ವಿಜಯಪುರ ಜಿಲ್ಲೆಯಲ್ಲಿ ಹೀಗೊಬ್ಬ ತರುಣ ಗಾಂಧಿ

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

ಅಕ್ಟೋಬರ್ ೨ ಬಂದರೆ ಸಾಕು ದೇಶದೆಲ್ಲೆಡೆ ಗಾಂಧಿ ಜಯಂತಿ ಸಂಭ್ರಮ ಸಡಗರ ಕಳೆ ಕಟ್ಟುತ್ತದೆ. ದೇಶವಷ್ಟೇ ಏಕೆ ಜಗತ್ತಿನ ಮೂಲೆಮೂಲೆಗಳಲ್ಲಿ ಮಹಾತ್ಮ ಗಾಂಧೀಜಿ ಅವರನ್ನು ಸ್ಮರಿಸುವ ಚಟುವಟಿಕೆಗಳು ನಡೆಯುತ್ತವೆ. ಖಾದಿ ಬಟ್ಟೆಗಳ ಮೇಲೆ ಖಾದಿ ಉತ್ಪನ್ನಗಳ ಮೇಲೆ ರಿಯಾಯತಿ ಘೋಷಿಸುವ ಮೂಲಕ ಸರ್ಕಾರ ಖಾದಿ ಬಳಕೆಗೆ ಪ್ರೋತ್ಸಾಹ ನೀಡಿದರೆ. ಗಾಂಧಿ ತತ್ವಗಳಾದ ಸತ್ಯ,ಅಹಿಂಸೆ,ದುಶ್ಚಟಗಳ ನಿವಾರಣೆ,ಸ್ವಾವಲಂಬನೆ ಇತ್ಯಾದಿ ಅವರ ಬದುಕಿನ ಅಂಶಗಳ ಮೇಲೆ ಬೆಳಕು ಚೆಲ್ಲುವ ವಿಚಾರಗಳತ್ತ ವಿವಿಧ ಉಪನ್ಯಾಸಗಳು ಜರುಗುತ್ತವೆ. ಗಾಂಧೀಜಿ ಬದುಕಿನ ಧಾರೆಗಳನ್ನು ಶಾಲೆಗಳಲ್ಲಿ ಮಕ್ಕಳಿಗೆ ತಿಳಿಸುತ್ತೇವೆ ಹೀಗೆ ಎಲ್ಲ ವಿಧದಲ್ಲಿಯೂ ಗಾಂಧೀಜಿಯವರ ಸ್ಮೃತಿಯನ್ನು ಮಾಡುತ್ತೇವೆ.

ಆದರೆ ಇವೆಲ್ಲವುಗಳಿಗಿಂತ ವಿಭಿನ್ನವಾಗಿದೆ ವಿಜಯಪುರದ ಈ ಯುವಕನ ಕತೆ. ವಿಜಯಪುರ ಜಿಲ್ಲೆಯ ಆಲಮಟ್ಟಿ ಹತ್ತಿರದ ಬೇನಾಳ ಎಂಬ ಗ್ರಾಮದ ನೀಲೇಶ್ ಬೇನಾಳ ಎಂಬ ಯುವಕ ಸುಮಾರು ವರ್ಷಗಳ ಹಿಂದೆ ತನ್ನ ಹೆಸರನ್ನೇ “ನೇತಾಜಿ ಗಾಂಧಿ” ಎಂದು ಬದಲಿಸಿಕೊಂಡಿದ್ದಾರೆ.

ಎರಡು ದಶಕಗಳಿಂದ ನಾಡಿನ ವಿವಿಧೆಡೆ ಗಾಂಧಿ ಅವರ ತತ್ವಗಳನ್ನು ಪ್ರಚಾರ ಮಾಡುತ್ತ ಸಾಗುತ್ತಿರುವುದು ಇದು ಬಹಳಷ್ಟು ಜನರಿಗೆ ಗೊತ್ತಿರದ ಸಂಗತಿ.

