ರಸಸಮಯ: ಮಳೆ ಬರುವ ಹಾಗಿದೆ ನೀನೂ ಬಂದು ಬಿಡು ಚಿನ್ನಾ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

ಮಳೆ ಬರುವ ಹಾಗಿದೆ ನೀನೂ ಬಂದು ಬಿಡು ಚಿನ್ನಾ 

ಸುಡುವ ಸೂರ್ಯನ ಕಿರಣಗಳ ಹಾವಳಿಗೆ ಮೈಯನ್ನೆಲ್ಲ ಸುಟ್ಟುಕೊಂಡು ದಾಹ ಇನ್ನು ತಾಳಲಾರೆನೆಂದು ಭೂಮಿ ಆಗಸವನ್ನು ತಬ್ಬಿಕೊಳ್ಳಲು ಹವಣಿಸುತ್ತಿದ್ದ ಸಮಯ.

ಮಾನ್ಸೂನ್ ಮಳೆ ಹನಿಗಳು ಮಣ್ಣಿನ ಕಣ ಕಣದಲ್ಲೂ ತಮ್ಮ ಮೈ ಮನಗಳನ್ನು ತೂರಿಸಿ ಒಂದಾಗಿ ಘಮಲು ಹಬ್ಬಿಸುತ್ತಿದ್ದವು. ಆಗ ಕಣ್ಣಿಗೆ ಬಿದ್ದವಳು ನೀನು.

- Advertisement -

ಬಲಗೈಯಲ್ಲಿ ರಂಗು ರಂಗಿನ ಛತ್ರಿಯನ್ನು ಹಿಡಿದು ಇನ್ನೊಂದು ಕೈಯಲ್ಲಿ ಹಸಿರು ಮಿಶ್ರಿತ ಬಂಗಾರ ಬಣ್ಣದ ಲಂಗವನ್ನು ಮಳೆಗೆ ತೊಯ್ಯದಿರಲೆಂದು ತುಸು ಮೆಲಕ್ಕೆ ಹಿಡಿದು ಗೆಜ್ಜೆ ಕಾಲ್ಗಳನ್ನಿಡುತ್ತಾ ಬಂದಾಗಲೇ ಪ್ರೇಮದೇವತೆಯಾಗಿ ನೀನು ನನ್ನ ಹೃದಯ ಮಂದಿರವನ್ನು ಪ್ರವೇಶಿಸಿದ್ದೆ.

ಆ ದೇವರು ಪುರುಸೊತ್ತು ಮಾಡಿಕೊಂಡು ನಿನ್ನ ಮೂಗು ಹುಬ್ಬುಗಳನ್ನು ತಿದ್ದಿ ತೀಡಿ ಪ್ರತಿ ಅವಯವಗಳನ್ನು ಲೆಕ್ಕ ಹಾಕಿ ಅಳತೆ ಮಾಡಿ ಅಪ್ಸರೆಯೂ ನಾಚುವಂತೆ ಸೃಷ್ಟಿಸಿ ನನಗಾಗಿಯೇ ಭೂಮಿಗೆ ಕಳಿಸಿದ್ದಾನೇನೋ ಎಂದು ಭಾಸವಾಯಿತು.

ಬೆದರಿದ ಜಿಂಕೆಯಂಥ ಕಂಗಳಲ್ಲಿ ಪಿಳಿ ಪಿಳಿ ಕಣ್ಣು ರೆಪ್ಪೆ ಬಡಿಯುತ್ತ ತುದಿಗಣ್ಣಿನಲ್ಲಿ ನಗುತ್ತ ನೀ ನನ್ನೆಡೆಗೆ ಬೀರಿದ ದೃಷ್ಟಿ ಕೊನೆಯುಸಿರಿರುವರೆಗೂ ಕಾಪಿಟ್ಟುಕೊಳ್ಳುವ ಮನಸ್ಸಾಯಿತು.

