ಹೊತ್ತಿಗೊದಗದ ಮಾತು|
ಹತ್ತುಸಾವಿರ ವ್ಯರ್ಥ|
ಕತ್ತೆ ಕೂಗಿದರೆ ಫಲವುಂಟು|
ಬಹುಮಾತು|
ಕತ್ತೆಗೂ ಕಷ್ಟ ಸರ್ವಜ್ಞ|
ಈ ಮೇಲಿನ ಸರ್ವಜ್ಞನ ವಚನ ಎಷ್ಟೊಂದು ಅರ್ಥಪೂರ್ಣ. ಮಾತಿಲ್ಲದೆ ಯಾರ ಜೀವನ ನಡೆಯುವುದು ಬಲು ಕಷ್ಟ. ನಮ್ಮ ದೈನಂದಿನ ಬದುಕಿನ ವ್ಯವಸ್ಥೆ ಸುಗಮವಾಗಿ ಮಾಡಿಕೊಳ್ಳಲು ನಾವು ಮಾಡಿಕೊಂಡಿರುವ ಯಾದೃಚ್ಛಿಕ ಧ್ವನಿ ಸಂಕೇತದ ವ್ಯವಸ್ಥೆ ಈ ಮಾತು.
ಮಾತು ಹೇಗಿದ್ದರೆ ಚೆನ್ನಾಗಿರುತ್ತದೆ’ ಎಂಬುದು ಸರ್ವಜ್ಞನ ತ್ರಿಪದಿಯಿಂದ ತಿಳಿಯುತ್ತದೆ. ಅದೇ ಮಾತು ಅತಿಯಾದರೆ ಕತ್ತೆಗೂ ಕಷ್ಟ ಎಂಬ ಉಕ್ತಿ ಮಾನವ ಜನ್ಮದ ಪ್ರತಿಯೊಬ್ಬನಿಗೂ ಅನ್ವಯ. ಯಾವುದೇ ಸನ್ನಿವೇಶವಿರಲಿ ಅಲ್ಲಿ ಅದಕ್ಕೆ ತಕ್ಕಂತೆ ಮಾತನಾಡಿದರೆ ಆ ಮಾತು ಸೂಕ್ತವೆನಿಸುತ್ತದೆ ಅದು ಬಿಟ್ಟು ಇನ್ನೇನನ್ನಾದರೂ ಮಾತನಾಡತೊಡಗಿದರೆ ಅದು ಕೇಳಿಸಿಕೊಳ್ಳುವವರಿಗೆ ಕಷ್ಟ ಎನಿಸುತ್ತದೆ.
ಒಂದು ಕಾರ್ಯಕ್ರಮ ಜರುಗಿತ್ತು.
ಅಲ್ಲಿ ಹಲವು ವಿಷಯಗಳ ಕುರಿತು ಉಪನ್ಯಾಸ ಏರ್ಪಡಿಸಿದ್ದರು. ಅಲ್ಲಿ ಒಬ್ಬರು ತಮಗೆ ನೀಡಿದ ವಿಷಯದ ಬಗ್ಗೆ ಮಾತನಾಡುವ ಬದಲು ಬೇರೆ ವಿಚಾರವನ್ನು ಅಲ್ಲಿ ಪ್ರಸ್ತಾಪಿಸುತ್ತ ತಮ್ಮ ವಿಷಯಕ್ಕೆ ಬರುವಷ್ಟರಲ್ಲಿ ನಿಗದಿತ ಸಮಯ ಕೂಡ ಮುಗಿದಿತ್ತು. ಹೀಗಾದಾಗ ವಿಷಯವನ್ನು ಕೇಳಲು ಬಂದವರು ಇವರ ಬಗ್ಗೆ ಗೊಣಗುತ್ತ ಹೋಗುವುದು ಸರ್ವೆಸಾಮಾನ್ಯ. ಇಂತಹ ಮಾತುಗಳು ಹೊತ್ತಿಗೊದಗದ ಮಾತುಗಳಾಗಿ ಪರಿಣಮಿಸುತ್ತವೆ.
ಯಾರಾದರೂ ನಮ್ಮ ಬಳಿಗೆ ಬಂದಾಗ ನಾವು ಅವರು ಬಂದ ಉದ್ದೇಶವನ್ನು ಮೊದಲು ಕೇಳಬೇಕು. ನಂತರ ಅದಕ್ಕೆ ನಮ್ಮಿಂದ ಆಗಬಹುದಾದ ಸಹಕಾರ ನೀಡಬೇಕು. ಇಲ್ಲದಿದ್ದರೆ ನಾವು ನಮ್ಮದೇ ಆದ ವಿಚಾರಧಾರೆ ಮಾತನಾಡತೊಡಗಿದರೆ. ಅದು ಹೊತ್ತಿಗೊದಗದ ಮಾತಾಗುತ್ತದೆ. ಇನ್ನು ಉಪನ್ಯಾಸಗಳನ್ನು ಹಲವು ಸಲ ಈ ಸಂಗತಿಗೆ ಹೋಲಿಸಬಹುದು.ಉಪನ್ಯಾಸಕ್ಕೆ ನೀಡಿದ ವಿಷಯವನ್ನು ಅಲ್ಲಿ ಮಾತನಾಡಬೇಕಾದವರು ಮಾತನಾಡಬೇಕಾಗುತ್ತದೆ.
ಅದೂ ಸಮಯದ ಇತಿ ಮಿತಿ ಅರಿತು. ಅದನ್ನು ಬಿಟ್ಟು ‘ಅಲ್ಲಿ ನಾನು ಹಾಗೆ ಮಾಡಿದ್ದೆ.ಹೀಗೆ ಮಾಡಿದ್ದೆ.’ಎನ್ನುತ್ತ ತಮ್ಮ ಆತ್ಮಪ್ರಶಂಸೆಯನ್ನು ಮಾತನಾಡುತ್ತ ಮಾತು ಅತಿರೇಕಕ್ಕೆ ಹೋದರೆ ಮುಂದೆ ಕುಳಿತ ಕೇಳುಗರು ತಮ್ಮ ತಮ್ಮಲ್ಲಿ ಇವರ ಬಗ್ಗೆ ಗೊಣಗುತ್ತಾರೆ. ಜೊತೆಗೆ ಕಾರ್ಯಕ್ರಮ ಮುಗಿದ ಮೇಲೆ ಆಯೋಜಕರನ್ನು ಭೇಟಿಯಾಗಿ ಇಂತವರನ್ನು ಮುಂದಿನ ಕಾರ್ಯಕ್ರಮಕ್ಕೆ ಕರೆಸಬೇಡಿ ಎಂಬ ಕಿವಿಮಾತು ಕೂಡ ಹೇಳಿ ಹೋಗುವರು.
ಕಲ್ಲು ಹೃದಯ ಕರಗಿತು
ಶ್ರೀ ರಾಮಕೃಷ್ಣ ಪರಮಹಂಸರ ಪತ್ನಿಯಾದ ಶಾರದಾಮಾತೆ ಅವರು ಶ್ರೀ ರಾಮಕೃಷ್ಣ ಅಧ್ಯಾತ್ಮಿಕ ಪರಂಪರೆಗೆ ತನ್ನದೇ ಆದ ಕೊಡುಗೆಯನ್ನು ನೀಡಿರುವರು. ಶಾರದಾದೇವಿಯವರು ಡಿಸೆಂಬರ್ 22, 1853 ರಂದು ಪಶ್ಚಿಮ ಬಂಗಾಳದ ಜಯರಾಂಬಟಿ ಎಂಬಲ್ಲಿ ಜನಿಸಿದರು.
ಅವರ ತಂದೆಯ ಹೆಸರು ರಾಮಚಂದ್ರ ಮುಖೋಪಾಧ್ಯಾಯ ತಾಯಿ ಶ್ಯಾಮ್ ಸುಂದರದೇವಿ.ಇವರ ಹೆಸರು ಶಾರದಾಮಣಿ. ಶಾರದಾದೇವಿಯವರಿಗೆ ಬಾಲ್ಯದಲ್ಲಿ ಪೌರಾಣಿಕ ಕತೆಗಳನ್ನು ಕೇಳುವುದರಲ್ಲಿ ಆಸಕ್ತಿ.ಮನೆಯಲ್ಲಿ ತಾಯಿಯೊಂದಿಗೆ ಮನೆಗೆಲಸದಲ್ಲಿ ಸಹಾಯ ಮಾಡುತ್ತ ಕಾಲಕಳೆಯುತ್ತಿದ್ದರು.
ಇವರಿಗೆ ಮುಂದೆ 1853 ರಲ್ಲಿ ರಾಮಕೃಷ್ಣ ಪರಮಹಂಸರೊಂದಿಗೆ ವಿವಾಹವೇರ್ಪಡುತ್ತದೆ.ಆದರೆ ರಾಮಕೃಷ್ಣರು ಇವರಲ್ಲಿ ಅಧ್ಯಾತ್ಮದ ಛಾಯೆಯನ್ನು ಕಂಡರು. ಅವರಿಗೂ ಅಧ್ಯಾತ್ಮವನ್ನು ಬೋಧಿಸಿದರು.
