ಗಜಲ್-೧
ಇದೇ ಕಣ್ಣುಗಳು ನೋಡು ಚೆನ್ನಾಗಿ ಅನುಮಾನ ಬೇಡ ಸಖಿ
ಭರವಸೆ ಕನಸು ಕಂಡಿದ್ದು ಸುಳ್ಳಲ್ಲ ಬಿಗುಮಾನ ಬೇಡ ಸಖಿ
ನೀ ಒಂದು ಚೂರು ನಸುನಕ್ಕು ಮತ್ತೆ ನಾಚಿ ನವಿಲಾಗುತಿದ್ದೆ
ಆ ಸಾವಿರ ಕಣ್ಣ ಮೋಹಕೋಡಿ ಬಂದಿದ್ದೆ ಅಪಮಾನ ಬೇಡ ಸಖಿ
ನಾ ನಿನ್ನ ಪ್ರೀತಿಸೆಲೆಯಲ್ಲಿ ಸದಾ ಈಜಲು ಇಷ್ಟಪಡುವ ಮೀನು
ನರಕದ ದಂಡೆಗೆ ಎಸೆದು ಜೀವಹಿಂಡಬೇಡ ಅವಮಾನ ಬೇಡ ಸಖಿ
ಲೋಕದ ತುಂಬ ಅದೆಷ್ಟೋ ಪಾಪಗಳು ಇನ್ನೂ ಶಿಕ್ಷೆಗಾಗಿ ಬಾಕಿಯಿವೆ
ನಾ ನಿನ್ನ ಪಡೆಯದೆ ನಿತ್ಯ ಶಿಕ್ಷೆ ಅನುಭವಿಸುತಿರುವೆ ಸಂಹನನ ಬೇಡ ಸಖಿ
ಅಸಂಖ್ಯ ಹೂಗಳು ಬೆಳಿಗ್ಗೆ ಹುಟ್ಟಿ ಸಂಜೆಗೆ ರವಿಕಿರಣ ಬಾಡಿ ಸಾಯುತ್ತವೆ
“ಜಾಲಿ” ನಾನೆಂಬ ಹೂ ನೀ ಜೊತೆ ಇರುವವರೆಗೂ ಮರಣ ಬಲಿದಾನ ಬೇಡ ಸಖಿ
ಗಜಲ್-೨
ಎಷ್ಟು ಸಲ ಹೇಳುವುದು ಸಖಿ ನಿನಗೆ ನಾ ಎಂದೂ ಮೋಸ ಮಾಡಲಾರೆ
ನಾನೆಂದೆಂದೂ ನಿನ್ನ ನೆನಪಿನೊಟ್ಟಿಗೇ ಕೆಲಸಕ್ಕಿಳಿಯುವುದು ಮೋಸ ಮಾಡಲಾರೆ
ಆ ರವಿಚಂದ್ರರಿರುವವರೆಗೂ ಹಗಲು ರಾತ್ರಿಗಳಾಗುವುದು ಹೇಗೆ ಪರಮಸತ್ಯವೋ
ನಾನೂ ಅಷ್ಟೇ ನಿನಗಾಗಿಯೇ ನಿತ್ಯ ಬೆಳಗುವುದು ಹಾಡುವುದು ಮೋಸ ಮಾಡಲಾರೆ
ಯಾರನ್ನೂ ನೀ ಕೇಳಲು ಹೋಗಬೇಡ ನನ್ನ ಪ್ರೀತಿ ಎಂಥದೆಂದು ಅವಾಕ್ಕಾಗಬಹುದು
ಹೆಚ್ಚೆಂದರೆ ನಿನಗೆ ನಾನೊಬ್ಬ ಆವಾರಾ ಹುಡುಗನೆಂದು ಹೇಳಬಹುದು ಮೋಸ ಮಾಡಲಾರೆ
ಈ ಜಗದ ತುಂಬ ಕೊನೆವರೆಗೂ ಉಳಿವುದು ಒಂದೇ ಪ್ರೀತಿ ಮಾತ್ರ ಅದೇ ನನ್ನ ವೈಶಿಷ್ಟ್ಯ
ಅದು ನಾ ನಿನಗೆ ಮೀಸಲಿಟ್ಟಿದ್ದು ಬೇರೆ ಮೀಸಲಾತಿಯಿಲ್ಲ ಪರೀಕ್ಷಿಸಬಹುದು ಮೋಸ ಮಾಡಲಾರೆ
ಮಾತಿಗೀಗ ಸೂತಕದ ಛಾಯೆ ಅಂಟಿದೆ ಸಖಿ ನಾ ಹೆಚ್ಚು ಹೇಳಲಾರೆ ಅಕ್ಷರಗಳು ಬೀದಿಗೆ ಬಂದಾವು
ನನ್ನ ನಿನ್ನ ಪ್ರೀತಿ ಕುರಿತು ಹರಾಜು ಕೂಗ್ಯಾವು”ಜಾಲಿ”ನನ್ಮಾತು ನಂಬಬಹುದು ಮೋಸ ಮಾಡಲಾರೆ
ಗಜಲ್-೩
ಈ ಭೀಕರ ಕನಸುಗಳಿಂದ ಪಾರು ಮಾಡು ಸಾಕಿ
