spot_img
spot_img

ಶೀಲಸಂಪಾದನೆ

Must Read

spot_img

ಶೀಲ ಭಾರತೀಯ ಸಂಸ್ಕøತಿಯ ಒಂದು ಪ್ರಮುಖ ಜೀವನಮೌಲ್ಯ. ಈ ಸಂಪತ್ತು ಇದ್ದಲ್ಲಿ ಪ್ರೀತಿ, ವಿಶ್ವಾಸ, ನ್ಯಾಯ, ಧರ್ಮ, ಸತ್ಯ, ನೀತಿ, ನಿರ್ಮಲತೆ, ಗೌರವಾದರಗಳು ತಾವಾಗಿಯೇ ನೆಲೆಸುತ್ತವೆ. ವ್ಯಕ್ತಿಯ ವಿಕಾಸ, ಸಮಾಜದ ಸ್ವಾಸ್ಥ್ಯ ಹಾಗೂ ನಾಡಿನ ನೆಮ್ಮದಿಗೆ ಶೀಲವೇ ಕಾರಣ.

ಅದಕ್ಕಾಗಿ ಮೊದಲಿನಿಂದಲೂ ನಮ್ಮ ನಾಡಿನ ಆಧ್ಯಾತ್ಮವಾದಿಗಳು ಹಾಗೂ ಅನುಭಾವಿಗಳು ಇದನ್ನು ತಮ್ಮ ಜೀವರತ್ನದಂತೆ ಕಾಪಾಡಿಕೊಂಡು, ಅದರಿಂದ ದೊರೆಯುವ ಪರಮಾನಂದವನ್ನು ಅನುಭವಿಸುತ್ತ, ಇತರರೂ ಆ ಆನಂದವನ್ನು ಪಡೆಯಲಿ ಎಂದು ಬೋಧಿಸುತ್ತ ಬಂದಿದ್ದಾರೆ ಶಿವಶರಣರು. ಆ ಶಿವಶರಣರು ರಚಿಸಿದ ವಚನಗಳ ಸಂಗ್ರಹವೇ ಶೀಲಸಂಪಾದನೆ ಎಂಬ ಕೃತಿ.

ಇದು ವೀರಶೈವ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗದಿಂದ 1984ರಲ್ಲಿ ಬೆಳಕು ಕಂಡಿದೆ. 192 ಪುಟದ ಹರವು ಪಡೆದಿದೆ. 443 ವಚನಗಳು ಇಲ್ಲಿ ಅಳವಟ್ಟಿವೆ. ಇದನ್ನು ಪರಿಶ್ರಮದಿಂದ ಶಾಸ್ತ್ರೀಯ ನೆಲೆಯಲ್ಲಿ ಸಮರ್ಥವಾಗಿ ಸಂಪಾದಿಸಿದವರು ನಾಡಿನ ಹಿರಿಯ ಸಾಹಿತಿಗಳಾದ ಡಾ. ವೀರಣ್ಣ ರಾಜೂರ ಅವರು.

ಶೀಲ, ನೇಮ, ವ್ರತ, ಆಚಾರ ಎಂಬ ಪದಗಳನ್ನು ಇಲ್ಲಿ ಶರಣರು ಹೆಚ್ಚು ಕಡಿಮೆ ಒಂದೇ ಅರ್ಥದಲ್ಲಿ ಬಳಸಿದುದು ಕಂಡುಬರುತ್ತದೆ. ನಡೆ-ನುಡಿ ಸತ್ಯ ಶುದ್ದವಾಗಿರುವುದು, ಆತ್ಮಸ್ತುತಿ, ಪರನಿಂದೆ ಮಾಡದಿರುವುದು, ಪರಧನ-ಪರಸತಿಗಳು ಪದಿರುವುದು, ಸರ್ವಜೀವದಯ ತೋರುವುದು, ಸಜ್ಜನ ಸದಾಚಾರದಲ್ಲಿರುವುದು, ಸದ್ಭಾವ ಸಂಪನ್ನನಾಗಿರುವುದು.

ಮನದ ಕಳವಳ ನೀಗುವುದು, ಅಷ್ಟಮದ, ಸಪ್ತವ್ಯಸನ, ಅರಿಷಡ್ವರ್ಗ, ಪಂಚಭೂತಾದಿಗಳನ್ನು ಜಯಿಸುವುದು, ಜ್ಞಾನಪರಿಪೂರ್ಣನಾಗಿರುವುದು ಎಂಬ ನೆಲೆಯಲ್ಲಿ ಸಂಪಾದಕರು ಶೀಲ ಪದದ ಅರ್ಥವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಶೀಲಸಂಪಾದನೆ ವಿವಿಧ ಶರಣರ ವಚನಗಳಿಂದ ಕೂಡಿದ ಒಂದು ನೂತನ ಸ್ಥಲಕಟ್ಟಿನ ಕೃತಿ. 50 ವಚನಕಾರರ 443 ವಚನಗಳು ಇಲ್ಲಿ ಸಂಗ್ರಹಗೊಂಡಿವೆ. ಒಟ್ಟು 40 ಸ್ಥಲಗಳು. ಅವುಗಳಲ್ಲಿ 15 ಪ್ರಮುಖ; ಉಳಿದವು ಅವುಗಳ ಉಪವಿಭಾಗಗಳು. ಶರಣರು ಆಚರಿಸಿದ, ತಾವು ಆಚರಿಸಿದ ಇತರರಿಗೆ ಆಚರಿಸಲು ತಿಳಿಸಿದ ಶೀಲ, ವ್ರತ, ನೇಮಗಳ ವಿವರಣೆ ಇವುಗಳ ಕೇಂದ್ರವಸ್ತು. ಕೃತಿ ಬಸವಣ್ಣನವರ ವ್ಯಕ್ತಿ ವೈಶಿಷ್ಟ್ಯವನ್ನು ಎತ್ತಿತೋರಿಸುವ ಸ್ತುತಿರೂಪದ ವಚನಗಳಿಂದ ಆರಂಭವಾಗಿ, ವ್ರತಾಚರಣೆಗಳ ಮಹತಿಯನ್ನು ಮೆರೆಯುವ ಎಲ್ಲ ಪುರಾತೆಯರ ವಚನಗಳಿಂದ ಮುಕ್ತಾಯಗೊಳ್ಳುತ್ತದೆ ಎಂದು ಸಂಕ್ಷಿಪ್ತವಾಗಿ ಕೃತಿ ಪರಿಚಯ ಮಾಡಿದ್ದಾರೆ.

ಈ ಕೃತಿಯನ್ನು ಏಕೈಕ ಹಸ್ತಪ್ರತಿಯಿಂದ ಪರಿಷ್ಕರಿಸಿದ್ದಾರೆ. ಇದರ ಕರ್ತೃ ಅಜ್ಞಾತ. ತೋಂಟದ ಸಿದ್ಧಲಿಂಗರ ಶಿಷ್ಯ ಪರಂಪರೆಗೆ ಸೇರಿದ ಒಬ್ಬ ಸಂಪಾದಕನಿಂದ 17ನೆಯ ಶತಮಾನದ ಸುಮಾರಿಗೆ ಇದು ಸಂಯೋಜನೆಗೊಂಡಿರಬೇಕು ಎಂದು ಸ್ಪಷ್ಟವಾಗಿ ಊಹಿಸಿದ್ದಾರೆ. ಇದರ ಕೆಲವು ವಿಶಿಷ್ಟ ಅಂಶಗಳನ್ನು ಹೀಗೆ ಗುರುತಿಸಿದ್ದಾರೆ.