ಮಹಾಮಾತೆ ಶಾರದಾದೇವಿಯವರ ಜೀವನದಲ್ಲಿ ನಡೆದ ಘಟನೆಯಿದು.
ಅವರು ಎಂತಹ ಸಂದರ್ಭವೇ ಬರಲಿ ಯಾರೊಬ್ಬರ ಮನಸ್ಸನ್ನು ನೋಯಿಸದಂತೆ ನಡೆದುಕೊಳ್ಳುತ್ತಿದ್ದರು. ಅವರು ಜಯರಾಮವಟಿಯಲ್ಲಿದ್ದಾಗ ಕಾಲ್ನಡಿಗೆಯಲ್ಲಿ ದಕ್ಷಿಣೇಶ್ವರಕ್ಕೆ ಪತಿ ಪರಮಹಂಸರಲ್ಲಿಗೆ ಹೋಗಿ ಬರುತ್ತಿದ್ದರು.
ಒಂದು ಸಲ ಕಾಲ್ನಡಿಗೆಯಿಂದ ಕಾಡೊಂದರಲ್ಲಿ ಹೋಗುತ್ತಿರುವಾಗ ಕಟುಕ ಕಳ್ಳನೋರ್ವ ಇವರನ್ನು ನೋಡಿ ನಿಲ್ಲು ಎಂದ. ಹೊರಳಿ ನೋಡಿದಾಗ ವಿಕೃತ ಶರೀರ,ಕಾಮವಾಸನೆ ಮುಖ ಕಂಡ ಶಾರದಾದೇವಿ ಹೆದರಲಿಲ್ಲ. ಅಪ್ಪಾ ನಾನು ನಿಮ್ಮ ಮಗಳು.
ರಾಮಕೃಷ್ಣ ಪರಮಹಂಸರನ್ನು ಕಾಣಲೆಂದು ದಕ್ಷಿಣೇಶ್ವರಕ್ಕೆ ಹೊರಟಿರುವೆ,ಬಹುಶಃ ಈ ಕಾಡಿನಲ್ಲಿ ನಾನೆಲ್ಲೋ ದಾರಿ ತಪ್ಪಿರುವ ಹಾಗಿದೆ.ನೀನೇನಾದರೂ ಅವರಿರುವಲ್ಲಿಗೆ ಕರೆದುಕೊಂಡು ಹೋಗಿ ಬಿಟ್ಟರೆ..? ಎನ್ನುವಷ್ಟರಲ್ಲಿ ಆ ಕಳ್ಳನ ಹೆಂಡತಿ ಕೂಡ ಅದೇ ವೇಳೆಗೆ ಆಗಮಿಸಿದಳು.
ಇದನ್ನು ಕಂಡ ಶಾರದಾಮಾತೆಗೆ ಇನ್ನಷ್ಟು ದೈರ್ಯ ಬಂದು ಅವಳ ಬಳಿಗೆ ಬಂದು ಅಮ್ಮಾ ನಾನು ನಿಮ್ಮ ಮಗಳು ಶಾರದೆ,ದಾರಿತಪ್ಪಿ ಕತ್ತಲಲ್ಲಿ ಆಸರೆ ಇಲ್ಲದೇ ತೊಳಲುತ್ತಿದ್ದೇನೆ. ದೇವರೇ ನಿಮ್ಮನ್ನು ನನಗಾಗಿ ಕಳುಹಿಸಿದಂತೆ ಕಾಣುತ್ತಿದೆ. ಎನ್ನುವಷ್ಟರಲ್ಲಿ ಅವರಿಬ್ಬರಿಗೂ ಇವರ ತೊಳಲಾಟ ಕಂಡು ಕಲ್ಲು ಹೃದಯ ಕರಗಿದವು. ಇಬ್ಬರ ಮನಸ್ಸಿನಲ್ಲಿ ವಾತ್ಸಲ್ಯ ಉಕ್ಕಿ ಬಂದಿದ್ದವು.ಆಗ ಅವರು ಇವರನ್ನು ತಮ್ಮ ಮನೆಗೆ ಕರೆದುಕೊಂಡು ಹೋದರು.
ಅವರಿಬ್ಬರೂ ಆ ದಿನ ಶುಚಿರುಚಿಯಾದ ಅಡುಗೆ ಸಿದ್ದಪಡಿಸಿದ್ದರು. ಶಾರದಾಮಾತಗೆ ಉಣಬಡಿಸಿ ತಾವೂ ಊಟ ಮಾಡಿ ಆ ದಿನ ಅವರನ್ನು ತಮ್ಮ ಮನೆಯಲ್ಲಿಯೇ ವಾಸ್ತವ್ಯ ಮಾಡಿಸಿಕೊಂಡು ಮರುದಿನ ಆ ಕಾಡಿನಲ್ಲಿ ಸ್ವಲ್ಪ ದೂರದವರೆಗೂ ಬಂದು ದಕ್ಷಿಣೇಶ್ವರಕ್ಕೆ ದಾರಿ ತೋರಿ ಬೀಳ್ಕೊಟ್ಟರು.
