spot_img
spot_img

ನಮ್ಮ ನಾಡಿನ ಹೆಮ್ಮೆಯ ಸುಪುತ್ರರಾದ ಪ್ರೊ.ಯು. ಆರ್. ರಾವ್ ಅವರು ಜನಿಸಿದ ದಿನ ಮಾರ್ಚ್ 10 ರಂದು

Must Read

ಉಡುಪಿ ರಾಮಚಂದ್ರ ರಾವ್ ಅವರು ಬಾಹ್ಯಾಕಾಶ ವಿಜ್ಞಾನಿಗಳಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷರಾಗಿ ಭಾರತ ಇಂದು ಬಾಹ್ಯಾಕಾಶ ಯುಗದಲ್ಲಿ ಗಳಿಸಿರುವ ಪ್ರತಿಷ್ಠಿತ ಸ್ಥಾನಕ್ಕೆ ಪ್ರಮುಖ ಕೊಡುಗೆದಾರರು. 2004ರ ವರ್ಷದಲ್ಲಿ ಅಂತರರಾಷ್ಟ್ರೀಯ ಪ್ರತಿಷ್ಠಿತ ‘ಸ್ಪೇಸ್ ಮಾಗಜೈನ್’ ಬಾಹ್ಯಾಕಾಶ ವಿಜ್ಞಾನದಲ್ಲಿ 1989-2004 ವರ್ಷದ ವರೆಗಿನ ಅವಧಿಯ ಸಾಧನೆಯ ಆಧಾರದ ಮೇಲೆ ಬಾಹ್ಯಾಕಾಶ ವಿಜ್ಞಾನ ಸಾಧನೆಯ ಹತ್ತು ಪ್ರಮುಖ ಸಾಧಕರಲ್ಲಿ ಯು. ಆರ್. ರಾವ್ ಅವರನ್ನು ಒಬ್ಬ ಪ್ರಮುಖರೆಂದು ಪರಿಗಣಿಸಿತು.

ಇದು ನಮ್ಮ ದೇಶ ಮತ್ತು ಇವರನ್ನು ಪಡೆದ ನಮ್ಮ ಕನ್ನಡ ನಾಡಿಗೆ ಹೆಮ್ಮೆಯ ಪ್ರತೀಕವಾಗಿದೆ. ಕನ್ನಡ ಭಾಷೆಗೂ ಶ್ರೇಷ್ಠ ಕೊಡುಗೆಗಳನ್ನು ನೀಡಿದ ತಂತ್ರಜ್ಞರಿಗೂ ಸಂಬಂಧವಿಲ್ಲ ಎಂದು ವಿಚಿತ್ರ ವಾದ ಹೂಡುವ ಪಟ್ಟಭದ್ರ ಜನರು ಒಮ್ಮೆ ಯು. ಆರ್. ರಾವ್ ಅವರ ಕನ್ನಡದ ವಿದ್ವತ್ ಪೂರ್ಣ ಭಾಷಣವನ್ನು ಒಮ್ಮೆ ಕೇಳಿ ನೋಡಬೇಕು. 1992ರ ಅವಧಿಯಲ್ಲಿ ನಾವು ನಮ್ಮ ಸಂಸ್ಥೆಯಲ್ಲಿ ‘ಕನ್ನಡ ಸಂಪದ’ದ ದಶಮಾನೋತ್ಸವ ಆಚರಿಸಿದಾಗ ನಮ್ಮಲ್ಲಿಗೆ ಪ್ರೀತಿಯಿಂದ ಬಂದು ನಮ್ಮ ಸನ್ಮಾನವನ್ನು ಸ್ವೀಕರಿಸಿ ಕನ್ನಡದಲ್ಲಿ ವಿದ್ವತ್ಪೂರ್ಣ ಉಪನ್ಯಾಸ ನೀಡಿದ್ದು ನನ್ನ ಅವಿಸ್ಮರಣೀಯ ಸಂದರ್ಭಗಳಲ್ಲಿ ಪ್ರಮುಖವಾದುದು.

