ಕಷ್ಟ ಸುಖ ಕೇಳುವರು ಕೇಳದಿದ್ದಾಗ ಈ ರೀತಿ ಅನುಭವಗಳು ಎಲ್ಲರ ಮುಂದೆ ಹೊರ ಬರುತ್ತವೆ.
ಪಾದ ಮುಟ್ಟಿದಾಗ ಅಕ್ಕನಿಗೆ ಗೊತ್ತಾಯಿತು. ನಾನು ಕಾಲಿಗೆ ನಮಸ್ಕರಿಸಲು ತಲೆಬಾಗುತ್ತೇನೆ ಅನ್ನುವಷ್ಟರಲ್ಲಿ ಸರಕ್ಕನೆ ತನ್ನ ಪಾದಗಳನ್ನು ಮೇಲೆ ಎಳೆದುಕೊಂಡಳು, ನಮಸ್ಕರಿಸಲು ಒತ್ತಾಯ ಮಾಡದೆ ಅವಳಿಗೆ ‘ಅಕ್ಕಾ, ಬರುವೆ ಡ್ಯುಟಿಗೆ ಹೊತ್ತಾಗುತ್ತದೆ’ ಎಂದು ಹೇಳಿ ಬರುವಾಗ ನನ್ನ ಕಣ್ಣುಗಳು ತೇವಗೊಂಡಿದ್ದವು. ಈ ಕರ್ತವ್ಯ ಒಮ್ಮೊಮ್ಮೆ ಬೇಡವೆನಿಸುವಷ್ಟು ಭಾರವಾದರೂ ಈಗ ಹಾಗೆ ಯೋಚಿಸುವುದು ಸರಿಯಲ್ಲ ಅಂದು ನನ್ನ ಕೇಂದ್ರ ಸ್ಥಾನಕ್ಕೆ ಕಾರಿನಲ್ಲಿ ತಿರುಗುತ್ತಿದ್ದಾಗ ಯಾವುದೋ ಹಳೆ ನೆನಪಿನ ಸುರುಳಿ ಬಿಚ್ಚುತ್ತಾ ಹೋಯಿತು
ಅಕ್ಕನ ಮನೆತನ ಊರಿಗೆ ಶ್ರೀಮಂತ ಮನೆತನ. ಆದರೆ ಮಾವಂದಿರುಗಳ ತಪ್ಪು ನಿರ್ಧಾರದಿಂದ ಆಸ್ತಿ ಕಳೆದುಕೊಂಡು ಸಾಮಾನ್ಯರಂತೆ ಜೀವನ ಸಾಗಿಸುತ್ತಿರುವಾಗ 1994-2000ರ ಹೊತ್ತಿನಲ್ಲಿ ಅಣ್ಣನ ಜೊತೆ ಮೇಲಿಂದ ಮೇಲೆ ಅಕ್ಕನ ಮನೆಗೆ ಹೋದಾಗ ಅವಳಿಗೆ ಎಲ್ಲಿಲ್ಲದ ಖುಷಿಯೋ, ಖುಷಿ. ತುಂಬಾ ಪ್ರೀತಿಯಿಂದ ಹೋಳಿಗೆ ಊಟಕ್ಕೆ ಸಿದ್ಧ ಮಾಡಿಯೇ ಬಿಡುತ್ತಿದ್ದಳು. ನಾವೆಷ್ಟೆ ದಿನವಿರಲಿ ಪ್ರತಿದಿನ ಒಂದೊಂದು ತರಹ ವಿಭಿನ್ನ ರುಚಿಯಾದ ಅಡುಗೆ ಮಾಡಿ ನೀಡುತ್ತಿದ್ದಳು. ಮೂರು ಹೆಣ್ಣು ಮಕ್ಕಳು ಒಬ್ಬ ಮಗ ಇರುವ ಕುಟುಂಬದಲ್ಲಿ ನಾವು ಹೋದಾಗ ಹರಟೆ ಹೊಡಿದದ್ದೇ ಹೊಡಿದದ್ದು. ಒಡಹುಟ್ಟಿದ ಅಣ್ಣ ಹಾಗೂ ದೊಡ್ಡಪ್ಪ ಚಿಕ್ಕಪ್ಪನ ಮಕ್ಕಳು ಸೇರಿ ಐದಾರು ಅಣ್ಣ ತಮ್ಮಂದಿರು ಕೂಡಿಕೊಂಡು ಮಾವಂದಿರನ್ನು ಮತ್ತು ಅಕ್ಕನ ಮಕ್ಕಳನ್ನು ಕಾಡಿಸಿದ್ದೆ ಕಾಡಿಸಿದ್ದು. ನನ್ನ ಅಕ್ಕ ನಮ್ಮನ್ನು ಮಾತ್ರ ಎಂದು ಬಿಟ್ಟು ಕೊಟ್ಟವಳಲ್ಲ. ನಮ್ಮ ಮೂವರು ಸಹೋದರರಲ್ಲಿ ಒಬ್ಬರಿಗಾದರು ತನ್ನ ಹೆಣ್ಣುಮಕ್ಕಳಲ್ಲಿ ಒಬ್ಬರನ್ನು ಮದುವೆ ಮಾಡಬೇಕೆಂಬ ಆಶೆ ಆದರೆ ಎಂದೂ ಕೇಳಲಿಲ್ಲ ಯಾಕೆ ಅನ್ನುವುದು ಇನ್ನೂ ನಮಗೆ ಗೊತ್ತಾಗಿಲ್ಲ.
