spot_img
spot_img

ರಾಘವಾಂಕನ ಹರಿಶ್ಚಂದ್ರಕಾವ್ಯದ ಒಂದು ಪದ್ಯ, ಹದಿನಾಲ್ಕು ಸಂಭಾಷಣೆಗಳು

Must Read

- Advertisement -

ಕಾವ್ಯೇಷು ನಾಟಕಂ ರಮ್ಯಂ” ಎಂಬಂತೆ ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿ ನಾಟಕವು ತನ್ನ ಚತುರ ಸಂಭಾಷಣೆಗಳಿಂದಾಗಿ ಹೆಚ್ಚು ರಮಣೀಯವಾಗಿರುತ್ತದೆ. ಆದರೆ ಕಾವ್ಯದಲ್ಲಿ ನಾಟಕದ ಹಾಗೆ ಸಂಭಾಷಣೆಗಳನ್ನು ತರುವುದು ಕಷ್ಟಸಾಧ್ಯ. ಕನ್ನಡ ಕಾವ್ಯಗಳಲ್ಲಿ ‘ನಾಟಕೀಯತೆ’ಯಂತೂ ಬಹಳ ಕಡಿಮೆ. ರನ್ನ ಮೊದಲಾದವರ ಕಾವ್ಯ ಬಿಟ್ಟರೆ ಅತ್ಯಂತ ಸಮರ್ಥವಾಗಿ, ಔಚಿತ್ಯಪೂರ್ಣವಾಗಿ ನಾಟಕೀಯ ಸಂಭಾಷಣೆಯನ್ನು ಕಾವ್ಯದಲ್ಲಿ ಬಳಸಿರುವ ಕನ್ನಡ ಕಾವ್ಯಗಳು ಅತ್ಯಲ್ಪ. ಅಂತಹ ಅಪರೂಪದ ಕಾವ್ಯ ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ ವು ನಾಟಕೀಯತೆಗೆ ಅತ್ಯುತ್ತಮ ಉದಾಹರಣೆಯಾಗಿದೆ.

ಹರಿಶ್ಚಂದ್ರ ಕಾವ್ಯದಲ್ಲಿ ರಾಘವಾಂಕನು ಒಂದಾದ ಮೇಲೊಂದರಂತೆ ಭಾವಗಳ, ವ್ಯಕ್ತಿಗಳ ಘರ್ಷಣೆಯನ್ನು ಅಥವಾ ಒಂದು ವ್ಯಕ್ತಿಯ ಸ್ವಭಾವವನ್ನೇ ಬಿಚ್ಚಿ ತೋರಿಸುವ ದೃಶ್ಯವನ್ನು ನಮ್ಮ ಮುಂದಿಡುತ್ತಾನೆ. ಒಳ್ಳೆಯ ನಾಟಕಗಳಲ್ಲಿ ನಾವು ಮರೆಯಲಾಗದ ಕೆಲವು ದೃಶ್ಯಗಳಿರುತ್ತವೆ. ಇವುಗಳಲ್ಲಿ ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯನ್ನು ಜರಿಯುವುದು, ವಿರೋಧಿಸುವುದು, ಅವರ ಬಲವತ್ತರವಾದ ಭಾವನೆಗಳ ಘರ್ಷಣೆ, ಕಲ್ಲಿಗೆ ಕಲ್ಲುಜ್ಜಿ ಕಿಡಿಯುದುರುವಂತೆ ಮನಸ್ಸು ಮನಸ್ಸಿಗೆ ಉಜ್ಜಿ ಹಾರುವ ಮಾತುಗಳು ನಮಗೆ ಮನುಷ್ಯ ಸ್ವಭಾವದ ಮತ್ತು ಜೀವನದ ಆಳವಾದ ಅನುಭವವನ್ನು ನೀಡುತ್ತವೆ. ಒಮ್ಮೊಮ್ಮೆ ಒಂದು ದೇಶದಲ್ಲಿ ಒಬ್ಬ ವ್ಯಕ್ತಿಯು ಒಂದು ಗಳಿಗೆಯಲ್ಲಿ ನಡೆದುಕೊಳ್ಳುವ ರೀತಿಯು ಒಂದು ಸಲ ಮಿಂಚಿನಂತೆ ಮಿಂಚಿ ಇಡೀ ಪ್ರದೇಶವನ್ನು ಸ್ಪಷ್ಟವಾಗಿ ತೋರಿಸುವಂತೆ, ಆ ವ್ಯಕ್ತಿಯ ಇಡೀ ವ್ಯಕ್ತಿತ್ವವನ್ನು ತೋರಿಸುತ್ತದೆ.