ಉಡುಪಿ ರಾಮಚಂದ್ರ ರಾವ್ ಎಂಬ ವಿಸ್ತೃತ ಹೆಸರಿನ ಯು. ಆರ್. ರಾವ್ ಅವರು ಮಾರ್ಚ್ 10, 1932ರಂದು ಉಡುಪಿ ಬಳಿಯ ಅಡಮಾರು ಗ್ರಾಮದಲ್ಲಿ ಜನಿಸಿದರು. ಮದ್ರಾಸು ವಿಶ್ವವಿದ್ಯಾಲಯದ ವಿಜ್ಞಾನ ಪದವಿ, ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಮತ್ತು ಗುಜರಾತ್ ವಿಶ್ವವಿದ್ಯಾಲಯದಲ್ಲಿ ಪಡೆದ ಡಾಕ್ಟರೇಟ್ ಪದವಿಗಳು ಅವರ ವಿದ್ಯಾಭ್ಯಾಸದ ಮೈಲುಗಲ್ಲುಗಳು. ದೇಶದ ಪ್ರತಿಷ್ಠಿತ ಸಂಸ್ಥೆ ಎಂ.ಐ.ಟಿ ಯಲ್ಲಿ ಅಧ್ಯಾಪನ ನಡೆಸಿದ ರಾವ್ ಅವರು ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ವಿದ್ವಾಂಸರಾಗಿ ಎಲ್ಲಾ ಪ್ರಮುಖ ಬಾಹ್ಯಾಕಾಶ ನೌಕೆಗಳ ಸ್ವರೂಪ ಮತ್ತು ಗುಣಲಕ್ಷಣಗಳ ಬಗೆಗೆ ಸಮಗ್ರ ಅಧ್ಯಯನ ನಡೆಸಿದರು. 1966ರಲ್ಲಿ ಭಾರತಕ್ಕೆ ಹಿಂದಿರುಗಿದ ಪ್ರೊ.ರಾವ್ ಅಹಮದಾಬಾದಿನ ಭೌಗೋಳಿಕ ಸಂಶೋಧನಾ ಪ್ರಯೋಗಾಲಯದಲ್ಲಿ ಪ್ರೊಫೆಸರ್ ಆಗಿ ಅಧಿಕಾರವಹಿಸಿಕೊಂಡರು. ಎಂಭತ್ತೆರಡರ ಹಿರಿಯ ವಯಸ್ಸಿನಲ್ಲೂ ಪ್ರೊಫೆಸರ್ ರಾವ್ ಅವರು ಈ ಸಂಸ್ಥೆಯ ಚೇರ್ಮನ್ನರಾಗಿರುವ ವಿಶಿಷ್ಠ ಗೌರವ ಹೊಂದಿದ್ದಾರೆ.

ಭಾರತದ ಶ್ರೇಷ್ಠ ವಿಜ್ಞಾನಿಗಳಾದ ಡಾ. ವಿಕ್ರಂ ಸಾರಾಬಾಯಿ ಅವರ ಮಾರ್ಗದರ್ಶನದಲ್ಲಿ ಕಾಸ್ಮಿಕ್ ರೇ ಅಸಿಸ್ಟೆಂಟ್ ಎಂಬ ಹುದ್ದೆಯಲ್ಲಿ ತಮ್ಮ ಕಾರ್ಯಕ್ಷೇತ್ರವನ್ನು ಪ್ರಾರಂಭಿಸಿದ ರಾವ್ ಅವರು, ಮುಂದೆ ಎಂ.ಐ.ಟಿ ಯಲ್ಲಿ ಆ ಕಾರ್ಯವನ್ನು ಮುಂದುವರೆಸಿದರು. ಜೆ.ಪಿ.ಎಲ್ ಸಮೂಹದ ಸಹಯೋಗದಲ್ಲಿ ಸೌರಗಾಳಿಯ ಅಲೆಗಳ ಮೂಲಗುಣ ಮತ್ತು ಖಗೋಳದಲ್ಲಿನ ಅಯಸ್ಕಾಂತೀಯ ಶಕ್ತಿಯ ಮೇಲೆ ಅವುಗಳ ಹೊಂದಿರುವ ಪ್ರಭಾವವನ್ನು ಗುರುತಿಸಿದವರಲ್ಲಿ ರಾವ್ ಅವರು ಪ್ರಪ್ರಥಮರು. ಅವರು ಬಾಹ್ಯಾಕಾಶ ನೌಕೆಗಳ ಸಂಬಂಧವಾಗಿ ನಡೆಸಿದ ಪ್ರಯೋಗಗಳ ದೆಸೆಯಿಂದಾಗಿ ಸೌರ ವಿಕಿರಣಗಳ ತತ್ವ ಮತ್ತು ಸೌರವ್ಯೂಹದ ಗ್ರಹಗಳ ನಡುವಿನ ಅಯಸ್ಕಾಂತೀಯ ಗುಣತತ್ವಗಳ ಸಮಗ್ರ ಅರ್ಥೈಸುವಿಕೆ ಸಾಧ್ಯವಾಯಿತು. ದೇಶದ ಸಮಗ್ರ ಅಭಿವೃದ್ಧಿಗೆ ಬಾಹ್ಯಾಕಾಶ ವಿಜ್ಞಾನದ ಬಳಕೆ ಖಂಡಿತ ಸಾಧ್ಯ ಎಂಬುದರ ಬಗ್ಗೆ ದೃಢವಿಶ್ವಾಸ ಹೊಂದಿದ ಯು.ಆರ್. ರಾವ್ ಅವರು 1972ರ ವರ್ಷದಲ್ಲಿ ಉಪಗ್ರಹ ನಿರ್ಮಾಣದ ಜವಾಬ್ಧಾರಿಯನ್ನು ಹೊತ್ತುಕೊಂಡರು.

