ಹೆಲೆನ್ ಆಡಮ್ಸ್ ಕೆಲ್ಲರ್ ಪ್ರಖ್ಯಾತ ಬರಹಗಾರ್ತಿ, ರಾಜಕೀಯ ಕಾರ್ಯಕರ್ತೆ, ಉಪನ್ಯಾಸಕಿ, ಸಾಮಾಜಿಕ ಕಾರ್ಯಕರ್ತೆ, ಅಂಗವಿಕಲರು ಮತ್ತು ಶೋಷಿತ ಜನರ ಏಳಿಗೆಗಾಗಿ ಹಗಲಿರುಳೂ ಶ್ರಮಿಸಿದ ಮಾನವತಾವಾದಿ. ಇನ್ನೂ ಕೇವಲ ಹತ್ತೊಂಬತ್ತು ತಿಂಗಳ ಹಸುಳೆಯಾಗಿದ್ದಾಗಲೇ ಅವರಿಗೆ ಕುರುಡುತನ ಮತ್ತು ಕಿವುಡುತನ ಪ್ರಾಪ್ತವಾಯಿತು. ಹೀಗೆ ಯಾವುದೇ ಬದುಕಿನ ಅಡ್ಡತಡೆಗಳಿದ್ದರೂ ಮನುಷ್ಯನಿಗೆ ಸಾಧ್ಯವಿಲ್ಲದ್ದು ಯಾವುದೂ ಇಲ್ಲ ಎಂದು ತಮ್ಮ ಬದುಕಿನಿಂದ ನಿರೂಪಿಸಿದ ಮಹಾನ್ ಚೇತನ ಹೆಲೆನ್ ಕೆಲ್ಲರ್.
ಹೆಲೆನ್ ಕೆಲ್ಲರ್ ಹುಟ್ಟಿದ್ದು 1880ರ ಜೂನ್ 27ರಂದು ಜನಿಸಿದರು.
“ಬದುಕೆಂಬುದಕ್ಕೆ ಅರ್ಥ ಇಷ್ಟೇ, ಒಂದೋ ಅದು ಧೈರ್ಯದಿಂದ ಎದುರಿಸಬೇಕಾದ ಸವಾಲು, ಇನ್ನೊಂದೋ ಅದು ಏನೂ ಅಲ್ಲ. ನಮಗೆ ಯಾವುದು ಬೇಕೋ ಅದನ್ನು ಆರಿಸಿಕೊಳ್ಳಬಹುದು.” ಆಕೆಯ ಈ ಉದ್ಘೋಷ ಬಹಳಷ್ಟನ್ನು ಹೇಳುತ್ತದೆ.
ಹೆಲೆನ್ ಆಡಮ್ಸ್ ಕೆಲ್ಲರ್ ಕಿವುಡು ಮತ್ತು ಅಂಧವ್ಯಕ್ತಿಯಾಗಿ ಕಲಾಪದವಿ ಪಡೆದ ಪ್ರಪ್ರಥಮರು. ಆನ್ ಸುಲ್ಲಿವನ್ ಮ್ಯಾಸಿ ಎಂಬಾಕೆ ಯಾವುದೇ ಉಪಯೋಗಕ್ಕೆ ಬಾರದೆ ಹೋಗಬಹುದಾಗಿದ್ದ ಈ ಅಂಧ ಮತ್ತು ಕಿವುಡು ಜೀವಿಯನ್ನು ವಿಶ್ವದ ಅದ್ಭುತ ಪ್ರತಿಭೆಯನ್ನಾಗಿಸುವಲ್ಲಿ ಮಾಡಿದ ಯಶಸ್ಸು ವಿಶ್ವ ಚರಿತ್ರೆಗಳಲ್ಲಿ ಮಹತ್ವಪೂರ್ಣದ್ದೆನಿಸಿದೆ. ಈ ಅದ್ಭುತ ಸಾಧನೆಯು ಕಥಾನಕವಾಗಿ ‘ದಿ ಮಿರಾಕಲ್ ವರ್ಕರ್’ ಎಂಬ ರಂಗ ಕೃತಿಯಾಗಿ ಮತ್ತು ಚಲನಚಿತ್ರವಾಗಿಯೂ ಪ್ರಸಿದ್ಧಿ ಪಡೆದಿದೆ.
ವಿದ್ವತ್ಪೂರ್ಣ ಬರಹಗಾರ್ತಿ, ಉತ್ತಮ ಪರಿವ್ರಾಜಕಿ, ಯುದ್ಧವಿರೋಧಿ; ಸ್ತ್ರೀ ಶೋಷಣೆ, ಕಾರ್ಮಿಕ ಶೋಷಣೆಗಳ ವಿರುದ್ಧ ಅಪ್ರತಿಮ ಹೋರಾಟಗಾರ್ತಿ, ಸಮಾಜದಲ್ಲಿ ಬದುಕಿನ ಸಮಾನತೆಯ ಪ್ರತಿಪಾದಕಿ, ದೃಷ್ಟಿಭಾಗ್ಯವಿಲ್ಲದ ತನ್ನಂತೆ ದೌರ್ಭಾಗ್ಯರಿಗಾಗಿ ಅಪರಿಮಿತ ಪರಿಶ್ರಮಿ …. ಇವೆಲ್ಲವವೂ ಆಗಿ ಹೆಲೆನ್ ಕೆಲ್ಲರ್ ಅವರು ನಡೆಸಿದ ಜೀವನ ಮಹತ್ವಪೂರ್ಣವಾದದ್ದು.