ನಾವು ನಮ್ಮ ಜೀವನದಲ್ಲಿ ಸಮಯ ಸಂದರ್ಭವರಿತು ಮಾತನಾಡಬೇಕು.ಯಾರ ಮನಸ್ಸು ನೋಯದಂತೆ ವರ್ತಿಸಿದರೆ ಎಂತಹ ಕಲ್ಲು ಹೃದಯ ಕೂಡ ಕರಗುವುದರಲ್ಲಿ ಸಂದೇಹವಿಲ್ಲ ಎಂಬುದಕ್ಕೆ ಶಾರದಾದೇವಿಯವರ ಜೀವನದಲ್ಲಿ ನಡೆದ ಈ ಘಟನೆಯೇ ಸಾಕ್ಷಿ
ಬಸವಣ್ಣನವರು ತಮ್ಮ ವಚನದಲ್ಲಿ ಹೀಗೆ ಹೇಳಿದ್ದಾರೆ.
ತನ್ನ ಬಣ್ಣಿಸಬೇಡ|
ಇದಿರ ಹಳಿಯಲು ಬೇಡ|
ಅನ್ಯರಿಗೆ ಅಸಹ್ಯ ಪಡಬೇಡ|
ಇದೇ ಅಂತರಂಗ ಶುದ್ಧಿ|
ಇದೇ ಬಹಿರಂಗ ಶುದ್ಧಿ|
ಇದೇ ನಮ್ಮ ಕೂಡಲ ಸಂಗನೊಲಿಸುವ ಪರಿ ||
ಈ ವಚನ ಎಷ್ಟೊಂದು ಪ್ರಸ್ತುತ. ಹೊಗಳಿ, ಹೊಗಳಿ ಹೊನ್ನಶೂಲಕ್ಕೇರಿಸಿದಂತೆ ಎನ್ನುವ ಬಸವಣ್ಣನವರು “ಹೊಗಳಿಕೆ” ಬೇಡ ಎಂದಿರುವರು.
ಮಹಾಭಾರತದಲ್ಲಿ ಉತ್ತರ ಕುಮಾರನು ಬೃಹನ್ನಳೆಯ ಎದುರು ತನ್ನ ಪೌರುಷವನ್ನೆಲ್ಲ ಹೇಳುವನು. ಕೊನೆಗೆ ಯುದ್ಧ ಭೂಮಿಗೆ ಹೋದಾಗ ಹೇಡಿಯಂತೆ ಓಡಿ ಹೋಗುವನು ಇಲ್ಲಿ ಕೂಡ ಆತ್ಮಪ್ರಶಂಸೆ ಅತಿಯಾದಾಗ ಅದರ ಪರಿಣಾಮ ಏನಾಗುತ್ತದೆ ಎಂಬುದು ಕಂಡು ಬಂದಿದೆ.
ಚಿಕ್ಕವರಿಂದ ಹಿಡಿದು ಮುದುಕರವರೆಗೆ ಜನ ನಾನು ನನ್ನದು ಎಂಬ ಮಾತುಗಳನ್ನಾಡುವುದು ಸಾಮಾನ್ಯ. ತನ್ನ ಬಗೆಗೆ ತನ್ನದೇ ಕಲ್ಪನೆ ತನ್ನನ್ನು ಕುರಿತು ತಾನೇ ಬೆಳೆಸಿಕೊಂಡ ಅಹಮಿಕೆ. ತನ್ನ ದೇಹವನ್ನು ಇತರ ವಸ್ತು ಮತ್ತು ವ್ಯಕ್ತಿಗಳಿಂದ ಬೇರೆಯಾಗಿ ಗುರುತಿಸುವುದು, ತನ್ನ ಕ್ರಿಯೆಗಳನ್ನು ಬೇರೆಯವರ ಕ್ರಿಯೆಗಳಿಂದ ಬೇರೆಯಾಗಿ ಕಾಣುವುದು ಇವು ಎಷ್ಟೋ ಸಲ ಆತ್ಮಪ್ರಶಂಸೆಗೆ ಗುರಿ ಮಾಡುತ್ತವೆ. ಕಾರಣ ಇದು ವ್ಯಕ್ತಿತ್ವವನ್ನು ರೂಪಿಸಬೇಕೇ? ವಿನಃ ವ್ಯಕ್ತಿತ್ವವನ್ನು ಅಧಃಪತನಕ್ಕೆ ತಳ್ಳುವ ಮಟ್ಟಕ್ಕೆ ಇರಬಾರದು.
