ಪ್ರೇಮ
ಬಿರಿದ ಮೊಗ್ಗಿನ ಅನಾವರಣ
ಸುರಿದ ಸೋನೆಯ ಆಹ್ಲಾದದಿ
ಅರುಣ ಉದಯಿಸಿದ ಹೊನ್ನ ಕಿರಣ
ಮನದಾಲಿಂಗನ ಬಯಸಿದ ಪ್ರೇಮ.
ಕರುಣೆಯ ಹರಿಸಿದ ರಹದಾರಿ
ಸೈರಣೆಗೆ ಬಲವ ತುಂಬಿದ ಸಿರಿ
ಪಚ್ಚೆ ಪೈರಿನ ನವೋತ್ಸಾಹ
ಬಳಲಿ ಬೆಂಡಾದ ಎದೆಗೆ ಅರಳಿದ ಕುಸುಮ
ತಿಳಿ ನೀರ ಕೊಳಕೂ ಮಿಗಿಲು ನಂಬಿಕೆ ಪ್ರೇಮ.
ಸಹಾನುಭೂತಿ ಪಸರಿಸಿ
ಅನುಭವದ ಸಾರ ಸರಿ ಹೇಳಿದೆ
ಪ್ರತಿಫಲ ಬಯಸದ ಅಪೇಕ್ಷೆ
ಪರಿಮಾಣವಿಲ್ಲದ ಅಳತೆಗೋಲು
ಪ್ರತಿಫಲಿತ ಬೆಳಕಿನ ಆವೇಗದಂತೆ ಪ್ರೇಮ.
ರೇಷ್ಮಾ ಕಂದಕೂರ
ಕೀರ್ತನಳ ಬಾಲಲೀಲೆ
ಮುಷ್ಟಿ ಹಿಡಿದು ಕೈಗಳೆರಡು
ಬೀಸುತಿಹಳು ಕೀರ್ತನ
ಹೋಲುತಿಹಳು ಮುಷ್ಟಿಯುದ್ಧ
ಗೈದ ಬಾಲಕೃಷ್ಣನ
ಮುದ್ದು ಮುದ್ದು ಕಾಲ್ಗಳಿಂದ
ಒದೆಯುತಿಹಳು ತನನನ
ಜಲದಿ ಹಾರಿ ಮಾಡಿದಂತೆ
ಕೃಷ್ಣ ಕಾಳಿಮರ್ದನ
ಬೀರುತಿಹಳು ಕಣ್ಗಳೆರಡು
ಚಲಿಸಿದಂತೆ ಮೀಂಗಳು
ನಗುತಲಿಹಳು ಬಾಯಿ ತೆರೆದು
ಈಜುವೊಲು ತಿಮಿಂಗಲು
ಅತ್ತಲಿತ್ತ ತಲೆಯ ತಿರುಗಿ
ನೋಡುತಿಹಳು ಸುತ್ತಲು
ಯಾರು ಕಾಣದಿರಲು ಚೀರು-
ತತ್ತು ಕರೆಯುತಿರುವಳು
ಮಧುರ ಜೇನುತುಪ್ಪದಂತೆ
ಜೊಲ್ಲು ಸುರಿಸುತಿರುಹಳು
ನಕ್ಕು ಕೆಂಪು ತುಟಿಗಳಿಂದ
ಮನವ ಸೆಳೆಯುತಿರುವಳು
ಮೈಯ್ಯ ಮುಟ್ಟಲೆಷ್ಟು ಮೃದುಲ
ಬೆಣ್ಣೆಯಂತೆ ಕೋಮಲ
ಕೆನ್ನೆಗೊಂದು ಮುತ್ತು ಕೊಡಲು
ಮನಸಿಗೆಂಥ ಸುಖವಲ
ಮಲಗಿ ನಿದ್ದೆ ಮಾಡುತಿರಲು
ಮೌನ ಮನೆಯೊಳಿರ್ಪುದು
ಯೋಗನಿದ್ರೆಯಲ್ಲಿ ಮುಖದಿ
ಮಂದಹಾಸ ತೋರ್ಪುದು
ಎನ್.ಶರಣಪ್ಪ ಮೆಟ್ರಿ
ಮುಖಾರವಿಂದವ
ಭುವಿಯ ಬದುಕಲಿ
ಭಾವನೆಗಳ ಸರಮಾಲೆಯಲಿ
ನಿನ್ನ ನೆಲೆಯನು ಹುಡುಕಿದೆ ನಾ ||೧||
ಚಿತ್ತಾರ ಬಿಡಿಸಿದಂತಿರುವ
ಸೌಂದರ್ಯ ಲೋಕದಲಿ
ನಿನ್ನ ಇರುವಿಕೆಯನು ಹುಡುಕಿದೆ ನಾ||೨||
ಶಶಿಯಂತಿರುವ ನಿನ್ನ