ಅವರ ಮಾರ್ಗದರ್ಶನದ ದೆಸೆಯಿಂದಾಗಿ ಭಾರತದ ಪ್ರಪ್ರಥಮ ಉಪಗ್ರಹ ‘ಆರ್ಯಭಟ’ 1975ರಲ್ಲಿ ನಿರ್ಮಾಣವಾಯಿತು. ಆ ನಂತರದಲ್ಲಿ ಭಾಸ್ಕರ, ಆಪಲ್, ರೋಹಿಣಿ, ಇನ್ಸಾಟ್ 1 ಮತ್ತು ಇನ್ಸಾಟ್ 2 ಸರಣಿಯ ವಿವಿದೋದ್ಧೇಶ ಉಪಗ್ರಹಗಳು ಮತ್ತು ಐ.ಆರ್.ಎಸ್ 1 ಎ ಮತ್ತು ಐ.ಆರ್.ಎಸ್ 1 ಬಿ ಅಂಥಹ ಸುಸಜ್ಜಿತ ಸೂಕ್ಷ್ಮಗ್ರಾಹಿ ಉಪಗ್ರಹಗಳು ಸೇರಿದಂತೆ ಹದಿನೆಂಟಕ್ಕೂ ಹೆಚ್ಚು ಪ್ರಮುಖ ಉಪಗ್ರಹಗಳು ರಾವ್ ಅವರ ನಿರ್ದೇಶನದಲ್ಲಿ ನಿರ್ಮಾಣಗೊಂಡವು.

1985ರಲ್ಲಿ ಭಾರತೀಯ ಸ್ಪೇಸ್ ಕಮಿಷನ್ನಿನ ಅಧ್ಯಕ್ಷರಾಗಿ ನೇಮಕಗೊಂಡ ಪ್ರೊ. ರಾವ್ ಅವರು ರಾಕೆಟ್ ತಂತ್ರಜ್ಞಾನ ಬಳಕೆಗೆ ವಿಶೇಷ ಆದ್ಯತೆ ನೀಡಿ 1992ರಲ್ಲಿ ಎ ಎಸ್ ಎಲ್ ವಿ ರಾಕೆಟ್ ಉಡಾವಣೆಯ ಪ್ರಮುಖ ಪಾತ್ರಧಾರಿಗಳಾದರು. ಇದಲ್ಲದೆ 1995ರಲ್ಲಿ ಬಾಹ್ಯಾಕಾಶಕ್ಕೆ ಪಿ ಎಸ್ ಎಲ್ ವಿ ಉಡಾವಣೆ ನೌಕೆಯನ್ನೂ ಸಿದ್ಧಪಡಿಸಿ ಆ ಮೂಲಕ 850 ಕೆ.ಜಿ. ತೂಕದ ಉಪಗ್ರಹವನ್ನು ಪೋಲಾರ್ ಪಥದಲ್ಲಿ ಇರಿಸಿಬಂದ ಸಾಮರ್ಥ್ಯಪೂರ್ಣ ಯೋಜನೆಯ ರೂವಾರಿಯಾದರು.

ಅವರ ನಿರ್ದೇಶನದಲ್ಲಿ ಮೂಡಿಬಂದ ಇನ್ಸಾಟ್ ಉಪಗ್ರಹಗಳ ದೆಸೆಯಿಂದಾಗಿ ಇಂದು ಭಾರತದ ಮೂಲೆ ಮೂಲೆಯ ಪ್ರಾಂತ್ಯಗಳೂ ಸಹಾ ದೂರಸಂಪರ್ಕ ಸೌಲಭ್ಯ ಹೊಂದುವಂತಾಗಿವೆ. ಭಾರತ ಇಂದು ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಸೌಲಭ್ಯದಲ್ಲಿ ಸಾಧಿಸಿರುವ ಅತ್ಯದ್ಭುತ ಪ್ರಗತಿಗೆ ಈ ಉಪಗ್ರಹಗಳು ಒದಗಿಸಿರುವ ಪೋಷಣೆ ಅಷ್ಟಿಷ್ಟಲ್ಲ. Antrix ಅನ್ನು ನಾನು ಅಂತರಿಕ್ಷ ಎಂದು ಉಚ್ಚರಿಸಲು ಆಸೆ ಪಡುತ್ತೇನೆ. ಈ ಅಂತರಿಕ್ಷ ಕಾರ್ಪೋರೇಷನ್ನಿನ ಪ್ರಥಮ ಚೇರ್ಮನ್ನರು ಕೂಡಾ ನಮ್ಮ ಪ್ರೊ. ಯು.ಆರ್. ರಾವ್ ಅವರು.

ಪ್ರೊ. ರಾವ್ ಅವರು ಬಾಹ್ಯಾಕಾಶ ತಂತ್ರಜ್ಞಾನದ ಉಪಯೋಗ, ದೇಶದ ಜನತೆಯ ದಿನನಿತ್ಯದ ಉಪಯುಕ್ತತೆಗೆ ದೊರಕಬೇಕೆಂದು ಹಗಲಿರುಳೂ ಶ್ರಮಿಸಿದರು. ಇನ್ಸಾಟ್ ಉಪಗ್ರಹ ಭಾರತೀಯ ಸಂಪರ್ಕಯುಗದಲ್ಲಿ ಸಮಗ್ರ ಕ್ರಾಂತಿಯನ್ನೇ ತಂದವು. ದೂರದರ್ಶನ, ಅಭಿವೃದ್ಧಿಪೂರ್ವಕ ಶಿಕ್ಷಣ, ರೇಡಿಯೋ ಸಂಪರ್ಕ ವ್ಯವಸ್ಥೆ, ಮಲ್ಟಿ ಮೀಡಿಯಾ, ಭೂ ವಿಜ್ಞಾನ ಮತ್ತು ಪ್ರಾಕೃತಿಕ ವಿಕೋಪ ಸೂಚಕಗಳ ಸೇವೆಗಳು ಇವುಗಳಲ್ಲಿ ಪ್ರಮುಖವಾದವು. ಯಾವುದೇ ಪ್ರತ್ಯೇಕಿತ ಪ್ರದೇಶವನ್ನೂ ಸಂವೇದಿಸಬಲ್ಲ ಸೂಕ್ಷ್ಮ ಸಂವೇಧಿ ವ್ಯವಸ್ಥೆಗಳನ್ನು ಇಂದು ವ್ಯವಸಾಯ, ಅರಣ್ಯ, ಮೀನುಗಾರಿಕೆ, ಒಣ ಭೂಮಿ, ಅಂತರ್ಜಲ ಮತ್ತು ಮೇಲ್ಮಟ್ಟದ ಜಲಾನಯದ ಪ್ರದೇಶ, ಬರ ಮತ್ತು ಪ್ರವಾಹಗಳಂತಹ ವಿಚಾರಗಳಲ್ಲಿ ವ್ಯಾಪಕವಾಗಿ ಉಪಯೋಗಿಸಲಾಗುತ್ತಿದೆ. ಬಾಹ್ಯಾಕಾಶ ತಂತ್ರಜ್ಞಾನದ ಸಮರ್ಥ ಉಪಯೋಗದ ಸಮಗ್ರ ಯೋಜನೆಗಳನ್ನು ಅತ್ಯಂತ ಸಣ್ಣ ಹಂತದಿಂದ ಮೇಲಿನ ಹಂತದವರೆಗೆ ರೂಪಿಸಿದ ಕೀರ್ತಿ ಕೂಡಾ ಪ್ರೊ. ಯು. ಆರ್. ರಾವ್ ಅವರಿಗೆ ಸಲ್ಲುತ್ತದೆ.

