ಸವದತ್ತಿ: ಯರಗಟ್ಟಿ ತಾಲೂಕು ಘೋಷಣೆಯಾದ ನಂತರ ಯರಗಟ್ಟಿಯಲ್ಲಿ ಪ್ರಥಮವಾಗಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುತ್ತಿರುವುದು ಯರಗಟ್ಟಿ ಭಾಗದ ಜನರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಯರಗಟ್ಟಿ ಕಸಾಪ ಅಧ್ಯಕ್ಷ ರಾಜೇಂದ್ರ ವಾಲಿ ಹೇಳಿದರು.
ಸ್ಥಳೀಯ ಶಾಸಕರ ನಿವಾಸದಲ್ಲಿ ಯರಗಟ್ಟಿಯಲ್ಲಿ ನಡೆಯುತ್ತಿರುವ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿಯವರನ್ನು ಸೇರಿದಂತೆ ಅವರ ಕುಟುಂಬವನ್ನು ಸಮ್ಮೇಳನಕ್ಕೆ ಆಹ್ವಾನಿಸಿ ಅವರು ಮಾತನಾಡಿದರು.
ಸಮ್ಮೇಳನದ ಸರ್ವಾಧ್ಯಕ್ಷರಾಗಲು ಮನಸಾರೆ ಒಪ್ಪಿಗೆ ಸೂಚಿಸಿ ಸಮ್ಮೇಳನದ ಯಶಸ್ಸಿಗೆ ಪ್ರೋತ್ಸಾಹ ನೀಡುತ್ತಿರುವ ವಿಧಾನಸಭೆ ಉಪ ಸಭಾಧ್ಯಕ್ಷರಾದ ಆನಂದ ಮಾಮನಿಯವರ ಸಹಕಾರ ಕನ್ನಡ ಸಾಹಿತ್ಯಾಸಕ್ತರಿಗೆ ಖುಷಿ ತಂದಿದೆ ಎಂದರು.
ಯರಗಟ್ಟಿ ಕನ್ನಡ ಸಾಹಿತ್ಯ ಪರಿಷತ್ತಿನ ಬಳಗದಿಂದ ಕುಟುಂಬ ಸಮೇತ ಆಹ್ವಾನ ಸ್ವೀಕರಿಸಿ ಮಾತನಾಡಿದ ಆನಂದ ಮಾಮನಿಯವರು, “ಕನ್ನಡ ಸಾಹಿತ್ಯದ ಅಭಿರುಚಿ ಎಲ್ಲರಲ್ಲಿ ಮೂಡಿಸುವ ನಿಟ್ಟಿನಲ್ಲಿ ಯರಗಟ್ಟಿಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನವು ಸಂಪೂರ್ಣ ಯಶಸ್ವಿಯಾಗಲಿ” ಎಂದರು. ‘ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡುವುದರ ಜೊತೆಗೆ ನನ್ನ ಕುಟುಂಬವನ್ನೆಲ್ಲಾ ಕನ್ನಡದ ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ಸಂತಸದ ವಿಷಯ’ ಎಂದರು.
ಡಾ.ಬಿ.ಐ.ಚಿನಗುಡಿ ಪ್ರಾಸ್ತಾವಿಕ ವಾಗಿ ಮಾತನಾಡಿ, ‘ಸಮ್ಮೇಳನದಲ್ಲಿ ಕೃತಿಗಳ ಲೋಕಾರ್ಪಣೆ, ಕವಿಗೋಷ್ಠಿ, ಚಿಂತನಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನವನ್ನು ಮಾಡಲಾಗುತ್ತಿದೆ’ ಎಂದರು.
ವಿಧಾನಸಭೆ ಉಪಸಭಾಧ್ಯಕ್ಷರು ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಆನಂದ ಮಾಮನಿ ಹಾಗೂ ಅವರ ಮಾತೋಶ್ರಿ ಗಂಗಮ್ಮತಾಯಿ ಮಾಮನಿ ಮತ್ತು ಶಾಸಕರ ಧರ್ಮಪತ್ನಿ ರತ್ನಾ ಮಾಮನಿಯವರನ್ನು ಯರಗಟ್ಟಿ ಕಸಾಪ ಘಟಕದಿಂದ ಸನ್ಮಾನಿಸಿ ಸಮ್ಮೇಳನಕ್ಕೆ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ಎ.ಕೆ.ಜಮಾದರ, ಸದಾಶಿವ ಗುಡಗುಂಟಿ, ತಮ್ಮಣ್ಣ ಕಾಮಣ್ಣವರ, ದೇವೇಂದ್ರ ಕಮ್ಮಾರ, ಸಿದ್ದು ಪೂಜಾರ, ಬಿ.ಎಮ್.ರಾಯರ, ಮಹಾಂತೇಶ ಜಕಾತಿ, ಶಂಕರಲಿಂಗಪ್ಪ, ಭಾಸ್ಕರ ಹಿರೇಮೇತ್ರಿ, ಎಮ್.ಎಸ್.ಶೆಟ್ಟಿ, ಶಶಿಕಾಂತ ಹಾದಿಮನಿ, ರಾಜಶೇಖರ ಬಿರಾದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.