- Advertisement -

ಇವರ ಮೂಲ ಊರು ನಿಡಗುಂದಿ ತಾಲೂಕಿನ ಬೇನಾಳ ಗ್ರಾಮ.ಇದು ಕೃಷ್ಣಾ ನದಿಯ ಹಿನ್ನೀರಿನಲ್ಲಿ ೧೯೯೭ ರಲ್ಲಿ ಮುಳುಗಡೆಯಾದ ಪ್ರದೇಶ. ಶರಣ ದಂಪತಿಗಳಾದ ಇವರ ತಂದೆ ಉಮೇಶಪ್ಪ ತಾಯಿ ಕಾಶೀಬಾಯಿಯವರ ಹನ್ನೊಂದು ಜನ ಮಕ್ಕಳಲ್ಲಿ ಇವರು ಕೊನೆಯವರು.ಇವರು ಹುಟ್ಟಿದ್ದು ೩೧ ಡಿಸೆಂಬರ್ ೧೯೭೫ ರಲ್ಲಿ.

ಬಾಲ್ಯದ ಓದು ಬೇನಾಳದಲ್ಲಿಯೇ ಸಾಗಿತು. ಪ್ರೌಢಶಾಲೆ ಮತ್ತು ಕಾಲೇಜು ಶಿಕ್ಷಣವನ್ನು “ಕರ್ನಾಟಕ ಗಾಂಧಿ” ಹೆಸರಿನ ಆಲಮಟ್ಟಿಯ ಮಂಜಪ್ಪ ಹರ್ಡೇಕರ್ ಮೆಮೋರಿಯಲ್ ಜ್ಯೂನಿಯರ್ ಕಾಲೇಜಿನಲ್ಲಿ ಮತ್ತು ಮುದ್ದೇಬಿಹಾಳದ ಎಮ್.ಜಿ.ವ್ಹಿ.ಸಿ ಕಾಲೇಜಿನಲ್ಲಿ ಪದವಿ ಮುಗಿಸಿದರು.

ಇವರ ಕುಟುಂಬದ ಬಗ್ಗೆ ಅಂದರೆ ತಂದೆ ತಾಯಿ ಎಷ್ಟೊಂದು ಆರೋಗ್ಯವಂತರಿದ್ದರು ಎಂಬುವುದನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ.ಅವರು ಹನ್ನೊಂದು ಮಕ್ಕಳನ್ನು ಹೆತ್ತಿದ್ದರೂ ಯಾರಿಗೂ ಏನನ್ನೂ ಕೊರತೆ ಮಾಡದಂತೆ ಬೆಳೆಸಿದ್ದರಲ್ಲದೇ.ತಾವೂ ಕೂಡ ಶಾರೀರಿಕವಾಗಿ ತುಂಬಾ ಸದೃಢರಾಗಿದ್ದರು.ತಂದೆ ತೀರಿಹೋಗಿ ಇಪ್ಪತ್ತು ವರ್ಷವಾದರೆ ತಾಯಿ ತೀರಿಹೋಗಿ ಒಂಭತ್ತು ವರ್ಷವಾಯಿತಂತೆ.ಹನ್ನೊಂದು ಜನರಲ್ಲಿ ಏಳು ಜನ ಈಗಿಲ್ಲ.ಇವರ ಹಿರಿಯ ಸಹೋದರನಿಗೆ ಈಗ ೬೪ ವರ್ಷ.ಸಹೋದರಿಗೆ ೬೦ ವರ್ಷ ಇವರಿಗೀಗ ನಲವತ್ತಾರು ವರ್ಷ ವಯಸ್ಸು.

ಇವರು ತಮ್ಮ ಬಗ್ಗೆ ಎಲ್ಲಿಯೂ ಪ್ರಚಾರ ಬಯಸದ ವ್ಯಕ್ತಿ.

ನನಗೆ ಬರವಣಿಗೆ ಮೂಲಕ ಪರಿಚಿತವಾದರು.ಕಳೆದ ವರ್ಷ ಶಿಕ್ಷಣ ಇಲಾಖೆಯಿಂದ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನ ಆಲಮಟ್ಟಿ ಡ್ಯಾಮ್ ಸೈಟ್ ನ ಜವಾಹರ್ ನವೋದಯ ವಿದ್ಯಾಲಯಯಲ್ಲಿ ಜರುಗಿದಾಗ ಮುಖತಃ ಇವರನ್ನು ನೋಡುವ ಅವಕಾಶ ಸಿಕ್ಕಿತು.ಎರಡು ದಿನಗಳಲ್ಲಿ ಸಮ್ಮೇಳನದ ಬಿಡುವಿನ ಸಮಯ ಇವರ ಬದುಕಿನ ಕುರಿತು. ನೇತಾಜಿ ಮತ್ತು ಗಾಂಧೀಜಿ ಕುರಿತ ಇವರ ಪ್ರೇಮದ ಬಗ್ಗೆ ತಿಳಿಯುವ ಸದವಕಾಶ ನನಗೆ ದೊರೆಯಿತು.

