವಿಶ್ವಕ್ಕೆ ಪ್ರಜಾಪ್ರಭುತ್ವ ನೀಡಿರುವ ಅಣ್ಣ ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಿಂದಲೇ ನಮ್ಮ ಹೋರಾಟ ಬೃಹತ್ ಪ್ರಮಾಣದಲ್ಲಿ ಆರಂಭವಾಗಿದೆ. ಇದು ಕಲ್ಯಾಣ ಕ್ರಾಂತಿ ರೂಪ ಪಡೆದರೂ ಅಚ್ಚರಿ ಇಲ್ಲ. ನಮ್ಮ ಹಕ್ಕು ನಮಗೆ ಸಿಗುವ ವರೆಗೂ ನಾವು ಹೋರಾಟದಿಂದ ಹಿಂದೆ ಸರಿಯುವುದಿಲ್ಲವೆಂದು ಎಚ್ಚರಿಸಿದರು.
ರಾಜ್ಯದಲ್ಲಿ ನಾವು ಸುಮಾರು ೪೫ ಲಕ್ಷ ಜನ ಬೇಡ ಜಂಗಮರಿದ್ದೇವೆ ಎಂಬುದನ್ನು ಈ ದೇಶದ ರಾಜಕಾರಣಿಗಳು ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದರೆ ಸರ್ಕಾರವನ್ನೇ ಬುಡ ಮೇಲು ಮಾಡುವ ತಾಕತ್ತು ನಮ್ಮ ಸಮಾಜಕ್ಕಿದೆ. ನಮ್ಮ ಬೇಡಿಕೆ ಮುಂದಿನ ದಿನಗಳಲ್ಲಿ ಈಡೇರದಿದ್ದರೆ ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.

ನಾವಿಂದು ಸಂಘಟಿತರಾಗಿದ್ದೇವೆ. ನಮ್ಮ ಬಗ್ಗೆ ಬೀದಿ ಬೀದಿಗಳಲ್ಲಿ ಹೀಯಾಳಿಸಿದರೆ ತಕ್ಕ ಉತ್ತರ ನೀಡುವ ಸಂಘಟನೆ ಸಹ ನಮ್ಮಲ್ಲಿದೆ ಎಂಬುದನ್ನು ನಕಲಿ ದಲಿತ ಪುಡಾರಿಗಳು ಅರಿಯಬೇಕು, ಸಂವಿಧಾನದ ರಕ್ಷಣೆ ನಮ್ಮ ಗುರಿ, ಅನ್ಯಾಯದ ವಿರುದ್ಧ ಹೋರಾಟವೇ ನಮ್ಮ ಪಕ್ಷ ಎಂದು ಬಿ.ಡಿ ಹಿರೇಮಠ ಸ್ಪಷ್ಟ ಪಡಿಸಿದರು.

ತಡೋಳಾ ಹಾಗೂ ಮೇಹಕರ್ ಪೂಜ್ಯರಾದ ಷ.ಬ್ರ ರಾಜೇಶ್ವರ ಶಿವಾಚಾರ್ಯ ಸ್ವಾಮಿಜಿ ಮಾತನಾಡಿ, ಈ ಸಮಾಜಕ್ಕೆ ೧೪ ಸಂಸ್ಕಾರಗಳನ್ನು, ಗುರು ಪರೆಂಪರೆಯನ್ನು ಧಾರೆ ಎರೆದ ಸಮಾಜ ನಮ್ಮದು. ಈ ಸಮಾಜಕ್ಕೆ ತನ್ನ ಸರ್ವಸ್ವವನ್ನು ತ್ಯಾಗ ಮಾಡಿದ ಹಾಗೂ ಕಂತಿ ಭಿಕ್ಷೆ ಬೇಡಿ ಅನ್ನ ಇಲ್ಲದವರಿಗೆ ಆಹಾರವಿತ್ತ ಸಮಾಜ ಬೇಡ ಜಂಗಮ ಎಂಬುದನ್ನು ಈ ದೇಶದ ಎಲ್ಲ ಸಮುದಾಯಗಳು ಅರ್ಥ ಮಾಡಿಕೊಳ್ಳಬೇಕು, ನಮ್ಮವರ ಬೇಡಿಕೆ ಈ ಸರ್ಕಾರಗಳು ಮನ್ನಿಸಬೇಕೆಂದು ಹೇಳಿದರು. ಕೊಳಲಮಠದ ಪೂಜ್ಯ ಡಾ.ಶಾಂತಲಿಗ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿ ಮಾತನಾಡದರು. ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಜ್ಯೋತಿ ಪ್ರಕಾಶ ಮಿರ್ಜಿ, ಭಾತಂಬ್ರಾದ ಪೂಜ್ಯ ಶಿವಯೋಗೇಶ್ವರ ಶ್ರೀಗಳು, ಡಾ.ರಾಜಶೇಖರ ಶಿವಾಚಾರ್ಯರು, ಘನಲಿಂಗ ರುದ್ರಮುನಿ ಶಿವಾಚಾರ್ಯರು ಸೇರಿದಂತೆ ಅನೇಕ ಮಠಾಧೀಶರು ವೇದಿಕೆಯಲ್ಲಿದ್ದರು. ಬಸವಕಲ್ಯಾಣದ ಡಾ.ಬಸವರಾಜ ಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು.

ಶಿವಯ್ಯ ಸ್ವಾಮಿ ಕಮಠಾಣ ಸ್ವಾಗತ ಕೋರಿದರು. ಶ್ರೀಕಾಂತ ಸ್ವಾಮಿ ಸೋಲಪೂರ ವಂದಿಸಿದರು. ಸುಮಾರು ೨೫ ಸಾವಿರಕ್ಕೂ ಅಧಿಕ ಬೇಡ ಜಂಗಮ ಬಾಂಧವರು ಸಮಾವೇಶದಲ್ಲಿದ್ದರು.

- Advertisement -
- Advertisement -

Latest News

ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ

ಬೆಳಗಾವಿ: ಮಕ್ಕಳಿಲ್ಲದ ಬಡ ದಂಪತಿಗಳಿಗೆ ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ ಕೊಡಿಸಲು ಕೊಲ್ಲಾಪುರದ ಸಿದ್ಧಗಿರಿ ಮಠದ ದತ್ತಿ ಆಸ್ಪತ್ರೆಯಲ್ಲಿ ಐವಿಎಫ್ ಕೇಂದ್ರ ಸ್ಥಾಪಿಸಲಾಗಿದೆ ಎಂದು ಮುಜರಾಯಿ,...
- Advertisement -

More Articles Like This

- Advertisement -
close
error: Content is protected !!