ಸವದತ್ತಿ: ಇಂದಿನ ದಿನಮಾನಗಳಲ್ಲಿ ಮಹಿಳೆ ಇಲ್ಲದ ಕ್ಷೇತ್ರವೇ ಇಲ್ಲ. ಆಕೆ ಎಲ್ಲ ಕ್ಷೇತ್ರದಲ್ಲೂ ತನ್ನ ಸಾಮರ್ಥ್ಯವನ್ನು ತೋರಿಸಿದ್ದಾಳೆ. ಆದರೂ ಮಹಿಳೆ ಸ್ವಾವಲಂಬಿಯಾಗಿ ಬೆಳೆಯಬೇಕಾಗಿದೆ ಎಂದು ಧಾರವಾಡದ ಅಂತಃಕರಣ ಸರ್ಕಾರೇತರ ಸಂಸ್ಥೆಯ ಕಾರ್ಯದರ್ಶಿಯಾದ ಶ್ರೀಮತಿ ಸಂಸ್ಕೃತಿ ಪೂಜಾರ ನುಡಿದರು.
ಅವರು ಪಟ್ಟಣದ ಕೆ.ಎಲ್.ಇ ಸಂಸ್ಥೆಯ ಎಸ್.ವಿ.ಎಸ್ ಬೆಳ್ಳುಬ್ಬಿ ಮಹಾವಿದ್ಯಾಲಯದ ಮಹಿಳಾ ಸಂಘದ ವತಿಯಿಂದ ಏರ್ಪಡಿಸಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳಾ ದಿನಾಚರಣೆ ಮೊಟ್ಟ ಮೊದಲು ಆರಂಭವಾದುದು ಕ್ರಿ.ಶ.1908ರಲ್ಲಿ. ನಂತರ ಕ್ಲಾರಾ ಎನ್ನುವವರು 1910ರಲ್ಲಿ ಮಹಿಳಾ ಹಕ್ಕುಗಳು, ಮಹಿಳೆಯರ ಮತದಾನದ ಹಕ್ಕುಗಳಿಗಾಗಿ ದೊಡ್ಡ ಹೋರಾಟವನ್ನೇ ಮಾಡಿದರು. ಆಗ ಜಗತ್ತಿನಾದ್ಯಂತ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಡುವ ಅರಿವು ಮೂಡಿತು ಎಂದರು.
ಭಾರತದಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ಸರೋಜಿನಿ ನಾಯ್ಡು ಅವರು ಮಹಿಳಾ ದಿನಾಚರಣೆ ಆಚರಿಸುವ ಕಾರ್ಯಕ್ಕೆ ನಾಂದಿ ಹಾಡಿದರು.
ಮಹಿಳೆ ಶಿಕ್ಷಣವನ್ನು ಪಡೆಯುವುದಷ್ಟೇ ಮುಖ್ಯವಲ್ಲ ಅದನ್ನು ಕೌಶಲ್ಯಯುತವಾಗಿ ಬಳಸಿಕೊಳ್ಳುವುದು ಮುಖ್ಯ. ನೌಕರಿ ಪಡೆಯುವದಕ್ಕೆ ಮಾತ್ರ ನಮ್ಮ ಶಿಕ್ಷಣವೆಂದು ಭಾವಿಸದೆ, ಬದುಕಿಗಾಗಿ ಶಿಕ್ಷಣವೆಂದು ಅರ್ಥಮಾಡಿಕೊಳ್ಳಬೇಕಾಗಿದೆ. ಮೊದಲು ಗುರಿಯನ್ನು ನಿರ್ಧರಿಸಿಕೊಳ್ಳಿ. ನಂತರ ಆ ಗುರಿಯನ್ನು ತಲುಪಲು ಸತತ ಪರಿಶ್ರಮ ಪಡಿ. ಸೋಮಾರಿತನ ಹಾಗೂ ಕೀಳರಿಮೆ ಬಿಡಿ ಆಗ ಮಾತ್ರ ಗೆಲುವು ನಿಮ್ಮದಾಗುತ್ತದೆ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಮಾರುತಿ ಎ. ಡೊಂಬರ ವಹಿಸಿದ್ದರು, ಶಾಂಭವಿ ಬಡಿಗೇರ ಪ್ರಾರ್ಥಿಸಿದರು, ಕು.ವಿಜಯಲಕ್ಷ್ಮಿ ಗರಗ ಸ್ವಾಗತಿಸಿದರು, ಪ್ರೊ. ಎ.ಎ. ಹಳ್ಳೂರ ಅತಿಥಿಗಳನ್ನು ಪರಿಚಯಿಸಿದರು, ಕು.ಪ್ರಿಯಾಂಕ ಗಡೇಕರ್ ವಂದಿಸಿದರು, ಕು. ತನುಜಾ ಸರ್ದಾರ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.