ಪ್ರತಿ ವರ್ಷ ತನ್ನ ಉದ್ಯೋಗದ ಆದಾಯದಲ್ಲಿ ವರ್ಷದಲ್ಲಿ ಕನಿಷ್ಠ ಎರಡು ಅಥವ ಮೂರು ಸಲವಾದರೂ ದೇಶದೆಲ್ಲೆಡೆ ಸಂಚರಿಸುವ ಇವರು ಬಾಪೂಜಿಯ ಹೆಜ್ಜೆ ಗುರುತುಗಳು ಎಲ್ಲೆಲ್ಲಿವೆಯೋ.? ಅಲ್ಲಿಗೆ ತೆರಳಿ ಅಲ್ಲಿನ ಅನುಭವಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಆ ಸ್ಥಳದ ಮಹತ್ವ, ಬಾಪೂಜಿಯ ಕುರಿತು ತಿಳಿಸುತ್ತಾರೆ.ಅಷ್ಟೇ ಅಲ್ಲದೆ ಗಾಂಧೀಜಿ ಅವರ ಬದುಕಿನ ಸ್ಥಳಗಳನ್ನು ಸ್ಮಾರಕಗಳನ್ನು ನೋಡಿಕೊಂಡು ಬಂದು ಅವುಗಳ ಪೋಟೋಗಳನ್ನು ಗಾಂಧೀಜಿಯವರ ಅಪರೂಪದ ಭಾವಚಿತ್ರಗಳನ್ನು ಲ್ಯಾಮಿನೇಷನ್ ಮಾಡಿ ಶಾಲಾ ಕಾಲೇಜುಗಳಲ್ಲಿ ಬಾಪೂ ಬದುಕಿನ ಚಿತ್ರಗಳನ್ನು ಪ್ರದರ್ಶನ ಮಾಡುತ್ತಿರುತ್ತಾರೆ.

ನೋಡಲು ಸ್ಪುರದ್ರೂಪಿಯಾದ ಈ ತರುಣ ಗಾಂಧಿ ಸದಾ ಬೊಕ್ಕತಲೆ.ಹೆಗಲಿಗೊಂದು ಬ್ಯಾಗು,ಖಾದಿ ಅಂಗಿ ಧಿರಿಸು ಇವರದು. ಇದು ಇವರ ಐಡೆಂಟಿಫಿಕೇಷನ್., ಇವರೇ ನೇತಾಜಿ ಗಾಂಧಿ. ರಾಷ್ಟ್ರಪಿತ ಗಾಂಧೀಜಿ ಅವರ ಬಗ್ಗೆ ಇವರನ್ನು ಮಾತಿಗೆಳೆದರೆ ಸಾಕು ಅವರ ಜೀವನದ ಪ್ರತಿಯೊಂದು ಪುಟಗಳನ್ನು ಇಂಚು ಇಂಚು ಆಗಿ ತೆರೆದಿಡುತ್ತಾರೆ.