ಇಂತಹ ಹಲವು ಸಂಭಾಷಣೆಗಳನ್ನುಳ್ಳ ಸನ್ನಿವೇಶಗಳನ್ನು ರಾಘವಾಂಕನು ಹರಿಶ್ಚಂದ್ರ ಕಾವ್ಯದಲ್ಲಿ ಮತ್ತೆ ಮತ್ತೆ ತಂದಿದ್ದಾನೆ.
ಇಂದ್ರಸಭೆಯಲ್ಲಿ ‘ವಸಿಷ್ಠ-ವಿಶ್ವಾಮಿತ್ರರ ಬೆಂಕಿಯಂತಹ ವಾಗ್ವಾದ ಸಂದರ್ಭ’, ವಿಶ್ವಾಮಿತ್ರರ ವನದಲ್ಲಿ ‘ಹೊಲತಿಯರು-ಹರಿಶ್ಚಂದ್ರರ ನಡುವಿನ ಸಂಭಾಷಣೆ’, ‘ವಿಶ್ವಾಮಿತ್ರ-ಹರಿಶ್ಚಂದ್ರರ ವಾಗ್ಯುದ್ಧ’, ಲೋಹಿತಾಶ್ವನ ಮರಣದ ಸಂದರ್ಭದಲ್ಲಿ ‘ಚಂದ್ರಮತಿ-ಯಜಮಾನನ ನಡುವಿನ ಮಾತುಕತೆ’, ‘ಹರಿಶ್ಚಂದ್ರ-ವಿಪ್ರ ‘ಹರಿಶ್ಚಂದ್ರ-ನಕ್ಷತ್ರಿಕ’, ‘ಹರಿಶ್ಚಂದ್ರ-ವೀರಬಾಹುಕ’, ‘ಚಂದ್ರಮತಿ-ವಿಪ್ರ ‘ಚಂದ್ರಮತಿ-ರಾಜ’ ಇವರುಗಳ ಮಧ್ಯೆ ನಡೆಯುವ ಸಂಭಾಷಣೆಗಳು ತುಂಬಾ ಪರಿಣಾಮಕಾರಿಯಾಗಿವೆ. ಪ್ರತಿಯೊಂದು ಸಂದರ್ಭದಲ್ಲಿಯೂ ಆಯಾ ಪಾತ್ರಗಳ ಗುಣ-ನಡತೆಗಳು ಸ್ಪಷ್ಟವಾಗಿ ಓದುಗರ ಕಣ್ಮುಂದೆ ಕಟ್ಟುವಂತೆ ಚಿತ್ರಿಸಿದ್ದಾನೆ.

- Advertisement -

“ಮಾತು ಮಾತು ಮಥಿಸಿ ಬಂದ ನಾದದ ನವನೀತ’ ಎನ್ನುವ ಬೇಂದ್ರೆ ವಾಣಿಯಂತೆ ರಾಘವಾಂಕನು ತನ್ನ ಸೋದರ ಮಾವ ಮತ್ತು ಗುರು ಹರಿಹರನೊಡನೆ ಅರ್ಥಪೂರ್ಣ ಸಂವಾದ, ಚರ್ಚೆ ಹಾಗೂ ವೈಚಾರಿಕ ಭಿನ್ನತೆಗಳೊಂದಿಗೆ ‘ಶಿಷ್ಯಾಧಿಚ್ಛೇದಿತಂ ಪರಾಜಿತಂ’ ಎಂಬಂತೆ ಗುರುವನ್ನು ಮೀರಿಸುವಂತಹ ಸಾಧನೆ ಮಾಡಿದ ಯುಗಪ್ರವರ್ತಕ ಕವಿಯಾಗಿದ್ದಾನೆ.

