ಖಾನಾಪುರ: ರೈತ ಮಹಿಳೆಯ ಬಗ್ಗೆ ಚಿಂತನೆ ಹಿಂದೆಂದಿಗಿಂತಲೂ ಈಗ ಹೆಚ್ಚು ಅಗತ್ಯವಾಗಿದೆ. ಹಾಗೆ ನೋಡಿದರೆ ಕೃಷಿ ಕ್ಷೇತ್ರ ಮಹಿಳೆಯ ಸುತ್ತಲೂ ಗಿರಕಿ ಹೊಡೆಯುತ್ತದೆ. ಮಾರುಕಟ್ಟೆ ವ್ಯವಸ್ಥೆ, ಬಿತ್ತನೆ,ಬೀಜ,ರಸಗೊಬ್ಬರ ಬಿಟ್ಟು ಇನ್ನುಳಿದ ಎಲ್ಲ ಕಾರ್ಯಗಳಲ್ಲೂ ಆಕೆಯದ್ದೇ ಮೇಲುಗೈ. ಜ್ಞಾನ ವಿಜ್ಞಾನ ತಂತ್ರಜಾನದಲ್ಲಿ ಜಗತ್ತು ಎಷ್ಟೇ ಸಾಧನೆ ಸಾಧಿಸಿದರೂ, ಇಡೀ ಜಗವೇ ನಮ್ಮ ತೋರುಬೆರಳಿನಲ್ಲಿದ್ದರೂ, ಬೇಕಾಗಿರುವ ಮಾಹಿತಿಯೆಲ್ಲ ಕ್ಷಣಾರ್ಧದಲ್ಲಿ ಅಂಗೈ ಮೊಬೈಲಿನಲ್ಲೇ ದೊರೆಯುತ್ತಿದ್ದರೂ, ಹಸಿವು ನೀಗಿಸಲು ಅನ್ನವೇ ಬೇಕು. ಅದನ್ನು ಬೆಳೆಯಲು ಅನ್ನದಾತನೇ ಬೇಕು. ಹಸಿವು ನೀಗಿಸುವ ಆಹಾರವನ್ನು ಉತ್ಪತ್ತಿ ಮಾಡಲು ಕೃಷಿಕನಿಗೆ ಸಹಾಯ ಮಾಡುವ ಪತ್ನಿಯಾಗಿ ಇಲ್ಲವೇ ಸ್ವತಃ ತಾನೇ ಕೃಷಿಕ ಮಹಿಳೆಯಾಗಿ ಮಕ್ಕಳ ಲಾಲನೆ, ಪಾಲನೆ, ಅಡುಗೆ ಕಾರ್ಯ, ಕುಟುಂಬದ ನಿರ್ವಹಣೆ ಎಲ್ಲವೂ ಆಕೆಯ ಹೆಗಲ ಮೇಲೆ ಇದೆ ಎಂಬುದು ಸುಳ್ಳಲ್ಲವೆಂದು ಹಿರೇಬಾಗೇವಾಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕರಾದ ಜಯಶ್ರೀ ಅಬ್ಬಿಗೇರಿ ಹೇಳಿದರು.