ನೇತಾಜಿ ಗಾಂಧಿ ಇದು ಇವರ ಶೋಕಿಯ ಹೆಸರಲ್ಲ.ಇವರ ಆಧಾರ ಕಾರ್ಡ್, ಮತದಾರರ ಗುರುತಿನ ಪತ್ರಮತ್ತು ಬ್ಯಾಂಕ್ ಖಾತೆ.ವಿಳಾಸದ ಎಲ್ಲದರಲ್ಲೂ ಇವರು ನೇತಾಜಿ ಗಾಂಧಿ ಎಂದು ಬದಲಿಸಿಕೊಂಡಿದ್ದಾರೆ. ನೀವೇಕೆ ? ನೇತಾಜಿ ಮತ್ತು ಗಾಂಧೀಜಿ ಹೆಸರನ್ನು ಇಟ್ಟುಕೊಂಡಿರುವಿರಿ ಎಂದು ಕೇಳಿದರೆ ಇವರು ಕೊಡುವ ಉತ್ತರ ಸುದೀರ್ಘವಾಗಿದೆ ಆದರೆ ಸಂಕ್ಷಿಪ್ತವಾಗಿ ಹೇಳುವುದಾದರೆ “ನಾನು ಪಿ.ಯು.ಸಿ ಓದುತ್ತಿರುವಾಗ ಗಾಂಧೀಜಿ ಮತ್ತು ನೇತಾಜಿ ಕುರಿತ ಎರಡು ಮಹತ್ವದ ಘಟನೆಗಳು ನನ್ನ ಮೇಲೆ ಪ್ರಭಾವ ಬೀರಿದವು. ಮೊದಲನೆಯದು “ ಗಾಂಧಿ ಮಹಾತ್ಮ ನನ್ನ ಆತ್ಮವಾದರೆ ಬೋಸ್ ನೇತಾಜಿ ನನ್ನ ರಕ್ತ ಮಾಂಸ.

ತಾತ ಮುತ್ತಾತ ತಂದೆ ಚಿಕ್ಕಪ್ಪರು ದಿವಾನರಾಗಿದ್ದರು. ಸಿರಿವಂತ ಮನೆತನದ ಮೋಹನ್ ದಾಸ್ ಅನ್ನುವ ಯಂಗ್ ಬ್ಯಾರಿಸ್ಟರ್ ತಮ್ಮ ತ್ಯಾಗ, ನಿಸ್ವಾರ್ಥ ಸೇವೆ, ಬಲಿದಾನದ ಹೋರಾಟದಿಂದ ಸ್ವರಾಜ್ಯ ಸೂರ್ಯನಾಗಿ ಉದಯಿಸಿ,ಸ್ವಾತಂತ್ರ್ಯ ಶಿಲ್ಪಿಯಾಗಿ ಭರತಖಂಡಕ್ಕೆ ರಾಷ್ಟ್ರಪಿತನಾಗಿ ಜಗತ್ತಿಗೆ ಮಹಾತ್ಮನಾಗಿ ವಿಶ್ವವಿಖ್ಯಾತಿ ಗಳಿಸಿದರೆ, ಸಿರಿವಂತ ಕುಟುಂಬದ ವಕೀಲರ ಮನೆತನದಿಂದ ಬಂದ ಐಸಿಎಸ್ ಓದಿದ ಕ್ರಾಂತಿಕಾರಿ ತರುಣ ಸುಭಾಸ್ ಚಂದ್ರ ಬೋಸ್.

ತನ್ನ ಉದ್ಯೋಗವನ್ನು ಬಿಟ್ಟು ಭಾರತಕ್ಕೆ ಬಂದು ೧೯೨೧ ರಲ್ಲಿ ಗಾಂಧೀಜಿಯವರನ್ನು ಭೇಟಿ ಮಾಡಿ.ಸ್ವಾಂತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಇಲ್ಲಿಂದ ವಿದೇಶಕ್ಕೆ ತೆರಳಿ ಅಲ್ಲಿ ಆಜಾದ್ ಹಿಂದ್ ಫೌಜ್ ನ್ನು ಕಟ್ಟಿ.ಬ್ರಿಟಿಷ್ ಆಡಳಿತದ ವಿರುದ್ದ ದಾಳಿ ಮಾಡಿದ್ದಲ್ಲದೇ ಗಾಂಧೀಜಿಯವರಿಂದ “ನೇತಾಜಿ” ಎಂದು ಕರೆಸಿಕೊಂಡ ಸಮರ ಸೇನಾನಿ ಎಂದು ವಿವರಿಸುತ್ತಾರೆ.

ಅಂತೆಯೇ ೧೯೪೩ ರಲ್ಲಿ ಪುಣೆಯ ಜೈಲಿನಲ್ಲಿದ್ದ ಗಾಂಧೀಜಿಯವರನ್ನು ಆಂಗ್ಲ ಪತ್ರಕರ್ತರೊಬ್ಬರು ಸಂದರ್ಶನ ಮಾಡಿದ ಸಂದರ್ಭದಲ್ಲಿ ಸುಭಾಸ್ ಚಂದ್ರ ಬೋಸ್ ಕುರಿತಂತೆ ಅತ್ಯಂತ ಅಭಿಮಾನಪೂರ್ವಕವಾಗಿ ಮಾತನಾಡಿದ ಗಾಂಧೀಜಿಯವರು ದೇಶಭಕ್ತರ ದೇಶಭಕ್ತ.