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ನಿಗಮದ ಚೇರ್ಮನ್, ಲಕ್ನೋದ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ವಿಶ್ವವಿದ್ಯಾಲಯದ ಕುಲಪತಿ, ಭಾರತೀಯ ರಿಸರ್ವ್ ಬ್ಯಾಂಕಿನ ಕೇಂದ್ರ ನಿರ್ದೇಶಕ ಮಂಡಳಿಯ ಸದಸ್ಯತ್ವ, ಭಾರತೀಯ ರಿಸರ್ವ್ ಬ್ಯಾಂಕಿನ ನೋಟು ಮುದ್ರಣಾ ವಿಭಾಗದ ಹೆಚ್ಚುವರಿ ನಿರ್ದೇಶಕತ್ವ, ಪುಣೆಯಲ್ಲಿರುವ ಭಾರತೀಯ ಪ್ರಾದೇಶಿಕ ಭೂಗರ್ಭ ಅಧ್ಯಯನ ಪೀಠದ ನಿರ್ವಹಣಾ ಕೌನ್ಸಿಲ್ಲಿನ ಚೇರ್ಮನ್, ಗೋವೆಯಲ್ಲಿರುವ ಅಂಟಾರ್ಕ್ಟಿಕ್ ಮತ್ತು ಸಾಗರ ಸಂಶೋಧನಾ ಕೇಂದ್ರದ ಕೋ-ಚೇರ್ಮನ್ ಹೀಗೆ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಯು.ಆರ್. ರಾವ್ ಅವರು ಪ್ರಧಾನ ಪಾತ್ರಧಾರಿಗಳಾಗಿದ್ದಾರೆ.

ವಿಶ್ವದ ಪ್ರಸಿದ್ಧ ಪ್ರಕಟಣೆಗಳಲ್ಲಿ ಮುನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಮತ್ತು ತಂತ್ರಜ್ಞಾನ ತಳಹದಿಯ ವಿದ್ವತ್ ಪೂರ್ಣ ಬರಹಗಳನ್ನು ರಾವ್ ಅವರು ಪ್ರಸ್ತುತ ಪಡಿಸಿದ್ದಾರೆ. ಅವರು ಅನೇಕ ಪ್ರಖ್ಯಾತ ಪುಸ್ತಕಗಳನ್ನು ಬರೆದಿದ್ದು ‘Physics of the Communication’, ‘Space and Agenda 21 – Caring for the Planet Earth’, ಮತ್ತು ‘Space Technology for Sustainable Development’ ಅತ್ಯಂತ ಪ್ರಸಿದ್ಧಿ ಪಡೆದಿವೆ. ಅವರು ಕನ್ನಡದಲ್ಲಿ ಕವಿ ಹೃದಯ ಹೊಂದಿದ್ದು ಹಲವಾರು ಕವನಗಳನ್ನು ಬರೆದಿದ್ದುದನ್ನು ಸಹಾ ಬಹಳ ಹಿಂದೆ ಪತ್ರಿಕೆಗಳಲ್ಲಿ ಓದಿದ ನೆನಪಿದೆ.

