ಹೊಟ್ಟೆಪಾಡಿಗಾಗಿ ಮಾಡಿದ ರಂಗ ವೃತ್ತಿ’ ಬದುಕಿಗೆ ಊರುಗೋಲಾಗಬೇಕು ಹಾಗೂ ಸಂತಸ ನೀಡಬೇಕು. ವೃತ್ತಿಯಲ್ಲಿ ನಿಷ್ಠೆಯಿರಬೇಕು. ಆಗ ಮಾತ್ರ ನಟ ಯಶಸ್ವಿಯಾಗುತ್ತಾನೆ. ನಟ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಬೇಕು, ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದಾಗ ಮಾತ್ರ ಅವನೊಬ್ಬ ಯಶಸ್ವಿ ನಟನಾಗುತ್ತಾನೆ. ನಟನೆಯಲ್ಲಿ ತೃಪ್ತಿ ಸಿಕ್ಕಾಗ ಮಾತ್ರ ಅವನು `ಬದುಕಿನ ನಾಟಕ ’’ದಲ್ಲೂ ಯಶಸ್ವಿಯಾಗುತ್ತಾನೆ. ಲೌಕಿಕ ಜೀವನದಲ್ಲಿ ಕೀರ್ತಿ, ಯಶಸ್ಸು, ಪ್ರಶಸ್ತಿಗಳು ಬಂದ ಮಾತ್ರಕ್ಕೆ ಅವನದು ಸಾರ್ಥಕ ಬದುಕು ಎಂದು ಪರಿಗಣಿಸಲಾಗುವುದಿಲ್ಲ. ಇದೆಲ್ಲವು ಇಲ್ಲದಿದ್ದಾಗಲೂ ಪಾತ್ರಕ್ಕೆ ಜೀವಂತಿಕೆ ನೀಡಿ ಅಭಿನಯಿಸಿ ಕಲಾರಸಿಕರನ್ನು ರಂಜಿಸುವವನೇ ನಿಜವಾದ ನಟ.
ಈ ದಿಕ್ಕಿನಲ್ಲಿ ರಂಗಸಂಭ್ರಮ’ ನಾಟಕೋತ್ಸವ ಪ್ರತಿಯೊಬ್ಬ ಕಲಾವಿದನಿಗೂ ಪ್ರೋತ್ಸಾಹ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಬೀ.ಚಿ. ರಸಾಯನ ನಾಟಕದ ಮುಖ್ಯ ಪಾತ್ರಧಾರಿಗಳಾದ ಬಾಬು ಹಿರಣಯ್ಯರವರು ಶ್ರೀ ವಿವೇಕಾನಂದ ಕಲಾಕೇಂದ್ರದ ಆಯೋಜಕರನ್ನು ಅಭಿನಂದಿಸಿದರು.
ವೈವಿಧ್ಯಮಯ ನಾಟಕಗಳು ಕಲಾರಸಿಕರನ್ನು ಮುದಗೊಳಿಸುತ್ತವೆ. ಅತ್ಯುತ್ತಮ ನಾಟಕಗಳು ಪ್ರದರ್ಶನಗೊಂಡು ಎಲ್ಲ ಕಲಾವಿದರಲ್ಲಿ ಉತ್ಸಾಹ ಮೂಡಿಸಿದೆ. ಇಂದಿನ ಈ ಪರಿಸ್ಥಿತಿಯಲ್ಲಿ ಇದು ಅಗತ್ಯವಾಗಿ ಮತ್ತೆ ಸಾಂಸ್ಕೃತಿಕ ಚಟುವಟಿಕೆಗಳು ಗರಿಗೆದುರುತ್ತಿರುವುದು ಕಲಾವಿದರಿಗೆ ಭರವಸೆಯನ್ನು ಮೂಡಿಸಿದೆ. ಈಗ ಕಲಾವಿದರು ಹೆಚ್ಚಿನ ಪರಿಶ್ರಮ ವಹಿಸಿ ಸಿದ್ದರಾಗಿ ಯಶಸ್ವಿಯಾಗಬೇಕು ಎಂಬ ಕಿವಿ ಮಾತನ್ನು ಯುವ ಕಲಾವಿದರಿಗೆ ಬಾಬು ಹಿರಣ್ಣಯ್ಯನವರು ನೀಡಿದರು.