ಆತ ದೇಶಭಕ್ತರ ಕಿರೀಟ ಎಂದು ಸುಭಾಸ್ ರನ್ನು ಕರೆದು ಆತ ನೇತಾಜಿ ಎಂದು ಕರೆದಿದ್ದನ್ನು ಈ ನೇತಾಜಿ ನೆನಪಿಸಿಕೊಳ್ಳುತ್ತಾರೆ.

ಅಷ್ಟೇ ಅಲದ್ಲೇ ಜುಲೈ ೬, ೧೯೪೪ ರಂದು ದೂರದ ರಂಗೂನ್ ನಲ್ಲಿ ಮಹಾತ್ಮ ಗಾಂಧೀಜಿಯವರನ್ನು “ರಾಷ್ಟ್ರಪಿತ”ಎಂದು ಮೊದಲ ಬಾರಿಗೆ ಕರೆದು ಗೌರವಿಸಿದವರು ನೇತಾಜಿ ಬೋಸ್ ರು ಎಂದು ಹೆಮ್ಮೆಯಿಂದ ಹೇಳುತ್ತಾರೆ ಈ ನೇತಾಜಿ ಗಾಂಧಿ.

ಈ ಜರ್ನಲಿಸ್ಟ ಗಾಂಧಿ. ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಮಾಡಿಕೊಂಡಿದ್ದಾರೆ ಮೈಸೂರು ಮಾನಸಗಂಗೋತ್ರಿಯ ವಿಶ್ವವಿದ್ಯಾಲಯದಿಂದ.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿ.ಎ.ಪದವಿಯನ್ನೂ, ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂ.ಎ.ಪದವಿಯನ್ನು ಇತಿಹಾಸ ವಿಷಯದಲ್ಲಿ ಪಡೆದಿದ್ದಾರೆ.

ಇವರು ಬೆಂಗಳೂರು ದೂರದರ್ಶನದ ವಾರ್ತೆಗಳ ವಿಭಾಗದಲ್ಲಿ ಎಡಿಟೋರಿಯಲ್ ಅಸಿಸ್ಟಂಟ್ ಆಗಿಯೂ ಕೆಲಸ ಮಾಡಿದ್ದಾರೆ.

“ಉಷಾಕಿರಣ” ಕನ್ನಡ ದಿನಪತ್ರಿಕೆಯಲ್ಲಿ ಹಾವೇರಿ ಜಿಲ್ಲಾ ವರದಿಗಾರ ಮತ್ತು ಕಿರಿಯ ಸಂಪಾದಕನಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ತವರು ಜಿಲ್ಲೆಯಾದ ವಿಜಯಪುರಕ್ಕೆ ೨೦೦೯ರಲ್ಲಿ ಬಂದ ನೇತಾಜಿ ಗಾಂಧಿ ಜುಲೈ ೧ ರಿಂದ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವುಗಳ ನಡುವೆ ಅಂದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮಾಗಾಂಧೀಜಿಯವರು ಪ್ರಕಟ ಮಾಡುತ್ತಿದ್ದ ಯಂಗ್ ಇಂಡಿಯಾ ಜರ್ನಲ್‌ ಟೈಟಲ್‌ನ್ನು ಪಡೆದುಕೊಂಡು ೨೦೧೩ ಜನವರಿ ೩೦ ರಂದು “ಯಂಗ್ ಇಂಡಿಯಾ” ವಾರಪತ್ರಿಕೆಯನ್ನು ಹುಟ್ಟು ಹಾಕಿ, ಪ್ರಕಟ ಮಾಡುತ್ತಿದ್ದಾರೆ.

ಅಲ್ಲದೆ, ಮಹಾತ್ಮ ಗಾಂಧೀಜಿಯವರ ವಿಚಾರಧಾರೆಗಳನ್ನು ಅವರ ಅಪರೂಪದ ಚಿತ್ರಗಳನ್ನು ಆ ಪತ್ರಿಕೆಯಲ್ಲಿ ಪ್ರಕಟಿಸುತ್ತಿರುವರು.