  • ಸುಮಾರು 50 ಹೊಸವಚನಗಳನ್ನು ಅವಳವಡಿಸಿಕೊಂಡುದು ಇದರ ಮೊದಲ ವೈಶಿಷ್ಟ್ಯ. ಇವುಗಳಲ್ಲಿ ಚೆನ್ನಬಸವಣ್ಣನವರ ವಚನಗಳ ಸಂಖ್ಯೆ ಅಧಿಕ, ಅವು-25, ಮೋಳಿಗೆ ಮಾರಯ್ಯನ  ವಚನ-5, ಬಸವಣ್ಣ ವಚನ-4, ಸಂಗಮೇಶ್ವರ ಅಪ್ಪಣ್ಣನ ವಚನ-3, ಪ್ರಭುದೇವರ ವಚನ-2, ಜೇಡರ ದಾಸಿಮಯ್ಯನ ವಚನ-2, ಮಡಿವಳ ಮಾಚಯ್ಯನ ವಚನ-3, ಅಂಬಿಗರ ಚೌಡಯ್ಯನ  ವಚನ-1, ಹಾವಿನಾಳ ಕಲ್ಲಯ್ಯನ ವಚನ-1, ಎಚ್ಚರಿಕೆ ಕಾಯಕದ ಮುಕ್ತಿನಾಥಯ್ಯನ ವಚನ-1.
  • ಕೆಲವು ಸ್ಥಲಗಳಲ್ಲಿ ವಚನದ ತಲೆಮೇಲೆ ಆಯಾ ವಚನಕಾರರ ಹೆಸರನ್ನು ಸೂಚಿಸಲಾಗಿದೆ. ಆದರೆ ಇದರಲ್ಲಿ ಏಕರೂಪತೆ ಕಂಡುಬರುವುದಿಲ್ಲ. ಕಾರಣ ಅವುಗಳನ್ನು ಅಡಿಯಲ್ಲಿ ಸೇರಿಸಿ ಒಂದುತನವನ್ನು ಕಾಯ್ದುಕೊಂಡಿದ್ದಾರೆ. ವಚನಕಾರ್ತೆಯರ ಹೆಸರುಗಳಲ್ಲಿ ಏಕರೂಪತೆ ಇರುವುದರಿಂದ ಅವುಗಳನ್ನು ಹಾಗೇ ಉಳಿಸಿಕೊಂಡಿದ್ದಾರೆ.
  • ಉಳಿದ ಸ್ಥಲಕಟ್ಟಿನ ಸಂಕಲನಗಳಂತೆ ಇಲ್ಲಿಯೂ ಅಂಕಿತಪಲ್ಲಟ ಕ್ರಿಯೆ ನಡೆದಿರುವದನ್ನು ಸಂಪಾದಕರು ಗುರುತಿಸಿದ್ದಾರೆ.
  • ಕೆಲವು ವಚನಕಾರ್ತೆಯರ ಹೆಸರುಗಳನ್ನು ತಪ್ಪಾಗಿ ನಮೂದಿಸಲಾಗಿರುವದನ್ನು ಗುರುತಿಸಿ, ಅವುಗಳನ್ನು ಸರಿಪಡಿಸಿದ್ದಾರೆ
  • ಕೆಲವು ವಚನ ಎರಡು ಸೇರಿ ಒಂದಾಗಿರುವದನ್ನು ಗುರುತಿಸಿ ಅವುಗಳನ್ನು ಬಿಡಿಸಿಟ್ಟಿದ್ದಾರೆ.
  • ಕೆಲವು ವಚನಗಳು ತಮ್ಮ ಅರ್ಧಭಾಗವನ್ನೇ ಕಳಚಿಕೊಂಡಿದ್ದರೆ, ಮತ್ತೆ ಕೆಲವು ಹೆಚ್ಚಿಗೆ ಸೇರಿಸಿಕೊಂಡಿವೆ, ಇನ್ನೂ ಕೆಲವು ವಚನಗಳಲ್ಲಿ ಶ್ಲೋಕ ಬಿಟ್ಟುಹೋಗಿವೆ. ಇಂಥವುಗಳನ್ನು ಇಲ್ಲಿ ಸರಿಪಡಿಸಿದ್ದಾರೆ.
  • ಪ್ರಕಟಿತ ವಚನಗಳಿಂದ ಬಹಳಷ್ಟು ಭಿನ್ನತೆಯನ್ನು ಪಡೆದುಕೊಂಡ ಇನ್ನೂ ಕೆಲವು ವಚನಗಳು ಈ ಸಂಕಲನದಲ್ಲಿರುವದನ್ನು ಗುರುತಿಸಿದ್ದಾರೆ.
  • ಬಹಳಷ್ಟು ವಚನಗಳು ತುಂಬ ಶಿಥಿಲವಾಗಿವೆ. ಹೊಸವೆಂದು ತೋರುವ ವಚನಗಳು ಸಂಕಲನಕಾರನೇ ಸ್ವತಃ ರಚಿಸಿ ಹಾಕಿದನೇನೋ ಎಂಬ ಸಂಶಯಕ್ಕೆ ಎಡೆಮಾಡುತ್ತಿವೆ. ಅಂಥವುಗಳನ್ನು ಇನ್ನಷ್ಟು ಪರೀಕ್ಷೆಗೆ ಗುರಿಪಡಿಸಿ ಸ್ವೀಕರಿಸಬೇಕಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸಂಪಾದಕರು ಈ ಎಲ್ಲ ಅಂಶಗಳನ್ನು ಲಕ್ಷದಲ್ಲಿಟ್ಟು ಶುದ್ದರೂಪದಲ್ಲಿ ಈ ಕೃತಿಯನ್ನು ಹೊರತಂದಿರುವದು ನಿಚ್ಚಳವಾಗಿ ಕಂಡಿದೆ.