ಇಂದಿನ ದಿನಗಳಲ್ಲಿ ವ್ಯಕ್ತಿ ಹೊಗಳಿಕೆಯ ಬೆನ್ನು ಹತ್ತುತ್ತಿರುವುದು.ತನ್ನ ಮಾತುಗಳಲ್ಲಿ ಅದನ್ನು ಆಸೆ ಪಡುವುದು. ವ್ಯಕ್ತಿತ್ವದ ಅಧಃಪತನಕ್ಕೆ ಸೂಚಕವಾಗಿದೆ., ತನ್ನ ತಾ ತಿಳಿದು ಬದುಕುವ ಪ್ರಕ್ರಿಯೆ ತುಂಬ ವಿರಳವಾಗುತ್ತಿದೆ.ಆತ್ಮ ಪ್ರಶಂಸೆ ಎಂದಿಗೂ ಉತ್ತಮವಾದುದನ್ನು ಮಾಡದು.ತನ್ನಷ್ಟಕ್ಕೆ ತಾನು ಪ್ರಾಮಾಣಿಕವಾಗಿ ಬದುಕಿದರೆ ಜನ ಆ ವ್ಯಕ್ತಿಯ ವ್ಯಕ್ತಿತ್ವಕ್ಕೆ ಯಾವಾಗಲೂ ಮಹತ್ವ ಕೊಟ್ಟೇ ಕೊಡುವರು.
ಯಾರೇ ಇರಲಿ ತನ್ನ ಕುರಿತು ಅತಿಯಾದ ಸಂಗತಿಯನ್ನು ಮತ್ತೊಬ್ಬರ ಮುಂದೆ ಹೇಳುವುದು ಸರಿಯಾದ ಕ್ರಮವಲ್ಲ ನಿಮ್ಮ ಬದುಕಿನ ರೀತಿಯೇ ಅದನ್ನು ತಿಳಿಸುವಂತೆ ಬದುಕಿ.ಅದು ನಿಮ್ಮ ವ್ಯಕ್ತಿತ್ವವನ್ನು ತಾನೇ ಅವರೇ ಬೇರೆಯವರ ಮುಂದೆ ನಿಮ್ಮ ಬಗ್ಗೆ ಹೇಳುವಂತೆ ನಿರೂಪಿಸುತ್ತದೆ.
ಸ್ವ ಪ್ರಶಂಸೆ ಮನುಷ್ಯನ ಸಹಜ ಪ್ರವೃತ್ತಿಯಾದರೂ ಕೂಡ ಇದು ಅತಿಯಾದರೆ ಇತರರ ನಿಂದನೆಗೆ ಗುರಿಯಾಗುತ್ತದೆ. ಕೋಲ್ಟನ್ ಎಂಬುವವರು ಹೊಗಳಿಕೆ ವಿಷ ಹಾಕಿದ ಬಹುಮಾನ ಎಂದಿದ್ದಾರೆ.
ಅಂದರೆ ಇನ್ನೊಬ್ಬರು ನಿಮ್ಮನ್ನು ಹೊಗಳುವ ದೃಷ್ಟಿಕೋನ ಈ ಮಾತಿಗೆ ಅನ್ವಯಿಸುತ್ತದೆ. ಇದು ಅವರ ಸ್ವಾರ್ಥವೂ ಇರಬಹುದು ಅಥವಾ ನಿಸ್ವಾರ್ಥವೂ ಇರಬಹುದು. ಅವರವರ ಭಾವನೆಗಳಿಗೆ ಈ ಮಾತು ಅನ್ವಯ.
ಈ ಆತ್ಮಪ್ರಶಂಸೆ ಅತಿಯಾದರೆ ಮನುಷ್ಯ ತನ್ನತನ ಕಳೆದುಕೊಳ್ಳುತ್ತಾನೆ. ಅವನು ಏನನ್ನು ಮಾಡುತ್ತಿರುವನೋ ಅದನ್ನು ಮರೆತು ಹೊಗಳಿಕೆಯ ಕೇಂದ್ರವಾಗುತ್ತಾನೆ. ತನ್ನನ್ನು ಶ್ರೇಷ್ಠ ಎಂದು ಭಾವಿಸುತ್ತಾನೆ. ನಾನು ಎಂಬ ಅಹಂ ಆತನಲ್ಲಿ ಬರುವುದು.