ಹೆಲೆನ್ ಆಡಮ್ಸ್ ಕೆಲ್ಲರ್ ಅವರು ಜೂನ್ 27, 1880ರ ವರ್ಷದಲ್ಲಿ ಅಮೆರಿಕದ ಅಲಬಾಮಾದ ಟುಸ್ಕುಂಬಿಯಾ ಎಂಬಲ್ಲಿ ಜನಿಸಿದರು. ಅವರ ತಂದೆ ಅರ್ಥರ್ ಎಚ್. ಕೆಲ್ಲರ್ ಕೆಲಕಾಲ ಸೈನ್ಯದ ಅಧಿಕಾರಿಯಾಗಿಯೂ, ಪತ್ರಕರ್ತರಾಗಿಯೂ ಕೆಲಸ ನಿರ್ವಹಿಸಿದ್ದರು. ಅವರ ತಾಯಿ ಕೇಟ್ ಆಡಮ್ಸ್. ಹೆಲೆನ್ ಕೆಲ್ಲರ್ ಹುಟ್ಟಿದ್ದಾಗ ಕಣ್ಣು ಮತ್ತು ಕಿವಿಗಳು ಸ್ವಾಭಾವಿಕವಾಗಿ ಚೆನ್ನಾಗಿಯೇ ಇದ್ದವು. ಮಗುವಿಗೆ ಹತ್ತೊಂಬತ್ತು ತಿಂಗಳಾಗಿದ್ದಾಗ ಸ್ಕಾರ್ಲೆಟ್ ಫೀವರ್ ಅಥವಾ ಮೆನಿಂಗಿಟಿಸ್ ಕಾಯಿಲೆಯ ಪರಿಣಾಮದಿಂದಾಗಿ ಕುರುಡು ಮತ್ತು ಕಿವುಡುತನಗಳು ಒಮ್ಮೆಲೆ ಆವರಿಸಿದವು. ಆ ಸಮಯದಲ್ಲಿ ಆಕೆ ಅವರ ಮನೆಯಲ್ಲಿ ಅಡುಗೆ ಕೆಲಸದವಳ ಮಗಳಾಗಿದ್ದ ಮಾರ್ಥಾ ವಾಷಿಂಗ್ಟನ್ ಎಂಬ ಆರು ವರ್ಷದ ಹುಡುಗಿಯೊಡನೆ ಕೆಲವೊಂದು ಸಂಜ್ಞೆಗಳ ಮೂಲಕ ಸಂಭಾಷಿಸುತ್ತಿದ್ದಳು. ಏಳು ವರ್ಷದವಳಾದಾಗ ಹೆಲೆನ್ ಕೆಲ್ಲರ್ ತನ್ನ ಕುಟುಂಬದವರೊಡನೆ ಸುಮಾರು 60 ರೀತಿಯ ಸಂಜ್ಞೆಗಳಲ್ಲಿ ಸಂಭಾಷಿಸುತ್ತಿದ್ದಳು.
1886ರ ವರ್ಷದಲ್ಲಿ ಕೆಲ್ಲರ್ ಅವರ ತಾಯಿ, ಚಾರ್ಲ್ಸ್ ಡಿಕನ್ಸ್ ಅವರ ‘ಅಮೆರಿಕನ್ ನೋಟ್ಸ್’ ಬರಹದಲ್ಲಿ ಉಲ್ಲೇಖಿತಗೊಂಡಿರುವ ಲಾರಾ ಬ್ರಿಡ್ಜ್ ಮಾನ್ ಎಂಬಾಕೆಯ ಕುರಿತು ಉತ್ತೇಜಿತಗೊಂಡು ತಮ್ಮ ಮಗಳನ್ನು ಜೆ ಜುಲಿಯನ್ ಚಿಸೋಲ್ಮ್ ಎಂಬ ವೈದ್ಯರ ಬಳಿಗೆ ಕಳುಹಿಸಿಕೊಟ್ಟರು. ಚಿಸೋಲ್ಮ್ ಅವರು ಕೆಲ್ಲರಳನ್ನು ಅಂದಿನ ದಿನಗಳಲ್ಲಿ ಕಿವುಡು ಮಕ್ಕಳೊಡನೆ ಕಾರ್ಯ ನಿರ್ವಹಿಸುತ್ತಿದ್ದ ಅಲೆಗ್ಸಾಂಡರ್ ಗ್ರಾಹಂ ಬೆಲ್ ಅವರ ಬಳಿ ಹೋಗಲು ತಿಳಿಸಿದರು. ಬೆಲ್ ಅವರು ಪೆರ್ಕಿನ್ಸ್ ಇನ್ಸ್ಟಿಟ್ಯೂಟ್ ಫಾರ್ ದಿ ಬ್ಲೈಂಡ್ ಎಂಬಲ್ಲಿಗೆ ಮಾರ್ಗದರ್ಶನ ಮಾಡಿದರು. ಅಲ್ಲಿನ ನಿರ್ದೇಶಕರಾದ ಮೈಕೇಲ್ ಆಂಗಾನಾಸ್ ಅವರು ತಮ್ಮ ಹಳೆಯ ವಿದ್ಯಾರ್ಥಿಯಾಗಿದ್ದ ಇಪ್ಪತ್ತು ವರ್ಷದ ಸ್ವಯಂ ಕಿವುಡುತನ ಅನುಭವಿಸುತ್ತಿದ್ದ ಆನ್ ಸುಲ್ಲಿವನ್ ಅವರನ್ನು ಹೆಲೆನ್ ಕೆಲ್ಲರ್ ಅವರಿಗೆ ಮಾರ್ಗದರ್ಶನ ಮಾಡಬೇಕೆಂದು ಕೇಳಿಕೊಂಡರು. ಇದು ಆನ್ ಸುಲ್ಲಿವನ್ ಮತ್ತು ಹೆಲೆನ್ ಕೆಲ್ಲರ್ ಅವರ 49 ವರ್ಷಗಳ ಸುದೀರ್ಘ ಪಯಣಕ್ಕೆ ನಾಂದಿ ಹಾಡಿತು.