ಹೇಗೆ ದಿನದೂಡಲಿ ಇವುಗಳಿಂದ ಪಾರು ಮಾಡು ಸಾಕಿ
ನಿನ್ನ ಮಧುಶಾಲೆಗೆ ಇರುವಷ್ಟು ಶಕ್ತಿ ನನ್ನ ಕವಿತೆಗಿಲ್ಲ
ಆದರೂ ಕಾಡುವ ನಶೆಯಿಂದ ಪಾರು ಮಾಡು ಸಾಕಿ
ನೆಮ್ಮದಿ ಹುಡುಕಲು ಹೋಗಿ ಮತ್ತಿಷ್ಟು ನೆಮ್ಮದಿಗೆಟ್ಟೆ
ಮತಿ ಹೋಗುವ ಹುನ್ನಾರಗಳಿಂದ ಪಾರು ಮಾಡು ಸಾಕಿ
ಜೀವನದಲಿ ಮಧುವಿಗೆ ಪವಿತ್ರ ಸ್ಥಾನವಿದೆ ಬಲ್ಲೆ ನಾನು
ಆ ಜಾತ್ರೆ ಈ ಜನಜಂಗುಳಿಯಿಂದ ಪಾರು ಮಾಡು ಸಾಕಿ
ಸಂತೆಯೆಂದರೂ ಸರಿ ಚಿಂತೆಯೆಂದರೂ ಸರಿ ವ್ಯತ್ಯಾಸವಿಲ್ಲ
“ಜಾಲಿ” ಬುಧ್ಧನ ಸಾಸಿವೆ ಸುಖದಿಂದ ಪಾರು ಮಾಡು ಸಾಕಿ
ಗಜಲ್-೪
ಒಣಗಿದ ಹೆಗಲಿಗೆ ಜೋಳಿಗೆ ಹಿಡಿದು ಹೊರಟಿರುವೆ ನನಗೊಂದಿಷ್ಟು ವಿಷದ ಬಾಟಲಿಗಳು ದಾನವಾಗಿ ನೀಡಿ
ಅಲ್ಲಿ ನನ್ನ ಮಕ್ಕಳು ಹಸಿವಿನಾರ್ಭಟಕೆ ತತ್ತರಿಸಿದ್ದಾರೆ ಒಂದಿಷ್ಟು ವಿಷದ ಬಾಟಲಿಗಳು ದಾನವಾಗಿ ನೀಡಿ
ಎಷ್ಟೋ ವರುಷಗಳಿಂದ ಯುದ್ಧ ಮಾಡುತ್ತ ಬಂದಿರುವೆ ಅವರ ಹಸಿವಿಗಾಗಿ ಕನಸಿಗಾಗಿ
ಹಸಿವಿನ ಬಾಧೆ ಜೋಳಿಗೆಯ ತೇಪೆ ಮುಚ್ಚಲಾಗಲಿಲ್ಲ ಹಸಿವಿಂಗುವಷ್ಟು ವಿಷದ ಬಾಟಲಿಗಳು ದಾನವಾಗಿ ನೀಡಿ
ಹೋರಾಟಗಳ ಮಾಡಿ ಮಾಡಿ ಸುಸ್ತೂ ಆಗಿದ್ದೇವೆ ನಾನು ಮತ್ತು ನನ್ನ ಮಕ್ಕಳು ಬಿಡುವಿಲ್ಲದೆ ದುಡಿದರೂ
ಹೊಟ್ಟೆ ತುಂಬಿಸುವ ಮೋಜು ಜೂಜಾಟವಾಡುತಿದೆ ದಯಮಾಡಿ ಕೇಳಿದಷ್ಟು ವಿಷದ ಬಾಟಲಿಗಳು ದಾನವಾಗಿ ನೀಡಿ
ನಮ್ಮ ಬೆನ್ನಿಗೆ ನಾವು ಅಂಟಿ ಹೋಗಿದ್ದೇವೆ ಮತ್ತೆ ಕಿತ್ತಿ ಬರಬೇಕೆಂದರೆ ಬೆನ್ನು ನಮ್ಮ ಹಸಿವು ಕಿತ್ತಿದಂತೆ
ಅದು ಆಗದ ಮಾತು ಅದಕ್ಕೆ ಲೆಕ್ಕವಿಡಲಾಗದ ಹಸಿವಿಗೆ ಲೆಕ್ಕವಿಲ್ಲದಷ್ಟು ವಿಷದ ಬಾಟಲಿಗಳು ದಾನವಾಗಿ ನೀಡಿ
ಆ ದೂರದ ಆಕಾಶದಷ್ಟೇ ನಮ್ಮ ಆಸೆಗಳೂ ಮತ್ತು ನಮ್ಮ ಬದುಕೂ ಆಗಿಹೋಗಿದೆ ಇನ್ನೆಲ್ಲಿದೆ ಭರವಸೆ
ಬಂಡೇಳದೆ ದಿವಾಳಿಯೇಳುವುದೊಂದೇ ಆಗಿಬಿಟ್ಟಿದೆ “ಜಾಲಿ” ಮರಳಿಬರದಷ್ಟು ವಿಷದ ಬಾಟಲಿಗಳು ದಾನವಾಗಿ ನೀಡಿ
-ವೇಣು ಜಾಲಿಬೆಂಚಿ
ರಾಯಚೂರು.