ಕೆಂದುಟಿಯಂಚಿನಲ್ಲಿ ಜೇನು ತುಂಬಿದ ನಗು ಚೆಲ್ಲುತ್ತಿದ್ದ ಬಗೆ ಕಂಡರೆ ಎಂಥ ಅರಸಿಕನೂ ರಸಿಕನಾಗುವಂತಿತ್ತು. ಅಕ್ಷರ ಬಾರದವನೂ ಪ್ರೇಮ ಕವಿತೆ ಬರೆದು ಬಿಡುತ್ತಿದ್ದ. ಕಣ್ಮುಚ್ಚಿ ಸುರಿಯುತ್ತಿದ್ದ ಮಳೆಯಲ್ಲಿ ನಾನು ಕಣ್ಣಿನ ರೆಪ್ಪೆ ಮುಚ್ಚದೇ ನಿನ್ನನ್ನೇ ನೋಡುತ್ತಿದ್ದೆ. ಜನ ಸಂದಣಿಯಲ್ಲಿ ಜಾಗ ಹುಡುಕುತ್ತ ನೀ ನನ್ನ ಪಕ್ಕಕ್ಕೆ ಬಂದು ನಿಂತಾಗ ಒಂದು ಕ್ಷಣ ಎದೆಯ ತಾಳ ತಪ್ಪಿ ಹೋಯಿತು. ಮರಳಿ ಮೊದಲಿನ ತಾಳಕ್ಕೆ ಬರಲು ಬಹು ಹೊತ್ತೇ ಹಿಡಿಯಿತು.

ಧೋ ಎಂದು ಧಾರಾಕಾರವಾಗಿ ಸದ್ದು ಮಾಡುತ್ತ ಭೂಮಿಯ ಅದೆಷ್ಟೋ ದಿನದ ದಾಹವನ್ನು ಮಳೆರಾಯ ತಣಿಸುತ್ತಿದ್ದ. ಸುಯ್ಯೆಂದು ಸೂಸುವ ಗಾಳಿಗೆ ನಿನ್ನ ಹಣೆಗೆ ಹೂ ಮುತ್ತಿಕ್ಕುವಂತೆ ಮಳೆ ಹನಿಗಳು ಹಣೆಯ ಮೇಲೆ ಬಂದು ಕುಳಿತವು. ಆ ಕ್ಷಣ ನಾನೇ ಆ ಮಳೆ ಹನಿ ಆಗಬಾರದಿತ್ತೆ ಎಂದೆನಿಸದೇ ಇರಲಿಲ್ಲ.

ಹೊಸದಾಗಿ ಬಿದ್ದ ಮಳೆಗೆ ಖುಷಿಗೊಂಡ ಪ್ರಾಯದ ನಾಯಿಗಳೆರಡು ಚೆಲ್ಲಾಟವಾಡುತ್ತ ನಿನ್ನ ಕಾಲ ಬಳಿ ಬಂದಾಗ ನೀನು ಹೆದರಿ ಛತ್ರಿ ಬೀಳಿಸಿ ಆಯ ತಪ್ಪಿ ನನ್ನ ಹರವಾದ ಎದೆಗೆ ಮುಖ ಆನಿಸಿದೆ. ಅರಿವಿಲ್ಲದಂತೆ ನನ್ನ ಬಾಹುಗಳು ಬಾಚಿ ತಬ್ಬಲು ಮುಂದಾದವು. ಅಷ್ಟರಲ್ಲಿ ನೀ ಮುಡಿದ ಮೈಸೂರು ಮಲ್ಲಿಗೆಯ ಘಮ ಮೂಗಿಗೆ ಬಡಿದು ಎಚ್ಚೆತ್ತುಕೊಂಡೆ. ಬೀಸುವ ತಣ್ಣನೆ ಗಾಳಿಗೆ ನಿನ್ನ ದುಪ್ಪಟ್ಟಾದ ಅಂಚು ನನ್ನ ಕಿರುಬೆರಳಿಗೆ ಸೋಕಿದಾಗ ಆದ ಪುಳಕ ಪದಗಳಲ್ಲಿ ಹೇಳಲಾಗದ್ದು.