ಹೀಗಾಗಿ ಇದು ಸರಿಯಲ್ಲ. ಒಬ್ಬ ಮೇಧಾವಿ ತನ್ನನ್ನು ಯಾರಾದರೂ ಮಾತನಾಡಿಸಲು ಬಂದಾಗ ಮೊದಲಿಗೆ ಸಹಜವಾಗಿ ಮಾತನಾಡುತ್ತ ನಂತರ ತನ್ನ ವ್ಯಕ್ತಿತ್ವವನ್ನು ಗುಣಗಾನ ಮಾಡತೊಡಗಿದನು.ಅವರು ನನಗೆ ಹೀಗೆ ಅನ್ನುವರು ಇವರು ನನಗೆ ಹಾಗೆ ಅನ್ನುವರು.
ನನ್ನ ಬಗ್ಗೆ ಅವರಿಗೆ ಗೊತ್ತಿರಲಿಲ್ಲ.ಗೊತ್ತಾದ ಮೇಲೆ ಅವರು ಸದಾ ನನ್ನ ಬಗ್ಗೆ ಎಲ್ಲರ ಮುಂದೆಯೂ ಒಳ್ಳೆಯ ಮಾತನಾಡತೊಡಗಿದರು.’, ಹೀಗೆ ತನ್ನೆದುರು ಯಾವುದೋ ಸಂಗತಿ ಹೇಳಿಕೊಳ್ಳಲೆಂದು ಬಂದವರಿಗೆ ಅವರು ಬಂದಿರುವ ವಿಚಾರವನ್ನು ಅರಿಯದೇ ತಮ್ಮತನವನ್ನು ಹೊಗಳಿಕೊಳ್ಳುವವರು ಯಾವತ್ತೂ ಜೀವನದಲ್ಲಿ ಒಳ್ಳೆಯದನ್ನು ಸಾಧಿಸಲಾರರು. ಅದಕ್ಕೆ ಬಸವಣ್ಣನವರು ತನ್ನ ಬಣ್ಣಿಸಬೇಡ ಎಂದಿರುವರು. ಇದು ಆತ್ಮಪ್ರಶಂಸೆಗೆ ತಾಜಾ ಉದಾಹರಣೆ.
‘ಆತ್ಮಪ್ರಶಂಸೆ’ ಬಹು ಅಪಾಯಕಾರಿ..ಅದು ಮುಖ ಸ್ತುತಿ ಆಗದೇ ಪ್ರಾಮಾಣಿಕ ಮಾತುಗಳ ಮೂಲಕ ಹೊರಹೊಮ್ಮುವಂತಿದ್ದರೆ ಸೂಕ್ತ. ಭಾರತದ ಪುರಾಣ ಇತಿಹಾಸಗಳನ್ನು ಗಮನಿಸಿದಾಗ ಇಂಥ ವಿಚಾರಗಳಿಗೆ ಸಂಬಂಧಿಸಿದಂತೆ ಅನೇಕ ಘಟನೆಗಳನ್ನು ನಾವು ಕಾಣುತ್ತೇವೆ.ರಾಜ ಮಹಾರಾಜರ ಕಾಲದಲ್ಲಂತೂ ಬಹುಪರಾಕ್ ಎಂದು ಹೊಗಳಿಸಿಕೊಳ್ಳುವ ರಾಜಾಧಿರಾಜ,ಮಾರ್ತಾಂಡವೀರ.ಮಹಾಪ್ರತಾಪ. ಹೀಗೆ ಬಿರುದಾವಳಿಗಳ ಮೂಲಕ ಹೊಗಳಿಕೆಗಳು ಜರುಗುತ್ತಿದ್ದವು.ಅದಕ್ಕೆಂದೇ ಅರಮನೆಯಲ್ಲಿ ರಾಜನ ಆಗಮನವಾಗುವ ಸಂದರ್ಭದಲ್ಲಿ ಹೂಮಳೆಗರೆಯುತ್ತ ರಾಜನನ್ನು ಹೊಗಳುವ ಪರಂಪರೆ ಇತ್ತು. ಅದು ವೀರರಿಗೂ ಧೀರರಿಗೂ ಅನ್ವಯಿಸುವ ಬಿರುದಾವಳಿಗಳು. ವೀರರಲ್ಲದವರೂ ಧೀರರಲ್ಲವರೂ ಈ ರೀತಿ ಹೊಗಳಿಸಿಕೊಂಡರೆ ಉತ್ತರನ ಪೌರುಷ ಒಲೆಯ ಮುಂದೆ ಎಂದಾಗುತ್ತದೆ.
ಇಂದಿನ ಯುಗದಲ್ಲೂ ಕೂಡ ಅದನ್ನೇ ತಮ್ಮದೇ ಆದ ಶೈಲಿಯಲ್ಲಿ ಕೆಲವರು ಮಾಡುತ್ತಿರುವುದು.ಆಧುನಿಕ ರಾಜರಾಗುತ್ತಿರುವುದು ಸಾಕ್ಷಿ. ತಮ್ಮನ್ನು ಹೊಗಳಿಸಿಕೊಳ್ಳಲೆಂದೇ ಹಲವು ವಿಚಿತ್ರ ಕಾರ್ಯಗಳಲ್ಲಿ ತೊಡಗಿದ್ದು ಕಂಡು ಬರುತ್ತಿದೆ.
ಜನರು ಜಯಕಾರ ಹಾಕಲೆಂದು ಬಸ್,ಲಾರಿಗಳಲ್ಲಿ.ವಿವಿಧ ವಾಹನಗಳಲ್ಲಿ ಕರೆತಂದು ತಮ್ಮ ಪ್ರತಿಷ್ಟೆಯನ್ನು ಹೆಚ್ಚಿಸಿಕೊಳ್ಳುವವರು ಇಂದಿನ ದಿನಗಳಲ್ಲಿ ಹೆಚ್ಚಿದ್ದಾರೆ. ಅದು ಶಾಶ್ವತವಲ್ಲ ತಮ್ಮ ಕರ್ಮಾನುಸಾರ ಜಯಕಾರ ಪಡೆದರೆ ಜೀವನ ಸಾರ್ಥಕ.ಅದರ ಹಿಂದಿನ ಮರ್ಮ ಅರಿತರೆ ತಾವು ಪ್ರಾಮಾಣಿಕವಾಗಿ ಬದುಕಿದರೆ ಅಂತಹ ಬಹು ಪರಾಕ್ ಅವಶ್ಯಕತೆ ಇಲ್ಲ ಎಂಬುದನ್ನು ಮನಗಾಣಬಹುದು. ಇಲ್ಲವಾದರೆ ಅದರಿಂದ ಬೇರೆಯವರಿಗೆ ಕಿರಿಕಿರಿಯಾಗುವುದಷ್ಟೇ ಅಲ್ಲ ಹಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಇಂತಹವರನ್ನು ಬಳಸಿಕೊಳ್ಳಲು ಕೂಡ ಅನುಕೂಲವಾಗುವುದು.
ಯಾವತ್ತೂ ನಮ್ಮ ಬದುಕನ್ನು ಇತರರೆದುರು ವಿನಾಕಾರಣ ಬಿಚ್ಚಿ ಇಡದೇ ಸಮಯ ಸಂದರ್ಭಕ್ಕೆ ತಕ್ಕಂತೆ ಅವರೊಡನೆ ಮಾತನಾಡಿ ನಮ್ಮ ವ್ಯಕ್ತಿತ್ವ ಎಂತಹದು ಎಂಬುದನ್ನು ನಿರೂಪಿಸುವುದು ನಿಜವಾದ ಬದುಕು.ಅದು ಬಿಟ್ಟು ನಮ್ಮತನವನ್ನು ಇತರರ ಮೇಲೆ ಹೇರಿಕೆ ಮಾಡುವ ತೆರದಲ್ಲಿ ಬದುಕುವುದು ಆ ರೀತಿಯಲ್ಲಿ ಮಾತನಾಡುವುದು ಕೂಡ ಹೊತ್ತಿಗೊದಗದ ಮಾತು ಅಲ್ಲದೇ ಬೇರೆ ಏನೂ ಅಲ್ಲ.
ಎಲ್ಲಾ ನನ್ನಿಂದಲೇ ನಾನೇ ಮಾಡುತ್ತಿರುವುದು ಶ್ರೇಷ್ಟ ಎಂಬಂತೆ ಬದುಕುವ ಅಹಂನಿಂದ ಜೀವನದಲ್ಲಿ ಯಾವ ಸಾಧನೆಯೂ ಆಗದು. ಅರಿತು ಬಾಳಿದರೆ ಬದುಕು ಸಾರ್ಥಕ.ಪ್ರತಿ ಸಂದರ್ಭದಲ್ಲಿಯೂ ನಮ್ಮ ಮಾತು ವಿವೇಚನೆಯಿಂದ ಕೂಡಿರಬೇಕು ಅದು ಹೊತ್ತಿಗೊದಗದ ಮಾತಾಗಬಾರದು. ಯಾವ ಮಾತುಗಳನ್ನೇ ಆಡಿದರೂ ಅದು ಸಮಯೋಜಿತ ಮತ್ತು ಸಮರ್ಪಕ ನುಡಿಯಾಗಿರಲಿ.ಅದು ಇತರರ ಮನಸ್ಸನ್ನು ನೋಯಿಸದಂತಿರಲಿ.ಜೊತೆಗೆ ಆತ್ಮಪ್ರಶಂಸೆಯ ಬೆನ್ನು ಹತ್ತದಂತಿರಲಿ.
