ಹಾವೇರಿ: ಹಾವೇರಿಯಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ ರಚನಾ ಪೂರ್ವಭಾವಿ ಸಭೆಯಲ್ಲಿ ಸೃಜನಶೀಲ ಕನ್ನಡ ಸಾಹಿತ್ಯ ಬಳಗ ಹಾಗೂ ಹಾವೇರಿ ಜಿಲ್ಲಾ ಶಿಕ್ಷಕ ಸಾಹಿತಿಗಳ ವತಿಯಿಂದ ಕನ್ನಡ ಭಾವಗೀತೆಗಳ ಸರದಾರ, ಹಿರಿಯ ಸಾಹಿತಿ, ಡಾ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಲಾಯಿತು.
ಕರ್ನಾಟಕ ರಾಜ್ಯ ಶಿಕ್ಷಕ ಸಾಹಿತ್ಯ ಪರಿಷತ್ ರಚನೆಯ ಪೂರ್ವಭಾವಿ ಸಭೆಯನ್ನು ಶನಿವಾರ ಕರೆಯಲಾಗಿದ್ದು ಸಭೆಯಲ್ಲಿ ಅನುದಾನಿತ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಹನುಮಂತಪ್ಪ ಅವರು ಭಾಗವಹಿಸಿ ಹಾವೇರಿ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಬರಹಗಾರ ಶಿಕ್ಷಕರ ಸಾಹಿತ್ಯ ಪರಿಷತ್ತಿನ ರಚನೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಮಾತನಾಡಿ, ನಾಡಿನ ಸುಸಂಸ್ಕೃತ ಸತ್ಪ್ರಜೆಗಳನ್ನಾಗಿ ಮಕ್ಕಳನ್ನು ತಯಾರು ಮಾಡುವ ಶಿಕ್ಷಕ ವರ್ಗ ಸಾಹಿತ್ಯಾಸಕ್ತರಾದಲ್ಲಿ ಖಂಡಿತಾ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳಾದ ಬಿ ಪಿ ಶಿಡೇನೂರ ಮಾತನಾಡಿ, ಇತ್ತೀಚೆಗೆ ಹಾವೇರಿ ಜಿಲ್ಲೆಯಲ್ಲಿ ಅನೇಕ ಸಾಹಿತ್ಯಿಕ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ. ಇದಕ್ಕೆಲ್ಲ ಯುವ ಉತ್ಸಾಹಿ ಶಿಕ್ಷಕ ಸಾಹಿತಿಗಳ ಕಾರ್ಯಕ್ಷಮತೆ, ಆಸಕ್ತಿಯೇ ಕಾರಣವೆಂದರು. ಹಾವೇರಿ ಜಿಲ್ಲಾ ಶಿಕ್ಷಕರ ಸಾಹಿತ್ಯ ಪರಿಷತ್ ಉಸ್ತುವಾರಿ ವಹಿಸಿಕೊಂಡು ಮಾತನಾಡಿದ ಸಂತೋಷ್ ಬಿದರಗಡ್ಡೆಯವರು, ಈಗಾಗಲೇ ನಮ್ಮ ಶಿಕ್ಷಕ ಸಮುದಾಯ ಸಾಕಷ್ಟು ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಪ್ರಸ್ತುತ ಈ ವೇದಿಕೆ ಮುಂಬರುವ ದಿನಗಳಲ್ಲಿ ಖಾಸಗಿ ಹಾಗೂ ಸರ್ಕಾರಿ ಶಿಕ್ಷಕ ಮತ್ತು ಶಿಕ್ಷಕಿ ಸಾಹಿತಿಗಳಿಗೆ, ಬರಹಗಾರರಿಗೆ ಇನ್ನಷ್ಟು ಪ್ರೋತ್ಸಾಹ ಬೆಂಬಲದೊಂದಿಗೆ ಸಾಗಲು ದಾರಿಯಾಗಲಿದೆ ಎಂದು ಹೇಳಿದರು.
ಪ್ರಾಸ್ತವಿಕವಾಗಿ ಹಾನಗಲ್ಲ ಶಿಕ್ಷಕ ಸಾಹಿತಿ ಇಂಗಳಗಿ ದಾವಲಮಲೀಕ ಮಾತನಾಡಿದರು. ಹಾವೇರಿಯ ಶಿಕ್ಷಕ ಸಾಹಿತಿ ರಾಜಾಭಕ್ಷು ಸಿ ಎಂ ಅವರು ಕಾರ್ಯಕ್ರಮ ನಿರ್ವಹಿಸಿ, ಎನ್.ಎಸ್.ಎಲ್ ಅವರಿಗೆ ಮೌನಾಚರಣೆ ಆಚರಿಸಿ ಗೌರವ ಸೂಚಿಸಿದರು. ಶಿಕ್ಷಕಿ ಸಾಹಿತ್ಯ ಸಂಘಟಕಿ ರೇಷ್ಮಾ ಪಿ ಕೆ, ಸಿ ಜಿ ಮಲ್ಲೂರ, ಯು ಎಸ್ ಪಾಟೀಲ, ಎಂ ಎಸ್ ಭತ್ತದ, ಆರ್ ಎಂ ಬಳ್ಳಾರಿ, ಬಾಬರ್ ಇಂಗಳಗಿ, ಮುಂತಾದ ಶಿಕ್ಷಕ ಶಿಕ್ಷಕಿಯರು ಭಾಗವಹಿಸಿದ್ದರು.