ತನ್ನ ವೈಯಕ್ತಿಕ ಜೀವನದ ಈ ವೈಚಾರಿಕ ಮಂಥನವನ್ನು ತನ್ನ ಕಾವ್ಯದಲ್ಲೂ ಪ್ರಕಟಪಡಿಸಿದ್ದಾನೆ. ಅಂತೆಯೇ ಹರಿಶ್ಚಂದ್ರ ಕಾವ್ಯವು ಯಾವ ಜಾತಿ-ಮತ-ಪಂಥಗಳಿಗೆ ಸೀಮಿತವಾಗದ ಸಾರ್ವತ್ರಿಕ ಮೌಲ್ಯವೊಂದನ್ನು ಪ್ರತಿಪಾದಿಸುತ್ತದೆ. ಆದ್ದರಿಂದಲೇ ಈ ಕಾವ್ಯವು ಅವನ ಉಳಿದ ಕಾವ್ಯಗಳಿಗಿಂತ ಭಿನ್ನ ಹಾಗೂ ಜನಪ್ರಿಯವಾಗಿದೆ.

ಹರಿಶ್ಚಂದ್ರ ಕಾವ್ಯದುದ್ದಕ್ಕೂ ‘ಮುತ್ತಿನ ಹಾರ’ದಂತೆ ಸಂಭಾಷಣೆಗಳ ಸರಮಾಲೆಯನ್ನೇ ರಾಘವಾಂಕನು ಕಟ್ಟಿದ್ದಾನೆ. ‘ವಿಶ್ವಾಮಿತ್ರ-ಹರಿಶ್ಚಂದ್ರರ ಮಧ್ಯದ ಸಂಭಾಷಣೆ’ಯ ಸಂದರ್ಭದ ಒಂದು ಪದ್ಯದಲ್ಲಂತೂ ಒಂದಲ್ಲ, ಎರಡಲ್ಲ; ಒಂದರ ಮೇಲೊಂದರಂತೆ ಹದಿನಾಲ್ಕು ಸಂಭಾಷಣೆಗಳನ್ನ ಒಂದರ ಮೇಲೊಂದರಂತೆ ಹೇಳಿದ್ದಾನೆ.

- Advertisement -

ನಡೆ ರಥವನೇಕೊಳ್ಳೊಲ್ಲೆನೇಕೊಲ್ಲೆ ಪರ
ರೊಡವೆಯೆನಗಾಗದೇಕಾಗದಾನಿತ್ತೆನಿತ್ತಡೆ ಕೊಳಲುಬಾರದೇಂಕಾರಣಂ ಬಾರದೆಮಗಂ ಪ್ರತಿಗ್ರಹ ಸಲ್ಲದು
ಕಡೆಗೆ ನಿನ್ನೊಡವೆಯಲ್ಲವೆಯಲ್ಲವೇಕಲ್ಲ
ಕೊಡದ ಮುನ್ನೆನ್ನೊಡವೆಕೊಟ್ಟ ಬಳಿಕೆನಗೆಲ್ಲಿ
ಯೊಡವೆಯೆಂದರರೆ ದಾನಿಗಳ ಬಲ್ಲಹನು ಮುನಿಯೊಡನೆ ಸೂಳ್ನುಡಿಗೊಟ್ಟನು !!66!!

