ಅಂತಃಕರಣದ ರಾಯಭಾರಿ
ಹದಿನಾರನೆಯ ಶತಮಾನದ ಕನಕದಾಸರು ಮತ್ತು ಪುರಂದರದಾಸರು ದಾಸ ಪರಂಪರೆಯ ಅಶ್ವಿನಿ ದೇವತೆಗಳೆಂದೇ ಪ್ರಖ್ಯಾತಿ.
ಇಬ್ಬರೂ ವ್ಯಾಸರಾಯರ ಪರಮಶಿಷ್ಯರು…ಸುಜ್ಞಾನಿಗಳು… ಸಾಹಿತ್ಯಕವಾಗಿಯೂ ಅಮರರೇ…
ಒಂದು ದಿನ ವ್ಯಾಸರಾಯ ಗುರುಗಳು ತಮ್ಮ ಶಿಷ್ಯರ ಬಗ್ಗೆ ತುಂಬು ಅಭಿಮಾನದಿಂದ ಹೇಳುತ್ತಾ, ಕನಕದಾಸರನ್ನು ಪ್ರಶ್ನಿಸಿದರು…
“ಕನಕ…ಇವರೆಲ್ಲಾ ಮಹಾಜ್ಞಾನಿಗಳು, ಅನುಭಾವಿಗಳು, ವೇದಪಾರಂಗತರು …ಇವರಲ್ಲಿ ಯಾರು ಮೋಕ್ಷ ಸಂಪಾದನೆ ಮಾಡಿ ಸ್ವರ್ಗಕ್ಕೆ ಹೋಗುವರೆಂಬುದನ್ನು ಹೇಳವೆಯಾ? “ ಎಂದರು.
ಕನಕದಾಸರು ಚಿಕ್ಕ ವಯಸ್ಸಿನಲ್ಲೇ ತಮ್ಮವರನ್ನೆಲ್ಲಾ ಕಳೆದುಕೊಂಡು, ಅಧಿಕಾರ ,ಅಂತಸ್ತು , ವೈಭವವನ್ನೆಲ್ಲಾ ತೊರೆದು ವೈರಾಗ್ಯದತ್ತ ಮನಸ್ಸು ಮಾಡಿದ್ದವರು…ಬದುಕೆಂದರೆ ಏನು ಎಂಬ ಅರಿವಿದ್ದವರು…ವ್ಯಾಸರಾಯರ ಪ್ರಶ್ನೆಯಿಂದ ವಿಚಲಿತರಾಗದೆ…ಎಲ್ಲರನ್ನು ಅವಲೋಕಿಸಿ…“ಗುರುಗಳೇ ಇವರು ಯಾರೂ ಹೋಗುವುದಿಲ್ಲ” ಎಂದು ಉತ್ತರಿಸಿದರು.
ಅಲ್ಲಿದ್ದವರಿಗೆಲ್ಲಾ ಆಶ್ಚರ್ಯವೂ…ಸಿಟ್ಟೂ ಒಟ್ಟೊಟ್ಟಿಗೆ…ಪ್ರಕಾಂಡ ಪಂಡಿತನೊಬ್ಬ ಎದ್ದು ನಿಂತು ….
”ನಿನ್ನಂಥ ಅಜ್ಞಾನಿಗೇನು ತಿಳಿಯುತ್ತದೆ…ವೇದ ಶಾಸ್ತ್ರಗಳನ್ನೆಲ್ಲಾ ಅರೆದು ಕುಡಿದಿರುವ ನಾವೇ ಸ್ವರ್ಗಕ್ಕೆ ಹೋಗಲಾಗುವುದಿಲ್ಲವೆಂದರೆ…ಇನ್ಯಾರು ಹೋಗಲು ಸಾಧ್ಯ? “ ಎಂದು ಸಿಟ್ಟಿನಿಂದ ನಖಶಿಖಾಂತ ಉರಿಯುತ್ತ ಪ್ರಶ್ನಿಸಿದ.
ಗುರುಗಳು ಆತನನ್ನು ಸಮಾಧಾನ ಮಾಡಿ , “ಕನಕ…ಯೋಚಿಸಿ ಹೇಳು…ಇವರು ವೇದಗಳನ್ನು ಚೆನ್ನಾಗಿ ಅರ್ಥೈಸಬಲ್ಲರು.. ಇವರಿಗೆ ಉಪನಿಷತ್ತುಗಳ ಜ್ಞಾನವಿದೆ… ಹವನ ,ಹೋಮಗಳ ಅರಿವಿದೆ… ಶಾಸ್ತ್ರಗಳಲ್ಲಿ ಪರಿಣತರು…ಸಂಗೀತದ ಮೂಲಕ ದೇವರನ್ನು ಸಾಕ್ಷಾತ್ಕರಿಸಿ ಕೊಳ್ಳುವವರಿದ್ದಾರೆ…ಇದೇನು ಕನಕ… ಇವರ ಯೋಗ್ಯತೆಯನ್ನು ಅರಿಯದೆ ಹೀಗೆಂದು ಬಿಟ್ಟೆ…??” ಗುರುಗಳು ಮತ್ತೆ ಪ್ರಶ್ನಿಸಿದರು.
ಕನಕದಾಸರು ಉತ್ತರಿಸುವ ಮೊದಲೇ, ಮತ್ತೊಬ್ಬ ಶಿಷ್ಯ…”ಕನಕದಾಸನದು ಉದ್ದಟತನದ ಪರಮಾವಧಿ… ಏಯ್ ಕನಕ ,ಯಾರೂ ಹೋಗುವುದಿಲ್ಲವೆಂದರೆ ಏನರ್ಥ…ನಿನಗೆ ಆಶ್ರಯ ಕೊಟ್ಟಿರುವ ನಮ್ಮ ಸುಜ್ಞಾನಿ ಗುರುಗಳೂ ಹೋಗುವುದಿಲ್ಲವೇ?…ಸಿಟ್ಟಿನಿಂದ ಕೇಳಿದ.
ಕನಕರು ಅನುದ್ವಿಗ್ನರಾಗಿ…ಇಲ್ಲವೆಂದೇ ತಲೆಯಾಡಿಸಿದರು.
ಆಗ ವ್ಯಾಸರಾಯರು ಮಂದಹಾಸದಿಂದ , “ಕನಕ…ಇವರ್ಯಾರೂ ಸ್ವರ್ಗಕ್ಕೆ ಹೋಗಲಾರರು ಎಂದ ಮೇಲೆ , ನೀನಾದರೂ ಹೋಗುವೆಯಾ”ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
“ನಾನು ಹೋದರೆ ಹೋಗಬಹುದು” ಅತ್ಯಂತ ವಿನಯದಿಂದ ಕನಕದಾಸರು ಉತ್ತರಿಸಿದರು.
ವ್ಯಾಸರಾಯರ ಶಿಷ್ಯರ ಕೋಪ ಮಿತಿ ಮೀರಿತು… ”ಎಲವೋ ಕನಕ…ನಿನ್ನದು ಮೇರೆ ಮೀರಿದ ಉದ್ದಟತನ… ಅಲ್ಪಮತಿಯಾದ ನಿನಗೇನು ತಿಳಿಯುತ್ತದೆ…ನಮ್ಮ ಗುರುಗಳಿಗೂ ಅಸಾಧ್ಯವಾದುದು ನಿನಗೆ ಹೇಗೆ ಸಾಧ್ಯವಾಗುತ್ತದೆ?? ಮೂರ್ಖ…ಕಡು ಮೂರ್ಖಾ, ನಿನ್ನನ್ನು ನೀನು ಏನೆಂದು ತಿಳಿದಿದ್ದೀಯಾ…ನಿನಗೆ ಕೃಷ್ಣ ಮಠದಲ್ಲಿ…, ಪಾಪದವನೆಂದು ಆಶ್ರಯ ಕೊಟ್ಟಿದ್ದೇ ತಪ್ಪಾಯಿತು… ” ಎಂದು ವಿಧವಿಧವಾಗಿ ಹೀಯಾಳಿಸಿದರು.
ವ್ಯಾಸರಾಯರು , ವಿಕೋಪಕ್ಕೆ ಹೋಗುತ್ತಿದ್ದ ಪರಿಸ್ಥಿತಿಯನ್ನು ಹತೋಟಿಗೆ ತಂದು , ಕನಕನತ್ತ ಮುಖ ಮಾಡಿ, “ಅಯ್ಯಾ , ಕನಕ… ನೀನು ಹೇಳಿದುದೇ ಸರಿ…ನಾನು ಹೋದರೆ ಹೋಗಬಹುದು ಎಂದೆಯಲ್ಲ… ಅದು ಹೇಗೆ??” ಕೇಳಿದರು ಗುರುಗಳು.
ಕನಕರು ವಿನೀತರಾಗಿ ತಲೆಬಾಗಿ… ಗುರುಗಳಿಗೆ ನಮಸ್ಕರಿಸುತ್ತಾ… ಆತ್ಮವಿಶ್ವಾಸದಿಂದ, ”ಆಚಾರ್ಯರೇ…ನಾನು ಎಂದರೆ ನಾನಲ್ಲ…ಕನಕನಲ್ಲ…ನಾನು ಎನ್ನುವುದು ಅಹಂಕಾರ…ಈ ಅಹಂಕಾರವನ್ನು ತೊಡೆದು…ಎಲ್ಲರನು ಸಲಹುವ ಆ ಚೆನ್ನಕೇಶವನನ್ನು ಸಮರ್ಪಣಾ ಭಾವದಿಂದ ಆರಾಧಿಸಿದರೆ…ಯಾರು ಬೇಕಾದರೂ ಸ್ವರ್ಗಕ್ಕೆ ಹೋಗಬಹುದು ಎಂಬುದೇ ನನ್ನ ಮಾತಿನ ಅರ್ಥ” ವಿನಮ್ರತೆಯಿಂದ ಕನಕರು ಉತ್ತರಿಸಿದರು.
ವ್ಯಾಸರಾಯರಿಗೆ …ಗುರುವನ್ನೂ ಮೀರಿಸಿದ ಶಿಷ್ಯನೆಂದು… ಅಪಾರ ಸಂತಸವಾಯಿತು.
ಇತರೆ ಶಿಷ್ಯರೆಡೆ ತಿರುಗಿ…”ಕನಕರ ಮಾತುಗಳು ಅರ್ಥವಾದವೇ…ಅಹಂಕಾರದಿಂದ… ಮಾಡಿದ ಪುಣ್ಯವೆಲ್ಲಾ ನಶಿಸುತ್ತದೆ… ಜ್ಞಾನಕ್ಕೆ ಯಾವ ಬೆಲೆಯಿರುವುದಿಲ್ಲ… ನಾವೆಲ್ಲಾ ಇನ್ನಾದರೂ ಸುಜ್ಞಾನಿಗಳಾಗುವ”ಎಂದು ಮಾತು ಮುಗಿಸಿದರು.
ಅಹಂಕಾರವಿಲ್ಲದೆ ತಲೆ ಎತ್ತಿ ದೈನ್ಯವಿಲ್ಲದೆ ತಲೆ ಬಾಗುವ ಕನಕದಾಸರು , ಅಂತಃಕರಣದ ರಾಯಭಾರಿಗಳಲ್ಲವೆ…
ಇಂತಹವರಲ್ಲವೇ…ಅಂತಃಕರಣದ ರಾಯಭಾರಿಗಳು…
ಶ್ರೀಮತಿ ರೇಖಾ ದಳವಾಯಿ