ಈ ಪತ್ರಿಕೆಯ ವಿಶೇಷವೆಂದರೆ ಯಾರಿಗೂ ದುಡ್ಡು ತೆಗೆದುಕೊಂಡು ಮಾರದೇ,ಸದಸ್ಯತ್ವದ ಮೂಲಕ ಮಾತ್ರ ನಡೆಸುತ್ತಿದ್ದಾರೆ ಜೊತೆಗೆ ಈ ಪತ್ರಿಕೆಗೆ ಯಾವುದೇ ಜಾಹೀರಾತು ಕೂಡ ಪಡೆಯುವುದಿಲ್ಲ. ಅಂದ ಹಾಗೆ “ಯಂಗ್ ಇಂಡಿಯಾ” ಇದು ಗಾಂಧೀಜಿಯವರೇ ಪ್ರಕಟಿಸುತ್ತಿದ್ದ ಜರ್ನಲ್ ಆಗಿದ್ದು, ಅದೇ ಹೆಸರನ್ನು ಪಡೆದುಕೊಂಡು ಅಭಿಮಾನದಿಂದ ಪ್ರಕಟಿಸುತ್ತಿರುವೆ ಎಂದು ಹೆಮ್ಮೆಯಿಂದ ನುಡಿಯುವ ಈ ನೇತಾಜಿ ಗಾಂಧಿ, ಪ್ರತಿ ವಾರವೂ ಪ್ರಕಟ ಮಾಡುತ್ತಾರೆ. ಯಂಗ್ ಇಂಡಿಯಾ ವಾರಪತ್ರಿಕೆಯಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ವಿಚಾರಧಾರೆಗಳನ್ನು ಮತ್ತು ಅವರ ಅಪರೂಪದ ಚಿತ್ರಗಳನ್ನು ಪ್ರಕಟಿಸುತ್ತಿರುವುದು ಹೆಮ್ಮೆಯ ಸಂಗತಿ. ಈ ಪತ್ರಿಕೆಯ ವಿಶೇಷ ಏನೆಂದರೆ ಯಾರಿಗೂ ದುಡ್ಡು ತಗೆದುಕೊಂಡು ಮಾರದೇ,ಕೇವಲ ಸದಸ್ಯತ್ವ ಮೂಲಕ ಮಾತ್ರ ನಡೆಸುತ್ತಾರೆ.ಜೊತೆಗೆ ಪತ್ರಿಕೆಗೆ ಯಾವುದೇ ಜಾಹೀರಾತು ಕೂಡ ಪಡೆಯದಿರುವುದು ಇವರ ಹೆಮ್ಮೆಯ ಆದರ್ಶ.

ಇದರ ಜೊತೆಗೆ ರಾಷ್ಟ್ರಪಿತ ಮಹಾತ್ಮಾಗಾಂಧಿ ಫಿಲಾಸಫಿಕಲ್ ಯೂಥ್ ಪೋರಂ ಮತ್ತು ಸಮರ ಸೇನಾನಿ ನೇತಾಜಿ ತರುಣರ ಸಂಘ ಎನ್ನುವ ೨ ಸಂಘಟನೆಗಳನ್ನು ಸಮಾನ ಮನಸ್ಕ ಸ್ನೇಹಿತರನ್ನು ಸೇರಿಸಿಕೊಂಡು ಗಾಂಧೀಜಿಯವರ ಸರ್ವೋದಯ ತತ್ವದಡಿಯಲ್ಲಿ ಹುಟ್ಟು ಹಾಕಿದ್ದಾರೆ.

ಇದೇ ಸಂಸ್ಥೆಗಳ ಆಶ್ರಯದಲ್ಲಿ ಪ್ರತಿ ತಿಂಗಳೂ ಆಯ್ದ ಶಾಲೆ ಮತ್ತು ಕಾಲೇಜುಗಳಿಗೆ ತೆರಳಿ ಬಾಪೂ ಹೆಸರಿನ ಮೇಲೆ ‘ ಕಾಲೇಜ್ ಟು ಕಾಲೇಜ್ ಗಾಂಧೀಸ್ ಥಾಟ್ಸ್ ‘ ಸರಣಿ ಉಪನ್ಯಾಸ ಮತ್ತು ರಸಪ್ರಶ್ನೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವರು.ಗಾಂಧೀಜಿ ಮತ್ತು ನೇತಾಜಿ”ಕುರಿತು ಇವರಾಡುವ ಮಾತುಗಳು ಹೀಗಿವೆ.