ಪದಚ್ಛೇದ : ನಡೆ ರಥವನ್ ಏರಿಕೊಳ್, ಒಲ್ಲೆನ್. ಏಕೊಲ್ಲೆ? ಪರರ ಒಡವೆ ಎನಗಾಗದು. ಏಕಾಗದು? ಆನ್ ಇತ್ತೆನ್. ಇತ್ತಡೆ? ಕೊಳಲು ಬಾರದು. ಏಂ ಕಾರಣಂ ಬಾರದು? ಎಮಗಂ ಪ್ರತಿಗ್ರಹಂ ಸಲ್ಲದು. ಕಡೆಗೆ ನಿನ್ನ ಒಡವೆಯಲ್ಲವೆ? ಅಲ್ಲ. ಏಕಲ್ಲ? ಕೊಡದ ಮುನ್ನ ಎನ್ನ ಒಡವೆ, ಬಳಿಕ ಎನಗೆಲ್ಲಿಯ ಒಡವೆ ಎಂದು ಅರರೆ ದಾನಿಗಳ ಬಲ್ಲಹನು ಮುನಿಯೊಡನೆ ಸೂಳ್ನುಡಿ ಕೊಟ್ಟನು.

ಕಠಿಣ ಪದಗಳು : ಇತ್ತೆನತ = ಕೊಟ್ಟೆನು, ಪ್ರತಿಗ್ರಹಂ = , ಬಲ್ಲಹ = , ಸೂಳ್ನುಡಿ = ಅನುಭಾವದ ಮಾತು.

ಸಾರಾಂಶ : ರಾಘವಾಂಕನ ಸಂಭಾಷಣಾ ಚತುರತೆಗೆ ಈ ಪದ್ಯವು ಅತ್ಯುತ್ತಮ ನಿದರ್ಶನವಾಗಿದೆ. ಆರು ಸಾಲಿನ ಈ ಒಂದೇ ಪದ್ಯದಲ್ಲಿ ರಾಘವಾಂಕನು, ವಿಶ್ವಾಮಿತ್ರ-ಹರಿಶ್ಚಂದ್ರರ ಮಧ್ಯೆ ನಡೆದ 14 ಸಂಭಾಷಣೆಗಳನ್ನು ಸಂಗ್ರಹಗೊಳಿಸಿದ್ದಾನೆ. ಬೇರೆ ಯಾವ ಕವಿಗಳಲ್ಲಿಯೂ ಈ ರೀತಿಯ ಸಂಭಾಷಣಾ ಶಿಲ್ಪವನ್ನು ನಾವು ಕಾಣಲಾರೆವು. ಜನತೆಯ ಮುಂದೆ ರಾಜ್ಯದ ಪರಭಾರೆಯನ್ನು ತನಗೆ ವಹಿಸುವ ಸಲುವಾಗಿ ಹರಿಶ್ಚಂದ್ರನನ್ನು ಕರೆಯುವ ಮತ್ತು ಅವನು ನಿರಾಕರಿಸುವ ಸನ್ನಿವೇಶವಿದು. ಇಲ್ಲಿ ವಿಶ್ವಾಮಿತ್ರ-ಹರಿಶ್ಚಂದ್ರರ ಮಧ್ಯೆ ನಡೆದ ಹದಿನಾಲ್ಕು ಸಂಭಾಷಣೆಗಳು ಈ ರೀತಿ ಇವೆ :