ವಿಶ್ವದ ವಿವಿಧ ಪ್ರತಿಷ್ಠಿತ ಸಂಸ್ಥೆಗಳು ರಾವ್ ಅವರ ಭಾಗವಹಿಕೆಯನ್ನು ತಮ್ಮ ಸೌಭಾಗ್ಯವೆಂದು ಭಾವಿಸಿವೆ. ಅವರ ಪ್ರಾತಿನಿಧಿತ್ವ ಹೊಂದಿರುವ ಅಸಂಖ್ಯಾತ ಸಂಸ್ಥೆಗಳನ್ನು ಬಣ್ಣಿಸುವುದಿರಲಿ, ಹೆಸರಿಸುವುದಕ್ಕೇ ಹಲವು ಪುಟಗಳು ಬೇಕಾದೀತು. 1976ರಷ್ಟು ಹಿಂದೆಯೇ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭ್ಯವಾಗಿತ್ತು. 1973ರಲ್ಲಿ ನಾಸಾ ಸಂಸ್ಥೆ ಸಮೂಹ ಪ್ರಶಸ್ತಿ ನೀಡಿತ್ತು. 1975ರಲ್ಲಿ ಅಂದಿನ ಸಂಯುಕ್ತ ಸೋವಿಯತ್ ರಷ್ಯಾದ ಅಕಾಡೆಮಿ ಆಫ್ ಸೈನ್ಸಸ್ ಸಂಸ್ಥೆ ಗೌರವ ಪುರಸ್ಕಾರ ನೀಡಿತ್ತು.

ಯೂರಿ ಗಗಾರಿನ್ ಪ್ರಶಸ್ತಿ, ಕರ್ನಾಟಕ ರಾಜ್ಯದ ಹಲವು ಪ್ರಶಸ್ತಿಗಳು, ಹಂಪೆಯ ನಾಡೋಜ ಪ್ರಶಸ್ತಿ, ಜವಹರಲಾಲ್ ನೆಹರೂ ಶತಮಾನೋತ್ಸವ ಪ್ರಶಸ್ತಿ, ವಿಕ್ರಂ ಸಾರಾಬಾಯಿ ಪ್ರಶಸ್ತಿ, ಮೇಘನಾದ ಸಹಾ ಪ್ರಶಸ್ತಿ, ದೇಶದ ಬಹುತೇಕ ರಾಜ್ಯಗಳ ಗೌರವಗಳು, ಹೀಗೆ ಅವರಿಗೆ ಸಂದ ಪ್ರಶಸ್ತಿ ಗೌರವಗಳು ಅಸಂಖ್ಯಾತ. 2005ರ ವರ್ಷದಲ್ಲಿ ಅಂತರರಾಷ್ಟ್ರೀಯ ಆಸ್ತ್ರೋನಾಟಿಕ್ಸ್ ಸಂಸ್ಥೆ ಯು. ಆರ್. ರಾವ್ ಅವರನ್ನು ಅಮೆರಿಕದಲ್ಲಿ ವಿಶಿಷ್ಠ ರೀತಿಯಲ್ಲಿ ಗೌರವಿಸಿತು. ಇದಲ್ಲಕ್ಕೆ 2013ರ ವರ್ಷದ ಮಾರ್ಚ್ ಮಾಸದ 19ರಂದು ಪ್ರೊ. ಯು. ಆರ್. ರಾವ್ ಅವರು ಅಮೆರಿಕದ ಪ್ರತಿಷ್ಠಿತ ‘ಸೆಟಲೈಟ್ ಹಾಲ್ ಆಫ್ ಫೇಮ್’ ಗೌರವಕ್ಕೆ ಪಾತ್ರರಾದರು.

ಇಸ್ರೋದ ಎ ಎಸ್ ಎಲ್ ವಿ ಹಾಗೂ ಪಿ ಎಸ್ ಎಲ್ ವಿ ಉಡಾವಣಾ ವಾಹನದ ತಯಾರಿಕೆಯಲ್ಲಿ ಪ್ರೊ. ರಾವ್ ಅವರ ಪಾತ್ರವನ್ನು ಪರಿಗಣಿಸಿ ದಿ ಸೊಸೈಟಿ ಆಫ್ ಸೆಟಲೈಟ್ ಪ್ರೊಫೆಷನಲ್ಸ್ ಇಂಟರ್ ನ್ಯಾಶನಲ್ ಸಂಸ್ಥೆಯು ಈ ಗೌರವ ನೀಡಲು ತೀರ್ಮಾನ ಕೈಗೊಂಡಿತು.