ಸಣ್ಣಗೆ ಹನಿಯುತ್ತಿದ್ದ ಮಳೆ ನನ್ನೆದೆಯೊಳಗೆ ಸುರಿದಂತಾಗುತ್ತಿತ್ತು. ಅದೇನೋ ಗುಳಿ ಕಾಲ ಅಂತಾರಲ್ಲ ಅದೇ ಗಳಿಗೆಯಲ್ಲಿ ನೀನು ನನ್ನ ಕಣ್ಣಿಗೆ ಬಿದ್ದಿರಬೇಕು. ಸನಿಹ ನೀನಿರೆ ಸ್ವರ್ಗವೇ ಈ ಧರೆ ಎಂದು ನನ್ನ ಮನಸ್ಸು ಹೇಳುತ್ತಿತ್ತು.

ಎಂದೂ ಎಣಿಸಿರದ ಸುವರ್ಣ ಗಳಿಗೆ ಅದು ನಿಯಂತ್ರಣ ತಪ್ಪಿದ ಮನಸ್ಸು ಈಗಲೇ ತಬ್ಬಿಕೋ ಎಂದು ಹೇಳುತ್ತಿರುವಾಗಲೇ ನೀನು ಒಳ್ಳೆ ಮದುವೆ ಹೆಣ್ಣಿನ ತರ ನಾಚಿಕೊಂಡು ನನ್ನಿಂದ ಮೆಲ್ಲನೆ ಸರಿದು ಪಕ್ಕಕ್ಕೆ ನಿಂತಾಗ ನನ್ನ ಹೃದಯವೇ ನನ್ನಿಂದ ದೂರ ಹೋಗುತ್ತಿದೆಯೇನೋ ಎನ್ನಿಸುವಷ್ಟು ನೋವಾಯ್ತು.

ನನ್ನನ್ನೇ ದಿಟ್ಟಿಸುತ್ತ ನಿಂತ ಪರಿ ಕಂಡಾಗ ನಿನಗೂ ನನ್ನ ಹಾಗೆ ಈ ಮಾನ್ಸೂನ್ ಮಳೆಯಲಿ ಪುಳಕದ ಅನುಭವ ಆಗಿದೆ ಅಂತ ಖಚಿತವಾಯಿತು. ಮಳೆ ಸದ್ದು ನಿಂತಾಗ ಒಲ್ಲದ ಮನಸ್ಸಿನಿಂದ ಕೈ ಟಾಟಾ ಹೇಳಿತು. ನೀನು ಮುಂಗುರುಳು ಸರಿಸುತ್ತ ನನ್ನೆಡೆ ಕೈ ಬೀಸಿದ ನೆನಪು ಇನ್ನೂ ಹಸಿರಾಗಿದೆ.

ಮಾನ್ಸೂನ್ ಶುರುವಾಯಿತೆಂದು ಹವಾಮಾನ ಇಲಾಖೆಯವರು ಹೇಳಿದ ದಿನದಿಂದ ಪ್ರತಿ ಸಂಜೆ ಅದೇ ಮರದ ಕೆಳಗೆ ನಿಂತು ನಿನ್ನ ಬರುವಿಕೆಗಾಗಿ ಕಾಯ್ತಿದಿನಿ. ಇವತ್ತೂ ಬರ್ತಿನಿ. ಅಂದ ಹಾಗೆ ನಾಯಿಗಳೂ ಅಲ್ಲಿಯೇ ಬಂದು ಚೆಲ್ಲಾಟ ನಡೆಸಿವೆ.

ಮಳೆ ಬರುವ ಹಾಗಿದೆ ನೀನೂ ಬಂದು ಬಿಡು ಚಿನ್ನಾ…


ಜಯಶ್ರೀ.ಜೆ. ಅಬ್ಬಿಗೇರಿ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!