ಬೆಳಗಾವಿ – ಜಲ ಸಂಪನ್ಮೂಲ ಸಚಿವ ಹಾಗೂ ಬೆಳಗಾವಿ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿಯವರ ರಾಜೀನಾಮೆಯಿಂದ ತೆರವಾಗಿರುವ ಬೆಳಗಾವಿ ಜಿಲ್ಲಾ ಉಸ್ತುವಾರಿ ಯಾರ ಹೆಗಲಿಗೆ ಬೀಳಲಿದೆಯೆಂಬುದು ಕುತೂಹಲಕಾರಿಯಾಗಿದೆ.
ಸದ್ಯದಲ್ಲಿಯೇ ಉಪ ಚುನಾವಣೆ ಕಾಲಿಡಲಿದ್ದು ಅದರ ನೆಪದಲ್ಲಿ ಉಸ್ತುವಾರಿ ಆಯ್ಕೆ ನೆನೆಗುದಿಗೆ ಬೀಳಲಿದೆಯೇ ಎಂಬ ಪ್ರಶ್ನೆಯೂ ಈಗ ಜಿಲ್ಲೆಯಲ್ಲಿ ಓಡಾಡುತ್ತಲಿದ್ದು ಎಲ್ಲರ ಗಮನವೀಗ ಬಿಜೆಪಿ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರತ್ತ ನೆಟ್ಟಿದೆ.
ಈ ಮಧ್ಯೆ ಉಸ್ತವಾರಿ ಸಚಿವರ ನೇಮಕವೇ ಆಗುವುದಾದರೆ ಯಾರಿಗೆ ಸಿಗಲಿದೆ ಎಂಬ ಪ್ರಶ್ನೆ ಎದ್ದಾಗ ಮುಂಚೂಣಿಯಲ್ಲಿ ಕಂಡು ಬಂದಿರುವ ಹೆಸರುಗಳೆಂದರೆ ಸಚಿವ ಉಮೇಶ ಕತ್ತಿ ಹಾಗೂ ಡಿಸಿಎಂ ಲಕ್ಷ್ಮಣ ಸವದಿ.
ಇವರ ಜೊತೆಗೇ ವಿಜಯಪುರ ಜಿಲ್ಲಾ ಉಸ್ತುವಾರಿಯಾಗಿರುವ ಶಶಿಕಲಾ ಜೊಲ್ಲೆಯವರ ಹೆಸರೂ ಕೂಡ ಕೇಳಿಬರುತ್ತಲಿದೆ. ಆದರೆ ಇಬ್ಬರು ಘಟಾನಿಘಟಿಗಳ ನಡಯವೆ ಜೊಲ್ಲೆಯವರಿಗೆ ಉಸ್ತುವಾರಿ ಸಿಗುವುದು ಕಠಿಣ ಎಂಬ ಮಾತುಗಳೂ ರಾಜಕೀಯ ಚರ್ಚೆಯಲ್ಲಿ ಕೇಳಿಬರುತ್ತಿವೆ.
ಈ ಎಲ್ಲ ಸಂಭಾವ್ಯರ ಮಧ್ಯೆಯೇ ಮರೆತು ಹೋಗಿರುವ ಇನ್ನೊಂದು ಹೆಸರೆಂದರೆ ಈಗಾಗಲೇ ಒಂದುಸಲ ಜಿಲ್ಲಾ ಉಸ್ತುವಾರಿಯಾಗಿ ಜವಾಬ್ದಾರಿ ನಿರ್ವಹಣೆ ಮಾಡಿದ್ದ ಜಗದೀಶ ಶೆಟ್ಟರ ಅವರದು.
ಆದರೆ ಬಿಜೆಪಿಯ ಸಂಸ್ಕೃತಿಯಲ್ಲಿ ಯಾವಾಗಲೂ ಅನಿರೀಕ್ಷಿತ ತಿರುವುಗಳೇ ತುಂಬಿದ್ದು ಬೆಳಗಾವಿಯ ಉಪಕದನದ ಅಭ್ಯರ್ಥಿ ಹಾಗೂ ಜಿಲ್ಲಾ ಉಸ್ತುವಾರಿ ನೇಮಕ ಕೂಡ ಅನಿರೀಕ್ಷಿತ ತಿರುವು ಪಡೆದುಕೊಂಡರೆ ಯಾವುದೇ ಅಚ್ಚರಿಯಿಲ್ಲ.