ಆನ್ ಸುಲ್ಲಿವನ್ ಅವರು ಕೆಲ್ಲರ್ ಅವರ ಮನೆಗೆ ಮಾರ್ಚ್ 1887ರಲ್ಲಿ ಆಗಮಿಸಿದರು. ಹಾಗೆ ಬರುವಾಗ ಅವರು ಹೆಲೆನ್ ಕೆಲ್ಲರ್ ಅವರಿಗೆ ಒಂದು ಬೊಂಬೆಯನ್ನು ಉಡುಗೊರೆಯಾಗಿ ತಂದಿದ್ದರು. ಅವರು ಹೆಲೆನ್ ಕೆಲ್ಲರ್ ಕೈಯಲ್ಲಿ ಬೊಂಬೆಯನ್ನಿಟ್ಟು ತನ್ನ ಕೈ ಸ್ಪರ್ಶದ ಮೂಲಕ ‘d-o-l-l‘ ಪದದಿಂದ ತಮ್ಮ ಶಿಕ್ಷಣವನ್ನು ಪ್ರಾರಂಭಿಸಿದರಂತೆ. ಕಣ್ಣು ಮತ್ತು ಕಿವಿ ಎರಡೂ ಕೆಲಸ ಮಾಡದಿದ್ದ ಕೆಲ್ಲರ್ ಅವರಿಗೆ ಪ್ರಾರಂಭದಲ್ಲಿ ಪ್ರತಿಯೊಂದು ವಸ್ತುವಿಗೂ ಪ್ರತ್ಯೇಕ ಹೆಸರುಗಳಿವೆ ಎಂದು ಅರ್ಥೈಸಿಕೊಂಡು ಅದನ್ನು ಗುರುತಿಸುವ ವಿಚಾರದಲ್ಲಿ ಉಂಟಾಗುತ್ತಿದ್ದ ಅಸಹಾಯಕತೆಯಿಂದ ತುಂಬಾ ಜಿಗುಪ್ಸೆಯಾಗುತ್ತಿತ್ತು. ಆನ್ ಸುಲ್ಲಿವನ್ ಅವರು ‘mug’ ಎಂಬುದನ್ನು ಹೇಳಿಕೊಡುವಾಗ ಕೆಲ್ಲರ್ ಎಷ್ಟು ಉದ್ವಿಗ್ನಗೊಂಡಿದ್ದಳೆಂದರೆ ತನ್ನ ಬೊಂಬೆಯನ್ನೇ ಮುರಿದುಬಿಟ್ಟಳಂತೆ. ಆದರೆ ಕೆಲ್ಲರ್ ಮುಂದಿನ ಒಂದು ತಿಂಗಳಲ್ಲಿ ಮಹತ್ವದ ಪಾಠವನ್ನು ಅರ್ಥೈಸಿಕೊಂಡಿದ್ದಳು. ಒಂದು ಕೈಯಲ್ಲಿ ತನ್ನ ಅಧ್ಯಾಪಕಿ ಆನ್, ತನ್ನ ಕೈಯನ್ನು ಸ್ಪರ್ಶಿಸುತ್ತಾ ಮತ್ತೊಂದು ಕೈಯ ಮೇಲೆ ನೀರು ಹರಿಯುವಂತೆ ಮಾಡಿದಾಗ ಅದು ನೀರು ಎಂಬ ಅನುಭಾವ ಉಂಟಾಯಿತು. ಮುಂದೆ ಹೆಲೆನ್ ಕೆಲ್ಲರ್ ಸ್ವಯಂ ತಾನೇ ತನ್ನ ಗುರು ಆನ್ ಸುಲ್ಲಿವನ್ ಅವರನ್ನು ತನಗೆ ಗೊತ್ತಿರುವ ಪ್ರತಿಯೊಂದು ವಸ್ತುವನ್ನೂ ತನಗರ್ಥವಾಗುವಂತೆ ತಿಳಿಸಿಕೊಡುವಂತೆ ದುಂಬಾಲುಬೀಳುತ್ತಾ ಸುಸ್ತು ಮಾಡಿಸಿಬಿಡುತ್ತಿದ್ದಳು.