ನೀವು ಬೇರೆಯವರ ಜತೆ ಕಾದಾಟಕ್ಕೆ ಬಿದ್ದರೆ ಅದರಿಂದ ಸೋಲಬಹುದು. ಒಂದು ವೇಳೆ ಗೆದ್ದರೂ ಅಲ್ಲಿಗೆ ಮುಗಿಯಿತು ಎಂಬುದಿಲ್ಲ. ಅದರಿಂದ ದ್ವೇಷ ಬೆಳೆಯಬಹುದು. ಅದೇ ನೀವು ನಿಮ್ಮ ಜೊತೆಗೆ ಕಾದಾಟಕ್ಕೆ ಬಿದ್ದರೆ ನಿತ್ಯವೂ ಗೆಲ್ಲುತ್ತೀರಿ. ಯಾವತ್ತೂ ಜಗಳ ಕದನ ಕಾದಾಟ ನಮ್ಮ ಜತೆಗೆ ಇದ್ದರೆ ಒಳ್ಳೆಯದು. ನಾವು ನಮ್ಮ ಸಮಸ್ಯೆಗಳ ಬಗ್ಗೆ ಚಿಂತಿಸಿದಷ್ಟೂ ಮತ್ತಷ್ಟು ತೀವ್ರತೆಗೊಳಗಾಗುತ್ತೇವೆ. ಅದರ ಬದಲು ಪರಿಹಾರೋಪಾಯಗಳ ಬಗ್ಗೆ ಯೋಚಿಸಬೇಕು.ಅದು ನಮಗೆ ಬಿಡುಗಡೆಯ ದಾರಿ ಮಾಡಿಕೊಡುತ್ತದೆ.
ಆದ ಕಾರಣ ನಾವು ಮತ್ತೋಬ್ಬರ ಬರೀ ತಪ್ಪುಗಳನ್ನೇ ನೋಡುತ್ತ ಹೊರಟರೆ ನಮ್ಮ ಮನಸ್ಸು ವಿಕಾರಗೊಳ್ಳುತ್ತ ಕೆಟ್ಟು ಹೋಗುತ್ತದೆ. ಅವುಗಳ ಬದಲಾಗಿ ಅವರಲ್ಲಿರುವ ನಾಲ್ಕು ಒಳ್ಳೆಯ ಗುಣಗಳನ್ನು ನೆನೆಸಿಕೊಂಡು ಅವರನ್ನು ಮಾತನಾಡಿಸುತ್ತ ಬದುಕಿದರೆ ಅವರಲ್ಲೂ ಕೂಡ ನಿಮ್ಮ ಬಗ್ಗೆ ಉತ್ತಮ ಅಭಿಪ್ರಾಯ ಮೂಡುತ್ತದೆ. ನಿಮ್ಮೊಡನೆ ಅವರಲ್ಲಿ ಏನಾದರೂ ಕೆಟ್ಟು ಭಾವನೆ ಈರ್ಷೆ ಇದ್ದರೆ ಅದು ಕೂಡ ದಿನಗಳುರುಳಿದಂತೆ ಕಳಚುತ್ತ ಸಾಗುತ್ತದೆ.
ಎಲ್ಲರೊಡನೆ ನಗುನಗುತ್ತ ಮಾತನಾಡೋಣ ಸಮಯದ ಮಿತಿ ಸಂದರ್ಭದ ಮಿತಿಯನ್ನು ಅರಿತು ಮಾತನಾಡೋಣ. ಎಲ್ಲಿಯೂ ನಾವು ಶ್ರೇಷ್ಠ ನಮ್ಮದೇ ಎಲ್ಲ ಎಂಬ ಅಹಂ ನಮ್ಮ ಮನದಲ್ಲಿ ಬೆಳೆಯಗೊಡದೆ ಸಹನೆ ತಾಳ್ಮೆಯಿಂದ ಬದುಕಿದರೆ ಬದುಕು ಸಾರ್ಥಕ.
ತೆರೆದೆದೆಯ ಬಾನಂತೆ ನಿಲ್ಲು ಎತ್ತರದಲ್ಲಿ
ಬಯಲಿನಲಿ ಬಯಲಾಗು ಕೊನೆಗಳಿಗೆಯಲ್ಲಿ
ಸುಖ ಭಾವ ಹೊದ್ದವಗೆ ಚಳಿಯೇನು. ? ಬಿಸಿಲೇನು.?
ಆಗು ಕಾಲಾತೀತ ಮುದ್ದುರಾಮ
ವೈ.ಬಿ.ಕಡಕೋಳ
(ಶಿಕ್ಷಕರು)
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್.