ಯೋಗಮೂರ್ತಿ ತಾತಯ್ಯನವರು
ಧರೆಯ ಜನರ ಭವಬಂಧನ ಬಿಡಿಸಲೆಂದೇ ,
ಇಳೆಗವತರಿಸಿದ ಕಲಿಯುಗದ ಕಾಮಧೇನು
ತಾತಯ್ಯನೆಂಬ ನಾಮಾಂಕಿತ ಸಚ್ಚಿದಾನಂದ ಗುರುವರ್ಯರು/1/
ಕೈವಾರವೆಂಬ ವಸುಂಧರೆಯ ಪುಣ್ಯಕ್ಷೇತ್ರದಿ ,
ಬಳೆಗಾರ ದಂಪತಿಯ ಪುಣ್ಯಗರ್ಭೋತ್ಸವದಿ
ಉದಯಿಸಿತು ಭವ್ಯ ಉಜ್ವಲಮೂರ್ತಿ,
ಪ್ರಕಾಶಿಸಿತು ಭರತಭೂಮಿಯ ಕಾರುಣ್ಯಮೂರ್ತಿ /2/
ಜಗದ ಜಂಜಡದಲಿ ಸಿಲುಕಿ
ಬಳಲಿ ಬೆಂಡಾದ ನಿಮ್ಮ ಜೀವಕೆ ,
ಸಂಜೀವಿನಿಯಾಗಿ ದೊರೆತ ಗುರುವಿನ ಮಾರ್ಗದರ್ಶನ
ಬೆಳಗಿತು ನಿಮ್ಮ ಅಂತರಂಗದ ಆತ್ಮಜ್ಯೋತಿ. /3/
ಇಂದ್ರಿಯಗಳಿಗೆ ಮನಸೋಲುವ ಭವಿಗಳಿಗೆ
ಯೋಗದ ಚಿರತತ್ವವ ಉಣಬಡಿಸಿ,
ಸುಖೀ ಆರೋಗ್ಯ ಸಾರಿದ ಮಹಾಮಹಿಮ ಯೋಗಬ್ರಹ್ಮರು/4/
ಬದುಕಿನ ನಿಜಸಾರವ ತಿಳಿಸುವ ತತ್ವಪದಗಳ ಸಂತರು
ಬೆಣಚುಕಲ್ಲು ಸಕ್ಕರೆ ಮಾಡಿದ ಗಂಗೆಯ ಅವತರಿಸಿದ ಪವಾಡಪುರುಷರು,
ನಾರಾಯಣನೆಂಬ ನಿಮ್ಮ ನಾಮ
ನೆಲೆಸಿತು ಧರಿತ್ರಿಯಲಿ ನಿತ್ಯ ನೂತನ ನಿರಂತರ /5/
ಸಜ್ಜನಸಾಂಗತ್ಯ ಇಂದ್ರಿಯನಿಗ್ರಹ
ಇವು ನಿಮ್ಮ ಮಂತ್ರಗಳು
ದೇಹ ಆತ್ಮ ಒಂದೇ ಎಂದು ಸಾರಿದ ಸರ್ವೋತ್ತಮರು
ಪರೋಪಕಾರವೇ ಭುವಿಯ ಮೇಲಿನ ನಿಜವಾದ ಧರ್ಮ
ಅದ ಸಾರಿ ಸಾರಿ ಹೇಳಿದ ಪುಣ್ಯ ಪುರುಷರು/6/
ನೀವು ಜಗದ ಸೌಂದರ್ಯ ಶಿಖಾಮಣಿ , ನಿಮ್ಮ ಆಶೀರ್ವಾದ ಸದಾ ಬೇಡುತ
ಭವಬಂಧನ ಬಿಡಿಸಿ ಈ ಪೃಥ್ವಿ ಬೆಳಗಲು
ಮತ್ತೊಮ್ಮೆ ಅವತರಿಸಿ ಬನ್ನಿ
ಮತ್ತೊಮ್ಮೆ ಅವತರಿಸಿ ಬನ್ನಿ /7/
ಶಿವಕುಮಾರ
ಕನ್ನಡ ಸಹಾಯಕ ಪ್ರಾಧ್ಯಾಪಕರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮೂಡಲಗಿ ಜಿ ಬೆಳಗಾವಿ (591312)
ಮೊಬೈಲ್ ಸಂಖ್ಯೆ:- 9880735257
( ಶಿವಕುಮಾರ ಅವರ ಈ ಮೇಲಿನ ಕವಿತೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಕೈವಾರ ತಾತಯ್ಯನವರನ್ನು ಕುರಿತ ರಾಷ್ಟ್ರ ಮಟ್ಟದ ಕವನ ಸ್ಪರ್ಧೆಯಲ್ಲಿ ” ಕಾಲಜ್ಞಾನಿ ಯೋಗಿ ನಾರೇಯಣ ಯತೀಂದ್ರ ಪ್ರಶಸ್ತಿ ” ಪಡೆದುಕೊಂಡಿದೆ. )