 1. ನಡೆ, ರಥವನ್ನು ಏರು. (ವಿಶ್ವಾಮಿತ್ರ).
 2. ಒಲ್ಲೆ (ಹರಿಶ್ಚಂದ್ರ).
 3. ಏಕೆ ಒಲ್ಲೆ? (ವಿಶ್ವಾಮಿತ್ರ).
 4. ನಾನು ಬೇರೆಯವರ ವಸ್ತುವನ್ನು ಬಳಸುವುದು ನನ್ನಿಂದಾಗುವುದಿಲ್ಲ. (ಹರಿಶ್ಚಂದ್ರ).
 5. ಏಕೆ ಆಗುವುದಿಲ್ಲ? (ವಿಶ್ವಾಮಿತ್ರ).
 6. ನಾನು ಕೊಟ್ಟಿದ್ದೇನೆ. (ಹರಿಶ್ಚಂದ್ರ).
 7. ಕೊಟ್ಟರೆ? (ವಿಶ್ವಾಮಿತ್ರ).
 8. ಕೊಟ್ಟ ನಂತರ ಮರಳಿ ಪಡೆಯಲಾಗದು. (ಹರಿಶ್ಚಂದ್ರ).
 9. ಯಾವ ಕಾರಣಕ್ಕಾಗಿ ಮರಳಿ ಪಡೆಯಲಾಗುವುದಿಲ್ಲ? (ವಿಶ್ವಾಮಿತ್ರ).
 10. ನನಗೆ ಪ್ರತಿಗ್ರಹ ಸಲ್ಲುವುದಿಲ್ಲ. (ಹರಿಶ್ಚಂದ್ರ).
 11. ಇದು ಮೊದಲು ನಿನ್ನ ಒಡವೆಯೇ ಅಲ್ಲವೆ? (ವಿಶ್ವಾಮಿತ್ರ).
 12. ಅಲ್ಲ. (ಹರಿಶ್ಚಂದ್ರ).
 13. ಏಕೆ ಅಲ್ಲ? (ವಿಶ್ವಾಮಿತ್ರ).
 14. ಅದನ್ನು ನಿಮಗೆ ಕೊಡುವ ಮುನ್ನ ನನ್ನ ಒಡವೆಯಾಗಿತ್ತು. ನಿಮಗೆ ಕೊಟ್ಟ ಮೇಲೆ ಅದು ನನ್ನ ಒಡವೆಯಲ್ಲ. (ಹರಿಶ್ಚಂದ್ರ).

ಈ ಹದಿನಾಲ್ಕು ಸಂಭಾಷಣೆಗಳಲ್ಲದೆ ಕೊನೆಯಲ್ಲಿ “ಅರರೆ ದಾನಿಗಳ ಬಲ್ಲಹನು ಮುನಿಯೊಡನೆ ಸೂಳ್ನುಡಿ ಕೊಟ್ಟನು” ಎಂಬ ಹರಿಶ್ಚಂದ್ರನ ಗುಣಗಾನದ ವ್ಯಾಖ್ಯಾನವನ್ನೂ ಕೊಟ್ಟಿದ್ದಾನೆ.

ಆರು ಸಾಲಿನ ಒಂದು ಷಟ್ಪದಿಯಲ್ಲಿ ಹದಿನಾಲ್ಕು ಸಂಭಾಷಣೆಗಳ ನವಿರಾದ ಜೋಡಣೆಯ ಕಾರಣಕ್ಕೆ ಈ ಪದ್ಯವು ರಾಘವಾಂಕನ ಹರಿಶ್ಚಂದ್ರ ಕಾವ್ಯದ ವಿಶಿಷ್ಟ ಪದ್ಯವಾಗಿದೆ. ನಾನು ಈ ಪದ್ಯವನ್ನು ವಿಶ್ಲೇಷಣೆಗೆ ಕೈಗೆತ್ತಿಕೊಳ್ಳಲು ವಿಶೇಷ ಕಾರಣವಿದೆ.