ಮೊನ್ನೆ ಧಿಡೀರ್ ಅಂತ 10 ದಿನಗಳ ಹಿಂದೆ ಅಕ್ಕನಿಗೆ ಕಫ ಆಗಿದೆ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ ಎಂದು ತಿಳಿದು ತಕ್ಷಣ ನಾನೇ ಎಲ್ಲರನ್ನು ಸಂಪರ್ಕಿಸಿ ಸರಕಾರಿ ಆಸ್ಪತ್ರೆಗೆ ಸೇರಿಸಿದೆ. ಆರ್‍ಟಿಪಿಸಿಆರ್ ಚೆಕ್ ಮಾಡಿಸಿದಾಗ ಕೊರೋನಾ ನೆಗೆಟಿವ್ ಬಂದದ್ದು ಸಮಾಧಾನ ತಂದರೂ ಪ್ಲೇನ ಸಿಟಿ- ಚೆಸ್ಟ್ ಸ್ಕ್ಯಾನ್‍ದಲ್ಲಿ,,, ಸಿಟಿ ಇನ್ವಾಲಮೆಂಟ ಸ್ಕೋರ್ 15/25 ಇರುವುದು ಕಳವಳವಾಯಿತು. ಆಕ್ಸಿಜೆನ ಸೆಚುರಿಟಿ ಲೆವೆಲ್, ವಿಥೋಟ 85 ಇರುತ್ತದೆ, ಸಪ್ಲೈ ಸ್ಟೇಟ್‍ಸದಲ್ಲಿ 97-100 ಇದೆ ಇದು ಕಳವಳಕಾರಿ. ಈಗಿನ ಸ್ಥಿತಿ ಹೇಗೆ ಅನಿಸುತ್ತದೆ ಎಂದರೆ ಕೋವಿಡ್ ಪಾಸಿಟಿವ್ ಬಂದರೆ ಉತ್ತಮ, ಆದರೆ ನೆಗೆಟಿವ್ ತೋರಿಸುವುದು ತುಂಬಾ ಡೆಂಜರ್ ಅಂತ ವೈದ್ಯಕೀಯ ಶಾಸ್ತ್ರ ಹೇಳುತ್ತದೆ.
ಎರಡು ಮೂರು ಬಾರಿ ಪೋನ್ ಮಾಡಿದಾಗ ಅಕ್ಕ ನನಗೇ ಧೈರ್ಯ ಹೇಳುತ್ತಿದ್ದಳು ಆದರೆ ಮೊನ್ನೆ ಮಾತ್ರ ಅತ್ತು ಬಿಟ್ಟಳು. ಶನಿವಾರ ಪತ್ನಿಗೆ ಹಾಸ್ಪಿಟಲ್ ಗೆ ತೋರಿಸುವ ಸಂಬಂಧ ಹೋಗುವುದು ಆಗಲಿಲ್ಲ. ಇಂದು ರವಿವಾರ ಕೋವಿಡ್ ಸೆಕ್ಟರ್ ಆಫಿಸರ್ ಕೆಲಸ ಮುಗಿಸಿಕೊಂಡು ಅಕ್ಕನಲ್ಲಿ ಹೋದೆ, ಅಕ್ಕ ಚೆನ್ನಾಗಿ ಮಾತನಾಡಿದಳು ಎಲ್ಲ ರೀತಿಯಿಂದ ಸರಿ ಇದ್ದಾಳೆ ಅಂತ ನನಗೆ ಅನಿಸಿತು, ನನ್ನ ತಮ್ಮ ದೂರ ನಿಂತು ನನ್ನ ನೋಡಿ ಹೋದ ಎನ್ನುವ ಭಾವ ಅವಳಲ್ಲಿ ಬರಬಾರದು ಎಂದು ಅವಳನ್ನು ಸಹಜವಾಗಿ ಮುಟ್ಟಿ ಜ್ವರ ಇಲ್ಲವಲ್ಲಾ ಅಕ್ಕಾ ಅಂತ ಅಂದೆ, ನಾನೆ ಸೀರೆ ಸರಿ ಮಾಡಿ ಹೊಚ್ಚಿದೆ, ಗಲ್ಲಕ್ಕೆ ಕೈ ಇಟ್ಟು ಮೈ ಬಿಸಿ ಇಲ್ಲ ಅಕ್ಕಾ, ಎಂದು ಹೇಳಿದೆ, ಹಾಗೆ ಪಾದವನ್ನು ಎರಡು ಬಾರಿ ಮುಟ್ಟಿದೆ. ನಾನು ಕೊನೆಯ ಬಾರಿ ಪಾದ ಮುಟ್ಟಿದಾಗ ಅವಳು ತನ್ನ ಪಾದಗಳನ್ನು ಮೇಲೆ ಎಳೆದುಕೊಂಡಳು ನಾನು ಬರುತ್ತೇನೆ ಅಕ್ಕ ಎಂದು ಹೇಳಿ ಬರುವಾಗ ನನ್ನ ಕಣ್ಣುಗಳು ಒದ್ದೆ ಆಗಿದ್ದವು.