ವದನಾರವಿಂದದಲಿ ಕಪ್ಪು
ಎಲ್ಲಿರುವುದೆಂದು ಹುಡುಕಿದೆ ನಾ ||೩||
ನೀನಾಡುವ ಮಾತುಗಳ
ಧ್ವನಿಪೂರ್ಣ ಬಾನಂಗಳದಲ್ಲಿ
ಕವಿತೆಗಳ ಸಾಲು ಹುಡುಕಿದೆ ನಾ ||೪||
ತಳಿರು ತೋರಣ ಕಟ್ಟಿದ
ನಿನ್ನ ಮನೆಯಂಗಳದಲ್ಲಿ ಚಿತ್ರ
ಕಾವ್ಯದ ಸವಿಯ ಹುಡುಕಿದೆ ನಾ ||೫||
ಅಂದಣದ ಚಂದವೂ ನೀನೆ
ಆಗಿರುವಾಗ ಮತ್ತೆಲ್ಲಿ ಹುಡುಕಲಿ
ನಿನ್ನ ಸುಂದರ ವದನಾರವಿಂದವ ||೬||
– ಡಾ.ಲಕ್ಷ್ಮೀಕಾಂತ ವಿ.ಮೊಹರೀರ
ನೀನಿರದೆ
ನೀ ನಿರದೆ ನನಗೇನು ಇಲ್ಲಿ ಕೆಲಸ,
ತಡಿ ಬರುವೆ ಒಂದು ನಿಮೀಷ. !! ಪ!!
ತೆರಳುವ ಸೆಳುವಿನ ಸುಳಿವು ಸಿಕ್ಕಿದ್ದರೆ.
ಜೊತೆ ಸಾಗಿ ಬರುತಿದ್ದೆ ದಿವಸ.!! ಅನು ಪಲ್ಲವಿ,
ಮೊಗ್ಗಾಗಿ,ಮುಗಿಲಾಗಿ ಹೂವಾಗಿ ಅರಳಿ.
ದಿನ ಅಳುತಿರುವೆ ನಿನ್ನ ನೆನಪಾಗಿ.
ಕಣ್ಣೀರು ನನ್ನೂರ ಪ್ರತಿ ಗಲ್ಲಿಯಲ್ಲಿ
ಮುಂಜಾವು ಸ್ವಾಗತಿಸುತಿದೆ ನಿನ್ನ ಹೆಸರಾಗಿ.
ಭಾವವು ಬದುಕಿದೆ ಜೀವವು ಸಾಯುತಿದೆ.
ನೀನು ಇರದ ಹೃದಯವು ದಿನ ನೊಂದಿದೆ.
ಮರುಳುಗಾಡು ಎನ್ನ ಹೃದಯದ ಪಾಡು
ಮನಸು ಬಟಾ ಬಯಲು ಕಣಿವೆ ಎಂದಿದೆ.
ಎಲೆಗಳುದುರಿದ ಬೋಳು ಮರವು ನೆರಳ
ನೀಡಿ ನಗಬಹುದೆ ದಿನದಿನವೂ.
ಹೊಸ ಚಿಗುರು ನಿನ್ನಿಂದ ಬಯಸಿ.
ಹೊಸಕಿ ಹಿಚುಕಿ ನರಳುತಿದೆ ಮನವೂ.
ಪ್ರೀತಿಯ ಬಯಲಿನಲಿ ಜೀವ ದೀಪವು.
ತಾ ಬೆಳಗಂದರೆ ನಗು ಬೆಳಗಬಹುದೆ.
ತುಸು ಮನಸು ಖುಷಿ ಮಾಡು.
ಹುಸಿ ಮುನಿಸು ನೀ ಕಳೆಯಬಹುದೆ.
ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ ಯಮಹ
ಮಸಣವೇ ದೇವಾಲಯ
ಮರಣವೇ ಮೋಕ್ಷ
ಎಲ್ಲಾ ಮನುಜರಿಗೆ
ಮಸಣಗಳೇ ದೇವಾಲಯ
ಈ ಭೌತಿಕ ಜಗಕೆ.
ಮಡಿದವರೆ ದೇವರಾಗಿಹರು
ಬದುಕಿಹ ಜನರಿಗೆ
ಜಾತ್ರೆ, ಉತ್ಸವ, ಜಾಗರಣೆಗಳು
ನಡೆಯುತ್ತಿಹವು ದಿನ ಘಳಿಗೆ.