ಅವರು ತಾಲೂಕಿನ ಕೃಷಿ ಇಲಾಖೆಯ ಕಛೇರಿಯಲ್ಲಿ ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ ಯೋಜನೆಯಡಿ ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಹಿಳಾ ಗುಂಪಿನ ಸದಸ್ಯರಿಗೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಪ್ಪತ್ತರ ದಶಕದ ನಂತರ ಮಹಿಳೆಯು ವಿವಿಧ ಕ್ಷೇತ್ರಗಳ ಎಲ್ಲ ಪಾತ್ರಗಳನ್ನು ನಿರ್ವಹಿಸುವ ಬಗ್ಗೆ ಮರುಚಿಂತನೆ ಬಳಸಲಾಯಿತು. ಇತ್ತೀಚಿನ ದಿನಮಾನದಲ್ಲಿ ಮಹಿಳೆಯರು, ಎಲ್ಲ ರಂಗಗಳಲ್ಲೂ ಪುರುಷರಿಗೆ ಸರಿಸಮಾನವಾಗಿ ಕಾರ್ಯ ನಿರ್ವಹಿಸುತ್ತಿರುವುದು ಸರ್ವವಿಧಿತ. ಅದರಲ್ಲೂ ಗ್ರಾಮೀಣ ವಿಭಾಗದಲ್ಲಿ ಯಾವುದೇ ಕಸುಬಿರಲಿ ಕೃಷಿಯಿರಲಿ ಆಕೆ ಇಲ್ಲದೇ ನಡೆಯುವುದು ಕಷ್ಟ ಸಾಧ್ಯ ಎನ್ನುವಷ್ಟು ಬೆರೆತು ಹೋಗಿದ್ದಾಳೆ. ವ್ಯವಸಾಯದ ಎಲ್ಲ ಚಟುವಟಿಕೆಗಳನ್ನು ಬಲು ಉತ್ಸಾಹದಿಂದ ಶ್ರದ್ಧೆಯಿಂದ ನಿರ್ವಹಿಸುವುದು ಎಲ್ಲರಿಗೂ ಗೊತ್ತಿದ್ದರೂ ಆಕೆಯ ಕೊಡುಗೆಯನ್ನು ಒಪ್ಪಿಕೊಳ್ಳುವುದು ಸಮಾಜದ ಕರ್ತವ್ಯ. ಆದರೆ ಆಕೆಯ ನಿಸ್ವಾರ್ಥ ಸೇವೆಯನ್ನು ಬೆಳಕಿಗೆ ತರುವುದು ತುಂಬಾ ವಿರಳ. ಸಮಕಾಲೀನ ವಿದ್ಯಮಾನಗಳ ಹಿನ್ನೆಲೆಯಲ್ಲಿ ಒಟ್ಟಾರೆ ಮಹಿಳೆಯರ ಘನತೆಯನ್ನು ಎತ್ತಿ ಹಿಡಿಯುವ ಧೈರ್ಯವನ್ನು ಕೆಲ ಗಟ್ಟಿ ಹೆಣ್ಣು ಮನಗಳು ತೋರಿವೆ. ಹೆಣ್ಣಿನ ಅಂತರಂಗದ ಅನುಭವ ಲೋಕವನ್ನು ವಿನೂತನ ರೀತಿಯಲ್ಲಿ ಅಕ್ಷರದ ರೂಪದಲ್ಲಿ ಇಂದಿನ ಮಹಿಳಾ ಬರಹಗಾರ್ತಿಯರು ತೆರೆದಿಟ್ಟಿದ್ದು ಪ್ರಶಂಸನೀಯ.ಸಮಾಜವನ್ನು ಕಟ್ಟುವ ತಿದ್ದುವ ಕಾರ್ಯದಲ್ಲಿ ಪಾಲ್ಗೊಂಡು ಬದಲಾವಣೆಯ ಮಹಾಪರ್ವಕ್ಕೆ ನಾಂದಿಯಾಗಿದ್ದಾರೆಂದು ಜಯಶ್ರೀ ಅಬ್ಬಿಗೇರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಜಾಂಬೋಟಿ ಗ್ರಾಮದ ಶ್ರೇಷ್ಠ ಕೃಷಿಕ ಮಹಿಳೆ ರೇಣುಕಾ ಮನೋಹರ ಗೊವೇಕರ ಅವರನ್ನು ಸನ್ಮಾನಿಸಲಾಯಿತು. ಸಹಾಯಕ ನಿರ್ದೇಶಕರಾದ ಡಿ.ಬಿ.ಚವ್ಹಾಣ ಅಧ್ಯಕ್ಷತೆ ವಹಿಸಿದ್ದರು.
ಮಂಜುನಾಥ ಕುಸುಗಲ್ಲ, ದೀಪಾ ವಡೇರ, ಪ್ರದೀಪ. ಮೂಗಬಸವ. ಲಕ್ಷ್ಮೀ ಕಾಡಮ್ಮನವರ ಉಪಸ್ಥಿತರಿದ್ದರು. ಎ.ಬಿ. ಇಟ್ನಾಳ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು.