ಹೊಸದೆಹಲಿ- ವಿರೋಧ ಪಕ್ಷಗಳು ಮುಖ್ಯ ಚುನಾವಣಾ ಆಯೋಗ, ಚುನಾವಣೆ ಅಧಿಕಾರಿಗಳು ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟರ ವಿರುದ್ಧ ಚುನಾವಣೆಗೆ ಸಂಬಂಧಿಸಿದಂತೆ ಆಧಾರರಹಿತ ಆರೋಪಗಳನ್ನು ಮಾಡುತ್ತಿರುವುದರ ಬಗ್ಗೆ ಮುಖ್ಯ ಚುನಾವಣಾ ಆಯುಕ್ತ ರಾಜೀವ ಕುಮಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತೀಯ ಚುನಾವಣಾ ಪದ್ಧತಿಯ ಬಗ್ಗೆ ನಕಲಿ ವಿಚಾರಗಳನ್ನು ವಿರೋಧ ಪಕ್ಷಗಳು ಹರಡುತ್ತಿವೆ ತಮ್ಮ ಆರೋಪಗಳಿಗೆ ವಿಪಕ್ಷಗಳು ಸರಿಯಾದ ಸಾಕ್ಷ್ಯ ಒದಗಿಸಬೇಕು ಎಂದು ಅವರು ಕಟುವಾಗಿ ನುಡಿದಿದ್ದಾರೆ.
ಚುನಾವಣಾ ಫಲಿತಾಂಶ ಪ್ರಕಟಿಸುವ ಒಂದು ದಿನ ಮುಂಚೆ ದಿ. ೩ ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚುನಾವಣಾ ಆಯುಕ್ತರು, ಎಣಿಕೆ ಶುರುವಾಗುವ ಮುಂಚೆಯೇ ಚುನಾವಣೆಯ ಮೇಲೆ ಯಾರು ಪ್ರಭಾವ ಬೀರಿದ್ದಾರೆ ಎಂಬುದನ್ನು ವಿಪಕ್ಷಗಳು ಹೇಳಬೇಕು. ‘ ನೀವು ವದಂತಿಗಳನ್ನು ಹರಡಬಾರದು ಹಾಗೂ ಎಲ್ಲರನ್ನೂ ಅನುಮಾನದಿಂದ ನೋಡಬಾರದು ಎಂದು ಕುಮಾರ ಎಚ್ಚರಿಸಿದರು.
ನಾಳೆ ಜೂನ್ ೪ ರಂದು ಭಾರತದ ಸುಮಾರು ೮೦೦೦ ಅಭ್ಯರ್ಥಿಗಳ ಹಣೆಬರಹ ಹೊರಬೀಳಲಿದೆ. ಇದಕ್ಕಾಗಿ ಯುದ್ದೋಪಾದಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಬೆಳಿಗ್ಗೆ ಎಂಟರಿಂದ ಮತ ಎಣಿಕೆ ಆರಂಭವಾಗಲಿದೆ ಎಂದು ಚುನಾವಣಾ ಆಯುಕ್ತರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕುಮಾರ ಅವರ ಜೊತೆ ಚುನಾವಣಾ ಅಧಿಕಾರಿಗಳಾದ ಜ್ಞಾನೇಶ ಕುಮಾರ ಮತ್ರು ಎಸ್ ಎಸ್ ಸಂಧು ಇದ್ದರು