ಸಂಪಾದಕರು ಪ್ರತಿಗಳ ಮಾಹಿತಿಯನ್ನು ಹೀಗೆ ನಿರೂಪಿಸಿದ್ದಾರೆ. ಕನ್ನಡ ಅಧ್ಯಯನ ಪೀಠದ 2773/1ನೆಯ ಕ್ರಮಾಂಕದ ಕಾಗದ ಪ್ರತಿ ಇದಕ್ಕೆ ಮೂಲವಾಗಿದೆ. ಪಾಠಾಂತರ ಗುರುತಿಸುವಲ್ಲಿ ಈಗಾಗಲೇ ಪ್ರಕಟವಾದ ವಚನಗ್ರಂಥಗಳ ಸಹಾಯವನ್ನು ಪಡೆದಿದ್ದಾರೆ.

ಮೂಲದಲ್ಲಿ ವಚನ ಶುದ್ದವಾಗಿದ್ದರೆ ಅದನ್ನು ಹಾಗೆ ಉಳಿಸಿಕೊಂಡಿದ್ದಾರೆ. ಅರ್ಥಕ್ಕೆ ಬಾಧೆ ಬರುವಂತಿದ್ದರೆ, ಸರಿಯಾದ ಅರ್ಥ ಹೊರಡದಿದ್ದರೆ ಮುದ್ರಿತ ವಚನಗಳಲ್ಲಿನ ಶುದ್ದಪಾಠವನ್ನು ಎತ್ತಿಕೊಂಡು ಮೇಲಿರಿಸಿ, ಮೂಲದ ಅಶುದ್ದ ಪಾಠವನ್ನು ಅಡಿಯಲ್ಲಿ ಸೇರಿಸಿರುವರು.

ಚೌಕಕಂಸಿನಲ್ಲಿ ಸೇರಿಸಿದ್ದು ಮುದ್ರಿತ ಕೃತಿಯಲ್ಲಿನ ಅವಶ್ಯವೆನಿಸಿದ ಹೆಚ್ಚಿನ ಭಾಗ, ಚೌಕಕಂಸ ಸಹಿತ ಅಂಕಿಗಳನ್ನು ಹಾಕಿ. ಅಡಿಯಲ್ಲಿ ಅದರ ಅಶುದ್ದ ಪಾಠವನ್ನು ಕೊಟ್ಟಿದ್ದಾರೆ. ಮೇಲಿನದು ಊಹಿತಪಾಠ, ಅಡಿಯದು ಮೂಲದಲ್ಲಿದ್ದ ಅಶುದ್ದಪಾಠ. ಈ ಶಾಸ್ತ್ರೀಯ ವಿಧಾನವನ್ನು ಡಾ.ವೀರಣ್ಣ ರಾಜೂರ ಅವರು ಈ ಕೃತಿಯಲ್ಲಿ ಅನುಸರಿಸಿದ್ದಾರೆ.

ಹಸ್ತಪ್ರತಿ ಸ್ವರೂಪವನ್ನು ಸಂಪಾದಕರು ಹೀಗೆ ವಿಶ್ಲೇಷಿಸಿದ್ದಾರೆ. ಉದ್ದ 12 ಇಂಚು, ಅಗಲ 4 ಇಂಚು, ಅಕ್ಷರ ದುಂಡಗೆ; ಬರವಣಿಗೆ ಶುದ್ದ; ಶಕಟರೇಫೆಯ ಬಳಕೆ ಇದೆ. ಈ ಕಟ್ಟಿನಲ್ಲಿ ನಿರಾಲಂಬೋಪನಿಷತ್ತಿನ ಟೀಕೆ ಮತ್ತು ಚಿದೈಶ್ವರ್ಯಚಿದಾಭರಣ ಎಂಬ ಇತರ ಎರಡು ಕೃತಿಗಳಿವೆ ಎಂದು ಗುರುತಿಸಿದ್ದಾರೆ. ಡಾ.ವೀರಣ್ಣ ರಾಜೂರ ಅವರು ಶ್ರಮದಿಂದ ಶಾಸ್ತ್ರೀಯ ನೆಲೆಯಲ್ಲಿ ಈ ಕೃತಿಯನ್ನು ಸುಂದರವಾಗಿ ಸಂಪಾದಿಸಿಕೊಟ್ಟಿರುವದು ಅರ್ಥಪೂರ್ಣವೆನಿಸಿದೆ.


ಡಾ.ವ್ಹಿ.ಬಿ.ಸಣ್ಣಸಕ್ಕರಗೌಡರ
ಉಪನ್ಯಾಸಕರು, ಬಾದಾಮಿ

- Advertisement -
- Advertisement -

Latest News

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಂಬನಿ

ಬೆಂಗಳೂರು- ಶ್ರವಣ ಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಂಬನಿ ಮಿಡಿದಿದ್ದಾರೆ. ಜೈನ್ ಸಮುದಾಯದ ಸಮಗ್ರ...
- Advertisement -

More Articles Like This

- Advertisement -
close
error: Content is protected !!