ಸಿದ್ದೇಶ್ವರ ಶ್ರೀಗಳ ಕುರಿತ ‘ಜ್ಞಾನಗಂಧ’ ಪುಸ್ತಕ ಬಿಡುಗಡೆ
ಮೂಡಲಗಿ – ಮಾಣಿಕ್ಯಕ್ಕೆ ಬೆಲೆ ಎಲ್ಲಿಯವರೆಗೆ ಇರುವುದೋ ಅಲ್ಲಿಯವರೆಗೆ ಸಿದ್ಧೇಶ್ವರ ಶ್ರೀಗಳ ಮಾತಿಗೆ ಬೆಲೆ ಇರುತ್ತದೆ. ಅಂಥ ಮಹಾತ್ಮರ ಮಾತುಗಳನ್ನು ಸಂಪಾದಿಸಿ ಪುಸ್ತಕ ರೂಪದಲ್ಲಿ ತರಲಿಕ್ಕೆ ಸಾಕಷ್ಟು ತಾಳ್ಮೆ ಬೇಕು. ಬಾಲಶೇಖರ ಅವರು ಶ್ರೀ ಸಿದ್ಧೇಶ್ವರ ಶ್ರೀಗಳ ಮಾತುಗಳನ್ನು ತಾಳ್ಮೆಯಿಂದ ಕೇಳಿ, ಅಷ್ಟೇ ಪರಿಶ್ರಮದಿಂದ ಬರೆದು ಮತ್ತೆ ನಮ್ಮ ಮುಂದೆ ಪುಸ್ತಕದ ರೂಪದಲ್ಲಿ ಇಟ್ಟಿದ್ದಾರೆ ಎಂದು ವಿಶ್ರಾಂತ ಪ್ರಾಧ್ಯಾಪಕ ಗಂಗಾಧರ ಮಳಗಿ ಹೇಳಿದರು.
ಪಂಚಾಕ್ಷರಿ ಪ್ರಕಾಶನ ಮೂಡಲಗಿ ಇವರಿಂದ ಪ್ರಕಾಶಿತವಾದ ಬಾಲಶೇಖರ ಬಂದಿಯವರ ಪರಮ ಪೂಜ್ಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಆಧ್ಯಾತ್ಮಿಕ ಪ್ರವಚನಗಳ ಸಂಕಲನ “ಜ್ಞಾನಗಂಧ” ಕೃತಿ ಬಿಡುಗಡೆ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
ಗ್ರಂಥದಲ್ಲಿ ವ್ಯಕ್ತವಾಗಿರುವ ಮಾತುಗಳು ನನ್ನವಲ್ಲ. ನನಗೆ ಬರೆಯಲು ಪ್ರೇರೇಪಣೆ ನೀಡಿದ ಸಿದ್ದೇಶ್ವರ ಶ್ರೀಗಳ ಮಾತುಗಳು ಎಂದು ಇದರಲ್ಲಿ ಲೇಖಕರು ಹೇಳಿಕೊಂಡಿದ್ದು ಸಾರ್ಥಕವಾಗಿದೆ ಎಂದು ಹೇಳಿ ಕೃತಿಯಲ್ಲಿ ಶ್ರೀಗಳ ಕುರಿತು ವ್ಯಕ್ತವಾದ ಲೇಖಕರ ನುಡಿಗಳನ್ನು ಉಲ್ಲೇಖಿಸಿದರು.
ಕಸಾಪ ಮೂಡಲಗಿ ತಾಲೂಕಾ ಅಧ್ಯಕ್ಷ ಸಂಜಯ ಶಿಂಧಿಹಟ್ಟಿ ಮಾತನಾಡಿ, ಸಿದ್ಧೇಶ್ವರ ಶ್ರೀಗಳ ಮಾತುಗಳೆಂದರೆ ದೇವವಾಣಿ ಇದ್ದಂತೆ ಅಂಥ ವಾಣಿಗಳನ್ನು ಗ್ರಂಥದ ಮೂಲಕ ನಮಗೆ ನೀಡಲಾಗಿದೆ. ಇಂದಿನ ಕಾಲದಲ್ಲಿ ಹಬ್ಬ ಹರಿದಿನಗಳು, ಉತ್ಸವಗಳನ್ನು ಡಿಜೆ ಸಂಸ್ಕೃತಿಯಲ್ಲಿ ಮುಳುಗಿಸಿಬಿಟ್ಟಿದ್ದೇವೆ. ನಮ್ಮ ನಿಜವಾದ ಸಂಸ್ಕೃತಿಯನ್ನು ನಾವು ಪ್ರಕಟಪಡಿಸಬೇಕಾಗಿದೆ. ಇಂಥ ಪುಸ್ತಕಗಳಿಗೆ ಓದುಗರನ್ನು ನಾವು ಬೆಳೆಸಬೇಕಾಗಿದೆ ಎಂದರು.
ಮಕ್ಕಳ ಸಾಹಿತಿ ಸಂಗಮೇಶ ಗುಜಗೊಂಡ ಮಾತನಾಡಿ, ಸಿದ್ದೇಶ್ವರ ಶ್ರೀಗಳು ಮೂಡಲಗಿಗೆ ಬಂದಾಗ ಅವರ ಜೊತೆಗಿನ ತಮ್ಮ ಒಡನಾಟವನ್ನು ನೆನೆಸಿಕೊಂಡರು. ಇನ್ನೋರ್ವ ಮಕ್ಕಳ ಸಾಹಿತಿ ಜಯವಂತ ಕಾಡದೇವರ ಮಾತನಾಡಿದರು
ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಸುಣಧೋಳಿಯ ಜಡಿ ಸಿದ್ಧೇಶ್ವರ ಮಠದ ಪೀಠಾಧಿಪತಿ ಶ್ರೀ ಶಿವಾನಂದ ಮಹಾಸ್ವಾಮಿಗಳು, ಸಾನ್ನಿಧ್ಯವನ್ನು ಶ್ರೀ ಶಿವಾನಂದ ಗೀತಾಶ್ರಮ ಸದಲಗಾದ ಡಾ. ಶೃದ್ಧಾನಂದ ಸ್ವಾಮೀಜಿ ವಹಿಸಿದ್ದರು.
ಕೃತಿಯ ಲೇಖಕ ಬಾಲಶೇಖರ ಬಂದಿ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯ ಮೇಲೆ ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ, ಉಪಾಧ್ಯಕ್ಷ ರವೀಂದ್ರ ಸೋನವಾಲಕರ ಉಪಸ್ಥಿತರಿದ್ದರು. ರಮೇಶ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು.