ಬೀದರ – ಜಿಲ್ಲೆಯಲ್ಲಿ ಖೂಬಾ ಹಠಾವ್ ಬೀದರ ಬಚಾವ್ ಎಂಬ ಅಭಿಯಾನ ಹಮ್ಮಿಕೊಳ್ಳುತ್ತೇವೆ ಎಂದು ಶಾಸಕ ಪ್ರಭು ಚವ್ಹಾಣ ಹೇಳಿದರು.
ಔರಾದ್ ನಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು ಕೇಂದ್ರ ಸಚಿವ ಭಗವಂತ ಖೂಬಾ ಅವರ ವಿರುದ್ಧ ಕಿಡಿ ಕಾರಿದರು.
ನನ್ನ ಕ್ಷೇತ್ರ ಔರಾದ್ ನಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತ ಆಗಲು ಖೂಬಾ ಕಾರಣ. ಆದ್ದರಿಂದ ಲೋಕಸಭೆ ಚುನಾವಣೆಗೆ ಅವರ ಬದಲಿಗೆ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಬೇಕು ಎಂದು ನಾನು ಪಕ್ಷದ ಹಿರಿಯರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ನಮಗೆ ಪಕ್ಷ ನಿಷ್ಠೆಯ ಬಗ್ಗೆ ಮಾತನಾಡುವ ಖೂಬಾ ಕಾಂಗ್ರೆಸ್ ನಿಂದ ಬಂದವರು. ನಾನು ಮನೆಯಿಂದ ಬಿಜೆಪಿ ಪಕ್ಷಕ್ಕೆ ಬಂದಿದ್ದೇನೆ, ಬಿಜೆಪಿ ಪಕ್ಷದಲ್ಲೇ ಇದ್ದು ಸಾಯುತ್ತೇನೆ ಎಂದರು.
ಇದರಿಂದ ಬೀದರ ಜಿಲ್ಲೆಯಲ್ಲಿ ಒಂದೇ ಪಕ್ಷದ ಇಬ್ಬರು ನಾಯಕರ ಜಗಳ ಹಾವು ಮುಂಗುಸಿ ಜಗಳ ದಂತೆ ಆಗಿದ್ದು ಎಲ್ಲಿಗೆ ತಲುಪುತ್ತದೆಯೋ ಎಂಬ ಕುತೂಹಲ ಜಿಲ್ಲೆಯ ಜನತೆಯಲ್ಲಿ ಗರಿಗೆದರಿದೆ.
ತಮ್ಮ ವಾಗ್ದಾಳಿ ಮುಂದುವರೆಸಿದ ಚವ್ಹಾಣ ಅವರು, ಭಗವಂತ ಖೂಬಾ ರಾವಣ ಇದ್ದ ಹಾಗೆ, ಅವರಿಗೆ ಅಹಂಕಾರ ಹೆಚ್ಚಾಗಿದೆ. ಔರಾದ ಜನತೆಯ ಆರಾಧ್ಯ ದೈವ ಅಮರೇಶ್ವರ ದೇಗುಲದಲ್ಲಿ ಕುಳಿತು ಸುಳ್ಳು ಹೇಳುತ್ತಿದ್ದಾರೆ. ಯಾರಿಗೂ ಪರಿಚಯವೇ ಇಲ್ಲದೇ ಖೂಬಾರನ್ನು ಪರಿಚಯಿಸಿದ್ದೇ ನಾನು ಎಂದರು.
ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ೨೦೦ ಕೋಟಿ ರೂ. ಕೇಸ್ ಹಾಕಲು ತಯಾರಿ ನಡೆಸಿರುವುದಾಗಿ ಹೇಳಿದ ಪ್ರಭು ಚವ್ಹಾಣ್ ಹೈಕಮಾಂಡ ಒಪ್ಪಿಗೆ ಸೂಚಿಸಿದರೆ ಖೂಬಾ ವಿರುದ್ಧ ಕೇಸ್ ದಾಖಲು ಮಾಡುತ್ತೇನೆ ಎಂದರು
ನಾನು ಪಕ್ಷಕ್ಕೆ ಎಷ್ಟು ನಿಷ್ಠೆಯಿಂದ ಇದ್ದೇನೆ ಎಂಬುದು ಕ್ಷೇತ್ರದ ಜನರಿಗೆ ಗೊತ್ತಿದೆ, ಬಿಜೆಪಿ ನಾಯಕರಿಗೆ ಗೊತ್ತಿದೆ. ಲೋಕಸಭೆಗೆ ಟಿಕೆಟ್ ಕೊಡಿಸುವುದಲ್ಲದೇ ತನು, ಮನ, ಧನದಿಂದ ಖೂಬಾ ಗೆಲುವಿಗಾಗಿ ಕೆಲಸ ಮಾಡಿದ್ದೇನೆ ಆದರೆ ಅವರು ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಜೊತೆಗೆ ಸೇರಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಪ್ರಯತ್ನಿಸಿದ್ದಾರೆ. ಈಗ ನಾವೇ ಪಕ್ಷ ವಿರೋಧ ಕೆಲಸ ಮಾಡಿದ್ದೇವೆಂದು ಹೇಳುತ್ತಾರೆ. ಅವರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಭೆ ನಡೆಸಿದಾರೆ ನಮ್ಮ ಬಳಿ ದಾಖಲೆ ಇದೆ ಎಂದು ಆರೋಪಿಸಿದ ಚವ್ಹಾಣ, ಇವತ್ತು ಎಲ್ಲಾ ಕ್ಷೇತ್ರದಲ್ಲೂ ಖೂಬಾ ಪರಿವಾರವರೇ ಗುತ್ತಿಗೆದಾರರು ಇದ್ದಾರೆ. ಅವರ ಕುಟುಂಬ ವರ್ಗದವರಿಗೆ ಎಲ್ಲಾ ಟೆಂಡರ್ ಗಳನ್ನು ಕೊಡುತ್ತಾರೆ. ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಬೆಳೆಸಿಲ್ಲ, ಯಾವುದೇ ಕ್ಷೇತ್ರದಲ್ಲಿ ಖೂಬಾ ಬೆಂಬಲಿತ ಕಾರ್ಯಕರ್ತರಿಲ್ಲ ಕೆಲವೆಡೆ ಕಾಂಗ್ರೆಸ್ ಕಾರ್ಯಕರ್ತರಿಗೆ ಕೆಲಸ ಕೊಟ್ಟು ಅವರನ್ನು ಬೆಳೆಸಿದ್ದಾರೆ. ಅವರು ನಮಗೆ ಕೊಟ್ಟಿರುವ ಕಿರುಕುಳ, ಜಿಲ್ಲೆಯಲ್ಲಿ ಮಾಡಿರುವ ಪಕ್ಷ ವಿರೋಧಿ ಕೆಲಸದ ಬಗ್ಗೆ ದಾಖಲೆ ಸಿದ್ದವಾಗಿದೆ. ಖೂಬಾ ರಿಂದ ನನಗೆ ಜೀವ ಬೆದರಿಕೆ ಇರುವ ಬಗ್ಗೆ ಎಸ್ಪಿಗೆ ದೂರು ಕೊಟ್ಟಿದ್ದೇನೆ. ಕೆಲವು ಗುಂಡಾಗಳನ್ನ ಜೊತೆ ಇಟ್ಟುಕೊಂಡು ನನಗೆ ಬೆದರಿಸಲು ಹೊರಟಿದ್ದಾರೆ ಎಂದು ಶಾಸಕ ಪ್ರಭು ಚವ್ಹಾಣ ಹೇಳಿದರು.
ವರದಿ: ನಂದಕುಮಾರ ಕರಂಜೆ, ಬೀದರ