ದಿನಾಂಕ 27-02-2021 ರಿಂದ ಪ್ರಾರಂಭವಾದ ಈ ನಾಟಕೋತ್ಸವದಲ್ಲಿ ಚಿತ್ರಪಟ’, ಬೀ.ಚಿ. ರಸಾಯನ’ ಶೋಕಚಕ್ರ’, ಸಾಲುಮರಗಳ ತಾಯಿ ತಿಮ್ಮಕ್ಕ’, ಟೊಳ್ಳುಗಟ್ಟಿ’, ಅವಾಂತರದ ಅಳಿಯ’, ಶತಮರ್ಕಟ’, ಇಂದೂರಿನ ಮಹಾರಾಣಿ ಅಹಿಲ್ಯಾಬಾಯಿ ಹೋಳ್ಕರ್’, ಹಾಗೂ ಮೇಘದೂತ’ ಮುಂತಾದ 9 ನಾಟಕಗಳು ಪ್ರದರ್ಶಿತವಾದವು. ಪ್ರಖ್ಯಾತ ಯುವ ನಿರ್ದೇಶಕರುಗಳಾದ ಮಾಲತೇಶ ಬಡಿಗೇರ, ಎನ್.ಸಿ.ಮಹೇಶ್, ಗುರುಪ್ರಸಾದ್.ಕೆ, ರಾಮಕೃಷ್ಣ ಬೆಳತೂರು, ಎಂ. ಪ್ರಹ್ಲಾದ್, ಅನುರಾಗ್, ಮೈಸೂರು, ಡಾ. ಎಸ್. ವಿ. ಕಶ್ಯಪ್, ಹಾಗೂ ಸಿದ್ಧರಾಮ ಕೊಪ್ಪರ್ ರವರ ನಿರ್ದೇಶನದಲ್ಲಿ ಸುಮಾರು 400 ಕ್ಕಿಂತ ಹೆಚ್ಚಿನ ಯುವಕಲಾವಿದರು ವಿವಿಧ ಕಲಾತಂಡಗಳ ಮೂಲಕ ಉತ್ಸಾಹದಿಂದ ಭಾಗವಹಿಸಿದ್ದು ಪ್ರಶಂಸನೀಯವಾಗಿತ್ತು.
ಈ 9 ದಿನಗಳ “ನವಯುವ ರಂಗೋತ್ಸವ’’ವನ್ನು ಸಂಸ್ಕೃತಿ ಸಚಿವಾಲಯ, ಭಾರತ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ವತಿಯ ಸಹಕಾರದಿಂದ ಆಯೋಜಿಸಲಾಗಿತ್ತು. ಇದರಲ್ಲಿ ಸಾಮಾಜಿಕ, ರಾಜಕೀಯ, ಪೌರಾಣಿಕ ಹಾಗೂ ಐತಿಹಾಸಿಕ ನಾಟಕಗಳನ್ನು ಪ್ರದರ್ಶಿಸಿ ರಂಗಾಸಕ್ತರಿಗೆ ಮನರಂಜನೆಯನ್ನು ನೀಡಿದರು.
ರಂಗಭೂಮಿಯ ಬಗ್ಗೆ ಆಸಕ್ತಿಯನ್ನುಂಟು ಮಾಡುವ ಉದ್ದೇಶದಿಂದ ಚಾಲನೆಗೊಂಡ ಈ ರಂಗೋತ್ಸವದಲ್ಲಿ ರಂಗಭೂಮಿಯ, ವಿವಿಧ ಕ್ಷೇತ್ರಗಳ, ಧಾರವಾಹಿ ಹಾಗೂ ಚಲನಚಿತ್ರಗಳ ಹಿರಿಯ ಹಾಗೂ ಉದಯೋನ್ಮುಖ ಕಲಾವಿದರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಈ ಉತ್ಸವಕ್ಕೆ ಆಗಮನಿಸಿದ್ದ ಗಣ್ಯರು ಕಲಾಕೇಂದ್ರದ ಸ್ಥಾಪಕರಾದ ಡಾ. ವಿ. ನಾಗರಾಜ್, ನೃತ್ಯ ವಿದೂಷಿ ಡಾ. ಶ್ವೇತ, ಹಾಗೂ ಕರ್ನಾಟಕ ಕಲಾಶ್ರೀ ಶ್ರೀಮತಿ ಎಂ. ಕೆ. ಜಯಶ್ರೀ, ಡಾ. ಗುರುರಾಜಪೋಶೆಟ್ಟಿಹಳ್ಳಿ ಶ್ರೀಯುತ ಮಾಲತೇಶ ಬಡಿಗೇರ್, ಮಾಸ್ಟರ್ ದೈವಿಕ್, ಪ್ರೊ.ರಾಜೀವ್ ಹಾಗೂ ಎಲ್ಲಾ ಸಂಚಾಲಕರನ್ನು ಉತ್ಸವವನ್ನು ಅಚ್ಚುಕಟ್ಟಾಗಿ ಅಯೋಜಿಸಿದ್ದಕ್ಕೆ ಮನಸಾರೆ ಅಭಿನಂದಿಸಿದರು