‘ ಸ್ವಾತಂತ್ರ್ಯ ಸಂಗ್ರಾಮದ ಪಿತ – ಸುತರಾದ ಬಾಪೂ ಮತ್ತು ಬೋಸ್ ಇಬ್ಬರಲ್ಲಿಯೂ ಮತ್ತೊಬ್ಬರ ನೋವಿಗೆ ಸ್ಪಂದಿಸುವ ಗುಣಗಳಿದ್ದವು..
ದೇಶದ ಬಗ್ಗೆ ಕಾಳಜಿ ಇತ್ತು.ಅಪಾರವಾದ ದೇಶಭಕ್ತಿಯನ್ನು ಹೊಂದಿದ್ದರು.ಇಬ್ಬರೂ ಧೀಮಂತ ರಾಷ್ಟ್ರಪ್ರೇಮಿಗಳಾಗಿದ್ದರಲ್ಲದೇ ದೈವೀ ಗುಣದವರಾಗಿದ್ದರು.

ಆದರೆ ಇಬ್ಬರ ದಾರಿ ಬೇರೆ ಬೇರೆ ಆಗಿದ್ದರೂ ಸಹಿತ ಅವರು ಮುಟ್ಟುವಂತಹ ಗುರಿ ಒಂದೇ ಆಗಿತ್ತು.ಇಬ್ಬರ ನಡುವೆ ಸ್ವಭಾವ ಭಿನ್ನತೆ ಇತ್ತು ಅದು ಇಡೀ ಜಗತ್ತಿಗೆ ಗೊತ್ತು ಆದರೆ ಅದೆಂದೂ ವೈಯುಕ್ತಿಕವಾಗಿರಲಿಲ್ಲ.

ಆದ್ದರಿಂದಲೇ ಬೋಸರ ದೃಷ್ಟಿಯಲ್ಲಿ ಗಾಂಧಿ ರಾಷ್ಟ್ರಪಿತರಾದರು. ಗಾಂಧಿ ದೃಷ್ಟಿಯಲ್ಲಿ ಸುಭಾಸ್ ರು ನೇತಾಜಿಯಾದರು.

ಇಂತಹ ಅನೇಕ ಕಾರಣಗಳಿಂದ ಇವರಿಬ್ಬರು ನನಗೆ ಪ್ರೇರಣೆಯಾದರು” ಎಂದು ಅಭಿಮಾನದಿಂದ ಹೇಳುತ್ತಾರೆ. ಬಾಪೂಜಿ ಮತ್ತು ನೇತಾಜಿಯವರ ತತ್ವ – ಸಿದ್ದಾಂತಗಳನ್ನು ಅವರ ಬದುಕಿನ ಮೌಲ್ಯಗಳನ್ನು ಕುರಿತು ಕಾಲೇಜಿನಿಂದ ಕಾಲೇಜಿಗೆ ಹೋಗಿ ಯಾವುದೇ ಪ್ರತಿಫಲಾಪೇಕ್ಷೆ ಬಯಸದೇ ತಮ್ಮ ಉಪನ್ಯಾಸ ಮೂಲಕ ವಿಶ್ವನಾಯಕರ ಬಗ್ಗೆ ತಿಳಿಸುವ ಇವರ ಈ ಗುಣವನ್ನು ಮೆಚ್ಚಲೇಬೇಕು.

ಇಲ್ಲಿಯವರೆಗೆ ಇವರು ೪೮ ಕಾಲೇಜುಗಳು ೧೬ ಪ್ರೌಢಶಾಲೆಗಳಲ್ಲಿ,೬ ಪ್ರಾಥಮಿಕ ಶಾಲೆಗಳಲ್ಲಿ ಸುಮಾರು ಇಪ್ಪತ್ತು ಸಾವಿರ ಮಕ್ಕಳಿಗೆ ಉಪನ್ಯಾಸ ನೀಡಿರುವ ಇವರು ಇದೊಂದು ಆತ್ಮತೃಪ್ತಿಯ ಕೆಲಸ,ಇದನ್ನು ಜೀವಿತಾವಧಿಯವರೆಗೂ ಮಾಡುವೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.
ಅಂದ ಹಾಗೆ ಇವರಿಗೆ ಇಬ್ಬರು ಗಂಡು ಮಕ್ಕಳು ಅವರ ಹೆಸರು ಕೂಡ ದೇಶಭಕ್ತರ ಹೆಸರೇ ಆಗಿರೋದು ವಿಶೇಷ ಮೊದಲ ಮಗ ಹದಿನಾಲ್ಕು ವರ್ಷದ ಗಾಂಧಿ ತಿಲಕ್ ಟ್ಯಾಗೋರ್, ಎರಡನೆಯವನು ಎಂಟು ವರ್ಷದ ಗಾಂಧಿ ಗೋಖಲೆ ಟ್ಯಾಗೋರ್.