1888ರ ವರ್ಷದಿಂದ ಪ್ರಾರಂಭಗೊಂಡಂತೆ ಹೆಲೆನ್ ಕೆಲ್ಲರ್ ಪರ್ಕಿನ್ಸ್ ಇನ್ಸ್ಟಿಟ್ಯೂಟ್ ಫಾರ್ ದಿ ಬ್ಲೈಂಡ್ ಸೇರಿದಳು. 1894ರಲ್ಲಿ ಹೆಲೆನ್ ಕೆಲ್ಲರ್ ಮತ್ತು ಆನ್ ಸುಲ್ಲಿವನ್ ನ್ಯೂಯಾರ್ಕಿನ ರೈಟ್ ಹುಮಾಸನ್ ಸ್ಕೂಲ್ ಫಾರ್ ದಿ ಡೆಫ್ ಸೇರಿದರು. 1896ರಲ್ಲಿ ಹೆಲೆನ್ ಕೆಲ್ಲರ್ ದಿ ಕೇಂಬ್ರಿಡ್ಜ್ ಸ್ಕೂಲ್ ಫಾರ್ ಯಂಗ್ ಲೇಡೀಸ್ ಶಾಲೆಯಲ್ಲಿ ಪ್ರವೇಶ ಪಡೆದರು. 1900ರ ವರ್ಷದಲ್ಲಿ ಅವರು ರಾಡ್ ಕ್ಲಿಫ್ ಕಾಲೇಜಿಗೆ ಪ್ರವೇಶ ಪಡೆದು 1904ರ ವರ್ಷದಲ್ಲಿ ಕಲಾ ವಿಭಾಗದಲ್ಲಿ ಪದವಿ ಪಡೆದ ಪ್ರಥಮ ಕಿವುಡು ಅಂಧ ವಿದ್ಯಾರ್ಥಿ ಎಂಬ ಕೀರ್ತಿಗೆ ಪಾತ್ರರಾದರು. ಈ ಸಮಯದಲ್ಲಿ ಹೆಲೆನ್ ಕೆಲರ್ ಅವರ ಅಭಿಮಾನಿಯಾಗಿದ್ದ ಪ್ರಖ್ಯಾತ ಬರಹಗಾರ ಮಾರ್ಕ್ ಟ್ವೈನ್ ಅವರು ಅವರನ್ನು ಒಬ್ಬ ಶ್ರೀಮಂತ ದಂಪತಿಗಳಿಗೆ ಪರಿಚಯಿಸಿದ್ದು ಆ ದಂಪತಿಗಳು ಹೆಲೆನ್ ಕೆಲ್ಲರ್ ಅವರ ಶಿಕ್ಷಣದ ಖರ್ಚನ್ನು ವಹಿಸಿಕೊಂಡಿದ್ದರು. ಈ ದಿನಗಳಲ್ಲಿ ಹೆಲೆನ್ ಕೆಲ್ಲರ್ ಅವರು ಆಸ್ಟ್ರಿಯನ್ ತತ್ವಜ್ಞಾನಿಯಾಗಿದ್ದ ಪೆಡಗಾಗ್ ವಿಲ್ಹೆಲ್ಮ್ ಜೆರುಸಲೇಮ್ ಅವರೊಂದಿಗೆ ನಿರಂತರವಾಗಿ ಪತ್ರವ್ಯವಹಾರ ನಡೆಸುತ್ತಿದ್ದು, ಈ ಮಹನೀಯರು ಹೆಲೆನ್ ಕೆಲ್ಲರ್ ಅವರ ಬರಹದಲ್ಲಿರುವ ಅಪಾರ ಶಕ್ತಿಯನ್ನು ಗುರುತಿಸಿದವರಲ್ಲಿ ಮೊದಲಿಗರಾಗಿದ್ದಾರೆ.
ಇತರರೊಂದಿಗೂ ಸಹಜವಾಗಿ ಸಂಭಾಷಿಸುವುದನ್ನು ಅಭ್ಯಾಸ ಮಾಡುವುದರ ಕುರಿತು ಅಪಾರ ಶ್ರದ್ಧೆ ಹೊಂದಿದ್ದ ಹೆಲೆನ್ ಕೆಲ್ಲರ್, ಮಾತನಾಡುವುದನ್ನು ಶ್ರಮವಹಿಸಿ ಕಲಿತು ತಮ್ಮ ಹೆಚ್ಚಿನ ಸಮಯವನ್ನು ಬಾಷಣ ಮಾಡುವುದಕ್ಕಾಗಿ ಮತ್ತು ಉಪನ್ಯಾಸ ಮಾಡುವುದಕ್ಕೆ ವಿನಿಯೋಗಿಸಿದರು. ಮತ್ತೊಬ್ಬರು ಮಾತನಾಡುವುದನ್ನು ಅವರ ತುಟಿಗಳ ಚಲನೆಯ ಮೇಲೆ ತನ್ನ ಕೈ ಸ್ಪರ್ಶದ ಮೂಲಕ ಅವರು ಗ್ರಹಿಸುತ್ತಿದ್ದರು. ಅವರ ಕೈ ಸ್ಪರ್ಶವು ಅತ್ಯಂತ ನವುರಾಗಿಯೂ ಸೂಕ್ಷ್ಮಗ್ರಾಹಿಯೂ ಆಗಿತ್ತು. ಬ್ರೈಲ್ ಲಿಪಿಯನ್ನು ಉಪಯೋಗಿಸುವುದರಲ್ಲಿ ಮತ್ತು ಕೈಯನ್ನು ಉಪಯೋಗಿಸುವ ಸಂಜ್ಞೆ ಭಾಷೆಯಲ್ಲಿ ಅವರು ಪ್ರಾವೀಣ್ಯತೆಯನ್ನು ಸಾಧಿಸಿದ್ದರು. ಸೋಲೆನರ್ ಕ್ವಾರ್ಟೆಟ್ ಎಂಬುವರ ಸಹಾಯದ ಮೂಲಕ ಮೇಜಿನ ಮೇಲಿನ ಹಿತಸ್ಪರ್ಶದ ಮೂಲಕ ಅವರು ಹತ್ತಿರದಲ್ಲಿ ನುಡಿಸುವ ಸಂಗೀತವನ್ನು ಕೂಡಾ ಆಸ್ವಾದಿಸುವುದನ್ನು ಅಭ್ಯಾಸ ಮಾಡಿದ್ದರು.
