ಬೀದರ – ದಕ್ಷಿಣ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಹಾಗೂ ಕಾಂಗ್ರೆಸ್ ಮತಗಳನ್ನು ಸೆಳೆಯಲು ಖೇಣಿ ಮನೆತನದ ನಾಯಕ ಸಂಜಯ ಖೇಣಿಯವರನ್ನು ಬಿಜೆಪಿಗೆ ಕರೆತಂದಿದ್ದರಿಂದ ಪಕ್ಷದಲ್ಲಿಯೇ ಭಿನ್ನಮತ ಭುಗಿಲೇಳಲು ಕಾರಣವಾಗಿದೆಯೆನ್ನಲಾಗಿದೆ.
ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಡಾ.ಶೈಲೇಂದ್ರ ಬೆಲ್ಲದಾಳೆ ಎರಡು ಸಲವೂ ಸೋತಿದ್ದರಿಂದ ಖೇಣಿಯವರನ್ನು ಕ್ಷೇತ್ರಕ್ಕೆ ತಂದಿದ್ದು ಬೆಲ್ಲದಾಳೆಯವರಲ್ಲಿ ನಡುಕ ಹಾಗೂ ಅಸಮಾಧಾನ ಹುಟ್ಟಿಸಿದೆ.
ಇತ್ತ ಜಿಲ್ಲೆಯಲ್ಲಿ ಬಸವಕಲ್ಯಾಣ ಉಪ ಚುನಾವಣೆ ಸಂಬಂಧ ನಾಯಕರ ಎದುರಿನಲ್ಲಿಯೇ ಕಾರ್ಯಕರ್ತರು ಅಸಮಾಧಾನ ತೋಡಿಕೊಂಡಿದ್ದು ಒಂದು ಕಡೆಯಾದರೆ, ಹುಮನಾಬಾದ ಕ್ಷೇತ್ರದ ಕಾಂಗ್ರೆಸ್ ಪಕ್ಷವನ್ನು ಒಡೆಯಲು ಪಾಟೀಲ ಮನೆತನದ ಯುವನಾಯಕ ಸಿದ್ದು ಪಾಟೀಲರನ್ನೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದು ಇತ್ತ ಸಂಜಯ ಖೇಣಿಯವರನ್ನು ಘರ್ ವಾಪಸಿ ಮಾಡಿಕೊಂಡಿದ್ದು ಪಕ್ಷದಲ್ಲಿ ಗೊಂದಲ ಹುಟ್ಟಿಸಿದೆ.
ಹೀಗೆ ಒಡೆದ ಮನೆಯಾಗಿರುವ ಬಿಜೆಪಿ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ವಿರುದ್ಧ ಸೆಡ್ಡು ಹೊಡೆಯುವುದೋ ಅಥವಾ ಜನಪ್ರಿಯತೆ ಕಳೆದುಕೊಳ್ಳುವುದೋ ಕಾದು ನೋಡಬೇಕಾಗಿದೆ.
ವರದಿ : ನಂದಕುಮಾರ ಕರಂಜೆ
Times of ಕರ್ನಾಟಕ, ಬೀದರ