ಹೀಗೆ ನಮ್ಮ ಈ ಮಹಾನ್ ಸಾಧಕರ ಬಗ್ಗೆ ಇಡೀ ವಿಶ್ವವೇ ಹೇಳುತ್ತಿರುವಾಗ ಅದನ್ನು ಸಂಭ್ರಮಿಸಿ ಇವರು ನಮ್ಮವರು ಎಂದು ಹೆಮ್ಮೆ ಪಡುವ ಸೌಭಾಗ್ಯ ನಮ್ಮದಾಗಿದೆ. 2004ರ ವರ್ಷದಲ್ಲಿ ವಿಶ್ವದ ಪ್ರತಿಷ್ಠಿತ ‘ಸ್ಪೇಸ್ ನ್ಯೂಸ್’ ನಿಯತಕಾಲಿಕವು ಪ್ರೊ. ಯು. ಆರ್. ರಾವ್ ಅವರನ್ನು ವಿಶ್ವದ ಶ್ರೇಷ್ಠ ಬಾಹ್ಯಾಕಾಶ ವಿಜ್ಞಾನಕ್ಕೆ ಕೊಡುಗೆದಾರರಾದ ಹತ್ತು ಪ್ರಮುಖರಲ್ಲಿ ಒಬ್ಬರು ಎಂದು ಪರಿಗಣಿಸಿದ ಸಂದರ್ಭದಲ್ಲಿ ಅಮೆರಿಕದ ಶ್ರೇಷ್ಠ ಬಾಹ್ಯಾಕಾಶ ವಿದ್ವಾಂಸರೊಬ್ಬರು ವ್ಯಕ್ತಪಡಿಸಿದ ಅಭಿಪ್ರಾಯ ಗಮನಾರ್ಹವಾದದ್ದು.

“ಪ್ರೊ. ಯು. ಆರ್. ರಾವ್ ನನಗೆ ಅತ್ಯಂತ ಮಹತ್ವಪೂರ್ಣರಾಗಿ ಕಾಣುತ್ತಾರೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅವರು ಸಾಧಿಸಿರುವ ಕೆಲಸ ನಂಬಲು ಅಸಾಧ್ಯವಾದ ಸಾಧನೆಯಾಗಿದೆ. ಸರ್ವಾಧಿಕಾರಿ ವ್ಯವಸ್ಥೆಯಲ್ಲಿ ಕೆಲಸ ಮಾಡುವುದಕ್ಕಿಂತ ಪ್ರಜಾಪ್ರಭುತ್ವದಲ್ಲಿ ಇಂಥಹ ಸಾಧನೆಗಳು ಕಷ್ಟಕರವಾದದ್ದು. ಅವರು ಇಡೀ ವ್ಯವಸ್ಥೆಗೆ ತಮ್ಮ ಆತ್ಮವಿಶ್ವಾಸದಲ್ಲಿ ನಂಬಿಕೆ ತರಿಸಿ ಕೆಲಸ ಮಾಡಿತೋರಿಸಿದ ರೀತಿ ಅದ್ಭುತವಾದದ್ದು”. ಈ ಮಹಾನ್ ಸಾಧಕರಿಗೆ, ಸೌಜನ್ಯಮೂರ್ತಿ ವಿಶ್ವದ ಶ್ರೇಷ್ಠರಲ್ಲಿ ಪ್ರಮುಖರಾದವರಿಗೆ ನಮ್ಮ ಅನಂತ ನಮನ.

ಹುಟ್ಟು ಹಬ್ಬದ ಶುಭಾಶಯಗಳು ಸರ್.

- Advertisement -
- Advertisement -

Latest News

ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದಗೆ ೭೬.೦೭ ಲಕ್ಷ ರೂ ಲಾಭ

ಮೂಡಲಗಿ: ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ೨೦೨೩ರ ಮಾರ್ಚ ಅಂತ್ಯಕ್ಕೆ ರೂ.೭೬.೦೭ ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ  ಸಾಗುತ್ತಿದೆ ಎಂದು ಸಹಕಾರಿಯ ಅಧ್ಯಕ್ಷೆ...
- Advertisement -

More Articles Like This

- Advertisement -
close
error: Content is protected !!