ಆನ್ ಸುಲ್ಲಿವನ್ ಅವರು ಹೆಲೆನ್ ಕೆಲ್ಲರ್ ಅವರ ಕಲಿಕೆಯ ನಂತರದ ದಿನಗಳಲ್ಲೂ ಜೊತೆಗಾತಿಯಾಗಿ ಅವರೊಂದಿಗಿದ್ದರು. 1905ರ ವರ್ಷದಲ್ಲಿ ಆನ್ ಅವರು ಜಾನ್ ಮ್ಯಾಸಿ ಎಂಬುವರನ್ನು ವಿವಾಹವಾದರು. 1914ರ ವೇಳೆಗೆ ಅವರ ಆರೋಗ್ಯ ಕ್ಷೀಣಿಸತೊಡಗಿತ್ತು. ಪಾಲಿ ಥಾಮ್ಸನ್ ಎಂಬುವರನ್ನು ಹೆಲೆನ್ ಕೆಲರ್ ಅವರ ಮನೆಯ ಕೆಲಸಕ್ಕಾಗಿ ನೇಮಿಸಲಾಗಿತ್ತು. ಪಾಲಿ ಥಾಮ್ಸನ್ ಅವರಿಗೆ ಕಿವುಡು ಮತ್ತು ಕುರುಡರ ಜೊತೆ ಬದುಕುವುದಕ್ಕೆ ಯಾವುದೇ ಅನುಭವ ಇಲ್ಲದಿದ್ದಾಗ್ಯೂ ಕ್ರಮೇಣದಲ್ಲಿ ಅವರು ಹೆಲೆನ್ ಕೆಲ್ಲರ್ ಅವರ ಕಾರ್ಯದರ್ಶಿಯೂ ಆಗಿ ಬಹಳ ವರ್ಷಗಳ ಕಾಲದವರೆಗೆ ಅವರ ಒಡನಾಡಿಯಾಗಿದ್ದರು.
ಕೆಲ್ಲರ್ ಅವರು ಮುಂದೆ ಆನ್ ಕುಟುಂಬದೊಂದಿಗೆ ಕ್ವೀನ್ಸ್ ಪ್ರದೇಶದ ಫಾರೆಸ್ಟ್ ಹಿಲ್ಸ್ ಎಂಬಲ್ಲಿಗೆ ವಾಸ್ತವ್ಯ ಬದಲಾಯಿಸಿದರು. ಅದು ಮುಂದೆ ಅಮೆರಿಕನ್ ಫೌಂಡೆಶನ್ ಫಾರ್ ದಿ ಬ್ಲೈಂಡ್ ಚಟುವಟಿಕೆಗಳಿಗೆ ಬುನಾದಿಯಾದ ಕೇಂದ್ರವಾಯಿತು. 1936ರ ವರ್ಷದಲ್ಲಿ ಆನ್ ಸುಲ್ಲಿವನ್ ಅವರು ನಿಧನರಾದರು. ಕೆಲ್ಲರ್ ಅವರು ಪಾಲಿ ಥಾಮ್ಸನ್ ಜೊತೆ ಕನ್ನೆಕ್ಟಿಕಟ್ ಪ್ರದೇಶಕ್ಕೆ ಬಂದರು. ಅವರು ವಿಶ್ವದಾದ್ಯಂತ ಸಂಚರಿಸಿ ಕುರುಡರ ಹಿತರಕ್ಷಣೆಗಾಗಿ ನಿಧಿ ಸಂಗ್ರಹಿಸಿದರು. 1960ರ ವರ್ಷದಲ್ಲಿ ಥಾಮ್ಸನ್ ಅವರು ನಿಧನರಾದರು. ಮುಂದೆ ವಿನ್ನಿ ಕೊರ್ಬಾಲಿ ಎಂಬ ನರ್ಸ್ ಒಬ್ಬರು ಕೆಲ್ಲರ್ ಅವರ ಉಳಿದ ಜೀವನ ಪೂರ್ತಿಯವರೆಗೆ ಸಂಗಾತಿಯಾಗಿದ್ದರು.
ಹೆಲೆನ್ ಕೆಲ್ಲರ್ ಅವರು ವಿಶ್ವ ಪ್ರಖ್ಯಾತ ಭಾಷಣಕಾರರೂ ಬರಹಗಾರ್ತಿಯೂ ಆದರು. ವಿವಿಧ ಕಾರಣಗಳಿಂದ ಅಂಗವಿಹೀನತೆಗೊಳಗಾಗಿದ್ದವರ ಧ್ವನಿ ಎಂದು ಅವರನ್ನು ಇಡೀ ವಿಶ್ವ ಸ್ಮರಿಸುತ್ತಿದೆ. ರಾಜಕೀಯವಾಗಿ ಬದಲಾವಣೆಗಳನ್ನು ಬಯಸುವ ಸಮಾಜವಾದಿಯಾಗಿದ್ದ ಅವರು ವುಡ್ರೋ ವಿಲ್ಸನ್ ಅವರ ನೀತಿಗಳನ್ನು ವಿರೋಧಿಸಿದ್ದರು. ಸಮಾಜದಲ್ಲಿ ಜನನ ನಿಯಂತ್ರಣ ಕ್ರಮಗಳನ್ನು ಅವರು ಬೆಂಬಲಿಸಿದರು. 1915ರ ವರ್ಷದಲ್ಲಿ ಹೆಲೆನ್ ಕೆಲ್ಲರ್ ಮತ್ತು ಜಾರ್ಜ್ ಕೆಸ್ಲರ್ ಅವರು ಜೊತೆಗೂಡಿ ಹೆಲೆನ್ ಕೆಲ್ಲರ್ ಇಂಟರ್ ನ್ಯಾಷನಲ್ ಸಂಸ್ಥೆಯನ್ನು ಹುಟ್ಟು ಹಾಕಿದರು. ಈ ಸಂಸ್ಥೆ ದೃಷ್ಟಿ, ಆರೋಗ್ಯ ಮತ್ತು ಪೌಷ್ಟಿಕತೆಯ ಕುರಿತಾದ ಸಂಶೋಧನೆಗಳಿಗೆ ಮುಡಿಪಾಗಿತ್ತು. 