ಅಲ್ಲಿರುವವರು ಅವಳನ್ನು ನಾನು ಮುಟ್ಟಿದ್ದೆ ಪವಾಡ ಅನ್ನುವ ಹಾಗೆ ನೋಡುತ್ತಿದ್ದರು ನಾನು ವೈಚಾರಿಕ ಹಿನ್ನೆಲೆ ಮತ್ತು ಭಾವನಾತ್ಮಕವಾಗಿ ವಿಚಾರ ಮಾಡುವ ಸ್ವಭಾವವುಳ್ಳವನು, ಅಗತ್ಯಗಿಂತ ಕಡಿಮೆ ಮುಂಜಾಗ್ರತೆ ತೆಗೆದುಕೊಳ್ಳುವುದಿಲ್ಲ ಹಾಗೇನೆ ತೀರ ಡಂಬಾಚಾರ ಮುಂಜಾಗ್ರತೆಯನ್ನು ತೆಗೆದುಕೊಳುವುದಿಲ್ಲ. ಕೆಲವರು ಕರೋನಾಗೆ ರೆಕ್ಕೆ ಬಂದಿವೆ ಅನ್ನೊ ತರ ವರ್ತಿಸುತ್ತಾರೆ ಅದು ಸರಿ ಅಲ್ಲ. ಯಾವಾಗಲೂ ನಮ್ಮ ಆರೋಗ್ಯದ ಬಗ್ಗೆ ಎಚ್ಚರ ಕಾಳಜಿ ನಾವೇ ವಹಿಸಬೇಕು ಹಾಗಂತ ಮಾನವೀಯತೆಯನ್ನು ಮೇಲಿಂದ ಕೆಳಕ್ಕೆ ತಳ್ಳಬಾರದು. ಆಸ್ಪತ್ರೆಗೆ ಹೋದ ಮೇಲೆ ನಾನು ಅಲ್ಲಿ ನನ್ನ ಕೈಗಳಿಂದ ವಿನಾಕಾರಣ ಏನನ್ನು ಮಟ್ಟಲಿಲ್ಲ, ಅಕ್ಕನ ಮುಟ್ಟಿದ ನಂತರ ಎರಡು ಬಾರಿ ಕೈಗೆ ಸ್ಯಾನೆಟೈಸ್ ಮಾಡಿಸಿಕೊಂಡೆ ಮುಂದುವರೆದು ಬಿಸಿನೀರಿನಿಂದ ಕೈ ತೊಳೆದುಕೊಂಡೆ.
ನಾನು ಏನು ಹೇಳಲು ಈ ಘಟನೆ ಬರೆದೆ ಅಂದರೆ ನಮ್ಮ ಹೆತ್ತವರನ್ನು, ನಮ್ಮನ್ನು ಹೆಚ್ಚು ಪ್ರೀತಿಸುತ್ತಿರುವರು ಕೇವಲ ಆಸ್ಪತ್ರೆ ಸೇರಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಕೋವಿಡ್ ಪಾಸಿಟಿವ್ ಇರುವ ತರಹ ನೋಡಬೇಡಿ, ಯಾವುದಕ್ಕು ಮಾಸ್ಕ ಮತ್ತು ಸ್ಯಾನಿಟ್ಟೈಸರ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡೇ ಉಪಚಾರ ಮಾಡಿ. ಒಮ್ಮೆ ನೋಡಿ ಬರುವರಿದ್ದರೆ ಬೇರೆ ಎಚ್ಚರಿಕೆ ವಹಿಸಬೇಕು,ಆಸ್ಪತ್ರೆಗೆ ಸೇರಿದವರನ್ನು ಉಪಚಾರ ಮಾಡಲು ನಿಂತರೆ ಇನ್ನೂ ಬೇರೆ ತರಹ ಎಚ್ಚರವಹಿಸಬೇಕಾಗುತ್ತದೆ. ನೋಡಿ ಯಾವುದಕ್ಕೂ ಮಾನವ ಸಂಬಂಧ ಬದಿಗೆ ತಳ್ಳದಿರಿ ಹಾಗೇನೆ ನಿಮ್ಮ ಪೂರ್ಣ ಸುರಕ್ಷತೆಗೂ ಆದ್ಯತೆ ನೀಡಿ ಎಂಬ ನನ್ನ ವಿನಂತಿ
ಪಾರ್ಥವಿಕಂ
ಅರ್ಜುನ ಕಂಬೋಗಿ
ಕ್ಷೇತ್ರ ಶಿಕ್ಷಣಾಧಿಕಾರಿಗಳು
ಸವದತ್ತಿ
ಬೆಳಗಾವಿ ಜಿಲ್ಲೆ