ಮಡಿಯುಟ್ಟು ಬರುವರೆಲ್ಲ
ನೋಡಿ ಶುಭ ಘಳಿಗೆ
ಮನೆಯಲ್ಲಿ ಮಾಡುವರಲ್ಲ
ಘಂ ಎನ್ನುವ ಕಡುಬು ಹೋಳಿಗೆ.
ಹೆತ್ತವರ ಬೆಲೆ ಗೊತ್ತಿಲ್ಲ
ಇಂದಿನ ಮಕ್ಕಳಿಗೆ
ಹೆತ್ತವರ ಸಮಾಧಿ ಕಡೆಗಣಿಸುವ
ಮೂಢ ಅರಿವಳಿಕೆ.
ಜನನಿಗಳೇ ದೇವರೆಂದರು
ಸೇರಿ ಜಗದೆಲ್ಲರು
ಜನ್ಮದಾತರ ಗದ್ದುಗೆ ನೋಡದ
ಅದೇಷ್ಟೋ ಬುದ್ಧಿ ಹೀನರು.
ಮಸಣವೆಂದರೆ ವಾಕರಿಕೆ
ಇನ್ನೂ ಹಲವರಿಗೆ
ಗೊತ್ತಿದ್ದೂ ಪೂಜೆ ಹೋಮ ಅಭಿಷೇಕ
ಅದೇ ಸಮಾಧಿಗೆ.
ದೇವಾಲಯಗಳು ಬಹುತೇಕ
ಎಲ್ಲವೂ ಸಮಾಧಿಗಳೆ
ಅರಿವಿರಲಿ ಸಮಾಧಿ ದೇವಾಲಯ
ಎನ್ನುವ ಪರಿಕಲ್ಪನೆ.
ಮಡಿದವರೆ ದೇವರು
ಮರೆಯದೆ ಅವರ ಗೌರವಿಸಿ
ಮಸಣವೇ ಪವಿತ್ರ ಕ್ಷೇತ್ರ ನಮಗೆ
ಕೈ ಮುಗಿದು ನಡೆಯಿರಿ.
ಮಹೇಂದ್ರ ಕುರ್ಡಿ
ನಿನ್ನನು ಮುಟ್ಟಿದ ಮೇಲೆ
ನೀನು ಮುನಿದರೆ ದಾರುಣವಾಗಿ ಎದೆ ಇರಿದು,ಬದುಕ ಹಳಿದು ಭೀಷಣ ಅವಮಾನವಾದರೂ ಹಳತಿನಲಿ ಒಳಿತನು ಬಯಸಿ,ಸೋಲುತ್ತೇನೆ ಪ್ರೀತಿಯಲಿ ನಿನ್ನನೆ ಗೆಲ್ಲಿಸುವ ಇರಾದೆ ನನ್ನದು.
ಚಿನ್ನ ರನ್ನ ಎನ್ನುವ ಮಂದಹಾಸದ ನಾಟಕವಾಡಲು ನನಗಾಗದು ,ಅಗ್ಗದ- ಮದ್ಯವೀರಿ ವಿರಮಿಸಿದರೂ
ಎನ್ನ ಹೃದಯ ಕಲಬೆರಕೆಯಾಗದು
ಈಗಲೂ ಜೀವಾಳ ನೀನು
ಕಲುಷಿತ ಕೊಳದಲಿ ತಿಳಿಯ
ತರುವ ಇರಾದೆ ನನ್ನದು
ನಿನ್ನನು ಮುಟ್ಟಿದ ಮೇಲೆ
ಮೌನ ಚಿಗುರಿ,ಗರಿಗೆದರಿದೆ
ನವ್ಯಕಾವ್ಯ ಬರೆಯಲಾರೆ
ತುಮುಲಗಳ ತಾಕಲಾಟದಲಿ ಕಲ್ಪನೆಯ
ನಿಲುವು ಸ್ಥಗಿತಗೊಂಡರೂ
ಗೀತೆಯಲಿ ಹೊಗಳುವ ಇರಾದೆ ನನ್ನದು
ಒಂದು ವಿಶ್ವಾಸ ಲಭಿಸಿದೆ
ನಿನ್ನ ನೆನಪನೇ ದೀವಟಿಗೆ-
ಮಾಡಿಕೊಳ್ಳುವ ನಂಜಿನ-
ಬಿನ್ನಾಣ ನನ್ನದು
ಬೆನ್ನ ಹಿಂದೆ ಬೀದಿ ಮಾತುಗಳ ದನಿ ಕೇಳಿದರೂ
ಹಾಸಿಗೆಯಲಿ ಒರೆದು ಹಾಕಿ,
ಕನಸಿಗೆ ನೀರಾಕಿ,ಬೆಳೆಸುವ
ಇರಾದೆ ನನ್ನದು.
ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