1920ರ ವರ್ಷದಲ್ಲಿ ಅವರು ಅಮೆರಿಕನ್ ಸಿವಿಲ್ ಲಿಬರ್ಟಿಸ್ ಯೂನಿಯನ್ ಎಂಬ ಸಂಘಟನೆ ರೂಪುಗೊಳ್ಳಲು ಸಹಾಯ ಮಾಡಿದರು. ಕೆಲ್ಲರ್ ಅವರು ನಲವತ್ತಕ್ಕೂ ಹೆಚ್ಚು ರಾಷ್ಟ್ರಗಳಿಗೆ ಭೇಟಿ ಕೊಟ್ಟಿದ್ದರು. ಜಪಾನ್ ದೇಶಕ್ಕೆ ಹಲವಾರು ಬಾರಿ ಭೇಟಿ ಕೊಟ್ಟಿದ್ದ ಅವರು ಜಪಾನಿಯರಿಗೆ ತುಂಬಾ ಪ್ರೀತಿಪಾತ್ರರಾಗಿದ್ದರು. ಅಮೆರಿಕದ ಅಧ್ಯಕ್ಷರುಗಳಾದ ಗ್ರೋವರ್ ಕ್ಲೆವರ್ ಲ್ಯಾಂಡ್ ಅವರಿಂದ ಮೊದಲ್ಗೊಂಡು ಲಿಂಡನ್ ಬಿ ಜಾನ್ಸನ್ ವರೆಗೆ ಅವರು ಎಲ್ಲ ಅಧ್ಯಕ್ಷರುಗಳನ್ನೂ ಭೇಟಿ ಮಾಡಿದ್ದರು. ಅಲೆಗ್ಸಾಂಡರ್ ಗ್ರಾಹಂ ಬೆಲ್, ಚಾರ್ಲಿ ಚಾಪ್ಲಿನ್, ಮಾರ್ಕ್ ಟ್ವೈನ್ ಮುಂತಾದ ಅನೇಕ ಗಣ್ಯರೊಂದಿಗೆ ಅವರ ಸ್ನೇಹ ವ್ಯಾಪಿಸಿತ್ತು. ಕೆಲ್ಲರ್ ಮತ್ತು ಮಾರ್ಕ್ ಟ್ವೈನ್ ಅವರುಗಳು ಇಪ್ಪತ್ತನೆಯ ಶತಮಾನದ ಪ್ರಾರಂಭದ ಕ್ರಾಂತಿಕಾರಕ ಚಿಂತಕರೆಂದು ಹೆಸರಾಗಿದ್ದರು.
ಕೆಲ್ಲರ್ ಅವರು ಸೋಷಿಯಲಿಸ್ಟ್ ಪಾರ್ಟಿಯ ಸದಸ್ಯರಾಗಿದ್ದು 1909ರಿಂದ 1921ರ ಅವಧಿಯಲ್ಲಿ ಆ ಪಕ್ಷದ ಪರವಾಗಿ ಲೇಖನಗಳನ್ನು ಬರೆದದ್ದೇ ಅಲ್ಲದೆ ಆ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯ ಪರವಾಗಿ ಚುನಾವಣಾ ಪ್ರಚಾರಗಳಲ್ಲೂ ಭಾಗವಹಿಸಿದ್ದರು.
ಕೆಲ್ಲರ್ ಅವರು 1912ರ ವರ್ಷದಲ್ಲಿ ಇಂಡಸ್ಟ್ರಿಯಲ್ ವರ್ಕರ್ಸ್ ಆಫ್ ದಿ ವರ್ಲ್ಡ್ ಸಂಘಟನೆಯನ್ನು ಸೇರಿ ಅದರ ಬೆಂಬಲವಾಗಿ ಹಲವಾರು ವರ್ಷಗಳ ಕಾಲ ಲೇಖನಗಳನ್ನೂ ಬರೆದರು. ಶ್ರೀಮಂತರ ಒಡೆತನದಲ್ಲಿ ಕಾರ್ಮಿಕರು ಅನುಭವಿಸುತ್ತಿದ್ದ ಬವಣೆಗಳು, ಬಡ ಕಾರ್ಮಿಕರು, ಅಸಹಾಯಕ ಸ್ತ್ರೀಯರು ಶೋಷಣೆಗೆ ಒಳಗಾಗುತ್ತಿದ್ದುದು, ಬಡತನದಿಂದ ವೇಶ್ಯಾವೃತ್ತಿಗೆ ಇಳಿಯುತ್ತಿದ್ದ ಸ್ತ್ರೀಯರು ಮತ್ತು ಅನೇಕ ಕಾಯಿಲೆಗಳಿಗೆ ಒಳಗಾಗಿ ಅವರುಗಳು ಅಂಗ ದೌರ್ಬಲ್ಯಗಳಿಗೆ ಒಳಗಾಗಿ ಸಂಕಷ್ಟದಿಂದ ಬದುಕು ನಡೆಸಬೇಕಾಗುತ್ತಿದ್ದುದು ಇವುಗಳೆಲ್ಲದರ ಬಗ್ಗೆ ಅವರು ಸುದೀರ್ಘ ಕಾಲದವರೆಗೆ ಬರಹಗಳನ್ನು ಮೂಡಿಸುವುದರ ಜೊತೆಗೆ ಕಾರ್ಮಿಕರ ಪರವಾಗಿ ಹೋರಾಟವನ್ನೂ ನಡೆಸಿದರು.
