ವ್ಯಾಪಾರಿಗಳ, ಕಲಾವಿದರ ಕಾಮಧೇನು ಬನಶಂಕರಿ ಜಾತ್ರೆ!

Must Read

ಬಾಗಲಕೋಟೆ: ಜಿಲ್ಲೆಯ ಚಾಲುಕ್ಯರ ನಾಡು ಬಾದಾಮಿ ತಾಲೂಕಿನ ಬನಶಂಕರಿದೇವಿಯ ಜಾತ್ರೆ ನಮ್ಮ  ಸಾಂಸ್ಕೃತಿಕ ಮತ್ತು ಜನಪದ ಪರಂಪರೆಯ ಪ್ರತಿಬಿಂಬ.

ಅದು ಸಾವಿರಾರು ಕಲಾವಿದರಿಗೆ ಮತ್ತು ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಬದುಕನ್ನು ಕಟ್ಟಿಕೊಡುವ ಕಲ್ಪತರು. ಇಲ್ಲಿ ಸಣ್ಣ ಗುಂಡು ಸೂಜಿಯಿಂದ ಹಿಡಿದು ಮನೆ ನಿರ್ಮಾಣದ ವಸ್ತುಗಳವರೆಗೆ ಎಲ್ಲವೂ ಒಂದೇ ಪ್ರದೇಶದಲ್ಲಿ ಲಭ್ಯವಾಗುವ ನಮ್ಮ ರಾಜ್ಯದ ದೊಡ್ಡ ಬಿಗ್ ಬಜಾರ್ ಇದು.

ನಮ್ಮ ಬಹುತೇಕ ವ್ಯಾಪಾರಸ್ಥರು ಮತ್ತು ಕಲಾವಿದರು ಈ ಜಾತ್ರೆಯ ಮೇಲೆಯೇ ಒಂದು ವರ್ಷದ ಬದುಕನ್ನು ಕಟ್ಟಿಕೊಳ್ಳುತ್ತಾರೆಂದರೆ ನಂಬೋದು ಕಷ್ಟ!!! ಆದರೂ ಸತ್ಯ. ನಮ್ಮ ನಾಡಿನ ಸುಮಾರು ಹದಿನೈದರಿಂದ ಇಪ್ಪತ್ತು ನಾಟಕ ಕಂಪನಿಗಳು ಇಡೀ ವರ್ಷವಿಡೀ ಎಸ್ಟೇ ಲಾಸ್ ಆಗಿದ್ದರೂ ಬದುಕೋಕೆ ಗುಟುಕು ಜೀವ ಇಟ್ಕೊಂಡು ಈ ಜಾತ್ರೆಗೋಸ್ಕರವೇ ಕಂಪನಿ ನಡೆಸಿ ಕಲಾವಿದರಿಗೆ ಜೀವನ ಕಲ್ಪಿಸುತ್ತಾರೆ. ಹಾಗಾಗಿ ಇದು ಕಲಾವಿದರ ಕಾಮಧೇನು. ರಂಗ ಭೂಮಿಗೆ ಗೌರವ ಕೊಟ್ಟು ಎಂಥೆಂಥಾ ಸಿನಿ ಕಲಾವಿದರು ಈ ಜಾತ್ರೆಯ ನಾಟಕಗಳಲ್ಲಿ ಪಾತ್ರ ಮಾಡುತ್ತಾರೆ ಎಂದರೆ ನೀವೇ ಊಹಿಸಿಕೊಳ್ಳಿ ಈ ಜಾತ್ರೆಯ ರಂಗಸಂಸ್ಕೃತಿ, ಇಲ್ಲಿಯ ಜನರ ಕಲಾ ಪ್ರೇಮ ಮತ್ತು ಸಾಂಸ್ಕೃತಿಕ ಸಂಸ್ಕಾರ.

ಇಡೀ ಜಾತ್ರೆ ಸುತ್ತೋಕೆ ನಮಗೆ ಏನಿಲ್ಲವೆಂದರೂ ಸುಮಾರು ಎರಡು ತಾಸು ಸಾಲೋಲ್ಲ. ಸ್ವಚ್ಛತೆಯ ಕೊರತೆ ಇಲ್ಲಿನ ಮೈನಸ್ ಪಾಯಿಂಟ್.  ಜಾತ್ರೆಯಲ್ಲಿ ಬೆಂಡು ಬತ್ತಾಸುಗಳ ಫಳಾರ, ಧರ್ಮದೇವತೆಯ ಫೋಟೋಗಳು, ಬಳೆ ಅಂಗಡಿಗಳು, ಮಕ್ಕಳ ಆಟಿಗೆ ಸಾಮಾನುಗಳು, ಬಾಂಡೆ ಅಂಗಡಿಗಳು, ಬಟ್ಟೆ ಅಂಗಡಿಗಳು, ಪ್ಲಾಸ್ಟಿಕ್ ಅಂಗಡಿಗಳು, ಪಿಂಗಾಣಿ ಕಪ್ಪುಗಳು, ಹೊಳೆ ಆಲೂರಿನ ಕಿಡಕಿ ಬಾಗಿಲುಗಳು, ಇಳಕಲ್ ಸೀರೆ ಅಂಗಡಿಗಳು, ಕಿರಾಣಾ ಅಂಗಡಿಗಳು… ಹೀಗೆ ಐದು ರೂಪಾಯಿಯಿಂದ ಐದು ಸಾವಿರ ರೂಪಾಯಿಗಳವರೆಗೂ ಲಭ್ಯವಾಗುವ ರಮ್ಯ ಮನೋಹರ ಜಾತ್ರೆ ಇದು.

