ಆಪರೇಷನ್ ಥಿಯೇಟರ್ ಬಾಗಿಲು ತೆರೆಯುವುದನ್ನೇ ಕಾತುರದಿಂದ ಕಾಯುತ್ತಾ ಕುಳಿತಿರುವ ಕಂಗಳು, ಎಲ್ಲಿ ಎದೆ ಸೀಳಿಕೊಂಡು ಹೊರಗೆ ಬಂದು ಬಿಡುವುದೇನೋ ಅನ್ನಿಸುವಷ್ಟು ಹೃದಯ ಬಡಿತ, ಸುನಾಮಿಯಂತೆ ಯೋಚನೆಗಳೊಂದಿಗೆ ಆರ್ಭಟಿಸುತ್ತಾ ನರ್ತಿಸುತ್ತಿರುವ ಮನಸ್ಸು, ಮಡದಿ ಒಳಗೆ ಹೆರಿಗೆಯ ದೈಹಿಕ ನೋವನ್ನು ಪಡುತ್ತಿದ್ದರೆ ಅದರ ಇಮ್ಮಡಿಯಷ್ಟು ಮಾನಸಿಕ ಯಾತನೆ ಪಡುತ್ತಾ ನಿಂತಲ್ಲೇ ನಿಲ್ಲದೆ ಕುಳಿತಲ್ಲೇ ಕೂರಲಾಗದೆ ಅತ್ತಿಂದಿತ್ತ ಇತ್ತಿಂದತ್ತ ಅಲೆದಾಡುತ್ತಿದ್ದೆ, ನನ್ನ ಮಡದಿಯ ಮೊದಲ ಹೆರಿಗೆ ದಿನದಂದು ನಾನು.ಯೋಚನೆಗಳ ಮಹಾಪೂರದೊಂದಿಗೆ ಸೇನಸುತ್ತಿದ್ದ ನಾನು,ನನ್ನ ಅಮ್ಮನಿಗೂ ಇಷ್ಟೇ ನೋವನ್ನು ಕೊಟ್ಟು ಧರೆಗೆ ಬಂದಿದ್ದಾ ನಾನು? ಅಂತಾ ನನ್ನ ತಲೆಗೆ ಯೋಚನೆ ಬಂದಿದ್ದೆ ಆವತ್ತು ಮೊದಲು. ತಾಯಿಯಾಗಿ, ಹೆಂಡತಿಯಾಗಿ,ಹೆಣ್ಣಿನ ಜನ್ಮ ಎಷ್ಟು ಸಾರ್ಥಕತೆಯಿಂದ ಕೂಡಿದ್ದು ಅಂತ ಅರಿತುಕೊಂಡಿದ್ದೆ.
ನಾನು ಆವತ್ತು.ಥಿಯೇಟರ್ ಬಾಗಿಲು ಸ್ವಲ್ಪ ತೆರೆದು ಹೊರಗೆ ಇಣುಕಿದ ನರ್ಸ್, “ನಿಮಗೆ ಹೆಣ್ಣು ಮಗು! ತಾಯಿ ಮಗು ಇಬ್ಬರೂ ಕ್ಷೇಮ” ಎನ್ನುವ ಮಾತುಗಳು ಕಿವಿಗೆ ಬೀಳುತ್ತಲೇ ಆಕಾಶ ಇನ್ನೇನು ಮೂರೇ ಗೇಣು, ಮನಸ್ಸು ಗಾಳಿಗಿಂತ ಹಗುರವಾಗುತ್ತಾ ಕಣ್ಣಂಚಿನಿಂದ ಜಾರಿತು ಆನಂದಭಾಷ್ಪ!. ವೈದ್ಯರು ಅನುಮತಿ ಸೂಚಿಸುತ್ತಿದ್ದಂತೆಯೇ ದಾಪುಗಾಲು ಇಡುತ್ತಾ ಹೊರಟ ನನ್ನ ಕಾಲುಗಳು ತಲುಪಿದ್ದು ನನ್ನ ಮಡದಿ ಹಾಗೂ ಆ ನನ್ನ ಮುದ್ದು ಕಂದನೆಡೆಗೆ.ಕ್ಷೇಮದಿಂದಿದ್ದ ಮಡದಿಯ ತಲೆ ಸವರುತ್ತ, ಅವಳ ಪಕ್ಕದಲ್ಲಿ ಅಬ್ಬಾ! ಅದೆಂತಹ ಅನುಭವ! ಮಂದಹಾಸದೊಂದಿಗೆ ಪಿಳಿ ಪಿಳಿ ಕಣ್ಣು ಬಿಡುತ್ತಿದ್ದ ನನ್ನ ಮುದ್ದು ಹೆಣ್ಣು ಕಂದನನ್ನ ನೋಡಿ,ಆ ಪುಟ್ಟ ದೇವರನ್ನು ಎತ್ತಿ ಎದೆಗವಚಿಕೊಂಡು ಹಣೆಗೆ ಮುತ್ತನ್ನಿಟ್ಟಾಗ ಸ್ವರ್ಗವೇ ಧರೆಗಿಳಿದಂತಾದ ಅನುಭವ ಅವಿಸ್ಮರಣೀಯ!, ಈಗ ಎರಡು ವರ್ಷದ ನನ್ನ ಮುದ್ದು ಮಗಳು ಶ್ರದ್ಧಾ,ನನ್ನ ಮಡದಿ ಹಾಗೂ ನನ್ನ ಪ್ರೀತಿಯ ಅಮ್ಮ, ಈ ಮೂರು ಮುತ್ತುಗಳು, ನನ್ನ ಜೀವನದ ಅವಿಭಾಜ್ಯ ಅಂಗ! ಮೂವರಿಗೂ ಮಹಿಳಾ ದಿನಾಚಾರಣೆಯ ಶುಭಾಶಯಗಳು…
ಚಂದ್ರಶೇಖರ್.ಅ.ಪತ್ತಾರ
ವಿದ್ಯಾನಗರ, ಮೂಡಲಗಿ