ಹೆಲೆನ್ ಕೆಲ್ಲರ್ ಅವರು ಪ್ರಕಟಿಸಿದ ಹನ್ನೆರಡು ಮಹತ್ವ ಪೂರ್ಣ ಗ್ರಂಥಗಳು ಮತ್ತು ನೂರಾರು ಲೇಖನಗಳು ವಿಶ್ವದೆಲ್ಲೆಡೆ ಎಲ್ಲವರ್ಗದ ಜನರ ಕಣ್ಣು ತೆರೆಸುವಂತಹವಾಗಿವೆ. ಅವರು ಇನ್ನೂ ಹನ್ನೊಂದು ವರ್ಷದವರಾಗಿದ್ದಾಗ ರಚಿಸಿದ್ದು ‘The Frost King(1891)’. ಮುಂದೆ The Story of My Life (1903), The World I Live In (1908), ಆಧ್ಯಾತ್ಮಿಕ ಆತ್ಮ ಕಥನ ‘My Religion’(1927) (ಮುಂದೆ ಇದೇ ಕೃತಿ ಪರಿಷ್ಕೃತಗೊಂಡು 1994ರ ವರ್ಷದಲ್ಲಿ ‘Light in my darkness’ ಎಂದು ಪ್ರಕಟಗೊಂಡಿತು) ಮುಂತಾದವು ಅವರ ಕೃತಿಗಳಲ್ಲಿ ಸೇರಿವೆ.
ನಮಗೆ ಎಲ್ಲಾ ನೈಸರ್ಗಿಕ ವರದಾನಗಳಿದ್ದೂ ನಮಗೆ ಅದರ ಅರಿವಿಲ್ಲದಂತೆ ಬದುಕುತ್ತೇವೆ. ಈ ನಿಟ್ಟಿನಲ್ಲಿ ಹೆಲೆನ್ ಕೆಲ್ಲರ್ ಅವರ ಈ ಮಾತುಗಳು ಮನದಾಳವನ್ನು ಸ್ಪರ್ಶಿಸುವಂತಿವೆ:
“ಹೇ ದೇವರೇ, ನನಗೆ ಮೂರೇ ಮೂರು ದಿನ ದೃಷ್ಟಿ ಕೊಡು!
ಹಾಗೊಂದು ವೇಳೆ ಯಾವುದಾದರೂ ಪವಾಡ ಸಂಭವಿಸಿ ನನಗೆ ಮೂರು ದಿನಗಳ ಕಾಲ ದೃಷ್ಟಿಯನ್ನು ದಯಪಾಲಿಸಿದರೆ ನಾನೇನನ್ನು ನೋಡಲು ಬಯಸುತ್ತೇನೆ ಗೊತ್ತೆ?
ಮೊದಲನೆ ದಿನ ನನ್ನ ಬದುಕನ್ನು ಅರ್ಥಪೂರ್ಣವಾಗಿಸಿದ ಎಲ್ಲರನ್ನೂ ನೋಡ ಬೇಕು. ಮೊಟ್ಟಮೊದಲಿಗೆ ನನ್ನ ಬದುಕಿನ ಕದ ತಟ್ಟಿ ಹೊರಜಗತ್ತನ್ನು ತೆರೆದಿಟ್ಟ ನನ್ನ ಟೀಚರ್ ಆನ್ ಸುಲ್ಲಿವನ್ ಮ್ಯಾಸಿಯ ಮುಖವನ್ನು ದಿಟ್ಟಿಸಿ ನೋಡಬೇಕು. ನನ್ನ ಕಣ್ಣುಗುಡ್ಡೆಯೊಳಗೆ ಆಕೆಯ ಮುಖವನ್ನು ಸೆರೆ ಹಿಡಿದುಕೊಂಡು ದೃಷ್ಟಿ ಹೋದ ನಂತರವೂ ಕಲ್ಪಿಸಿಕೊಂಡು ಧನ್ಯತೆಯಿಂದ ಬೀಗುವುದಕ್ಕಲ್ಲ. ಆ ಮುಖದಲ್ಲಿ ಆಕೆಯ ತಾಳ್ಮೆ, ಅನುಕಂಪದ ಜೀವಂತ ಗುರುತುಗಳನ್ನು ನಾನು ಕಾಣಬೇಕು. ಆಕೆಯ ಕಣ್ಣುಗಳಲ್ಲಿ ಸೋಲಿನ ಸವಾಲನ್ನೂ ಹಿಮ್ಮೆಟ್ಟಿಸುವ ಗಟ್ಟಿತನವಿದೆಯಲ್ಲಾ ಅದನ್ನು ನೋಡಬೇಕು. ಆತ್ಮದ ಕಿಟಕಿಯಾದ ಕಣ್ಣಿನಿಂದ ಸ್ನೇಹಿತೆಯ ಹೃದಯವನ್ನು ಇಣುಕಿ ನೋಡುವ ಅನುಭವ ಹೇಗಿರುತ್ತದೆ ಎಂಬುದು ನನಗೆ ಗೊತ್ತಿಲ್ಲ. ನನ್ನ ಬೆರಳುಗಳ ತುದಿಯಿಂದ ಮುಖವನ್ನು ಸ್ಪರ್ಶಿಸಿ ಆಕಾರವನ್ನು ಕಲ್ಪಿಸಿಕೊಂಡದ್ದಷ್ಟೇ ನನಗೆ ಗೊತ್ತು. ಹಾಗೆ ಸ್ಪರ್ಶಿಸುವುದರಿಂದಲೇ ಅವರ ದುಃಖ-ದುಮ್ಮಾನ, ನೋವು-ನಲಿವುಗಳನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ ಅವರು ಹೇಗಿದ್ದಾರೆಂಬುದನ್ನು ಕಲ್ಪಿಸಿಕೊಳ್ಳಲು ನನ್ನಿಂದಾಗದು. ಅಂಥ ಭಾಗ್ಯ ನನಗಿಲ್ಲ. ಆದರೆ ನೋಡುವ ನೋಟದಲ್ಲೇ ಅರ್ಥಮಾಡಿಕೊಳ್ಳುವ, ಹೃದಯವನ್ನು ಹೊಕ್ಕಿ ನೋಡುವ, ಮುಖದ ಹಾವ-ಭಾವಗಳಲ್ಲಿ ಮನಸ್ಸನ್ನು ಅರಿಯುವ ಅನುಭವ ಹೇಗಿರಬಹುದು? ದೇವರು ನನಗೆ ಮೂರು ದಿನ ದೃಷ್ಟಿಕೊಟ್ಟರೆ ಮೊದಲನೇ ದಿನ ಈ ಅನುಭವಗಳನ್ನು ಪಡೆಯುತ್ತೇನೆ.