ಈ ತಂದೆ ಮಕ್ಕಳ ಹೆಸರಲ್ಲಿ ಲೋಕಮಾನ್ಯ ತಿಲಕ್. ಗುರುದೇವ ಟ್ಯಾಗೋರ್. ಶಾಂತಿ ಮಾರ್ಗದ ನೇತಾರ ಗೋಖಲೆ,ಮಹಾತ್ಮಾ ಗಾಂಧೀಜಿ ಮತ್ತು ನೇತಾಜಿ ಬೋಸ್ ಸೇರಿ ಹೋಗಿದ್ದಾರೆ. ಈ ಮೂವರ ಹೆಸರಲ್ಲಿ ಅಮರಜೀವಿಗಳು ಚಿರಸ್ಥಾಯಿಯಾಗಿ ನಿಂತಿದ್ದಾರೆ.
. ವಿಶ್ವವಂದ್ಯ ಗಾಂಧೀಜಿ ಸೇರಿದಂತೆ ಉಳಿದ ನೇತಾರರ ಮೇಲಿನ ಇವರ ಅಭಿಮಾನ ಹೀಗೆಯೇ ನಾಡಿನೆಲ್ಲೆಡೆ ಪಸರಿಸಲಿ ಎಂದು ಆಶಿಸೋಣ.ಇಲ್ಲಿಯವರೆಗೆ ಈ ತರುಣ ಗಾಂಧಿಗೆ ಸಮಾಜದ ಅನೇಕ ಸಂಘ ಸಂಸ್ಥೆಗಳು ಹಲವಾರು ಬಾರಿ ಸನ್ಮಾನಿಸಿ ಸತ್ಕರಿಸಿದ್ದಾರೆ.

ಮಹಾತ್ಮ ಗಾಂಧೀಜಿ, ಸ್ವಾಮಿ ವಿವೇಕಾನಂದ ಪ್ರಣೀತ ೨೦೧೯ ರ ರಾಜ್ಯ ಮಟ್ಟದ ಯುವಜನ ಮೇಳದಲ್ಲಿ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಿದ್ದವ್ವನ ಹಳ್ಳಿಯ ಬುದ್ದ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ ಹಾಗೂ ಗಾಂಧೀ ಶಾಂತಿ ಪ್ರತಿಷ್ಟಾನ ಇವರು ಈ ನೇತಾಜಿ ಗಾಂಧಿಗೆ ರಾಜ್ಯಮಟ್ಟದ ಸದ್ಬಾವನಾ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.ಅಂತೆಯೇ
ಧಾರವಾಡದ ಅಪ್ನಾದೇಶ ಬಳಗದವರು ರಾಜ್ಯ ಮಟ್ಟದ ಶ್ರಮಿಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದು.ಇವರ ಪರಿಶ್ರಮ ಹೀಗೆಯೇ ಸಾಗಲಿ ಗಾಂಧೀಜಿ ಅವರ ಬದುಕನ್ನು ನೇತಾಜಿಯ ಶೌರ್ಯವನ್ನು ಮರೆಯುತ್ತಿರುವ ಇಂದಿನ ಪೀಳಿಗೆಗೆ ಇಂತವರ ಅವಶ್ಯಕತೆ ಇದೆ.ಅದು ಇನ್ನೂ ಹೆಚ್ಚು ಪ್ರಚುರವಾಗಲೆಂದು ಆಶಿಸೋಣ.


ವೈ.ಬಿ,ಕಡಕೋಳ
ಸಂಪನ್ಮೂಲ ವ್ಯಕ್ತಿಗಳು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!