ಈ ಜಾತ್ರೆ ವಿಭಿನ್ನ ಸ್ವರೂಪವನ್ನು ತಾಸು ತಾಸಿಗೊಮ್ಮೆ ಪಡೆಯುತ್ತದೆ. ಮುಂಜಾನೆ ದೈವೀ ಸ್ವರೂಪ, ಮುಂಜಾನೆ ಹತ್ತು ಗಂಟೆಯಿಂದ ಸಾಯಂಕಾಲ ನಾಲ್ಕು ಗಂಟೆವರೆಗೂ ಕುಟುಂಬಸ್ಥರ ಜಾತ್ರೆ, ಸಂಜೆ ಆದಂತೆಲ್ಲ ಪಡ್ಡೆ ಹುಡುಗರ ಸ್ವಭಾವದ ಜಾತ್ರೆ…… ಹೀಗೆ 24*7 ಸುಮಾರು ಒಂದೂವರೆ ತಿಂಗಳು ಚಾಲೂ ಇರುವ ಅಪರೂಪದ ಜಾತ್ರೆ ಇದು.  

ಇಲ್ಲಿ ಕಟಕ ರೊಟ್ಟಿ, ಮೊಸರು, ಚಟ್ನಿಯಿಂದ ಹಿಡಿದು ನಾರ್ತ್ ಇಂಡಿಯನ್ ವರೆಗೂ ಎಲ್ಲ ಬಗೆಯ ಊಟ ಸಿಗುತ್ತದೆ. ರಾತ್ರಿ ನಿದ್ರೆ ಬಂದರೆ ಮಲಗೋಕೆ ಛತ್ರಗಳುಂಟು. ಪಕ್ಕದ ಬಾದಾಮಿಯಲ್ಲಿ ಸಿಂಗಲ್ ಸ್ಟಾರ್ ಹೋಟೆಲ್ ಗಳಿಂದ ಫೈವ್ ಸ್ಟಾರ್ ಹೋಟೆಲ್ ಗಳರೆಗೆ ಲಾಡ್ಜಗಳು ಸಿಗುತ್ತವೆ.  

ಬದುಕಿದ್ದಾಗಲೇ ಒಮ್ಮೆ ಈ ಜಾತ್ರೆಗೆ ಹೋಗಿ ಬನ್ನಿ.  ಧೂಳು ಸ್ವಲ್ಪ ಜಾಸ್ತಿ. ಮಾಸ್ಕ್ ಹಾಕಿಕೊಳ್ಳೋದು ತುಂಬಾ ಸೇಫ್. ಜಾತ್ರೆ ಮಾಡಿದ ಮೇಲೆ ಒಂದೆರೆಡು ನಾಟಕ ನೋಡೋದನ್ನ ಮರೀಬೇಡಿ . ನಾಟಕಗಳ ಶೀರ್ಷಿಕೆ ತುಂಬಾ ಹಾಸ್ಯಮಯ ಆಗಿರುತ್ತವೆ. ಉದಾ: ಕಟಕರೊಟ್ಟಿ ಕಲ್ಲವ್ವ, ಸೌಡಿಲ್ಲದ ಸಾಹುಕಾರ, ಹೆಂಡತಿ ಟೂರಿಗೆ ಗಂಡ ಬಾರಿಗೆ, ಗಂಗೆ ಮನ್ಯಾಗ ಗೌರಿ ಹೊಲದಾಗ, ಹಗರಿಲ್ಲ ಹನಮವ್ವ….. ಹೀಗೆ ಕಾಮಿಡಿ ಆಧಾರವಾಗಿಟ್ಟುಕೊಂಡ ವಿಚಿತ್ರ ಶೀರ್ಷಿಕೆ ಇಟ್ಟಕೊಂಡ ನಾಟಕಗಳು ಯಶಸ್ವಿ ಪ್ರದರ್ಶನಗಳಿಗೆ ಸಾಕ್ಷಿಯಾಗುತ್ತವೆ. ಒಮ್ಮೆ ಸುಮ್ನೆ ಹೋಗಿ ಬನ್ನಿ…. ಎನ್ನುತ್ತಾರೆ ಹುನಗುಂದ ತಾಲೂಕಿನ ಕೂಡಲಸಂಗಮದ ಡಾ. ಶರಣು ಪಾಟೀಲರು.

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...

More Articles Like This

error: Content is protected !!
Join WhatsApp Group