ಮರುದಿನ ಬೆಳಗ್ಗೆ ಎದ್ದಾಗ ಮೊದಲು ಸೂರ್ಯನ ಉದಯ, ಹೊತ್ತು ಜಾರಿದ ಮೇಲೆ ಕತ್ತಲು ಆವರಿಸುವ ಪರಿ, ಅದರಿಂದ ಸಿಗುವ ಸುಖ ನನಗೆ ಬೇಕು. ನಿದ್ರೆಯಲ್ಲಿರುವ ಭುವಿಯನ್ನು ಏಳಿಸುವಾಗ ಸೂರ್ಯ ಚೆಲ್ಲುವ ಬೆಳಕಿನ ವೈಭವವನ್ನು ನನ್ನ ಕಣ್ಣುಗಳಲ್ಲಿ ಸೆರೆಹಿಡಿಯಬೇಕು. ಆ ದಿನ ನಾನು ಜಗತ್ತನ್ನೇ ಕಾಣಬೇಕು. ಜಗತ್ತಿನ ಅದ್ಭುತ ಸೃಷ್ಟಿಗಳನ್ನು ಕಂಡು ಬೆಚ್ಚಿ ಬೆರಗಾಗಬೇಕು.
ಮೂರನೇ ದಿನ ಬೆಳಗಾದಾಗಲೂ ಸೂರ್ಯನ ಪ್ರಖರತೆಯಲ್ಲಿ ಹೊಸ ಹರ್ಷವನ್ನು ಕಾಣಲು ಪ್ರಯತ್ನಿಸುತ್ತೇನೆ. ಆದರೆ ಮೂರನೆಯ ದಿನ ರಾತ್ರಿ ಬರುವ ಕತ್ತಲು ಮತ್ತೆ ಬದುಕನ್ನು ಅಂಧಕಾರಕ್ಕೆ ತಳ್ಳುತ್ತದೆ, ನನ್ನ ಬದುಕಲ್ಲಿ ಮತ್ತೆಂದೂ ಸೂರ್ಯ ಉದಯಿಸುವುದಿಲ್ಲ ಎಂಬುದನ್ನು ಊಹಿಸಿಕೊಂಡಾಗ……..”
ಈ ಮಾತುಗಳನ್ನು ಅನುಭಾವಿಸುತ್ತಿದ್ದರೆ ಅನಿಸುತ್ತಿದೆ. ಎಲ್ಲಾ ಭಾಗ್ಯಗಳೂ ನಮ್ಮ ಜೊತೆಯಲ್ಲಿದ್ದರೂ ನಾವು ಅದರ ಬೆಲೆಯನ್ನು ಅರಿತುಕೊಂಡು ಬಾಳುವುದಾದರೂ ಎಂದು? ಈ ಸೃಷ್ಟಿ ಕಣ್ಣು ಕಿವಿಗಳನ್ನು ಬಹುತೇಕವಾಗಿ ಎಲ್ಲರಿಗೂ ಕೊಟ್ಟಿರುತ್ತದೆ. ಆದರೆ ಅರಿವನ್ನು ಮಾತ್ರ …..? ಹೆಲೆನ್ ಕೆಲರ್ ಅಂತಹ ಮಹಾನ್ ಜೀವಿಗಳು ಮಾತ್ರ ಅಂಥಹದ್ದನ್ನು ಗಳಿಸುವ ಮನಸ್ಸು ಮಾಡಿದರು. ಅವರಿಗೆ ಅದರ ಬೆಲೆ ಏನೆಂಬ ಪ್ರಜ್ಞೆ ಗಳಿಸುವುದು ಸಾಧ್ಯವಾಯಿತು.
ಹೆಲೆನ್ ಕೆಲ್ಲರ್ 1968ರ ಜೂನ್ 1ರಂದು ಈ ಲೋಕವನ್ನಗಲಿದರು. ನಮ್ಮ ಕಾಲದಲ್ಲಿ ತನ್ನ ಬದುಕಿನ ದರ್ಶನವನ್ನು ನಮ್ಮೆದುರು ತೆರೆದಿಟ್ಟು ಅದರ ಸೌಭಾಗ್ಯವನ್ನು ಕೇಳುವ, ನೋಡುವ ಮಹಾಭಾಗ್ಯ ಒದಗಿಸಿದ ಈ ಮಾತೆಗೆ ಶಿರಬಾಗಿ ನಮನ.
(ಸಂಗ್ರಹ : ಅಶೋಕ .ಶಿ . ಕೌಜಗೇರಿ ಪ್ರಥಮ ದರ್ಜೆಯ ಸಹಾಯಕ ನ್ಯಾಯಾಂಗ ಇಲಾಖೆ )