ರೈತರ ಉತ್ಪನ್ನಗಳಿಗೆ ಕೊಡಲಾಗುವ ಕನಿಷ್ಠ ಬೆಂಬಲ ಬೆಲೆ ( ಎಂ ಎಸ್ ಪಿ ) ಎಂದೂ ರದ್ದಾಗುವುದಿಲ್ಲ. ಎಂ ಎಸ್ ಪಿ ಬಗ್ಗೆ ರೈತರನ್ನು ಯಾರೂ ದಾರಿ ತಪ್ಪಿಸಬಾರದು. ಇದು ಹಿಂದೆ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕೃಷಿ ಕಾಯ್ದೆ ಕುರಿತು ರಾಜ್ಯಸಭೆಯಲ್ಲಿ ಉತ್ತರ ನೀಡುತ್ತಿದ್ದ ಅವರು ರೈತರು ಯಾವುದಕ್ಕೂ ದಾರಿ ತಪ್ಪಬಾರದು. ಕೃಷಿ ಕಾಯ್ದೆ ರೈತರ ಉದ್ಧಾರಕ್ಕಾಗಿ ಮಾಡಲಾಗಿದೆ ಎಂದು ಹೇಳಿ, ಎಪಿಎಂಸಿಗಳು ಮುಂದೆಯೂ ಇರುತ್ತವೆ. ಅವುಗಳ ಸುಧಾರಣೆ ಕಾರ್ಯ ನಮ್ಮ ಮುಂದಿದೆ ಎಂದರು.
ಮಾಜಿ ಪ್ರಧಾನಿ ದೇವೇಗೌಡರನ್ನು ತಮ್ಮ ಭಾಷಣದಲ್ಲಿ ಹೊಗಳಿದ ಪ್ರಧಾನಿ, ದೇವೇಗೌಡರು ನಮ್ಮ ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ಶ್ಲಾಘಿಸಿದ್ದಾರೆ. ಅವರೇ ಒಬ್ಬ ಮಣ್ಣಿನ ಮಗ ಆಗಿದ್ದಾರೆ ಅವರಿಗೆ ಕೃಷಿ ಕಾಯ್ದೆಯ ಎಲ್ಲ ಉಪಯೋಗ ಗೊತ್ತಿದೆ ಎಂದರು.
ದೇಶದಲ್ಲಿ ಸಿಕ್ಖ್ ಜನಾಂಗದ ಬಗ್ಗೆ ವಿಶೇಷವಾದ ಗೌರವವಿದೆ. ಸಿಕ್ಖರು ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಅವರ ತ್ಯಾಗವನ್ನು ನಾವು ಎಂದೂ ಮರೆಯಲಾಗದು ನಮ್ಮೆಲ್ಲರದು ಅವರೊಡನೆ ಭಾವನಾತ್ಮಕ ಸಂಬಂಧವಿದೆ ಎಂದರು.
ಎಫ್ ಡಿಐ ಅಂದರೆ ಫಾರಿನ್ ಡೈರೆಕ್ಟ್ ಇನ್ವೆಸ್ಟ್ ಮೆಂಟ್ ಎಂಬುದನ್ನು ಫಾರಿನ್ ಡಿಸ್ಟ್ರಕ್ಟಿವ್ ಐಡಿಯಾಲಜಿ ಎಂದು ವ್ಯಂಗ್ಯ ಮಾಡಿದ ಪ್ರಧಾನಿಯವರು ದೇಶದ ವಿರುದ್ಧ ಕೆಲಸ ಮಾಡುತ್ತಿರುವ ವಿದೇಶಿ ಶಕ್ತಿಗಳನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಇತ್ತೀಚೆಗೆ ರೈತರ ಹೋರಾಟ ಕುರಿತಂತೆ ಅಮೇರಿಕದ ರಿಹಾನಾ, ಗ್ರೇಟಾ ಥನ್ಬರ್ಗ್ ಮುಂತಾದವರು ಪ್ರತಿಕ್ರಿಯೆ ನೀಡಿದ್ದನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಮೋದಿಯವರು ವಿದೇಶಿ ಶಕ್ತಿಗಳು ನಮ್ಮ ಆಂತರಿಕ ವಿಷಯದಲ್ಲಿ ಕೈ ಹಾಕಬಾರದು ಎಂದು ಸೂಚ್ಯವಾಗಿ ತಿಳಿಸಿದರು.
ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಸರ್ಕಾರವಿದ್ದಾಗ ರೈತರ ವಸ್ತುಗಳನ್ನು ಮಾರುಕಟ್ಟೆ ಮಾಡುವ ಕುರಿತು ತೆಗೆದುಕೊಂಡಿದ್ದ ನಿರ್ಧಾರವನ್ನು ಪ್ರಸ್ತಾಪಿಸಿದ ನರೇಂದ್ರ ಮೋದಿಯವರು, ಮನಮೋಹನಸಿಂಗ್ ಅವರು ಮಾಡಬೇಕಾಗಿದ್ದ ಕಾರ್ಯವನ್ನು ಮೋದಿ ಮಾಡುತ್ತಿರುವುದಾಗಿ ಕಾಂಗ್ರೆಸ್ ನಾಯಕರು ಹೆಮ್ಮೆ ಪಡಬೇಕು ಎಂದು ಹೇಳಿ, ಕಾಂಗ್ರೆಸ್ ಆಂದೋಲನದ ಹೆಸರಿನಲ್ಲಿ ಶಾಂತಿ ಕದಡುತ್ತಿದೆ ಎಂದು ನುಡಿದರು.
ಸುಮಾರು ಒಂದೂಕಾಲು ಗಂಟೆ ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿಯವರ ಮಾತುಗಳನ್ನು ಎಲ್ಲ ಪಕ್ಷದವರೂ ಶಾಂತವಾಗಿ ಆಲಿಸಿದ್ದು ವಿಶೇಷವಾಗಿತ್ತು.