ಅದೇನೆಂದರೆ : ದಿ : 08.10.2018 ರಿಂದ 12.10.2018ರವರೆಗೆ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಮೈಸೂರಿನಲ್ಲಿ ನಡೆದ ‘ಶಾಸ್ತ್ರೀಯ ಕನ್ನಡ ಪಠ್ಯಗಳ ಅನುವಾದ ಕಮ್ಮಟದಲ್ಲಿ ಶಿಬಿರಾರ್ಥಿಯಾಗಿ ಭಾಗವಹಿಸಿದಾಗ, ದಿ: 11.10.2018ರಂದು ನಾಡಿನ ಪ್ರಸಿದ್ಧ ವಿಮರ್ಶಕರಾದ ರಹಮತ್ ತರೀಕೆರೆಯವರು ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ದ ಕುರಿತು ಉಪನ್ಯಾಸ ನೀಡಿದರು. ಉಪನ್ಯಾಸದ ಮಧ್ಯೆ ಈ ಪದ್ಯವನ್ನು ಪ್ರಸ್ತಾಪಿಸಿ, ‘ರಾಘವಾಂಕನು ಒಂದೇ ಪದ್ಯದಲ್ಲಿ 12 ಸಂಭಾಷಣೆಗಳನ್ನು ಹಿಡಿದಿಟ್ಟಿದ್ದಾನೆ’ ಎಂದರು. (ದಪ್ಪ ಅಕ್ಷರಗಳಲ್ಲಿ ಗೆರೆ ಎಳೆದ ಮೂರು ವಾಕ್ಯಗಳನ್ನು ಅವರು ಹರಿಶ್ಚಂದ್ರನ ಮಾತು ಎಂದು ಪರಿಗಣಿಸಿದ್ದರು). ನಾನು ಈ ಪದ್ಯವನ್ನು ಸೂಕ್ಷ್ಮವಾಗಿ ಗ್ರಹಿಸಿ, ‘ಈ ಪದ್ಯದಲ್ಲಿ 14 ಸಂಭಾಷಣೆಗಳಿವೆ ಸರ್’ ಎಂದೆ. ಆಗ ಅವರು ‘ಹೌದಾ?, ಹೇಗೆ? ವಿವರಿಸಿ’ ಎಂದರು. ಆಗ ನಾನು ಮೇಲಿನಂತೆ ವಿವರಿಸಿ ಹೇಳಿದೆ. ‘ಶಭಾಷ್, ವೇರಿ ಗುಡ್ ಅಬ್ಜರ್ವೇಷನ್’ ಎಂದು ಒಪ್ಪಿಕೊಂಡರು.

ಈ ರೀತಿ ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ವು ನಾಟಕೀಯ ಗುಣಗಳ ಆಗರವಾಗಿದ್ದು, ಅದನ್ನು ಹೆಕ್ಕಿ ನೋಡಿದಾಗ ಮಾತ್ರ ಇಂತಹ ಹಲವು ರಸಮಯ ಪ್ರಸಂಗಗಳು ದೊರೆಯುತ್ತವೆ.


ರಾಜಶೇಖರ ಬಿರಾದಾರ ಬೋನ್ಹಾಳ.

ಕನ್ನಡ ಸಹಾಯಕ ಪ್ರಾಧ್ಯಾಪಕರು
ಶ್ರೀ ಸಿ.ಎಂ.ಮಾಮನಿ ಸರಕಾರಿ ಪ್ರಥಮ ದರ್ಜೆ ಕಾಲೇಜು
ಯರಗಟ್ಟಿ-591129, ಸವದತ್ತಿ ತಾಲ್ಲೂಕು, ಬೆಳಗಾವಿ ಜಿಲ್ಲೆ.
ಮೊ. 9740954140.
ಇ.ಮೇಲ್ : rhbiradar1@gmail.com

- Advertisement -
- Advertisement -

Latest News

ವಿದ್ಯಾರ್ಜನೆ ಯಾತಕ್ಕಾಗಿ?

ತಾವು ಕಲಿತು ಆರoಕಿ ಸಂಬಳ ಗಿಟ್ಟಿಸುವ ಕೆಲಸಕ್ಕೆ ಅರ್ಹತೆ ಪಡೆದಿಲ್ಲ. ತನ್ನ ಮಕ್ಕಳು ಪ್ರಾರಂಭದಲ್ಲಿಯೇ ಆರoಕೆ ಸಂಬಳ ಗಿಟ್ಟಿಸುವಾಗ ಯಾವ ಹೆತ್ತವರು ಬೀಗುವುದಿಲ್ಲ ಹೇಳಿ...ಈಗಿನ ದಿನಗಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group